ಒಲವೆಂಬ ಹೊತ್ತಿಗೆಯ ಓದ ಬಯಸುತ್ತಾ……

‘ಒಲವೆ ನಮ್ಮ ಬದುಕು’ ಎಂಬುದು ಅಂಬಿಕಾತನಯದತ್ತರು ಬದುಕಿನ ಬಗೆಗೆ ಬರೆದ ಸೂತ್ರವಾಕ್ಯ. ಒಲವು ಅವರ ಪಾಲಿಗೆ ವಿಕಾಸ ಭಾವ. ಅದು ಮನಸ್ಸನ್ನು ಹಿಗ್ಗಿಸುವ ಸಾಧನ. ‘ಹಿಗ್ಗು’ ಎಂಬುದು ಆನಂದ ಎಂಬ ಅರ್ಥದಲ್ಲೂ ಸಾರ್ಥಕ ಭಾವವೇ. ‘ಒಲವು’ ಸಕಲ ಜೀವಗಳ ಒಳ ಹಂಬಲ. ಬಡತನ ಒಡೆತನಗಳ ಹಂಗು ಅದಕ್ಕಿಲ್ಲ. ಒಡೆದು ವಿಭಜನೆಗೊಳ್ಳುವ ಮನಸ್ಸುಗಳನ್ನು
ಬೆಸೆಯುವ ಏಕೈಕ ಸಾಧನವೆಂದರೆ ಒಲವೇ. ಒಲವಿಗೆ ಬೆಲೆಕಟ್ಟಲಾಗದು. ಅದನ್ನು ನಮ್ಮ ಆಯುಷ್ಯದ ಪಾತ್ರೆಯಲ್ಲಿ ಅಮೃತವಾಗಿಸಿಕೊಂಡು ಹೀರುವುದಷ್ಟೇ ನಮ್ಮ ಪಾಲಿನ ಸತ್ಯ.

ಒಲವೆಂಬ ಹೊತ್ತಿಗೆಯನೋದಬಯಸುತ ನೀನು

ಬೆಲೆಯೆಷ್ಟು ಎಂದು ಕೇಳುತಿಹೆ? ಹುಚ್ಚ!

ಹಗಲಿರುಳು ದುಡಿದರೂ, ಹಲಜನುಮ ಕಳೆದರೂ

ನೀ ತೆತ್ತಲಾರೆ ಬರಿ ಅಂಚೆವೆಚ್ಚ

ಬೇಂದ್ರೆ ಹೀಗೆ ಉದ್ಘರಿಸುತ್ತಾರೆ! ಒಲವಿನ ಒಳ ಮರ್ಮವನ್ನು ಅರ್ಥೈಸಹೊರಟರೆ ಅದರ ವಿರಾಟ್ ಸ್ವರೂಪವು ಬಿಚ್ಚಿಕೊಳ್ಳುತ್ತದೆ. ಎಲ್ಲ ಸಂಬಂಧಗಳೂ ಒಲವಿನಿಂದ ಪ್ರೇರೇಪಿತವಾದಂಥವು. ಸಂಬಂಧ ಎಂಬ ಮಾತು ತುಂಬ ದೊಡ್ಡದು. ಅದು ಮನುಷ್ಯ ಮನುಷ್ಯರ ಸಂಬಂಧ ಮಾತ್ರವಲ್ಲ; ಅಣು-ಅಣುಗಳ ಸಂಬಂಧ, ಅಣು-ಮಹತ್ತಿನ ಸಂಬಂಧ. ಗ್ರಹ-ತಾರೆಗಳ ಸಂಬಂಧ. ಪ್ರಕೃತಿಯ ಸಕಲ ವ್ಯಾಪಾರಗಳ ಸಾವಯವ ಸಂಬಂಧ. ಈ ಸಂಬಂಧವು ಸಾಮರಸ್ಯದಿಂದ ಕೂಡಿದ್ದಾಗಲಷ್ಟೇ ಬದುಕು ಇದೆ. ಇಲ್ಲವಾದರೆ ವಿನಾಶವೇ ಕಾದಿದೆ. ಇದನ್ನೇ ಬೇಂದ್ರೆ,

ರಸವೆ ಜನನ

ವಿರಸ ಮರಣ

ಸಮರಸವೇ ಜೀವನ

ಎನ್ನುತ್ತಾರೆ. ‘ಒಲವೆ ನಮ್ಮ ಬದುಕು’ ಎಂಬ ಮಾತು ‘ಸಮರಸವೇ ಜೀವನ’ ಎಂಬ ದರ್ಶನದ ಕಡೆ ಬೇಂದ್ರೆಯವರನ್ನು ಒಯ್ಯುತ್ತದೆ. ಬೇಂದ್ರೆಯವರು ಸದಾ ಬದುಕಿನ ಸಾಮರಸ್ಯಕ್ಕಾಗಿ ಹಂಬಲಿಸಿದವರು. ಅವರ ಸಾಮರಸ್ಯ ಸಾಧನೆಗೆ ಒಲವು ಮಹಾಮಾರ್ಗವಾಗಿದೆ. ಅಹಂನ ಪೊರೆ ಕಳಚಿಕೊಂಡು ಇನ್ನೊಂದು ಜೀವದ ಸಾನ್ನಿಧ್ಯದಲ್ಲಿ ಅರಳುವ, ಆ ಜೀವದ ಭಾವದಲ್ಲಿ ಕರಗುವ ಒಲವು ಒಂದು ಧ್ಯಾನ. ಜೀವ ಜೀವಗಳ ಉದ್ದೀಪನದಿಂದ ಬೆಳಗುವ ಒಲವು ಭಾವಸತ್ಯ. ಇಂಥ ಒಲವಿಗೆ ಅನಂತ ಮುಖ. ಅಸಂಖ್ಯ ಬಾಹುಗಳು. ಭಕ್ತಿ, ಕಾಮ, ಪ್ರೇಮ, ಶೃಂಗಾರ, ವಾತ್ಸಲ್ಯ, ಸ್ನೇಹ ಹೀಗೆ ಹಲವು ಛಾಯೆಗಳಲ್ಲಿ ಪ್ರಕಟಗೊಳ್ಳುವ ಒಲವು ಒಳಜೀವದ ಹಂಬಲವಾಗಿ ಸದಾ ಮನುಷ್ಯರನ್ನು ಜಾಗೃತವಾಗಿ, ಚೈತನ್ಯಮಯವಾಗಿ ಇರಿಸುವುದು.

ಒಲವಿಗೆ ಸಾವನ್ನು ಗೆಲ್ಲುವ ಶಕ್ತಿಯಿದೆ ಎಂಬುದೂ ಬರಿಯ ಆದರ್ಶದ ಮಾತಲ್ಲ. ಅರವಿಂದರ ‘ಸಾವಿತ್ರಿ’ ಮಹಾಕಾವ್ಯವನ್ನು ಅಪಾರವಾಗಿ ಮೆಚ್ಚಿಕೊಂಡ ಬೇಂದ್ರೆಯವರಿಗೆ ಅದರೊಳಗಿನ ಪ್ರೇಮತತ್ವವು ಘನವಾಗಿ ಕಂಡಿದೆ. ಪ್ರೇಮದ ಫಲವು ಆನಂದ. ಆನಂದದ ಮೂಲಕ ಪ್ರಜ್ಞೆಯ ವಿಕಾಸ. ಪ್ರೇಮವು ಬಂಧನವಲ್ಲ. ಬದಲಿಗೆ ಬಂಧಮುಕ್ತಿ. ಒಮ್ಮೆ ಪ್ರೇಮ ಭಾವವು ಆವರಿಸಿತೆಂದರೆ ಅದು ಇಡೀ ಜಗತ್ತನ್ನು ಪ್ರೀತಿಸಲು ಕಲಿಸುತ್ತದೆ. ಲೋಕದ ಸಮಸ್ತ ಸಂಗತಿಗಳೂ ಈ ಭಾವದಲ್ಲಿ ಚೈತನ್ಯಪೂರ್ಣವಾಗಿ ಮಿನುಗುತ್ತವೆ. ಇದುವರೆಗೂ ಹಾಗೇ ಇದ್ದ ಲೋಕ ಹೊಸ ಬೆಳಕಲ್ಲಿ ಅಪ್ಯಾಯಮಾನವಾಗುವುದು ಪ್ರೇಮದ ಶಕ್ತಿ. ಪ್ರೇಮವನ್ನು ವಿಶಾಲಾರ್ಥದಲ್ಲಿ ನೋಡಿದಾಗ ಅದೊಂದು ಸೆಳೆತ, ಗುರುತ್ವಾಕರ್ಷಣೆಯಂತೆ! ಒಂದಳಿದು ಎರಡಾಗುವ ಸೆಳೆತವು ದ್ವಂದ್ವವನ್ನು ಅಳಿಸಿ ಏಕಸೂತ್ರದಲ್ಲಿ ಭಾವವನ್ನು ಬೆಸೆಯುವ ತಂತ್ರವನ್ನು ಕಲಿಸುತ್ತದೆ. ಪ್ರೇಮವು ಮಂತ್ರವಾದರೆ, ಕಾಮವು ತಂತ್ರ!

ದ್ವಂದ್ವದಾಹ್ವಾನಕ್ಕೆ ದಾಂಪತ್ಯ ಉತ್ತರ

ಅಣುಕಣ ಸಂಗತಿ ಜಳಕು ಇದೆ.

‘ಏಕಾಕೀ ನ ರಮತೇ’ ಎಂದಿತು ಶ್ರುತಿ ಕೂಡ

ಹೃದಯದ ಗುಹೆಯಲ್ಲು ಬೆಳಕು ಇದೆ.

 

ಹೆಣ್ಣು-ಗಂಡೆಂಬ ಭಿನ್ನ ಜೀವಗಳನ್ನು ಬೆಸೆಯುವ ಈ ತಂತ್ರವು ದಾಂಪತ್ಯವನ್ನು ಏಕಭಾವದಲ್ಲಿ ಬೆಸೆಯುವ ಸಾಧ್ಯತೆ ಎಂದು ಬೇಂದ್ರೆ ನಂಬಿದ್ದರು. ಅವರ ‘ಸಖೀಗೀತ’ವು ಇಂಥ ದಾಂಪತ್ಯದ ಅನುಸಂಧಾನ. ಸಖೀಗೀತವು ಕವಿಯ ವೈಯಕ್ತಿಕ ಅನುಭವದ ಭಾಗವಾಗುತ್ತಲೇ ಸಾರ್ವತ್ರಿಕವಾದ ಪ್ರೇಮಾನುಭೂತಿಯ ಅಭಿವ್ಯಕ್ತಿಯೂ ಆಗುತ್ತದೆ. ಅಷ್ಟೇ ಅಲ್ಲ, ಸೃಷ್ಟಿಕ್ರಿಯೆಯ ಹಿಂದಿರುವ ತಾತ್ವಿಕತೆಯ ಶೋಧವಾಗಿಯೂ ಅದು ಹೊಳೆಯುತ್ತದೆ. ಪುರುಷ-ಪ್ರಕೃತಿ ಎಂಬುದು ತತ್ವವಾಗಿ ಸಾಂಖ್ಯದರ್ಶನದಲ್ಲಿ ಪ್ರತಿಪಾದಿತವಾಗಿದೆ. ಅದು ಸ್ತ್ರೀತ್ವವನ್ನು ಪ್ರಕೃತಿಯ ಜೊತೆಗೆ ಸಮೀಕರಿಸುತ್ತಾ ಸೃಷ್ಟಿಶಕ್ತಿಯ ಪ್ರಕಟರೂಪವಾಗಿ ಭಾವಿಸುತ್ತದೆ. ಪ್ರಕಟರೂಪದ ಹಿಂದಿರುವ ಸತ್ವವು ಪುರುಷ ತತ್ವ. ಗಂಡು-ಹೆಣ್ಣಿನ ಮಿಲನದಲ್ಲಿ ಪ್ರಕೃತಿ-ಪುರುಷ ತತ್ವಗಳ ಮಿಲನವನ್ನು ಬೇಂದ್ರೆ ತಮ್ಮ ಕಾವ್ಯದುದ್ದಕ್ಕೂ ಕಾಣುತ್ತ, ಕಂಡರಿಸುತ್ತ ಹೋಗುತ್ತಾರೆ.

ಎಲ್ಲಿಂದೊ ಬಂದೊಂದು ಸೌಂದರ್ಯ-ಝರಿಯಿಂದ

ಎದೆಎದೆಗು ಕಾರಂಜಿ ಪುಟಿಯುತಿದೆ

ಯಾರಿಂದೊ ಚಲಿಸುವ ಪ್ರಾಣದ ಸೂತ್ರವು

ಪುರುಷ-ಪ್ರಕೃತಿಗಳನು ಕುಣಿಸುತಿದೆ

ಪುರುಷ-ಪ್ರಕೃತಿಯ ಮಿಲನದ ಹಿಂದೆ ಸೃಷ್ಟಿಯು ಮೈದೋರಬೇಕಾದ ಉದ್ದೇಶವಿದೆ. ಚೆಲುವಿನ ಸೆಳೆತವು ಬಲವಾಗಿ ಹೊರಹೊಮ್ಮುವಲ್ಲಿ ಪ್ರಕೃತಿಯ ಪ್ರೇರಣೆಯಿದೆ. ಈ ಸೆಳೆತ ಆದಿಮವಾದುದು. ಜೀವನವನ್ನು ಮುಂದುವರೆಸುವ ಜೀವಕಾಮವು ನಲ್ಲ-ನಲ್ಲೆಯರಾಗಿ ಮೈತಳೆಯುವ ಚೆಲುವನ್ನು ಅವರು ತಮ್ಮ ಮೇಘದೂತದ ರೂಪಾಂತರದಲ್ಲಿ ಬಹು ಸೊಗಸಾಗಿ ಮಾಡಿದ್ದಾರೆ. ತನ್ನ ಜೋಡಿ ಜೀವವನ್ನು ಕರೆಯುವ ಈ ಕೂಗು, ಸಖ-ಸಖೀ ಜೀವಗಳ ಮೊರೆಯು ಕವಿಗೆ ಪರಮಾತ್ಮನೊಡನೆ ಸೇರಿಹೋಗಲು ಹಂಬಲಿಸುವ ಜೀವಾತ್ಮದ ಮೊರೆಯಂತೆ ಕೇಳಿಸುತ್ತದೆ. ಸರ್ವಜೀವಗಳ, ಸರ್ವಕಾಲದ ಉತ್ಕಟ ಬಯಕೆಯಾಗಿ ಕಾಣಿಸುತ್ತದೆ. ಪ್ರೇಮ ಮತ್ತು ಭಕ್ತಿ ಒಂದೇ ಉತ್ಕಟ ಭಾವದ ಎರಡು ಮಗ್ಗಲುಗಳಾಗಿ ಕಾಣುತ್ತಾ ಇಲ್ಲಿ ಬೆರಗು ಮೂಡುತ್ತದೆ. ವಿರಹವೆಂಬುದು ಎರಡೂ ಭಾವಗಳಲ್ಲಿ ಸಾಮಾನ್ಯವಾದ ಅಂಶ. ತಪನೆಯಿಲ್ಲದೇ ತಪಸ್ಸಿಲ್ಲ. ಬೇಯುವಿಕೆಯಿಲ್ಲದೇ ಬದುಕಿನ ಪಾಕ ಸಿದ್ಧಿಸುವುದಿಲ್ಲ.

ಕಾಮಿ ಬಗ್ಗುವನು ದೇಹಿ ಎಂದು ಮೋಹದಲಿ ಕಾಲಿಗಡಿಸಿ

ಕವಿಯು ಒಗ್ಗುವನು ತನ್ನನಂಗ ಭಾವಕ್ಕೆ ಮಾತುತೊಡಿಸಿ

ಭಕ್ತ ಹಿಗ್ಗುವನು ತನ್ನ ಜೀವ ಹಸಮಾಡಿ ದೇವನಾಗಿ

ಒಬ್ಬ ನೊಲಿಸುತಿಹ ಒಂದೆ ನೂಲಿನಲಿ ಎಲ್ಲ ಕಾವನಾಗಿ.

ಇಂಥ ಪ್ರೇಮದ ಛಾಯೆ ಭಕ್ತಿ ಚಳುವಳಿಯಲ್ಲೂ ಹರಡಿಕೊಂಡಿರುವುದು ಇತಿಹಾಸ. ಮೀರಾ, ಅಕ್ಕಮಹಾದೇವಿ, ಕಾಶ್ಮೀರದ ಲಲ್ಲೇಶ್ವರಿ ಮೊದಲಾದವರಲ್ಲಿ ಪ್ರೇಮದ ಉತ್ಕಟತೆಯನ್ನು ಕಾಣಬಹುದು. ಅವರ ವಿರಹದ ತೀವ್ರತೆ, ಹುಡುಕಾಟಗಳು ಅಮೂರ್ತವಾಗಿದ್ದರೂ ಮೂರ್ತರೂಪದಲ್ಲೇ ಮೈತಾಳಿದವು. ಹಾಗೆ ಮೈದಾಳಲು ಪ್ರೇಮ-ಕಾಮದ ಸಂಕೇತಗಳೇ ಅವರಿಗೆ ಬೇಕಾದವು. ಕಾಮದಲ್ಲಿ ಉರಿಯುತ್ತಲೇ ಪ್ರೇಮದ ಬೆಳಕನ್ನು ಹಿಡಿಯುವ ಬಗೆಯನ್ನು ಕಾಳಿದಾಸನ ಮೇಘದೂತ ಅತ್ಯಂತ ಸುಂದರವಾಗಿ ತೋರಿದೆ. ಬೇಂದ್ರೆ ಅದನ್ನು ಕನ್ನಡಿಸಿದ ಬಗೆ ಇನ್ನೂ ಅರ್ಥಪೂರ್ಣವೆನಿಸುತ್ತದೆ.

ತನ್ನ ಕಿಚ್ಚಿನೊಳೆ ಬೆಂಕಿ ಸುಟ್ಟು ಬೆಳಕಾಗಿ ಮಿಂಚಬಹುದು

ಮೂಲ ಕಾಮದಲಿ ವಿರಹ ಬೆಳೆದು ಸುಪ್ರೇಮವರಳಬಹುದು

ಜನ್ಮಜಾತ ಕುತುಕಕ್ಕೆ ರಮ್ಯ ತವನಿಧಿಯ ಹಾಗೆ ಭವ್ಯ

ಸತ್ಯಕಾಗಿ ನೀರಡಿಸಿ ನಿಂತ ಸೌಂದರ್ಯದಂತೆ ದಿವ್ಯ.

ಅನ್ನ ಪ್ರಾಣಗಳ ಮಿಥುನದಂತೆ ಮೈ ಎರಡು ಕಲೆತು ಬೆರೆತು

ಮನದ ಕಾವಿನಲಿ ಕಾಮವಾಗಿ ಮನದಾಚೆಗೇನೋ ಅರಿತು

ಚಿತ್ತದಲ್ಲಿ ನಿಷ್ಕಾಮ ರತಿಯು ರಸಪಾಕವಾಗಿ ನಿಂತು

ಧಾರೆಗೆಡದೆ ಭಗವಂತನಲ್ಲಿ ಚಿರಭಕ್ತಿಯಾಗಿ ಬಂತು

ಕಾಮವನ್ನು ಪ್ರೇಮದ ಮೂಲಧಾತುವಾಗಿ ಕಾಣುವ ಕಾಳಿದಾಸನ ಈ ಬಗೆ ಬೇಂದ್ರೆಯವರಲ್ಲಿ ಇನ್ನಷ್ಟು ಬೆಳೆದಿದೆ. ಅನ್ನಮಯ ದೇಹದಲ್ಲಿ ಪ್ರಾಣಪ್ರವೇಶವಾದಂತೆ, ಕಾಮದ ಐಂದ್ರಿಕ ಅನುಭವದಲ್ಲಿ ಪ್ರೇಮಭಾವದ ಸಂಚಾರವಾಗುತ್ತದೆ. ಅನುಭವ ಹಾಗೂ ಅನುಭಾವಗಳು ಒಂದೇ ಆಗುವ ಕ್ಷಣವೊಂದು ಮತ್ರ್ಯರಲ್ಲಿ ಮೂಡುತ್ತದೆ. ಹೆಣ್ಣುಗಂಡುಗಳ ಈ ಆದಿಮ ಆಕರ್ಷಣೆ ಅತಾರ್ಕಿಕವಾದುದು. ಅದಮ್ಯವಾದುದು. ಆದ್ದರಿಂದಲೇ ಸೃಜನಶೀಲವಾದುದು. ಕಾವ್ಯದಂತೆ ಪ್ರೇಮವೂ ಸಿದ್ಧನೋಟದ ಕ್ರಮಕ್ಕೆ ಎಟುಕದ ದಿವ್ಯ. ಕಾಮವು ಪ್ರೇಮದ ಸೂಚನೆ. ಈ ಇಚ್ಛೆಯು ಜನಿಸಲು ಬ್ರಹ್ಮನ ಹೃದಯದಿಚ್ಛೆಯೇ ಕಾರಣ ಎನ್ನುವ ಕವಿ ಜೀವಕಾಮವನ್ನು ವಿಶ್ವದ ಸೃಷ್ಟಿಯ ‘ಇಚ್ಛೆ’ಗೆ ಸರಿದೊರೆಯಾಗಿ ಕಾಣುತ್ತಾನೆ.

ಬ್ರಹ್ಮ-ಹೃದಯದಲಿ ಜನಿಸಿದಿಚ್ಛೆ ಕೊನೆಗಾಣಲೆಂದು ಬಾಳಿ

ಕಂಡ ಕಡೆಗು ಶತರೂಪೆಯಲ್ಲಿ ಮಧು-ರೂಪ-ರೂಪ ತಾಳಿ

ಜಗದ ತಂದೆ-ತಾಯಿಯರ ಕಂದ ಅವತರಿಸೆ ಜೀವನಾಗಿ

ಬಂತು ಪೂರ್ವದಲಿ ದೇವ-ಕಾಮವೇ; ಕಾಮ-ದೇವನಾಗಿ

ವಿರಹಪೂತ ರತಿ; ಜೀವಮೂಲ ಸತಿ ಚಿತ್ತರಂಗದಲ್ಲಿ

ಸಾಂಗವಾಗಿ ಮೈಗೂಡಿಕೊಂಡಳೋ ಆ ಅನಂಗನಲ್ಲಿ

ಋತುವಿನೊಂದು ಪ್ರೇರಣೆಗೆ ಕೂಡುವುದು ಬಲ್ಲದೇನು ಪಶುವು

ಪ್ರೌಢರತಿಯ ಕೈಕೂಸು ಆಗಿ ಬೆಳೆದಿಹುದು ಕಾದು-ಶಿಶುವು

ಜಗದ ತಂದೆ-ತಾಯಿಗಳ ಜೀವಕಾಮವೇ ಕಾಮದೇವನನ್ನು ಸೃಷ್ಟಿಸಿತು. ಅನಾದಿ ಕಾಮದ ಸಂಕೇತವಾದ ಕಾಮದೇವ ಸಕಲ ಜೀವಜಾತಗಳ ಚಿತ್ತರಂಗದಲ್ಲಿ ಅನಂಗನಾಗಿ ಜನಿಸುತ್ತಾನೆ. ಮನದಲ್ಲಿ ರತಿಭಾವವನ್ನು ಉದ್ದೀಪಿಸುತ್ತಾನೆ. ಈ ಭಾವವೇ ಮುಂದೆ ಜೀವಸೃಷ್ಟಿಗೆ ಪ್ರೇರಣೆಯಾಗಿ, ಜೀವವಿಕಸನಕ್ಕೆ ಕಾರಣವಾಗುತ್ತದೆ. ಋತುವಿನ ಪ್ರೇರಣೆಯಿಂದ ಪಶುಗಳೂ ಬೆದೆಗೊಂಡು ಕಾಮಕ್ರಿಯೆಗಿಳಿಯುತ್ತವೆ. ‘ದೇವಕಾಮ’ವನ್ನು ದೇಹದ ಮೂಲಕವೇ ಅಭಿವ್ಯಕ್ತಿಸುವುದು ಜೀವಗಳ ವೈಶಿಷ್ಟ. ಇದು ಬರೀ ದೇಹದ ಬಯಕೆಯಾಗಿ ಮುಂದುವರೆಯದೇ ಪ್ರೌಢಪ್ರೇಮವಾಗಿ ಬೆಳೆಯುವ ರೂಪಾಂತರವಿದೆಯಲ್ಲ, ಅದು ಮನುಷ್ಯನ ಹೆಚ್ಚುಗಾರಿಕೆ. ಇಂಥ ಪ್ರೇಮವನ್ನು ನಮ್ಮ ಬದುಕಿಗೆ ಕಸಿಕಟ್ಟಿದಾಗ ಅದು ಬದುಕನ್ನು ನಿಸ್ಸಂಶಯವಾಗಿ ಅರಳಿಸುತ್ತದೆ. ಭವದ ಬವಣೆಗಳಿಗೆ ನವಿರನ್ನು ತುಂಬುತ್ತದೆ. ಬೇಂದ್ರೆಕಾವ್ಯವು ಆಪ್ತವಾಗುವುದೇ ಈ ಕಾರಣಕ್ಕೆ. ಅದು ಎಂದಿಗೂ ಅನುಭವದ ನವಿರನ್ನು ಅಲ್ಲಗಳೆಯುವುದಿಲ್ಲ. ಲೌಕಿಕದಲ್ಲೇ ಅಲೌಕಿಕವಿದೆ ಎಂಬ ನಿಲುವು ಒಲವನ್ನು ದರ್ಶನದ ಮಟ್ಟಕ್ಕೇರಿಸುತ್ತದೆ. ಅದು ಲೋಕದರ್ಶನ; ಸರಳ ಚೆಲುವಿನ ಆಪ್ತಕಾಣ್ಕೆ.

ನಾನು ಬಡವಿ ಆತ ಬಡವ

ಒಲವೆ ನಮ್ಮ ಬದುಕು

ಬಳಸಿಕೊಂಡೆವದನೆ ನಾವು

ಅದಕು ಇದಕು ಎದಕು

ಚಳಿಗೆ ಬಿಸಿಲಿಗೊಂದೆ ಹದನ

ಅವನ ಮೈಯ ಮುಟ್ಟೆ

ಅದೇ ಗಳಿಗೆ ಮೈಯ ತುಂಬ

ನನಗೆ ನವಿರು ಬಟ್ಟೆ

ಆತ ಕೊಟ್ಟ ವಸ್ತು ಒಡವೆ

ನನಗೆ ಅವಗೆ ಗೊತ್ತು

ತೋಳುಗಳಿಗೆ ತೋಳಬಂದಿ

ಕೆನ್ನೆತುಂಬ ಮುತ್ತು.

ಹೀಗೆ ದೈನಿಕದ ಅನುಭವವನ್ನೇ ದೈವಿಕವನ್ನಾಗಿ ಪರಿವರ್ತಿಸುವ ಹದ ಬೇಂದ್ರೆಯವರಿಗೆ ಗೊತ್ತು. ಬಡತನದಲ್ಲೂ ಸಂತೋಷ ಕಾಣಲು ಪ್ರೇಮವೆಂಬ ದಿವ್ಯಭಾವ ಬೇಕು. ಇಲ್ಲವಾದರೆ ಸಂಘರ್ಷ, ವಾದ, ವಿವಾದಗಳೇ ಬದುಕನ್ನು ನರಳಿಸುತ್ತವೆ. ಸಂಬಂಧದಲ್ಲಿ ಗಂಡುದರ್ಪದ ಬದಲು ಪ್ರೇಮವಿರಬೇಕು, ವಾದದ ಬದಲು ಜೀವಸಂವಾದವಿರಬೇಕು. ಆಗ ಮಾತ್ರ ಅಂತರಂಗದ ಚೆಲುವು- ಒಲವು ಕಾಣಲು ಸಾಧ್ಯ. ಇಲ್ಲವಾದರೆ ಸಿಪ್ಪೆಯನ್ನೇ ನಿಜವೆಂದು ಬದುಕುವ ರೀತಿ ಅನಿವಾರ್ಯವಾಗುತ್ತದೆ. ಬದುಕಿನ ಓಟದಲ್ಲಿ, ಮಹತ್ವಾಕಾಂಕ್ಷೆಗಳ ಮೊರೆತದಲ್ಲಿ ಒಲವಿನ ಪಿಸುದನಿಯನ್ನು ಕೇಳಲಾಗದಷ್ಟು ಅಸೂಕ್ಷ್ಮರಾಗಿದ್ದೇವೆಯೇ ನಾವು? ಎಂಬ ಪ್ರಶ್ನೆ ಬೇಂದ್ರೆಯವರನ್ನು ಓದುವಾಗ ಮತ್ತೆಮತ್ತೆ ಕಾಡುತ್ತದೆ. ಜನವರಿ 31, ಬೇಂದ್ರೆಯವರು ಹುಟ್ಟಿದ ದಿನ. ಈ ಸಂದರ್ಭದಲ್ಲಿ ಒಲವೆ ನಮ್ಮ ಬದುಕು, ಸಮರಸವೇ ಜೀವನ ಎಂಬ ಮಾತುಗಳು ನಿಜಕ್ಕೂ ಮಹಾವಾಕ್ಯಗಳೇ ಅಲ್ಲವೇ? ಎನಿಸಿದವು. ಮತ್ತೆಮತ್ತೆ ಹೊಸದು ಹುಟ್ಟಬೇಕು ಎಂಬ ಹಂಬಲದ ಹಿಂದೆ ಸಾಮರಸ್ಯದ-ಒಲವಿನ ಸೂತ್ರ ಎಂದೆಂದಿಗೂ ಇರಲಿ ಎಂದು ಬೇಂದ್ರೆ ಅಜ್ಜ ಹೇಳುತ್ತಲೇ ಇದ್ದಾರೇನೋ ಎಂಬಂತೆ ಕಾಣುವ ಅವರ ಸಾಲುಗಳು ರಿಂಗಣಿಸುತ್ತವೆ:

ನಾನೆಂದರೂ ಒಂದೆ

ನೀನೆಂದರೂ ಒಂದೆ

ಹೊಂದುಗೂಡಿಕೆ ಇರದ ಜಗಕೆ ನೊಂದೆ

ನೀನು ನನ್ನವಳೆಂದು ಬಳಿಗೆ ಬಂದೆ

ಹೊಸಹುಟ್ಟು ಬರುವುದಿದೆ ಇನ್ನು ಮುಂದೆ

ಆಗೋಣ ಆ ಜಗದ ತಾಯಿತಂದೆ

5 thoughts on “ಒಲವೆಂಬ ಹೊತ್ತಿಗೆಯ ಓದ ಬಯಸುತ್ತಾ……

 • October 20, 2017 at 6:10 PM
  Permalink

  obviously like your web-site but you have to test the spelling on several of your posts. Many of them are rife with spelling issues and I to find it very bothersome to inform the truth however I’ll surely come back again.|

 • October 20, 2017 at 9:38 PM
  Permalink

  Hi there! I know this is kind of off topic but I was wondering if you knew where I could get a captcha
  plugin for my comment form? I’m using the same blog platform as
  yours and I’m having problems finding one? Thanks a lot!

 • October 21, 2017 at 12:13 AM
  Permalink

  This is my first time pay a visit at here and i am truly impressed to read all at one place.|

 • October 21, 2017 at 4:16 AM
  Permalink

  Hey there! Do you know if they make any plugins to protect against hackers?
  I’m kinda paranoid about losing everything I’ve worked hard on. Any suggestions?

 • October 24, 2017 at 3:03 PM
  Permalink

  Hi there very cool web site!! Guy .. Beautiful ..

  Wonderful .. I will bookmark your blog and take the feeds additionally?
  I am glad to find so many useful information right here within the publish, we need develop more techniques on this regard,
  thank you for sharing. . . . . .

Comments are closed.

Social Media Auto Publish Powered By : XYZScripts.com