ಹಿಮದಲ್ಲಿ ಮರೆಯಾಯ್ತು ಯೋಧನ ಮದುವೆ ಕನಸು!

ಜಮ್ಮು ಕಾಶ್ಮೀರದ ಸೋನ್ ಬರ್ಗ್ ನಲ್ಲಿ ಹಿಮಪಾತ ದುರಂತದಲ್ಲಿ ಹಾಸನ ಜಿಲ್ಲೆಯ ಶಾಂತಿಗ್ರಾಮ ಹೋಬಳಿ ದೇವಿಹಳ್ಳಿಯ ಯೋಧ ಸಂದೀಪ್ ಕುಮಾರ್ ಶುಕ್ರವಾರ ಹುತಾತ್ಮರಾಗಿದ್ದಾರೆ. 

ಬುಧವಾರ ಸಂಭವಿಸಿದ ಭಾರಿ ಹಿಮಪಾತದಲ್ಲಿ ಸೇನಾ ಬಂಕರ್‌ ನೊಳಗೆ ಸಿಲುಕಿ 11 ಮಂದಿ ಯೋಧರು ಸಾವನ್ನಪ್ಪಿದ್ದರು. ಇವರಲ್ಲಿ  ಹಾಸನದ 24 ವರ್ಷದ ಕನ್ನಡಿಗ ಯೋಧ ಸಂದೀಪ್ ಕುಮಾರ್ ಸಹ ಮೃತರಾಗಿದ್ದಾರೆ.

ನಿಶ್ಚಿತಾರ್ಥ ಮಾಡಿಕೊಂಡಿದ್ದ ಸಂದೀಪ್ ಮದುವೆ ಫೆ. 22ರಂದು ನಡೆಯಬೇಕಿತ್ತು. ಸಂದೀಪ್ ಶೆಟ್ಟಿ ವೀರ ಮರಣದಿಂದ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಇದೇ ರೀತಿ ಹಿಂದಿನ ವರ್ಷ ಹಿಮಪಾತಕ್ಕೆ ಸಿಕ್ಕಿ ಹನುಮಂತಪ್ಪ ಕೊಪ್ಪದ್ ಮರಣ ಹೊಂದಿದ್ದರು.

ಸೋನಾಮಾರ್ಗ್ ಸೇನಾ ಕ್ಯಾಂಪ್ ಮೇಲೆ ಬುಧವಾರ ಹಿಮದ ಗುಡ್ಡ ಕುಸಿತಕ್ಕೆ ಸಿಲುಕಿದ್ದ ಕರುನಾಡಿನ ಇಬ್ಬರು ವೀರ ಸೈನಿಕರು ಬದುಕುಳಿದಿದ್ದಾರೆ. ಮೇಜರ್ ಶ್ರೀಹರಿ ಕುಗಜಿ, ಬಂಡಿವಡ್ಡರ್ ಸಾವಿನ ದವಡೆಯಿಂದ ಪಾರಾದ ಸೈನಿಕರು. ಸದ್ಯ ಅವಘಡದಿಂದ ಮೇಜರ್ ಶ್ರೀಹರಿ ಕುಗಜಿ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಇನ್ನು ಹಿಮದ ಗಡ್ಡೆಯಡಿ ಸಿಲುಕಿದ್ದವರನ್ನು ರಕ್ಷಿಸುವಾಗ ಮೇಜರ್ ಬಂಡಿವಡ್ಡರ್ ಅವರಿಗೂ ಗಾಯಗಳಾಗಿದ್ದು, ಇವರಿಬ್ಬರೂ ಶ್ರೀನಗರದ ಬೇಸ್ ಕ್ಯಾಂಪ್‍ನಲ್ಲಿರುವ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Comments are closed.