ದ್ವಿತಿಯ ಏಕದಿನ ಸರಣಿ: ಗೆಲುವಿಗಾಗಿ ಕಾದಾಟ

ಇಂಗ್ಲೆಂಡ್ ಮೊದಲ ಪಂದ್ಯದಲ್ಲಿ ನೀಡಿದ ಸವಾಲನ್ನು ಮೆಟ್ಟಿ ನಿಂತ ಭಾರತ ತಂಡ, ಮೂರು ಏಕದಿನ ಸರಣಿಯಲ್ಲಿ ಗುರುವಾರ ಎರಡನೇ ಬಾರಿ ಮುಖಾಮುಖಿಯಾಗಲಿದೆ.
ಒಡಿಶಾ ಕ್ರಿಕೆಟ್ ಸಂಸ್ಥೆಯ ಅಂಗಳದಲ್ಲಿ ನಡೆಯುವ ಪಂದ್ಯ ರೋಚಕತೆ ಹುಟ್ಟಿಸಿದೆ. ಎರಡನೇ ಬಾರಿಯ ಆಟಕ್ಕೆ ಮಂಜು ಅಡ್ಡಿ ಪಡಿಸುವ ಸಾಧ್ಯತೆ ಇದ್ದು, ಟಾಸ್ ಮಹತ್ವದ ಪಾತ್ರವನ್ನು ವಹಿಸುತ್ತದೆ. ದೊಡ್ಡ ಮೊತ್ತವನ್ನು ಕಲೆ ಹಾಕಿದರೂ, ಗೆಲ್ಲುವಲ್ಲಿ ವಿಫಲರಾದ ಇಯಾನ್ ಮಾರ್ಗನ್ ಪಡೆ, ಎರಡನೇ ಪಂದ್ಯದಲ್ಲಿ ಜಯ ದಾಖಲಿಸಿ ಸರಣಿಯಲ್ಲಿ ಪುಟಿದೇಳುವ ಲೆಕ್ಕಾಚಾರ ಹಾಕಿಕೊಂಡಿದೆ.
ಪುಣೆಯಲ್ಲಿ ನಡೆದ ಪಂದ್ಯವನ್ನು 3 ವಿಕೆಟ್‌ಗಳಿಂದ ಗೆದ್ದ ವಿರಾಟ್ ಕೊಹ್ಲಿ ಪಡೆ ಗೆಲುವಿನ ಆರಂಭವನ್ನು ಮಾಡಿತ್ತು. ಪ್ರವಾಸಿ ತಂಡ ತನ್ನ ನ್ಯೂನತೆಗಳನ್ನು ಪತ್ತೆ ಹಚ್ಚಿಕೊಂಡಿದ್ದು, ಜಯದ ರೂಪ ರೇಷೆಗಳನ್ನು ಸಿದ್ಧ ಪಡಿಸಿಕೊಂಡಿದೆ.
ಜಾದವ್ ಮೇಲೆ ಕಣ್ಣು ಇನ್ನೂ ಮಧ್ಯಮ ಕ್ರಮಾಂಕದ ಯುವ ಆಟಗಾರ ಕೇದಾರ್ ಜಾದವ್ ತವರಿನಲ್ಲಿ ನಡೆದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ, ಜಯದಲ್ಲಿ ಮಿಂಚಿದ್ದರು. ಇವರು ಫಿನಿಶರ್ ಪಟ್ಟವನ್ನು ತುಂಬುವ ಕನಸು ಕಾಣುತ್ತಿದ್ದಾರೆ. ಕಟಕ್‌ನಲ್ಲೂ ಜಾದವ್ ಜಾದು ಮಾಡುವ ವಿಶ್ವಾಸದಲ್ಲಿದ್ದಾರೆ.
ನಾಯಕತ್ವ ವಹಿಸಿಕೊಂಡ ಮೊದಲ ಪಂದ್ಯದಲ್ಲಿ ಆರ್ಭಟ ನಡೆಸಿದ ವಿರಾಟ್ ಕೊಹ್ಲಿ, ಎದುರಾಳಿ ಯೋಜನೆಯನ್ನು ಬೇಧಿಸಬಲ್ಲರು. ಆರಂಭಿಕರಾಗಿ ಕಣಕ್ಕಿಳಿಯುವ ಕೆ.ಎಲ್ ರಾಹುಲ್ ಹಾಗೂ ಶಿಖರ್ ಧವನ್ ರನ್ ಗುಡ್ಡೆ ಹಾಕುವ ಅನಿವಾರ್ಯತೆ ಇದೆ. ಇನ್ನು ಅನುಭವಿ ಆಟಗಾರ ಯುವರಾಜ್ ಸಿಂಗ್ ತಾಳ್ಮೆಯ ಇನಿಂಗ್ಸ್ ಕಟ್ಟಿ ತಮ್ಮ ಕ್ಷಮತೆ ಪ್ರದರ್ಶಿಸಬೇಕಿದೆ. ಮಹೇಂದ್ರ ಸಿಂಗ್ ಧೋನಿ ನೈಜ ಆಟವಾಡಿದರೆ ದೊಡ್ಡ ಮೊತ್ತದ ಕನಸು ನನಸಾಗುತ್ತದೆ.
ಬೌಲರ್‌ಗಳ ರನ್‌ಗಳಿಗೆ ಕಡಿವಾಣ ಹಾಕುವ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಮೊದಲ ಪಂದ್ಯದಲ್ಲಿ ಮಾಡಿದ ತಪ್ಪಿನಿಂದ ಪಾಠ ಕಲಿತಿರುವ ಭಾರತೀಯ ಬೌಲರ್‌ಗಳು ಕರಾರುವಕ್ ದಾಳಿ ನಡೆಸಬೇಕಿದೆ. ಉಮೇಶ್ ಯಾದವ್, ಜಸ್ಪ್ರಿತ್ ಬೂಮ್ರ, ಹಾರ್ದಿಕ್ ಪಾಂಡ್ಯ ತಂಡ ಇಟ್ಟ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಸ್ಪಿನ್ ವಿಭಾಗದಲ್ಲಿ ಅಶ್ವಿನ್ ಹಾಗೂ ಜಡೇಜಾ ಶಿಸ್ತು ಬದ್ಧ ದಾಳಿ ನಡೆಸಿದರೆ ಗೆಲುವು ನಿಶ್ಚಿತ.
ಬೌಲಿಂಗ್ ತಂತ್ರಗಾರಿಕೆ ಇನ್ನೂ ಪುಣೆಯಲ್ಲಿ ೩೫೦ ರನ್ ಕಲೆ ಹಾಕಿದರೂ, ಭಾರತಕ್ಕೆ ಸೋಲಿನ ಶಾಕ್ ನೀಡುವಲ್ಲಿ ಇಂಗ್ಲೆಂಡ್ ವಿಫಲವಾಗಿದೆ. ಪ್ರವಾಸಿ ತಂಡದ ಬೌಲರ್‌ಗಳು ಎರಡನೇ ಪಂದ್ಯಕ್ಕೆ ಭಿನ್ನ ರೂಪರೇಷೆ ಸಿದ್ಧ ಪಡಿಸಿಕೊಂಡಿದ್ದಾರೆ. ಕ್ರಿಸ್ ವೋಕ್ಸ್, ಡೇವಿಡ್ ವೆಲ್ಲಿ, ಜಾಕ್ ಬಾಲ್ ಉತ್ತಮ ಲಯ ಬದ್ಧ ದಾಳಿ ನಡೆಸುವ ವಿಶ್ವಾಸದಲ್ಲಿದ್ದಾರೆ. ಸ್ಪಿನ್ ವಿಭಾಗದಲ್ಲಿ ಆದಿಲ್ ರಶೀದ್, ಮೊಯಿನ್ ಅಲಿ ಸ್ಪಿನ್ ಬೌಲಿಂಗ್‌ನಿಂದ ಎದುರಾಳಿಯನ್ನು ಕಾಡಬೇಕು.
ಮಾರ್ಗನ್ ತಂಡದ ಬ್ಯಾಟಿಂಗ್ ಉತ್ತಮವಾಗಿದೆ. ಆರಂಭಿಕ ಅಲೆಕ್ಸ್ ಹೇಲ್ಸ್ ಕಟಕ್‌ನಲ್ಲಿ ದೊಡ್ಡ ಇನಿಂಗ್ಸ್ ಕಟ್ಟುವ ಲೆಕ್ಕಾಚಾರದಲ್ಲಿದ್ದಾರೆ. ಜಾಸನ್ ರಾಯ್, ಜೋ ರೂಟ್, ಬೆನ್ ಸ್ಟೋಕ್ಸ್ ಜವಾಬ್ದಾರಿಗೆ ತಕ್ಕ ಆಟ ಆಡಿದರೆ, ದೊಡ್ಡ ಮೊತ್ತದ ಕನಸು ನನಸಾಗುತ್ತದೆ.
ಪಂದ್ಯಕ್ಕೆ ಮಂಜು ಅಡ್ಡಿ ಸಂಭವ
ಟಾಸ್ ಮಹತ್ವದ ಪಾತ್ರ
ಪುಟಿದೇಳುವ ವಿಶ್ವಾಸದಲ್ಲಿ ಇಂಗ್ಲೆಂಡ್
———–
ಸಂಭಾವ್ಯ ಇಂಗ್ಲೆಂಡ್ ತಂಡ
ಇಯಾನ್ ಮಾರ್ಗನ್ (ನಾಯಕ), ಜಾಸನ್ ರಾಯ್, ಅಲೆಕ್ಸ್ ಹೇಲ್ಸ್, ಜೋ ರೂಟ್, ಜೋಸ್ ಬಟ್ಲರ್, ಬೆನ್ ಸ್ಟೋಕ್ಸ್, ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಡೇವಿಡ್ ವೆಲ್ಲಿ.
ಸಂಭಾವ್ಯ ಭಾರತ ತಂಡ
ವಿರಾಟ್ ಕೊಹ್ಲಿ (ನಾಯಕ), ಕೆ.ಎಲ್ ರಾಹುಲ್, ಶಿಖರ್ ಧವನ್, ಯುವರಾಜ್ ಸಿಂಗ್, ಮಹೇಂದ್ರ ಸಿಂಗ್ ಧೋನಿ, ಕೇದಾರ್ ಜಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್.ಅಶ್ವಿನ್, ಜಸ್ಪ್ರಿತ್ ಬೂಮ್ರ, ಉಮೇಶ್ ಯಾದವ್.
———-
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ

Comments are closed.

Social Media Auto Publish Powered By : XYZScripts.com