ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಸೈನಾ ನೆಹವಾಲ್ ಗೆ ಜಯ

ವಿಶ್ವದ ಮಾಜಿ ನಂಬರ್ 1 ಆಟಗಾರ್ತಿ ಭಾರತದ ಸೈನಾ ನೆಹವಾಲ್ ಹಾಗೂ ಅಜಯ್ ಜಯರಾಮ್ ಅವರು ವರ್ಷದ ಮೊದಲ ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಜಯ ಸಾಧಿಸಿದ್ದಾರೆ.
ಬುಧವಾರ ಸರವಾಕ್ ನಲ್ಲಿ ನಡೆದ ವನಿತೆಯರ ಸಿಂಗಲ್ಸ್ ಪಂದ್ಯದಲ್ಲಿ ಸೈನಾ 21-9, 21-8 ಅಂಕಗಳಿಂದ ಥಾಯ್ಲೆಂಡ್‌ನ ಚಾಸಿನೇ ಕೊರೆಪಪ್ ವಿರುದ್ಧ ಎರಡು ನೇರ ಸೆಟ್‌ಗಳಲ್ಲಿ ಜಯ ಸಾಧಿಸಿದರು.
ರಿಯೊ ಒಲಿಂಪಿಕ್ಸ್ ಆಡುವ ವೇಳೆ ಗಾಯಕ್ಕೆ ತುತ್ತಾಗಿದ್ದ ಸೈನಾ, ಚೇತರಿಕೆಯ ಬಳಿಕ ಪ್ರಶಸ್ತಿಯ ಬರವನ್ನು ಅನುಭವಿಸುತ್ತಿದ್ದಾರೆ. ಸೈನಾ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದರು.
25 ನಿಮಿಷ ನಡೆದ ಕಾದಾಟದಲ್ಲಿ ಸೈನಾ ಆಕರ್ಷಕ ಆಟವಾಡಿ ಗೆಲುವು ದಾಖಲಿಸಿದರು. ಮೊದಲ ಹಾಗೂ ಎರಡನೇ ಸೆಟ್‌ನಲ್ಲಿ ಅಂಕಗಳಲ್ಲಿ ಮುನ್ನಡೆ ಕಾಯ್ದುಕೊಂಡ ಸೈನಾ ಅರ್ಹ ಜಯದ ನಗೆ ಬೀರಿದರು.
ವಿಶ್ವದ 19 ನೇ ಶ್ರೇಯಾಂಕಿತ ಸೈನಾ ಮುಂದಿನ ಸುತ್ತಿನಲ್ಲಿ ಚೈನಿಸ್ ತೈಪೆ ಶುಹಾ ಸುಯಾನ್ ಯಿ ವಿರುದ್ಧ ಕಾದಾಟವನ್ನು ನಡೆಸಲಿದ್ದಾರೆ.
ಟೂರ್ನಿಯ ಆರನೇ ಶ್ರೇಯಾಂಕಿತ ಅಜಯ್ ಜಯರಾಮ್ 21-10, 17-21, 21-14 ಅಂಕಗಳಿಂದ ಸ್ಥಳೀಯ ಆಟಗಾರ ಜುನ್ ಹೊ ಲಿಂಗ್ ಅವರನ್ನು ಸೋಲಿಸಿದರು.
ವನಿತೆಯರ ಡಬಲ್ಸ್‌ನಲ್ಲಿ ಸೋಲು ಇನ್ನೂ ವನಿತೆಯರ ಡಬಲ್ಸ್ ವಿಭಾಗದಲ್ಲಿ ಭಾರತದ ಶ್ರುತಿ ಕೆ.ಪಿ ಹಾಗೂ ಹರಿತಾ 9-21, 13-21 ಅಂಕಗಳಿಂದ ಮಲೇಷ್ಯಾದ ಮಿ ಕುನ್ ಹಾಗೂ ವಿವಾನ್ ಹೂ ವಿರುದ್ಧ, ಮಿಶ್ರ ಡಬಲ್ಸ್‌ನಲ್ಲಿ ಬಿ ಸುಮಿತ್ ರೆಡ್ಡಿ, ಅಶ್ವಿನಿ ಪೊನ್ನಪ್ಪ ಜೋಡಿ 17-21, 17-21 ಅಂಕಗಳಿಂದ ಇಂಡೋನೇಷಿಯಾದ ತೊಂತೊವೈ ಅಹ್ಮದ್, ಗ್ಲೋರಿಯಾ ವಿರುದ್ಧ, ಸಾತ್ವಿಕ್ ಸೈರಾಜ್, ಮನೀಶಾ ಕೆ 10-21, 16-21 ಸೆಟ್‌ಗಳಿಂದ ಚೀನಾದ ತುಮ್ ಚುನ್ ಹೈ, ತ್ಸು ಯು ವಿರುದ್ಧ ಆಘಾತವನ್ನು ಅನುಭವಿಸಿದರು.
ಮನು ಅತ್ರೆ, ಸುಮಿತ್ ರೆಡ್ಡಿ ಜೋಡಿ 15-21, 21-13, 21-18 ಅಂಕಗಳಿಂದ ಮಲೇಷ್ಯಾದ ಜಿ ಹು ಚೆನ್, ಚುಂಗ್ ಕಾಂಗ್ ವಿರುದ್ಧ ಜಯದ ನಗೆ ಬೀರಿದರು.

Comments are closed.

Social Media Auto Publish Powered By : XYZScripts.com