ಸರ್ಕಾರಿ ಅಧಿಕಾರಿಯ ಅನುಮಾನಾಸ್ಪದ ಸಾವು!

ಸರ್ಕಾರಿ ಅಧಿಕಾರಿಯೊಬ್ಬರು ಊರಿಗೆ ಹೋಗಿ ಬಂದ ರಾತ್ರಿಯೇ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಶಂಕಿಸಲಾಗಿದ್ದು ತನಿಖೆ ನಡೆಯುತ್ತಿದೆ.

ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಅಧಿಕಾರಿ ಮಂಜುಳಾ. ಇವರು ಕೊಪ್ಪಳ ನಗರಸಭೆಯಲ್ಲಿ ಹಿರಿಯ ಆರೋಗ್ಯ ನೀರಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.  ಮೂಲತಃ ತುಮಕೂರು ಜಿಲ್ಲೆಯವರಾದ ಇವರು ಒಂದು ವಾರಗಳ ಕಾಲ ರಜೆ ಹಾಕಿ ಊರಿಗೆ ತೆರಳಿದ್ದರು. ಇಂದು ಕೆಲಸಕ್ಕೆ ಹಾಜರಾಗಲು ರಾತ್ರಿ ತುಮಕೂರಿನಿಂದ ಕೊಪ್ಪಳಕ್ಕೆ ಬಂದಿದ್ದರು. ಆದರೆ ರಾತ್ರಿ ಮಲಗಿದವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

ಕೊಪ್ಪಳದ ಪದಕಿ ಲೇಔಟ್​​ನ ಬಾಡಿಗೆ ಮನೆಯಲ್ಲಿ ಮಂಜುಳಾ ಸಾವನ್ನಪ್ಪಿದ್ದಾರೆ. ಇಂದು ಬೆಳಿಗ್ಗೆ ಮಂಜುಳಾ ಸಹಾಯಕ ಫೋನ್ ಮಾಡಿದಾಗ, ಮಂಜುಳಾ ಕರೆ ಸ್ವೀಕರಿಸಿಲ್ಲ. ಇದರಿಂದ ಆಕೆಯ ಸಹಾಯಕ ಮನೆಗೆ ಬಂದಿದ್ದಾನೆ. ಬಾಗಿಲು ಬಡೆದರೂ ಸಹ ಮಂಜುಳಾ  ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರಿಂದ ಅನುಮಾನಗೊಂಡ ಆಕೆಯ ಸಹಾಯಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಆಗ ಪೊಲೀಸರು ಬಂದು ನೋಡಿದಾಗ ಮಂಜುಳಾ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದಿದೆ.

ಮಂಜುಳಾ ಯಾವುದೇ ಡೆತ್ ನೋಟ್ ಬರೆದಿಟ್ಟಿಲ್ಲ. ಮನೆಯಲ್ಲಿ ಸಾಕಷ್ಟು ಮಾತ್ರೆಗಳು ಕಂಡು ಬಂದಿದ್ದು, ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.

Comments are closed.

Social Media Auto Publish Powered By : XYZScripts.com