ಶಿವಮೊಗ್ಗದಲ್ಲಿ ಬಿಎಸ್ ವೈ ಮತ್ತು ಈಶ್ವರಪ್ಪ ಬಣಗಳ ನಡುವೆ ಮಾರಾಮಾರಿ!

ಶಿವಮೊಗ್ಗದ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಗೌಡರ ಸಮ್ಮುಖದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಈಶ್ವರಪ್ಪ ಬಣಗಳ ನಡುವೆ ಮಾರಾಮಾರಿ ನಡೆದಿದೆ.

ನಗರದ ಬಿಜೆಪಿ ಕಚೇರಿಯಲ್ಲಿ ಸಭೆಗೆ ಆಗಮಿಸಿದ್ದ ಎರಡು ಗುಂಪುಗಳ ನಡುವೆ ವಾದ ವಿವಾದ ನಡೆದು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಘಟನೆ ಬಳಿಕ ಬಿ.ಎಸ್ ವೈ ಬೆಂಬಲಿಗರು ಈಶ್ವರಪ್ಪ ಬೆಂಬಲಿಗರು ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಇತ್ತೀಚೆಗೆ ರಾಜ್ಯ ಬಿಜೆಪಿ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದು, ಬಿಎಸ್ ವೈ ಮತ್ತು ಈಶ್ವರಪ್ಪ ನಡುವೆ ಮುಸುಕಿನ ಗುದ್ದಾಟ ತಾರಕಕ್ಕೇರಿದೆ. ಇತ್ತೀಚೆಗೆ ಸಭೆಯೊಂದರಲ್ಲಿ ಹೆಣ್ಣಿನ ಮಾತನ್ನು ಕೇಳಿದರೆ ಹಾಳಾಗಿ ಹೋಗ್ತೀಯ, ಸ್ತ್ರೀ ಬುದ್ದಿ ಪ್ರಳಯಾಂತಕ ಎಂದು ಹೇಳುವ ಮೂಲಕ ಕಾಗಿನೆಲೆ ಮಠದ ನಿರಂಜನಾನಂದ ಪುರಿ ಸ್ವಾಮೀಜಿ ಯಡಿಯೂರಪ್ಪನವರನ್ನು ಮೂದಲಿಸಿದ್ದರು. ಈ ವೇಳೆ ವೇದಿಕೆಯಲ್ಲಿ ಈಶ್ವರಪ್ಪನವರು ಇದ್ದರು.

ಯಡಿಯೂರಪ್ಪನವರ ಕಾರ್ಯವೈಖರಿಯನ್ನು ಟೀಕಿಸಿರುವ 25 ಜನ ಶಾಸಕರು ಪತ್ರ ಬರೆದು ಸಹಿ ಮಾಡಿ ಬಹಿರಂಗವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ರಾಷ್ಟ್ರೀಯ ನಾಯಕರು ಈಗಾಗಲೇ ದಿನಾಂಕ ನಿಗದಿಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಈಶ್ವರಪ್ಪನವರು ಕಾಂಗ್ರೆಸ್ ಮತ್ತು ಜೆಡಿಎಸ್ ಕಡೆಗೆ ಮುಖ ಮಾಡಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಮುಂದೆ ಏನಾಗುತ್ತೆ ಎಂಬುದನ್ನು ಕಾದು ನೋಡಬೇಕು.

Comments are closed.