ಕುಮಾರಸ್ವಾಮಿ ದಂಪತಿಗೆ ಕೋರ್ಟ್ ನೀಡಿದ ಸೂಚನೆ ಏನು?.

ಜಂತಕಲ್ ಮೈನಿಂಗ್ ಪರವಾನಗಿ ನೀಡುವಲ್ಲಿ ಅಕ್ರಮವೆಸಗಿದ ಆರೋಪ ಪ್ರಕರಣ ಸಂಬಂಧ ವಿಚಾರಣೆಗೆ ಖುದ್ದು ಹಾಜರಾಗುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಜೆ.ಡಿ.ಎಸ್.ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ದಂಪತಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಸೂಚನೆ ನೀಡಿದೆ.

ಇನ್ನೂ ವಕೀಲ ವಿನೋದ್ ಸಲ್ಲಿಸಿದ್ದ ಖಾಸಗಿ ದೂರಿನ ಅರ್ಜಿ ವಿಚಾರಣೆ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ನಡೆಯಿತು. ಸಮನ್ಸ್ ಹಿನ್ನಲೆಯಲ್ಲಿ ಖುದ್ದು ಹಾಜರಾತಿಯಿಂದ ವಿನಾಯಿತಿ ಕೋರಿ ಕುಮಾರಸ್ವಾಮಿ ದಂಪತಿ ಅರ್ಜಿ ಸಲ್ಲಿಸಿದರು. ಅರ್ಜಿದಾರರ ಮನವಿಯನ್ನು ಪರಿಗಣಿಸಿದ ನ್ಯಾಯಾಲಯ ಇಂದಿನ ವಿಚಾರಣೆಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿತು.

ದೂರುದಾರರಿಗೆ ಸಂಬಂಧಪಟ್ಟ ಸಾಕ್ಷ್ಯಾಧಾರ,ದಾಖಲಾತಿಗಳನ್ನು ಒದಗಿಸಲು ಸೂಚನೆ ನೀಡಿದ ಲೋಕಾಯುಕ್ತ ವಿಶೇಷ ನ್ಯಾಯಾಲಯ ವಿಚಾರಣೆಯನ್ನು ಫೆಬ್ರವರಿ 08 ಕ್ಕೆ ಮುಂದೂಡಿತು. ಮುಂದಿನ ವಿಚಾರಣೆ ವೇಳೆ ಹೆಚ್ಡಿಕೆ ಸೇರಿದಂತೆ ಪ್ರಕರಣದ ಮೂವರನ್ನು ಖುದ್ದು ಹಾಜರಾಗಲು ಸೂಚನೆ ನೀಡಿತು.

ಪ್ರಕರಣವೇನು?
ಹೆಚ್ ಡಿ ಕೆ ವಿರುದ್ಧ ಅಧಿಕಾರ ದುರ್ಬಳಕೆ ಆರೋಪ ಸಂಬಂಧ ವಕೀಲ ವಿನೋದ್ ಖಾಸಗಿ ದೂರು ಸಲ್ಲಿಸಿದ್ದಾರೆ. ಸಿಎಂ ಆಗಿದ್ದ ಅವಧಿಯಲ್ಲಿ ಅಕ್ರಮವಾಗಿ ಜಂತಕಲ್ ಮೈನಿಂಗ್ ಕಂಪನಿಗೆ ಲೈಸೆನ್ಸ್ ನೀಡಿ ಕಿಕ್ ಬ್ಯಾಕ್ ಪಡೆದುಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಹಾಗೂ ಜಂತಕಲ್ ಕಂಪನಿ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಹಾಗೂ ವಿಶ್ವ ಭಾರತಿ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯಿಂದ ಪತ್ನಿ ಅನಿತಾ ಕುಮಾರಸ್ವಾಮಿ ಗೆ ಸೈಟ್ ಮಂಜೂರು ಮಾಡಿಸಿಕೊಟ್ಟಿದ್ದಾರೆ ಎಂದು ಕುಮಾರಸ್ವಾಮಿ ದಂಪತಿ ವಿರುದ್ಧ ಖಾಸಗಿ ದೂರು ಸಲ್ಲಿಕೆ ಮಾಡಿದ್ದರು.

ಈ ಹಿಂದೆ ಪ್ರಕರಣವನ್ನು ಹೈಕೋರ್ಟ್ ರದ್ದು ಮಾಡಿದ್ದನ್ನು ಪ್ರಶ್ನಿಸಿ ದೂರುದಾರ ವಿನೋದ್ ಸುಪ್ರೀಂ ಮೊರೆ ಹೋಗಿದ್ದರು. ಟ್ರಯಲ್ ಕೋರ್ಟ್ ನಲ್ಲಿ ಮತ್ತೆ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದ್ದರಿಂದ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಆರಂಭಗೊಂಡಿದೆ ಎಂದು ತಿಳಿದುಬಂದಿದೆ.

Comments are closed.