ಆಪತ್ಬಾಂಧವರಾದ ಆಹಾರ ಸಚಿವ ಯು.ಟಿ.ಖಾದರ್!

ಶಬರಿ ಮಲೆ ಯಾತ್ರೆ ಮುಗಿಸಿ ಹುಬ್ಬಳ್ಳಿಗೆ ಹಿಂತಿರುಗುತ್ತಿದ್ದ ಅಯ್ಯಪ್ಪ ಸ್ವಾಮಿ ಭಕ್ತರಿದ್ದ ಕಾರು ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಇದೇ ವೇಳೆ ರಸ್ತೆಯಲ್ಲಿ ಕಾರ್ಯನಿಮಿತ್ತ ಅಡ್ಡಕ್ಕೆ ಬಂದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯುಟಿ ಖಾದರ್ ಬೆಂಕಿಯನ್ನು ನಂದಿಸಿ ಮಾನವೀಯತೆ ಮೆರೆದಿದ್ದಾರೆ.

ಕೆ.ಎ.25 ರಿಜಿಸ್ಟ್ರೇಶನ್ ನ ಟಾಟಾ ಇಂಡಿಕಾ ಕಾರು ಶುಕ್ರವಾರ ರಾತ್ರಿ  ಮಂಗಳೂರಿನ ಪಂಪುವೆಲ್- ನಂತೂರು ಸರ್ಕಲ್ ಮಧ್ಯೆ ರಸ್ತೆಯಲ್ಲೇ ಆಕಸ್ಮಿಕ ಬೆಂಕಿ ಹೊತ್ತಿಕೊಂಡಿತ್ತು. ಕಾರಿನಲ್ಲಿ ಚಾಲಕ ಸೇರಿ ಐವರು ಇದ್ದರು. ಇದೇ ವೇಳೆ ಮುಂಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುತಿದ್ದ ಸಚಿವರಾದ ಯು.ಟಿ.ಖಾದರ್  ತಮ್ಮ ಸಹಚರರ ಸಹಾಯ ಪಡೆದು ಬೆಂಕಿ ನಂದಿಸಿದ್ದಾರೆ.

ಖಾದರ್ ಬೋಳಿಯಾರ್ ಕಾರ್ಯಕ್ರಮಕ್ಕೆ ಇದೇ ರಸ್ತೆಯಲ್ಲಿ ತೆರಳುತ್ತಿದ್ದರು. ಕಾರಿಗೆ ಬೆಂಕಿ ಬಿದ್ದಿರುವುದನ್ನು ಕಂಡ ಸಚಿವರು

ತಕ್ಷಣ ಸ್ಥಳಕ್ಕೆ ತೆರಳಿ ಆಪತ್ಬಾಂಧವರಾದರು. ಅಗ್ನಿಶಾಮಕ ದಳಕ್ಕೆ ಫೋನಾಯಿಸಿದ್ದಾರೆ. ಅಗ್ನಿಶಾಮಕದಳ ಬರುವುದು ತಡವಾದ್ದರಿಂದ ಜೀವದ ಹಂಗು ತೊರೆದು ಕಾರಿನೊಳಗಿದ್ದವರನ್ನು ರಕ್ಷಿಸಿದ್ದಾರೆ. ಅಗ್ನಿ ನಂದಿಸಿದ ಬಳಿಕ ಅಗ್ನಿಶಾಮಕದಳದ ವಾಹನ ಬಂತಾದರೂ ಅದರಿಂದಾಗಿ ಏನೂ ಪ್ರಯೋಜನವಾಗಿಲ್ಲ.

ಈ ವೇಳೆ ಸಚಿವ ಯು.ಟಿ.ಖಾದರ್ ಅವರಿಗೆ ದೀಪಕ್ ಪಿಲಾರ್, ಸುರೇಶ್ ಶಕ್ತಿ, ಜೋಸೆಫ್, ಪಿಯುಸ್, ಎನ್ನೆಸ್ ಕರೀಂ, ಸಿರಾಜ್ ಕಿನ್ಯ, ರಫೀಕ್ ಅಂಬ್ಲಮೊಗರು, ಸಚಿವರ ಆಪ್ತ ಸಹಾಯಕ ಲಿಬ್ಝತ್ ನೆರವಾಗುವ ಮೂಲಕ ಹೆಚ್ಚಿನ ಅಪಾಯವನ್ನು ತಪ್ಪಿಸಿದರು. ಇಷ್ಟಕ್ಕೇ ಬಿಡದ ಸಚಿವ ಯು.ಟಿ.ಖಾದರ್ ಕಾರಲ್ಲಿದ್ದ ಶಬರಿಮಲೆ ಭಕ್ತರಿಗೆ ರಾತ್ರಿಯ ಊಟದ ವ್ಯವಸ್ಥೆ ಮಾಡಿ ಊರಿಗೆ ತೆರಳಲು ಬಸ್ ಟಿಕೆಟ್ ನ್ನೂ ತೆಗೆದುಕೊಟ್ಟು ಹೃದಯ ವೈಶಾಲ್ಯತೆ ಮೆರೆದರು.

Comments are closed.

Social Media Auto Publish Powered By : XYZScripts.com