ಬಾಸ್ಕೆಟ್‌ಬಾಲ್: ಕರ್ನಾಟಕ ತಂಡಕ್ಕೆ ನಿರಾಸೆ

ಪುದುಚೇರಿ: ಕರ್ನಾಟಕ ಪುರುಷರ ಹಾಗೂ ವನಿತೆಯರ ಬಾಸ್ಕೆಟ್‌ಬಾಲ್ ತಂಡಗಳು 67 ನೇ ರಾಷ್ಟ್ರೀಯ ಬಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ನಿರಾಸೆ ಅನುಭವಿಸಿದೆ.
ಗುರುವಾರ ನಡೆದ ಪುರುಷರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ 70-83 ಅಂಕಗಳೊಂದಿಗೆ ರಾಜಸ್ಥಾನ ತಂಡದ ವಿರುದ್ಧ ಆಘಾತ ಅನುಭವಿಸಿತು.
ಎಂಟರ ಘಟ್ಟದ ಪಂದ್ಯದಲ್ಲಿ ಕರ್ನಾಟಕ ತಂಡ ಮೊದಲ ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿತು. ಈ ಹಂತದಲ್ಲಿ ಎದುರಾಳಿ ರಾಜಸ್ಥಾನ ತಂಡ 21-12 ಅಂಕಗಳಿಂದ ಮುನ್ನಡೆ ಸಾಧಿಸಿತು. ಆದರೆ ಎರಡನೇ ಅವಧಿಯಲ್ಲಿ ಪುಟಿದೇಳು ಸೂಚನೆ ನೀಡಿದ ಕರ್ನಾಟಕ ತಂಡ ಆಕರ್ಷಕ ಆಟವನ್ನು ಆಡಿತು. ಫಲವಾಗಿ 19-14 ಅಂಕಗಳಿಂದ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ತೀವ್ರ ಪೈಪೋಟಿಯಿಂದ ಕೂಡಿದ್ದ ಮೂರನೇ ಸೆಟ್‌ನಲ್ಲಿ 23-26 ಅಂಕಗಳಿಂದ ಹಿನ್ನಡೆ ಅನುಭವಿಸಿತು. ಕೊನೆಯ ಸೆಟ್‌ನಲ್ಲಿ ಅಂಕಗಳನ್ನು ಗಳಿಸುವಲ್ಲಿ ಹಿಂದೆ ಬಿದ್ದ ಕರ್ನಾಟಕ ಪಂದ್ಯವನ್ನು ಕೈ ಚೆಲ್ಲಿತು.
ಅನಿಲ್ ಕುಮಾರ್ 21, ಅರವಿಂದ್ 19, ನವೀನ್ 12 ಸೋಲಿನಲ್ಲೂ ಮಿಂಚಿದರು. ರಾಜಸ್ಥಾನ ಪರ ಜೀವನಾಥನ್ ೧೭, ಸಿಲ್ವಾ ೧೧ ಅಂಕಗಳನ್ನು ಕಲೆ ಹಾಕಿದರು.
 ಮಹಾರಾಷ್ಟ್ರ ವಿರುದ್ಧ ವನಿತೆಯರ ಪ್ರಿ ಕ್ವಾರ್ಟರ್ ಪಂದ್ಯದಲ್ಲಿ ಕರ್ನಾಟಕ ತಂಡ ವಿರೋಚಿತ ಸೋಲು ಅನುಭವಿಸಿತು. ಮಹಾರಾಷ್ಟ್ರ 62-61 ಅಂಕಗಳೊಂದಿಗೆ ಕರ್ನಾಟಕವನ್ನು ಮಣಿಸಿತು.
ಮೊದಲ ಹಾಗೂ ಎರಡನೇ ಸೆಟ್‌ನಲ್ಲಿ ಮಹಾರಾಷ್ಟ್ರ ತಂಡ ಮೇಲುಗೈ ಸಾಧಿಸಿತು. ಮೂರನೇ ಮತ್ತು ನಾಲ್ಕನೇ ಸೆಟ್‌ನಲ್ಲಿ ಕರ್ನಾಟಕ ಮಹಿಳೆಯರು ಹಿಡಿತ ಸಾಧಿಸಿದರೂ, ಪಂದ್ಯವನ್ನು ಗೆಲ್ಲುವಲ್ಲಿ ವಿಫಲವಾಯಿತು.

Comments are closed.

Social Media Auto Publish Powered By : XYZScripts.com