ರಣಜಿ ಟೂರ್ನಿಯ ಸೆಮಿಫೈನಲ್ ನಲ್ಲಿ ಮುಂಬೈಗೆ ಮುನ್ನಡೆ!

ಹಾಲಿ ಚಾಂಪಿಯನ್ ಮುಂಬೈ ಪ್ರಸಕ್ತ ಸಾಲಿನ ರಣಜಿ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಇನ್ನಿಂಗ್ಸ್ ಮುನ್ನಡೆಯ ಕನಸು ಕಾಣುತ್ತಿದೆ.

ಸೋಮವಾರ 6 ವಿಕೆಟ್‌ಗೆ 261 ರನ್‌ಗಳಿಂದ ಆಟವನ್ನು ಮುಂದುವರಿಸಿದ ತಮಿಳುನಾಡು 305 ರನ್‌ಗಳಿಗೆ ಸರ್ವಪತನ ಹೊಂದಿತು. ಮೊದಲ ಇನ್ನಿಂಗ್ಸ್ ಆರಂಭಿಸಿದ ಮುಂಬೈ ತಂಡ ದಿನದಾಟದ ಅಂತ್ಯಕ್ಕೆ 4 ವಿಕೆಟ್‌ಗೆ 171 ರನ್ ಕಲೆ ಹಾಕಿದೆ. ನಾಯಕ ಆದಿತ್ಯ ತಾರೆ (19), ಶ್ರೇಯಸ್ ಅಯ್ಯರ್ (24) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಮೊದಲ ಇನ್ನಿಂಗ್ಸ್ ಆರಂಭಿಸಿದ ಮುಂಬೈ ತಂಡದ ಪ್ರಿಯಾಂಕ್ ಪಾಂಚಾಲ್ (4) ಬೇಗನೆ ಪೆವಿಲಿಯನ್ ಸೇರಿದರು. ಎರಡನೇ ವಿಕೆಟ್‌ಗೆ ಪ್ರಫುಲ್ (48) ಹಾಗೂ ಸೂರ್ಯಕುಮಾರ್ ಯಾದವ್ ಶತಕದ ಜೊತೆಯಾಟ ನೀಡಿ ತಂಡಕ್ಕೆ ಆಸರೆ ಆದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು ತಂಡದ ವಿಜಯ್ ಶಂಕರ್ ಹಾಗೂ ಅಶ್ವಿನ್ ಕ್ರಿಸ್ಟ್ 7ನೇ ವಿಕೆಟ್‌ಗೆ 49 ಕಾಣಿಕೆ ನೀಡಿದರು. ವಿಜಯ್ 88 ಎಸೆತಗಳಲ್ಲಿ 9 ಬೌಂಡರಿ ಸೇರಿದಂತೆ 50 ರನ್ ಬಾರಿಸಿದರೆ, ಅಶ್ವಿನ್ 31 ರನ್ ಕಲೆ ಹಾಕಿದರು. ಉಳಿದ ಬ್ಯಾಟ್ಸ್‌ಮನ್‌ಗಳು ರನ್ ಕಲೆ ಹಜಾಕುವಲ್ಲಿ ಹಿಂದೆ ಬಿದ್ದರು.

ಮುಂಬೈ ಪರ ಶರ್ಧಾಲ್ ಠಾಕೂರ್ ಹಾಗೂ ಅಭಿಷೇಕ್ ನಾಯರ್ ತಲಾ 4 ವಿಕೆಟ್ ಪಡೆದರು.

ಗುಜರಾತ್ ಉತ್ತಮ ಮೊತ್ತ

ಇನ್ನೊಂದು ಸೆಮೀಸ್ ಕಾದಾಟದಲ್ಲಿ ಗುಜರಾತ್ ತಂಡ ಜಾರ್ಖಂಡ್ ವಿರುದ್ಧ ಉತ್ತಮ ಮೊತ್ತ ಕಲೆ ಹಾಕಿದೆ.

ನಾಗ್ಪೂರ್‌ದಲ್ಲಿ ನಡೆದ ಪಂದ್ಯದಲ್ಲಿ 3 ವಿಕೆಟ್‌ಗೆ 283 ರನ್‌ಗಳಿಂದ ಆಟವನ್ನು ಮುಂದುವರಿಸಿದ ಗುಜರಾತ್ 390 ರನ್‌ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್ ಆರಂಭಿಸಿರುವ ಜಾರ್ಖಂಡ್ ದಿನದಾಟದ ಅಂತ್ಯಕ್ಕೆ 5 ವಿಕೆಟ್‌ಗೆ 214 ರನ್ ಸೇರಿಸಿದೆ. ಇಶಾಂಕ್ ಜಗ್ಗಿ (40), ರಾಹುಲ್ ಶುಕ್ಲಾ (0) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

 

ಸಂಕ್ಷಿಪ್ತ ಸ್ಕೋರ್

ತಮಿಳುನಾಡು ಮೊದಲ ಇನ್ನಿಂಗ್ಸ್ 305

ಮುಂಬೈ ಮೊದಲ ಇನನ್ನಿಂಗ್ಸ್ 4 ವಿಕೆಟ್‌ಗೆ 171

* * * * *

ಗುಜರಾತ್ ಮೊದಲ ಇನ್ನಿಂಗ್ಸ್ 390

ಜಾರ್ಖಂಡ್ ಮೊದಲ ಇನ್ನಿಂಗ್ಸ್ 5 ವಿಕೆಟ್‌ಗೆ 214 

Comments are closed.

Social Media Auto Publish Powered By : XYZScripts.com