ಬ್ಲೇಡಿನಿಂದ ಹೊಟ್ಟೆ ಕೊಯ್ದುಕೊಂಡು ಮಗುವಿಗೆ ಜನ್ಮ ಕೊಟ್ಟ ತಾಯಿ!

ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತಲುಪಲು ಸಾಧ್ಯವಾಗದೇ, ಹೆರಿಗೆ ನೋವು ತಾಳಲಾರದೇ ಗರ್ಭಿಣಿಯೊಬ್ಬಳು ಬ್ಲೇಡಿನಿಂದ ಹೊಟ್ಟೆ ಕೊಯ್ದುಕೊಂಡು ಮಗುವನ್ನು ಹೊರತೆಗೆದ ಹೃದಯ ವಿದ್ರಾವಕ ಘಟನೆ ಆಂಧ್ರ ಪ್ರದೇಶದಲ್ಲಿ ವರದಿಯಾಗಿದೆ.

ಆಂಧ್ರದ ಗೋದಾವರಿ ಜಿಲ್ಲೆಯ ಮಾರೇಡುಮಿಲ್ಲಿ ಮಂಡಲದಲ್ಲಿ ಇಂತಾದೊಂದು ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮಂಡಲದ ಕಿಂಟುಕೂರು ಗ್ರಾಮದ ಗಿರಿಜನ ಮಹಿಳೆ ಕೆ.ಲಕ್ಷ್ಮಿ (30) ಈ ರೀತಿ ಮಗುವಿಗೆ ಜನ್ಮ ಕೊಟ್ಟ ತಾಯಿ. ಡಿಸೆಂಬರ್ 23 ರಂದು ಲಕ್ಷ್ಮಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ.  ಕೂಡಲೇ ಆಕೆ ಪತಿ ಸೀತಣ್ಣನ ಜೊತೆ ಕಾಲ್ನಡಿಗೆಯಲ್ಲಿ ಮನೆಯಿಂದ 10 ಕಿ.ಮೀ ದೂರದಲ್ಲಿರೋ ಆಸ್ಪತ್ರೆಗೆ ತಲುಪಲು ಮುಂದಾಗಿದ್ದಾಳೆ. ಮಾರ್ಗ ಮಧ್ಯದಲ್ಲಿ ಲಕ್ಷ್ಮಿಗೆ ಹೆರಿಗೆ ನೋವು ಹೆಚ್ಚಾಗಿದೆ. ಆಸ್ಪತ್ರೆ ತಲುಪಲು ಆಗದೇ ನೋವನ್ನು ತಡೆದುಕೊಳ್ಳಲು ಆಗದ ಸಂದಿಗ್ಧ ಪರಿಸ್ಥಿತಿಯಲ್ಲಿ ಬೇರೆ ದಾರಿ ಕಾಣದೇ ಲಕ್ಷ್ಮಿ ಬ್ಲೇಡಿನಿಂದ ಹೊಟ್ಟೆ ಕೊಯ್ದುಕೊಂಡು ಮಗುವನ್ನು ಹಡೆದಿದ್ದಾಳೆ. ನಂತರ ಪತಿ ಸೀತಣ್ಣ ಸ್ಥಳೀಯರ ಸಹಾಯದಿಂದ ಆಂಬ್ಯುಲೆನ್ಸ್ ಮೂಲಕ ತಾಯಿ, ಮಗುವನ್ನ ಆಸ್ಪತ್ರೆಗೆ ಸೇರಿಸಿದ್ದಾನೆ.

ಲಕ್ಷ್ಮಿಗೆ ಇದು 5ನೇ ಹೆರಿಗೆಯಾಗಿದ್ದು,  ಸದ್ಯ ತಾಯಿ-ಮಗು ಆರೋಗ್ಯವಾಗಿದ್ದಾರೆ. ಅವರಿಗೆ ಸೂಕ್ತ ಚಿಕಿತ್ಸೆ ಒದಗಿಸಿರುವುದಾಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಹೆರಿಗೆ ದಿನಾಂಕಕ್ಕೆ 10 ದಿನ ಮೊದಲೇ ಆಸ್ಪತ್ರೆ ಬಂದು ಅಡ್ಮಿಟ್ ಆಗುವಂತೆ ಎಷ್ಟೇ ಹೇಳಿದ್ರು ಗಿರಿಜನ ಮಹಿಳೆಯರು ಅದನ್ನು ಪಾಲಿಸುತ್ತಿಲ್ಲ. ಹಾಗಾಗಿ ಕೆಲವೊಮ್ಮೆ ಇಂತ ಘಟನೆಗಳು ಸಂಭವಿಸುತ್ತಿರುತ್ತವೆ ಅಂತ ಆಸ್ಪತ್ರೆಯ ಹಿರಿಯ ವೈದ್ಯರು ತಿಳಿಸಿದ್ದಾರೆ.

ಸರಿಯಾದ ಸಮಯಕ್ಕೆ ಲಕ್ಷ್ಮಿ ಆಸ್ಪತ್ರೆ ತಲುಪಿದ್ರೆ ಹೀಗೆ ಬ್ಲೇಡಿನಿಂದ ಹೊಟ್ಟೆ ಸೀಳಿಕೊಂಡು ಮಗುವಿಗೆ ಜನ್ಮ ಕೊಡೊ ಪ್ರಮೇಯ ಬರುತ್ತಿರಲಿಲ್ಲ. ನಮ್ಮ ದೇಶ ಎಷ್ಟೇ ಅಭಿವೃದ್ಧಿ ಸಾಧಿಸಿದೆ ಅಂತ ಬಡಾಯಿ ಕೊಚ್ಚಿಕೊಂಡ್ರು, ಮೂಲಭೂತ ಸೌಕರ್ಯಗಳು ಇನ್ನೂ ಎಲ್ಲರಿಗೂ ತಲುಪಿಲ್ಲ ಅನ್ನೋದಕ್ಕೆ ಈ ಘಟನೆ ಸ್ಪಷ್ಟ ನಿದರ್ಶನ. ನಾವಿನ್ನು ಸಾಧಿಸಬೇಕಾಗಿರುವುದು ಸಾಕಷ್ಟಿದೆ ಅನ್ನೋದನ್ನು ಇಂಥ ಪ್ರಕರಣಗಳು ನೆನಪಿಸುತ್ತವೆ.

Comments are closed.

Social Media Auto Publish Powered By : XYZScripts.com