ಕುಸ್ತಿ ಕಣದಲ್ಲಿ ಬದುಕಿನ ದಂಗಲ್!

ಹರಿಯಾಣ ರಾಜ್ಯದ ಓರ್ವ ಮಾಜಿ ಕುಸ್ತಿಪಟುವಿನ ಜೀವನಗಾಥೆ ಆಧಾರಿತ ಚಿತ್ರವೊಂದರಲ್ಲಿ ಆಮೀರ್ ಖಾನ್ ನಟಿಸುತ್ತಾರೆ ಹಾಗೂ ಕುಸ್ತಿಪಟುವಿನ ಪಾತ್ರಕ್ಕೆ ಬಣ್ಣ ಹಚ್ಚುತ್ತಾರೆ ಎಂಬ ಸುದ್ದಿ ಕೇಳಿದಾಗಲೇ ನಿಜಕ್ಕೂ ಎಲ್ಲರೂ ಥ್ರಿಲ್ ಆಗಿದ್ದರು. ಮಿ. ಪರ್ಫೇಕ್ಷನಿಸ್ಟ್ ಅನ್ನಿಸಿಕೊಂಡ ಮೇಧಾವಿ ನಟನೊಬ್ಬ ಬಯೋಗ್ರಫಿಕ್ ಸಿನಿಮಾದಲ್ಲಿ ನಟಿಸುತ್ತಾರೆಂದರೆ ಅದು ಸಹಜವಾಗೇ ನಿರೀಕ್ಷೆಗಳನ್ನು ಹುಟ್ಟು ಹಾಕುತ್ತದೆ ಕೂಡ. “ದಂಗಲ್” ಸಾಮಾನ್ಯ ಸಿನಿಮಾವೇ ಆಗಬಹುದಾಗಿದ್ದ ಕಥಾವಸ್ತು ಹೊಂದಿರುವ ಚಿತ್ರ. ಆದರೆ ನಿರ್ದೇಶಕ ನಿತೀಶ್ ತಿವಾರಿ ಅದಕ್ಕೆ ಆಸ್ಪದವನ್ನೇ ಕೊಟ್ಟಿಲ್ಲ. ಅಷ್ಟು ನೀಟಾಗಿ ಚಿತ್ರಕತೆ ಮಾಡಿಟ್ಟುಕೊಂಡು ಪ್ರತಿ ದೃಶ್ಯಕ್ಕೂ ಜೀವ ಬರುವಂತೆ ಸಿನಿಮಾಟೋಗ್ರಾಫರ್ ಸೇತು ಅವರ ಕಡೆಯಿಂದ ಕ್ಯಾಮರಾ ಹಿಡಿಸಿದ್ದಾರವರು.


ಮಹಾವೀರ ಸಿಂಗ್ ಪೊಗಾಟ್ ಎಂಬ ಪೈಲ್ವಾನ್ ದೇಶಕ್ಕೊಸ್ಕರ ಮೆಡಲ್ಲು ತರಬೇಕೆಂಬ ತನ್ನ ಆಸೆ ಕಮರಿ ಹೋಗಿದ್ದಕ್ಕೆ ಪರಿತಪಿಸುತ್ತಿರುತ್ತಾನೆ. ವಯಸ್ಸಾಗುವ ಮುಂಚೆಯೇ ಜೀವನ ನಿರ್ವಹಣೆಗೋಸ್ಕರ ಸರ್ಕಾರಿ ಕೆಲಸಕ್ಕೆ ಸೇರುವ ಪೊಗಾಟ್, ಕುಸ್ತಿ ಅಂಕಣದಲ್ಲಿ ಕಳೆದುಹೋದ ತನ್ನ ವೈಭವದ ದಿನಗಳನ್ನು ನೆನೆದು ಒಳಗೊಳಗೆ ಅಳುಕುತ್ತಿರುತ್ತಾನೆ. ತನಗೆ ಹುಟ್ಟುವ ಮಗನ ಕೈಯಿಂದಾದರೂ ದೇಶಕ್ಕಾಗಿ ಮೆಡಲ್ಲು ತರುವಂತೆ ಮಾಡುತ್ತೇನೆ ಎಂದು ಪತ್ನಿ( ಸಾಕ್ಷಿ ತನ್ವರ್) ಎದುರು ಹೇಳುತ್ತಾನೆ ಮಹಾವೀರಸಿಂಗ್. ಆದರೆ ಅವನ ದುರಾದೃಷ್ಟಕ್ಕೆ(?) ನಾಲ್ಕು ಹೆಣ್ಣು ಮಕ್ಕಳೇ ಜನಿಸುತ್ತವೆ. ಒಳಗೊಳಗೆ ಕುಸಿಯುತ್ತಾನೆ ಪೈಲ್ವಾನ್. ಆದರೂ ಮಕ್ಕಳು ಮಕ್ಕಳೇ ಅಲ್ಲವೇ? ಉಸಿರು ನುಂಗುತ್ತ ಸುಮ್ಮನಿದ್ದು ಬಿಡುತ್ತಾನೆ.

 
ಹಾಗಿರುವಾಗ ಒಂದಿನ ಮಹಾವೀರ ಮಕ್ಕಳಾದ ಗೀತಾ( ಜೈರಾ ವಾಸೀಂ), ಬಬಿತಾ( ಸಾನ್ಯಾ) ತಮ್ಮನ್ನು ಚುಡಾಯಿಸಿದ ಇಬ್ಬರು ಹುಡುಗರನ್ನು ಸಮಾ ಬಡಿದು ಮನೆಗೆ ಬಂದಿರುತ್ತಾರೆ. ಆ ಹುಡುಗರ ತಂದೆ ತಾಯಿ ಮಹಾವೀರನ ಮನೆಗೆ ಪಂಚಾಯ್ತಿಗೆ ಬಂದಿರುತ್ತಾರೆ. ಕೆಲಸದಿಂದ ಬರುವ ಮಹಾವೀರನ ಎದುರು ಮಾರಾಮಾರಿಯ ಕತೆ ಬಿಚ್ವಿಕೊಳ್ಳುತ್ತದೆ. ದಂಗಾಗುತ್ತಾನೆ ಪೈಲ್ವಾನ್. ಅವರನ್ಯಾಕೆ ಹೊಡೆದೀರಿ? ಎಂದು ಕೇಳಬೇಕಾದ ತಂದೆ, ಹೇಗೆ ಬಾರಿಸಿದ್ರಿ ಹೇಳಿ? ಎಂದು ಇಷ್ಟಗಲ ಕಣ್ಣರಳಿಸಿ ಕೇಳುತ್ತಾನೆ ಮಕ್ಕಳನ್ನು. ಅವತ್ತೇ ತನ್ನಿಬ್ಬರು ಮಕ್ಕಳನ್ನು ಕುಸ್ತಿಪಟುಗಳನ್ನಾಗಿ ಮಾಡುವ ಕುರಿತು ನಿರ್ಧರಿಸುತ್ತಾನೆ. ಊರಿನ ಜನರ ಚುಚ್ಚು ಮಾತು, ಕಾಡುವ ಹಣಕಾಸಿನ ಪರಿಸ್ಥಿತಿ, ಮೂಗುದಾರ ಹಾಕಲು ಯತ್ನಿಸುವ ಪತ್ನಿಯ ಕಾಳಜಿ ಎಲ್ಲವನ್ನೂ ಎದುರಿಸುವ ಮಹಾವೀರ ಕೊನೆಗೂ ತನ್ನಿಬ್ಬರು ಮಕ್ಕಳನ್ನು ಪೈಲ್ವಾನ್ ಮಾಡುತ್ತಾನೆ. ಅವರನ್ನು ಕುಸ್ತಿಪಟುಗಳನ್ನಾಗಿಸುವ ಮೋದವನ್ನು ನೀವು ಸಿನಿಮಾ ನೋಡಿಯೇ ಸವಿದರೆ ಮಾತ್ರ ಅದರ ಸ್ವಾದ ದಕ್ಕಬಲ್ಲದೇನೋ.

 
ಬೆಳೆದು ನಿಂತ ಮಕ್ಕಳನ್ನು ದಂಗಲ್(ದೇಶಿ ಕುಸ್ತಿ, ಹಳ್ಳಿಗಳಲ್ಲಿ ನಡೆಯುವ ಜಂಗೀ ನಿಖಾಲಿ ಕುಸ್ತಿ) ಆಡಲು ಕರೆದೊಯ್ಯುತ್ತಾನೆ ಮಧ್ಯವಯಸ್ಕ ಪೈಲ್ವಾನ್. ಜನ ನಗುತ್ತಾರೆ. ಹೀಯಾಳಿಸುತ್ತಾರೆ. ಉಹುಂ ಕಾಲ್ತೆಗೆಯುವುದಿಲ್ಲ ಆತ. ಪೈಲ್ವಾನನ ನಿರೀಕ್ಷೆಯಂತೆ ಹಿರಿಮಗಳು ಗೀತಾ ದಂಗಲ್ ನಲ್ಲಿ ಪುರುಷ ಕುಸ್ತಿಯಾಳುಗಳಿಗೆ ಮಣ್ಣು ಮುಕ್ಕಿಸುತ್ತಾಳೆ. ಅಲ್ಲಿಂದ ನ್ಯಾಷನಲ್ ಚಾಂಪಿಯನ್‌ಶಿಪ್ ಗೆಲ್ಲುವವರೆಗೂ ಹೋಗುತ್ತದೆ ಮಹಾವೀರಸಿಂಗ್ ಪೊಗಾಟ್ ಎಂಬ ಸಿಂಹ ಮೇಯಿಸಿದ ಗೀತಾ ಎಂಬ ಹೆಣ್ಣು ಹುಲಿ.

 
ಅಲ್ಲಿಂದ ಆಕೆ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಬಂಗಾರದ ಪದಕ ಗೆಲ್ಲುವರೆಗೂ, ಎರಡನೇ ಮಗಳು ಬಬಿತಾ ನ್ಯಾಷನಲ್ ಚಾಂಪಿಯನ್ ಆಗಿ ರಾಷ್ಟ್ರೀಯ ಕ್ರೀಡಾ ಅಕಾಡೆಮಿ ಸೇರುವರೆಗೂ ಮಕ್ಕಳ ಬೆನ್ನು ಹಿಂದೆ ನಿಂತು ತನ್ನೆಲ್ಲ ಸುಖವನ್ನು ಸುಟ್ಟುಕೊಳ್ಳುವ ಪಾತ್ರದಲ್ಲಿ ಆಮೀರ್ ಖಾನ್ ಕಣ್ಣು ತೊಯ್ಯಿಸದೇ ಬಿಡುವುದಿಲ್ಲ. ಅಂಥದ್ದೊಂದು ಪಾತ್ರ ಮಾಡಲು ಆತ ಮಾಡಿಕೊಂಡ ತಯಾರಿ, ಇದುವರೆಗೂ ತಾನು ನಟಿಸಿದ ಎಲ್ಲ ಚಿತ್ರಗಳಿಗಿಂತಲೂ ಅತ್ಯುತ್ತಮವಾಗಿ ಪಾತ್ರ ಪೋಷಿಸಿದ ಆತನ ಇನ್ವಾಲ್ವಮೆಂಟು ನಿಜಕ್ಕೂ ಸೊಗಸು.


ಇನ್ನೂ ಗೀತಾ ದೊಡ್ಡವಳಾದ ನಂತರದ ಪಾತ್ರ ಮಾಡಿರುವ ಫಾತಿಮಾ ಸನಾ ಶೇಖ್, ಬಬಿತಾ ಪಾತ್ರಧಾರಿ ಸನ್ಯಾ ಇಬ್ಬರೂ ಮನಸಿಗಿಳಿಯುತ್ತಾರೆ. ಕುಸ್ತಿ ಸೀನಗಳಂತೂ ನೋಡುಗರನ್ನು ಸೀಟಿನ ತುದಿಗೆ ಒಯ್ಯದೇ ಬಿಟ್ಟರೆ ಆಣೆ. ಅಷ್ಟೊಂದು ಅದ್ಭುತವಾಗಿ ಆ ದೃಶ್ಯಗಳನ್ನು ಕಂಪೋಸ್ ಮಾಡಲಾಗಿದೆ. ಒಂದು ಲೆಕ್ಕದಲ್ಲಿ ಅದು ಸಿನಿಮಾ ಅನಿಸುವುದೇ ಇಲ್ಲ. ಲೈವ್ ಮ್ಯಾಚ್ ಅನಿಸುತ್ತದೆ. ಇನ್ನು ಆಯುಷ್ಮಾನ್ ಖುರಾನಾ ಅವರ ಸಹೋದರ ಅಪರಶಕ್ತಿ ಖುರಾನಾ ದಂಗಲ್ ಮೂಲಕ ಡೆಬ್ಯು ಮಾಡಿದ್ದರೂ ಓಂಕಾರ್ ಪಾತ್ರದ ಮೂಲಕ ಛಾಪೊತ್ತಿದ್ದಾರೆ. ಮಹಾವೀರ ತಮ್ಮನಾಗಿ ರಾಜಕುಮಾರ್ ರಾವ್ ನಟಿಸಿದ್ದು ಆತನ ಮಗನಾಗಿ ಅಪರಶಕ್ತಿ ಗೀತಾ ಹಾಗೂ ಬಬಿತಾ ಅವರೊಂದಿಗೆ ಬೆಳೆಯುವ ಹುಡುಗನಾಗಿ ಹೊಟ್ಟೆ ಹುಣ್ಣಾಗುವಂತೆ ನಗಿಸಿದ್ದಾರೆ.

 
ಏನೇ ಆದರೂ ಸಿನಿಮಾ ಸಿನಿಮಾನೇ. ಆದರೆ ಅದರ ವ್ಯಾಪ್ತಿ ದೊಡ್ಡದು ಎಂಬುದು ನಿರ್ವಿವಿವಾದ. ಅಂಥ ಪ್ರಬಲ ಮಾಧ್ಯಮದ ಮೂಲಕ ಈ ತೆರನಾದ ಸ್ಫೂರ್ತಿದಾಯಕ ಕತೆಗಳನ್ನು ಹೇಳುವುದು, ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳೇನು ಕಡಿಮೆ ಅಲ್ಲ ಎಂಬಂಥ ಸಂದೇಶ ಕೊಡುವುದು ನಿಜಕ್ಕೂ ಪರಿಣಾಮಕಾರಿ. ಕಮರ್ಷಿಯಲ್ ಚೌಕಟ್ಟಿನಲ್ಲಿ ಅಂಥ ಪ್ರಯತ್ನವನ್ನು ನಿರ್ದೇಶಕ ನಿತೀಶ್ ತಿವಾರಿ ಮಾಡಿ ಗೆದ್ದಿದ್ದಾರೆ. ಅಷ್ಟೇ ಅಲ್ಲದೇ ಬಾಕ್ಸಾಫೀಸನಲ್ಲಿ ಕೆಲ ದಾಖಲೆಗಳನ್ನು ಚಿಂದಿ ಮಾಡುವ ಅವಕಾಶವೂ ದಂಗಲ್ ಚಿತ್ರಕ್ಕಿದೆ.

 
ಆಮೀರ್ ಖಾನ್ ಎಂಬ ನಟ ಬಹುಶಃ ಸೋಲನ್ನೇ ಬರೆದು ತಂದತ್ತಿಲ್ಲ. ಇಲ್ಲೂ ಗೆಲುವಿನ ಓಟ ತಡರಹಿತವೆಂಬುದು ಖಾತರಿ. ಹೆಣ್ಣು ಮಕ್ಕಳಿರುವ, ಹೆಣ್ಣೆಂದರೆ ಮೂಗು ಮುರಿಯುವ, ದೊಡ್ಡ ಕನಸಿನ ಬೆನ್ನು ಬಿದ್ದಿರುವ ಯಾರೇ ಆಗಲಿ ನೋಡಬಹುದಾದ, ಮನೆಮಂದಿ ಎಲ್ಲರೂ ನೋಡಬೇಕಿರುವ ದಂಗಲ್ ಬರೀ ದಂಗಲ್ ಅಲ್ಲ ಅನ್ನೋದು ಮಾತ್ರ ನಿಜ. ಕೆಲವೆಡೆ ಇನ್ನೊಂಚೂರು ವೇಗ ಬೇಕಿತ್ತೇನೋ ಅನಿಸಿದರೂ ಸೆಂಟಿಮೆಂಟ್ ಅಂಶಗಳಿರುವ ದಂಗಲ್ ಕೊಟ್ಟ ಕಾಸಿಗೆ ಮೋಸ ಅಂತೂ ಮಾಡುವುದಿಲ್ಲ. ಹಾಡುಗಳು ನೆನಪುಳಿಯುವುದಿಲ್ಲ. ಕುಸ್ತಿ ಕಣದಲ್ಲಿ ಅರಳುವ ಪದಕದ ಕನಸು ಅದು ಬರೀ ಪದಕ ಪಡೆಯುವ ಕುರಿತದ್ದಷ್ಟೇ ಅಲ್ಲ ಎಂಬುದು ವಯೋವೃದ್ಧನಾದ ಮಹಾವೀರ ಓಡಿಬಂದು ಮೆಡಲ್ಲು ಗೆದ್ದ ಮಗಳೆದುರು ಕಣ್ಣೀರಾದಾಗಲೇ ತಿಳಿಯುತ್ತದೆ..

# ಮಮತ

Comments are closed.