ಫುಟ್ಬಾಲ್- ಬಿಎಫ್‌ಸಿಗೆ ಶಿಲ್ಲಾಂಗ್ ಎದುರಾಳಿ!

ಐ-ಲೀಗ್ ಟೂರ್ನಿಯ ಹಾಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವ ಬೆಂಗಳೂರು ಫುಟ್ಬಾಲ್ ತಂಡ, ಮುಂದಿನ ತಿಂಗಳಿನಿಂದ ಆರಂಭವಾಗುವ ಟೂರ್ನಿಯ ಮೊದಲ ಪಂದ್ಯದಲ್ಲಿ ಶಿಲ್ಲಾಂಗ್ ಲಾಜಂಗ್ ಸವಾಲು ಸ್ವೀಕರಿಸಲಿದೆ.
ಜನವರಿ ಏಳರಂದು ನಡೆಯುವ ಪಂದ್ಯ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಭರ್ಜರಿ ಫಾರ್ಮ್‌ನಲ್ಲಿರುವ ಸುನಿಲ್ ಛೆಟ್ರಿ ಮುಂದಾಳತ್ವದ ಬಿಎಫ್‌ಸಿ ಪ್ರಸಕ್ತ ವರ್ಷ ಉತ್ತಮ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದೆ. 2016ರ ಎಎಫ್‌ಸಿ ಕಪ್ ಟೂರ್ನಿಯ ಫೈನಲ್‌ಗೆ ಅರ್ಹತೆಯನ್ನು ಪಡೆದುಕೊಂಡಿದ್ದ ಬೆಂಗಳೂರು ತಂಡ ಇತಿಹಾಸ ನಿರ್ಮಿಸಿತ್ತು. ಆದರೆ ಫೈನಲ್ ಪಂದ್ಯದಲ್ಲಿ ಸೋತು ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದೆ. ಅಲ್ಲದೆ ಮೂರು ವರ್ಷದಲ್ಲಿ ಬಿಎಫ್‌ಸಿ ತಂಡದ ಸಾಧನೆ ಎಲ್ಲರ ಗಮನ ಸೆಳೆದಿದೆ. ಆಡಿದ ಮೊದಲ ಐ-ಲೀಗ್ ಟೂರ್ನಿಯಲ್ಲಿ ಪ್ರಶಸ್ತಿ ಎತ್ತಿ ಸಂಭ್ರಮಿಸಿದ್ದ ಬೆಂಗಳೂರು ತಂಡ, 2015ರಲ್ಲಿ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ನಿರಾಸೆಯನ್ನು ಅನುಭವಿಸಿತ್ತು.
2017ರ ಐ-ಲೀಗ್ ಟೂರ್ನಿಯಲ್ಲೂ ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಉಳಿಸಿಕೊಳ್ಳುವುದೇ ಛೆಟ್ರಿ ತಂಡದ ಗುರಿ ಆಗಿದೆ.
ಒಪ್ಪಂದಕ್ಕೆ ಸಹಿ: ಪ್ರತಿಭಾನ್ವಿತ ಯುವ ಮೂವರು ಆಟಗಾರರು ಬೆಂಗಳೂರು ತಂಡ ಸೇರಿದ್ದಾರೆ. ಎಲ್.ರಾಲ್ವೆ, ಮಂದಾರ್ ರಾವ್, ಅರ್ನಿಂದಮ್ ಭಟ್ಟಾಚಾರ್ಯ ಬೆಂಗಳೂರು ಫುಟ್ಬಾಲ್ ಕ್ಲಬ್ ಪರ ಒಪ್ಪಂದವನ್ನು ಮಾಡಿಕೊಂಡಿದ್ದಾರೆ.

Comments are closed.