58 ನೇ ವಸಂತಕ್ಕೆ ಕಾಲಿಟ್ಟ ಕುಮಾರಸ್ವಾಮಿ

ಕುಮಾರಸ್ವಾಮಿ  ತಮ್ಮ  58ನೇ ಹುಟ್ಟುಹಬ್ಬದ ಹಿನ್ನೆಲೆ ಬೆಂಗಳೂರಿನ  ವಿಜಯನಗರದಲ್ಲಿರುವ ಆದಿಚುಂಚನಗಿರಿ ಶಾಖಾಮಠದಲ್ಲಿ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರಿಂದ ಆಶೀರ್ವಾದ ಪಡೆಯುವ ಮೂಲಕ ಹುಟ್ಟುಹಬ್ಬ  ಆಚರಿಸಿಕೊಂಡರು. ನಂತರ  ಜೆಪಿ ನಗರದ ತಮ್ಮ ನಿವಾಸದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡರು.
kumaraswamy
ನಂತರ ಮೈಸೂರು ರಸ್ತೆಯ ಗಾಳಿ ಆಂಜನೇಯಸ್ವಾಮಿ ದೇವಸ್ಥಾನ ಹಾಗೂ ರಾಜರಾಜೇಶ್ವರಿನಗರದ ರಾಜರಾಜೇಶ್ವರಿ ದೇವಾಲಯ ಹಾಗೂ ರಾಮನಗರದ ಚಾಮುಂಡೇಶ್ವರಿ ದೇವಾಲಯದಲ್ಲಿ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿದರು.
ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು ನಾನು ರಾಜ್ಯಾದ್ಯಂತ ಪ್ರವಾಸ ಮಾಡಿ ನಾಡು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಹುಡುಕುವ ಕೆಲಸ ಮಾಡುತ್ತೇನೆ. ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಈ ಸಂಕಲ್ಪ ಮಾಡಿದ್ದೇನೆ   ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ಇನ್ನು ಒಂದು ವರ್ಷ ನನ್ನದು ಶ್ರಮದ ಜೀವನ ಎಂದ ಅವರು, ರೈತರು, ಕೂಲಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಅವರ ಅಭಿವೃದ್ಧಿ ಆಗಬೇಕೆಂಬುದೇ ತಮ್ಮ ಅಪೇಕ್ಷೆ. ರಾಜ್ಯದಲ್ಲಿ ತೀವ್ರ ಬರಗಾಲ ಉಂಟಾಗಿರುವುದರಿಂದ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳಬಾರದು ಎಂದು ತೀರ್ಮಾನಿಸಿದ್ದೆ. ಆದರೆ, ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಆಚರಣೆ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ನಮ್ಮ ಮನೆ ದೇವರು ಶಿವ. ರಾಜ್ಯವನ್ನು ಸುಭೀಕ್ಷವಾಗಿಡುವಂತೆ ಶಿವನಲ್ಲಿ ಪ್ರಾರ್ಥಿಸಿದ್ದೇನೆ. ಇವತ್ತಿನ ರಾಜಕೀಯ ವ್ಯವಸ್ಥೆ ಹಾಳಾಗಿದ್ದು, ರಾಜಕಾರಣಿ ಎಂದರೆ ಸ್ವೇಚ್ಛಾಚಾರ, ಅಪನಂಬಿಕೆ ಎಂಬ ಭಾವನೆ ಹೆಚ್ಚಾಗಿದೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಬಳಿಕ ರಾಮನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು. ನಂತರ ಕುಮಾರಸ್ವಾಮಿಯವರು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ತಂದೆ-ತಾಯಿಯರ ಆಶೀರ್ವಾದ ಪಡೆದರು.

Comments are closed.

Social Media Auto Publish Powered By : XYZScripts.com