ಕನ್ನಡಕ್ಕೆ ಎಂದೆಂದಿಗೂ ಸಾವಿಲ್ಲ, ಸವಾಲುಗಳಿವೆ

ರಾಯಚೂರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಮಾತಿನ ಮೆಲುಕು :

ಈ ಸಲದ ಸಾಹಿತ್ಯ ಸಮ್ಮೇಳನಾಧ್ಯಕ್ಷ ಪ್ರೊ.ಬರಗೂರು ರಾಮಚಂದ್ರಪ್ಪನವರು ಆಡಿದ ಈ ಮಾತು ಸಮ್ಮೇಳನದ ಅನುಭವಗಳಲ್ಲೂ ಅನುರಣಿಸಿದ್ದು ವಿಶೇಷ. ಲಕ್ಷಾಂತರ ಜನರ ಕನ್ನಡಪ್ರೇಮಕ್ಕೆ ಸಾಕ್ಷಿಯಾದ ಬಿರುಬಿಸಿಲಿನ ನೆಲ, ಊರು ರಾಯಚೂರಿನಲ್ಲಿ ಕನ್ನಡ ಗೆಜ್ಜೆಕಟ್ಟಿ ಕುಣಿಯಿತು ಎಂಬುದು ಕ.ಸಾ.ಪ. ಅಧ್ಯಕ್ಷ ಡಾ.ಮನು ಬಳಿಗಾರರ ಅಭಿಪ್ರಾಯ. ಇಲ್ಲಿ ನಡೆದ ಗೋಷ್ಠಿಗಳಲ್ಲಿನ ಮಾತುಗಳಿಗೆ ವ್ಯಕ್ತವಾಗುತ್ತಿದ್ದ ಸಿಳ್ಳೆ, ಕರತಾಡನದ ಮೊರೆತಗಳು ಕನ್ನಡಪ್ರಜ್ಞೆಯ ಜೀವಂತಿಕೆಯನ್ನು ದೃಢಪಡಿಸುವಂತಿದ್ದವು.

baraguru2ಸಾಹಿತ್ಯ ಸಮ್ಮೇಳನಗಳಲ್ಲಿ ಚರ್ಚಿತವಾಗುವ ವಿಷಯಗಳು ಬರಿಯ ಸಾಹಿತ್ಯ ಮಾತ್ರವಲ್ಲ. ಕನ್ನಡ-ಕರ್ನಾಟಕ ಎಂಬ ಪ್ರಜ್ಞಾವಲಯವನ್ನು ರೂಪಿಸುವ ಕನ್ನಡನಾಡಿನ ಭೌಗೋಳಿಕತೆ, ಕನ್ನಡ ಸಮಾಜ, ಸಂಸ್ಕೃತಿ, ಬೌದ್ಧಿಕತೆ ಎಲ್ಲವನ್ನೂ ಇದು ಒಳಗೊಂಡಿರುತ್ತದೆ. ಈ ಸಲ ಪ್ರೊ.ಬರಗೂರು ಅವರ ಅಧ್ಯಕ್ಷೀಯ ಭಾಷಣ ಮೂಡಿಸಿದ ಸಂಚಲನ ದೊಡ್ಡದು. ಕನ್ನಡಿಗರನ್ನು ಬದುಕಿಸಿದರೆ ಕನ್ನಡ ತಂತಾನೇ ಬದುಕುತ್ತದೆ ಎಂಬುದು ಅವರ ಮಾತಿನ ಸಾರ. ಬದುಕು ಎಂಬ ಶಬ್ದದ ಅಡಿಯಲ್ಲಿ ಸಮಸ್ತವೂ ಅಡಗಿದೆ. ಮನುಷ್ಯ ಸದಾ ಉಳಿವಿಗಾಗಿ ಹೋರಾಡುವ ಪ್ರಾಣಿ. ಅಳಿವು-ಉಳಿವುಗಳ ಪ್ರಶ್ನೆಗಿಂತ ರಾಷ್ಟ್ರ, ನಾಡು, ನುಡಿ ಎಂಬೆಲ್ಲ ಅಮೂರ್ತ ಭಾವನೆಗಳು ಎಂದೂ ದೊಡ್ಡದಾಗುವುದಿಲ್ಲ. ಅಷ್ಟೇ ಅಲ್ಲ, ಬದುಕಿನೊಳಗಿನ ಆಂತರಿಕ ಸಾಮರಸ್ಯವೂ ಅಷ್ಟೇ ಮುಖ್ಯ. ಅನ್ನ, ಅರಿವು, ಶಿಕ್ಷಣ, ಉದ್ಯೋಗ, ಮೂಲಸೌಕರ್ಯಗಳೆಷ್ಟು ಮುಖ್ಯವೋ, ಸಾಮಾಜಿಕ ನ್ಯಾಯ, ಸಮತೆಯ ಸಂವೇದನೆ ಬಲಗೊಂಡ ಸ್ವಸ್ಥ ಸಮಾಜವೂ ಅಷ್ಟೇ ಮುಖ್ಯ. ಇಂಥ ಗಟ್ಟಿ ಸಂವೇದನೆಯಿಂದ ಮಾತ್ರ ಕನ್ನಡ ಬದುಕಬಲ್ಲದು. ಸಂವೇದನೆ ಎಂಬ ಪದದಲ್ಲೇ ‘ವೇದನೆ’ಯಿದೆ ಎಂಬ ಮಾತಿನಿಂದಲೇ ಪ್ರೊ.ಬರಗೂರು ತಮ್ಮ ಮಾತು ಆರಂಭಿಸಿದರು.
ನಾಡು, ನುಡಿ, ಸೃಜನಶೀಲತೆ, ಪರಕೀಯತೆ, ಅನೈತಿಕ ಪೋಲೀಸ್ ಗಿರಿ, ಜಾಗತೀಕರಣ ಮತ್ತು ಜಾತೀಕರಣ, ಮಾತೃಭಾಷೆ ಅಥವಾ ರಾಜ್ಯಭಾಷಾ ಶಿಕ್ಷಣ ಮಾಧ್ಯಮ, ಸಮಾನ ಶಿಕ್ಷಣ ಮತ್ತು ಸರಕಾರಿ ಶಾಲೆಗಳ ಸಬಲೀಕರಣ, ಉನ್ನತ ಶಿಕ್ಷಣದ ವೈಪರೀತ್ಯ ಹೀಗೆ ಹಲವು ನೆಲೆಗಳಲ್ಲಿ ಅವರ ಮಾತುಗಳು ತಲಸ್ಪರ್ಷಿಯಾಗಿ ವಿಸ್ತರಿಸಿದ್ದವು.
ಪ್ರಗತಿಪರತೆಯ ಪ್ರಖರತೆ ಹಾಗೂ ಸೈದ್ಧಾಂತಿಕ ಬದ್ಧತೆಗೆ ಗುರುತಾದ ಪ್ರೊ.ಬರಗೂರರ ಭಾಷಣದ ಬಗೆಗಿದ್ದ ನಿರೀಕ್ಷೆಯನ್ನು ಅವರು ಹುಸಿಮಾಡಲಿಲ್ಲ. ಎಲ್ಲ ಗೋಷ್ಠಿಗಳಲ್ಲೂ ಅವರ ಲವಲವಿಕೆಯ ಪಾಲ್ಗೊಳ್ಳುವಿಕೆ, ಸರಳತೆ ಹಾಗೂ ಖಚಿತತೆಗಳು ಅವರ ಬಗೆಗಿನ ಬಿಂಬವನ್ನು ನಿಚ್ಚಳವಾಗಿಸಿದವು.
ಅವರ ಮಾತಿನ ಝಲಕುಗಳನ್ನು ವಿಶ್ಲೇಷಣೆಯ ಹಂಗಿಲ್ಲದೆ ಹೀಗೆ ಮುಂದಿರಿಸಿದರೆ ಅದು ಎಲ್ಲರ ಅನುಭವದ ಭಾಗವಾಗಬಹುದು.

 • ನನ್ನ ಮುಂದೆ ಕುವೆಂಪು ಅವರ ಮಲೆನಾಡು ಇರಲಿಲ್ಲ, ಬೇಂದ್ರೆಯವರ ಸಾಧನಕೇರಿಯಿರಲಿಲ್ಲ, ಶಿವರಾಮ ಕಾರಂತರ ಕಡಲು ಇರಲಿಲ್ಲ. ಕೆ.ಎಸ್.ನರವರ ಮೈಸೂರು ಮಲ್ಲಿಗೆಯಿರಲಿಲ್ಲ. ಪು.ತಿ.ನ. ಅವರ ಮೇಲುಕೋಟೆಯಿರಲಿಲ್ಲ. ಬದುಕಿನ ಬೇಟೆಯಲ್ಲಿ ಬೆಳೆಯುತ್ತ ಬಂದ ಅನೇಕರಲ್ಲಿ ನಾನೂ ಒಬ್ಬ. ಈ ‘ಬೇಟೆ ಬದುಕಿನಲ್ಲಿ’ ಶ್ರೀಗಂಧದ ಮರಗಳಿರಲಿಲ್ಲ, ಜಾಲಿಮರಗಳಿದ್ದವು. ಜೊತೆಗೆ ಹೊಂಗೆ ಹುಣಸೆಮರಗಳಿದ್ದವು. ಕೋಗಿಲೆಯಿರಲಿಲ್ಲ, ಕಾಗೆ, ಗುಬ್ಬಚ್ಚಿಗಳಿದ್ದವು. ಮುಗಿಲು ಮುನಿದು ಬಿರುಕು ನೆಲದ ಕೆರೆಗಳಿದ್ದವು…… ಸೃಜನಶೀಲತೆಗೆ ಬಡವ-ಬಲ್ಲಿದ ಎಂಬ ಭೇದವಿಲ್ಲ. ಆದ್ದರಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿರುವ ಈ ಸಂದರ್ಭದಲ್ಲಿ ನಾನು ಹೇಳುವುದಿಷ್ಟೆ, ಈ ಗೌರವ ನನ್ನಂತಹ ಅಸಂಖ್ಯಾತ ಆತ್ಮವಿಶ್ವಾಸಗಳಿಗೆ ಸಲ್ಲುವ ಗೌರವ. ‘ಇಲ್ಲಿ ಅಧ್ಯಕ್ಷನಾದವನು ‘ನಾನು’ ಅಲ್ಲ… ‘ನಾವು’.
 • ವೇದಿಕೆಯ ಮೇಲಿರುವ ನಾವು ನಿಮ್ಮಿಂದ ಕಲಿಯಬೇಕು. ನೀವು ನಮ್ಮನ್ನು ನೋಡುವುದು ಮುಖ್ಯವಲ್ಲ; ನಾವು ನಿಮ್ಮನ್ನು ನೋಡುವುದು ಮುಖ್ಯ. ನಾವು ನಿಮ್ಮನ್ನು ನೋಡುತ್ತಲೇ ನೀವಾಗುವುದು, ನೀವು ನಮ್ಮನ್ನು ನೋಡುತ್ತಲೇ ನಾವಾಗುವುದು… ಹೀಗೆ ಪರಸ್ಪರ ಪ್ರವೇಶಕ್ರಿಯೆಯಲ್ಲಿ ತೊಡಗುವುದು ಮುಖ್ಯವೆಂದು ನಾನು ತಿಳಿದಿದ್ದೇನೆ.
 • ಜಾತಿ, ವರ್ಣ, ಲಿಂಗತ್ವ ಅಸಮಾನತೆಗಳನ್ನು ಆಧರಿಸಿದ ಸಾಮಾಜಿಕ ಪ್ರತ್ಯೇಕತೆಗೆ ಸಾಮಾಜಿಕ ನ್ಯಾಯದ ರಾಜ್ಯ ಬೇಕು; ಪ್ರತ್ಯೇಕ ರಾಜ್ಯವಲ್ಲ. ಸಾಂಸ್ಕೃ ತಿಕ ಪ್ರತ್ಯೇಕತೆಯನ್ನು ಹೋಗಲಾಡಿಸಲು ಬಹುತ್ವ ಬದ್ಧ ಚಿಂತನೆ ಮತ್ತು ಕ್ರಿಯೆ ಬೇಕು. ಸಾಮಾಜಿಕ ಪ್ರತ್ಯೇಕತೆ, ಸಾಂಸ್ಕೃತಿಕ ಪ್ರತ್ಯೇಕತೆ ಎನ್ನುವುದು ಕೇವಲ ಪ್ರತ್ಯೇಕತೆಯಲ್ಲ. ಅದು ಪರಕೀಯತೆ. ಕನ್ನಡ ಭಾಷಾ ಭೂಗೋಳದಲ್ಲೇ ಅನುಭವಿಸುವ ಪರಕೀಯತೆ…..
 • ಬೆಂಗಳೂರಲ್ಲಿ ಸುಗಮ ಸಂಚಾರಕ್ಕೆ ‘ಮೇಲ್ ಸೇತುವೆ’ಗಳನ್ನು ನಿರ್ಮಿಸುವ ಸರಕಾರ, ಕರ್ನಾಟಕದಾದ್ಯಂತ ‘ಮನೋಸೇತುವೆಗಳನ್ನು’ ನಿರ್ಮಿಸಬೇಕಾಗಿದೆ.
 • ರಾಜ್ಯಗಳ ಸ್ವಾಯತ್ತತೆ ಮತ್ತು ರಾಜ್ಯದೊಳಗಿನ ಸ್ವಾಯತ್ತತೆ ಎರಡೂ ಮುಖ್ಯವಾಗಬೇಕು ಎಂಬುದು ನನ್ನ ಆಶಯ ಮತ್ತು ಆಗ್ರಹ.
 • ಸರಕಾರವು ಕೂಡಲೇ ಕೈಗೆತ್ತಿಕೊಳ್ಳಬೇಕಾದ ಕೆಲಸವೆಂದರೆ- ಸರಕಾರೀ ಶಾಲೆಗಳ ಸಬಲೀಕರಣ ಮತ್ತು ಸಮಾನ ಶಿಕ್ಷಣ. ಸಮಾನ ಶಿಕ್ಷಣ ನೀತಿಗಾಗಿ ಒಂದು ಆಂದೋಲನವೇ ನಡೆಯಬೇಕು.
 • ಉನ್ನತ ಶಿಕ್ಷಣದ ಕಾರ್ಪೋರೇಟೀಕರಣದ ಬದಲು ಕರ್ನಾಟಕೀಕರಣ ಮಾಡಬೇಕು. ಬಹುತ್ವದ ಭಾರತೀಕರಣವಾಗಬೇಕು.
 • ಒಂದು ಮಾತು ನೆನಪಿರಲಿ, ಕನ್ನಡಕ್ಕೆ ಸಾವಿಲ್ಲ; ಸವಾಲುಗಳಿವೆ. ಈ ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ಕನ್ನಡಿಗರಿಗೆ ಕೊಟ್ಟರೆ ಕನ್ನಡದ ಕಂಟಕಗಳಿಗೆ ಅವರೇ ಸವಾಲು ಎಸೆಯುತ್ತಾರೆ…. ಸಾಮಾಜಿಕ ಶಕ್ತಿ, ಆರ್ಥಿಕಶಕ್ತಿ, ಶಿಕ್ಷಣ-ಉದ್ಯೋಗದ ಶಕ್ತಿ, ಹಸಿವು ಮುಕ್ತ ಶಕ್ತಿ, ಸಮಾನತೆಯ ಶಕ್ತಿ ಇವೆಲ್ಲ ಒದಗಬೇಕು. ಅಂದರೆ ನಮ್ಮ ಭಾಷಾ ಹೋರಾಟಗಳು ಸಾಮಾಜಿಕ ಹೋರಾಟಗಳೂ ಆಗಬೇಕು.
 • ನಮ್ಮ ದೇಶದಲ್ಲಿ ಓದು ಒಂದು ಹೋರಾಟ. ಅರಿವು ಒಂದು ಆಂದೋಲನ.
 • ನಾವು ದೇಶದ ಹೊರಗೆ ನಡೆಯುವ ಸೈನಿಕ ಸರ್ಜಿಕಲ್ ದಾಳಿಗಳನ್ನು ಬೆಂಬಲಿಸೋಣ. ದೇಶದೊಳಗಿನ ಸಾಮಾಜಿಕ ಸರ್ಜಿಕಲ್ ದಾಳಿಗಲನ್ನು ಸೋಲಿಸೋಣ. ಆರ್ಥಿಕ ಸರ್ಜಿಕಲ್ ದಾಳಿಗಳನ್ನು ಹತ್ತಿಕ್ಕೋಣ.
 • ಎಡಪಂಥವನ್ನು ಒಳಗೊಂಡಂತೆ ಯಾವ ಪಂಥವೂ ಜಡಪಂಥವಾಗಬಾರದು. ನಮಗೆ ಬೇಕಾದುದು ಸದಾ ಸೃಜನಶೀಲವಾಗಿರುವ ಜನಪಂಥೀಯತೆ. ಇಲ್ಲಿ ಜಾತಿವಾದವಿರಬಾರದು. ಮೂಲಭೂತವಾದವಿರಬಾರದು. ಪಂಥಪ್ರತಿಷ್ಠೆ ಇರಬಾರದು. ವಿವಿಧ ಪ್ರಗತಿಪರ ಪಂಥಗಳ ನಡುವೆ ಪ್ರೀತಿಸೇತುವಿರಬೇಕು.

ಇವೆಲ್ಲ ಬರಗೂರು ರಾಮಚಂದ್ರಪ್ಪನವರ ಚಿಂತನೆಯ ಕೆಲವು ನಿದರ್ಶನಗಳು. ಬಿಸಿಲ ಕಾವಲ್ಲಿ ಮಾತುಗಳು ಕಾವುಗೊಳ್ಳುತ್ತ ನಡೆದಾಗ ನಡು ಮದ್ಯಾಹ್ನ ಮೂರುಗಂಟೆ! ಅವರು ಮಾತನ್ನು ಕೊನಡಗೊಳಿಸಿದ ರೀತಿ ಹಸಿವು ಬೇಗೆಗಳನ್ನು ಮರೆಸುವಂಥದ್ದಾಗಿತ್ತು. ಅದು ಅವರು ಪ್ರತಿಪಾದಿಸಿದ ಕರ್ನಾಟಕದ ತಾಯೀಕರಣ. ಸಿದ್ಧಾಂತಗಳು ಸೃಜನಶೀಲಗೊಳ್ಳುವುದೆಂದರೆ ಹೀಗೇ ಇರಬೇಕು. ಅವರು ಹೇಳಿದ್ದೆಂದರೆ, ತಾಯ್ತನ ಈಗ ನಮ್ಮ ಪ್ರತೀಕವಾಗಬೇಕು. ತಾಯಿಗೆ ತನ್ನ ಮಕ್ಕಳೆಲ್ಲರೂ ಸಮಾನ. ಆದ್ದರಿಂದ ನಮ್ಮ ಸರಕಾರಕ್ಕೆ ತಾಯ್ತನಬೇಕು. ಸಾಹಿತ್ಯ-ಸಂಸ್ಕøತಿಗಳಿಗೆ ತಾಯ್ತನ ಬೇಕು. ನಾವೆಲ್ಲ ತಾಯೀಕರಣಗೊಳ್ಳಬೇಕು. ತಾಯಿ ಎಂದರೆ ಮಮತೆ ಮತ್ತು ಸಮತೆ… ಈ ಮಾತುಗಳ ಗುಂಗು ಇನ್ನೂ ಕಿವಿಯೊಳಗಿದೆ. ಬಂಡಾಯ ಮತ್ತು ಜೀವನಪ್ರೀತಿಗಳು ಸಂಗಮಿಸುವುದೆಂದರೆ ಹೀಗೇ ಇರಬೇಕು!

3 thoughts on “ಕನ್ನಡಕ್ಕೆ ಎಂದೆಂದಿಗೂ ಸಾವಿಲ್ಲ, ಸವಾಲುಗಳಿವೆ

 • October 20, 2017 at 7:41 PM
  Permalink

  I got this web page from my buddy who shared with me regarding this web site and now this time I am browsing this web page and reading very informative posts at this time.|

 • October 24, 2017 at 3:46 PM
  Permalink

  Excellent post however I was wanting to know if you could write a litte more
  on this subject? I’d be very thankful if you could elaborate a little bit
  further. Thank you!

Comments are closed.