ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರ ನುಡಿ

ಈ ಸಮ್ಮೇಳನವನ್ನು ಉದ್ಘಾಟಿಸಿದ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ದರಾಮಯ್ಯನವರೆ,   ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮನು ಬಳಿಗಾರ್ ಅವರೆ, ಕಾರ್ಯಕಾರಿ ಸಮಿತಿ ಮತ್ತು ಸ್ವಾಗತ ಸಮಿತಿಯ ಸಮಸ್ತರೆ, ಇಲ್ಲಿ ನೆರೆದಿರುವ ಮನಸ್ಸಿನ ಮನುಷ್ಯಬಂಧುಗಳೆ……
ರಾಯಚೂರಿನಲ್ಲಿ ನಡೆಯುತ್ತಿರುವ ಈ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿ ನನ್ನನ್ನು ಆಯ್ಕೆ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಮಾನ್ಯ ಅಧ್ಯಕ್ಷರು, ಪದಾಧಿಕಾರಿಗಳು,  ಜಿಲ್ಲಾಧ್ಯಕ್ಷರು, ಕಾರ್ಯಕಾರಿ ಸಮಿತಿಯ ಸಮಸ್ತರಿಗೆ ನಾನು ಆಭಾರಿಯಾಗಿದ್ದೇನೆ. ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆಂಬ ಮಾಹಿತಿ ಸಿಕ್ಕ ಕೂಡಲೇ ನನ್ನ ನೆನಪಿಗೆ ಬಂದವರು- ನನಗೆ ಅಕ್ಷರ ಕಲಿಸಿದ ಗುರುಗಳು ಮತ್ತು ಶಾಲೆಗೆ ಸೇರಿಸಿದ  ತಾಯಿ, ತಂದೆ ಆನಂತರ ನನ್ನನ್ನು ಬೆಳೆಸಿದ ಪ್ರಗತಿಪರ ಚಳವಳಿಗಳು, ಸಾರ್ವಜನಿಕ ಬದುಕಿನ ಬವಣೆಗಳ ಮುಖಾಮುಖಿಗೆ ಬೆನ್ನೆಲುಬಾಗಿ ನಿಂತ ಕುಟುಂಬವರ್ಗ ಮತ್ತು ಸ್ನೇಹಿತರು. ಒಂದೇ ವಾಕ್ಯದಲ್ಲಿ ಹೇಳುವುದಾದರೆ ‘ಸ್ನೇಹಿತರೇ ನನ್ನ ಸಂಪತ್ತು’. ಈ ಎಲ್ಲರಿಗೂ ನನ್ನ ಮೊದಲ ನಮನಗಳು.

sammelana
ನನ್ನ ಅಧಿಕೃತ ಭಾಷಣವನ್ನು ಒಂದು ಸಂಕಟದ ಸಂವೇದನೆಯೊಂದಿಗೆ ಆರಂಭಿಸುತ್ತೇನೆ. ಸಂವೇದನೆ ಎಂಬ ಪದದಲ್ಲೇ `ವೇದನೆ’ಯಿದೆ. ವೇದನೆ ಮತ್ತು ಸಂವೇದನೆ ಒಂದಾದ ಕಾಲಘಟ್ಟ ನಮ್ಮದು. ಅಷ್ಟೇಕೆ ವೇದನೆಯೇ ಸಂವೇದನೆಯಾಗುತ್ತಿರುವ ವೈರುಧ್ಯ ವಲಯವೂ ನಮ್ಮದು. ಅಂದು
ಆಗಸ್ಟ್ 30-2015 ರ ಬೆಳಗ್ಗೆ. ಸಾಂಸ್ಕೃತಿಕ ಲೋಕ ದಿಗ್ಭ್ರಮೆಗೊಂಡು ಮೂಕವಾದ ಮುಂಜಾವು. ಅದಕ್ಕೆ ಕಾರಣ ಎಂ.ಎಂ.ಕಲಬುರ್ಗಿಯವರ ಸಾವು.  ಕಲಬುರ್ಗಿಯವರನ್ನು ಕೊಂದ ಹಂತಕರನ್ನು ಶೀಘ್ರ ಪತ್ತೆ ಹಚ್ಚಿ ನಿಧಾನದ್ರೋಹದ ಕಳಂಕದಿಂದ ಮುಕ್ತವಾಗಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇನೆ. ಭಿನ್ನಾಭಿಪ್ರಾಯಗಳನ್ನು  ಬಲಿಪೀಠವಾಗಿಸಿದ ಆ ದಾರುಣದ ದಿನದ ನೆನಪು ನುಗ್ಗಿ ಬರುತ್ತಿರುವಾಗ ಎಂ.ಎಂ.ಕಲಬುರ್ಗಿಯವರ ಚೇತನಕ್ಕೆ ನನ್ನ ನಮನ ಸಲ್ಲಿಸಿ ಮಾತು ಮುಂದುವರೆಸುತ್ತೇನೆ.
ನನ್ನ ಮುಂದೆ ಕುವೆಂಪು ಅವರ ಮಲೆನಾಡು ಇರಲಿಲ್ಲ. ಬೇಂದ್ರೆಯವರ ಸಾಧನಕೇರಿಯಿರಲಿಲ್ಲ. ಶಿವರಾಮಕಾರಂತರ ಕಡಲು ಇರಲಿಲ್ಲ. ಕೆ.ಎಸ್.ನ. ಅವರ ಮೈಸೂರು ಮಲ್ಲಿಗೆಯಿರಲಿಲ್ಲ. ಪು.ತಿ.ನ. ಅವರ ಮೇಲುಕೋಟೆಯಿರಲಿಲ್ಲ. ಬದುಕಿನ ಬೇಟೆಯಲ್ಲಿ ಬೆಳೆಯುತ್ತ ಬಂದ ಅನೇಕರಲ್ಲಿ ನಾನೂ ಒಬ್ಬ. ಈ `ಬೇಟೆ ಬದುಕಿನಲ್ಲಿ’ ಶ್ರೀಗಂಧದ ಮರಗಳಿರಲಿಲ್ಲ. ಜಾಲಿಯ ಮರಗಳಿದ್ದವು. ಜೊತೆಗೆ ಹೊಂಗೆ ಹುಣಸೆಮರಗಳಿದ್ದವು. ಕೋಗಿಲೆಯಿರಲಿಲ್ಲ ಕಾಗೆಗಳಿದ್ದವು, ಗುಬ್ಬಚ್ಚಿಗಳಿದ್ದವು. ಮುಗಿಲು ಮುನಿದು ಬಿರುಕುನೆಲದ ಕೆರೆಗಳಿದ್ದವು. ನಳನಳಿಸುತ್ತಲೇ ಕೂಳೆ ಹೊಲಗಳಾದ ಜಮೀನುಗಳಿದ್ದವು. ಹೆಡೆ ಎತ್ತಿದ ಹಾದಿಗಳಿದ್ದವು. ಹತ್ತಿರದಲ್ಲೇ ಊದುವ ಪ್ರೀತಿಪುಂಗಿಗಳಿದ್ದವು.

baraguru2

ಚಿತ್ತದಲ್ಲಿ ಬಿತ್ತಿ ಬೆಳೆಯುವ  ಭಾವನೆಗಳಿದ್ದವು. ಬರವಿಲ್ಲದ ಭೂಮಿಭಾವನೆಗಳಿಂದ ಬೆಳೆಯುತ್ತಲೇ ಚಿಂತನೆಯ ಚೌಕಬಾರದಲ್ಲಿ  ಕೊನೆಯ ಮನೆ ಸೇರಿ ಗೆಲ್ಲುವ ಆತ್ಮವಿಶ್ವಾಸವನ್ನು ಪಡೆದ ಬದುಕು ನನ್ನದು. ಇರುವಲ್ಲಿ ಮತ್ತು ಇರುವುದರಲ್ಲಿ ನಮ್ಮ ಸೃಜನಶೀಲತೆಯನ್ನು ಬೆಳೆಸಿಕೊಳ್ಳುವ ಸಂಕಲ್ಪ ನಮ್ಮದಾಗಬೇಕೆಂದು ನಂಬಿದವನು ನಾನು.  ಸೃಜನಶೀಲತೆಗೆ ಬಡವ-ಬಲ್ಲಿದ ಎಂಬ ಭೇದವಿಲ್ಲ. ಆದ್ದರಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ  ಅಧ್ಯಕ್ಷನಾಗಿರುವ ಈ ಸಂದರ್ಭದಲ್ಲಿ ನಾನು ಹೇಳುವುದಿಷ್ಟೆ, ಈ ಗೌರವ ನನ್ನಂತಹ ಅಸಂಖ್ಯಾತ ಆತ್ಮವಿಶ್ವಾಸಿಗಳಿಗೆ ಸಲ್ಲುವ ಗೌರವ.  ಇಲ್ಲಿ ಅಧ್ಯಕ್ಷನಾದವನು `ನಾನು’ `ಅಲ್ಲ-`ನಾವು’. ಈ ನಾವುಗಳ ಸಂಕೇತವಾಗಿ `ನಾನು’  ಇಲ್ಲಿದ್ದೇನೆ. ನಾನು ಅಧ್ಯಕ್ಷನಾಗಿ ಇಲ್ಲಿರುವುದನ್ನು ಕಂಡು, ಕೇಳಿ ಸಂಭ್ರಮಿಸುವ ಸಮಸ್ತರೂ ಅಧ್ಯಕ್ಷರೇ ಎಂದು ಭಾವಿಸುತ್ತೇನೆ.
ಹೈದರಾಬಾದ್ ಕರ್ನಾಟಕವೆಂದು ಕರೆಯಲ್ಪಡುತ್ತಿರುವ ಕರ್ನಾಟಕದ ಈ ವಲಯದ ರಾಯಚೂರಿಗೆ ವಿಶಿಷ್ಟ ಇತಿಹಾಸವಿದೆ. ಕ್ರಿ.ಪೂ. 300ರಲ್ಲಿ ಅಶೋಕನ ಆಳ್ವಿಕೆಗೆ ಒಳಪಟ್ಟಿತ್ತೆಂದು ಉಲ್ಲೇಖವುಳ್ಳ ಮಸ್ಕಿಶಾಸನವು ಅಶೋಕನನ್ನು ದೇವನಾಂಪ್ರಿಯ, ಪ್ರಿಯದರ್ಶಿ ಅಶೋಕ ಎಂದು ಕರೆದ ಆರಂಭಿಕ ದಾಖಲೆಯೆಂದು ಹೇಳಲಾಗುತ್ತಿದೆ. ಶಾಂತಿಪ್ರಿಯ ಅಶೋಕನ ಶಾಸನವುಳ್ಳ ರಾಯಚೂರು ಸರ್ವದರ್ಮ ಸಮನ್ವಯದ ನೆಲೆಯೂ ಆಗಿದೆ. ಕಲ್ಯಾಣ ಕ್ರಾಂತಿಯ ಸಂದೇಶವನ್ನು ಪ್ರಸಾರಗೊಳಿಸುವ ಕಾರ್ಯದಲ್ಲಿ ರಾಯಚೂರು ಜಿಲ್ಲೆಯ ಪಾತ್ರ ಪ್ರಮುಖವಾಗಿದೆ. ‘ಕಾಯಕವೇ ಕೈಲಾಸ’ವೆಂಬ ಮಾತನ್ನು ಮೊದಲು ಬಳಸಿದ ಆಯ್ದಕ್ಕಿ ಮಾರಯ್ಯ ಈ ಜಿಲ್ಲೆಯ ವಚನಕಾರ. ಸಾಹಿತ್ಯ, ಸಂಗೀತ, ಚಿತ್ರಕಲೆಯಲ್ಲಿ ಅಪೂರ್ವ ಸಾಧಕರನ್ನು ಪಡೆದ ರಾಯಚೂರಿನ ಸಾಧಕರ ಪಟ್ಟಿ ದೊಡ್ಡದು ಪ್ರಸಿದ್ಧಿಯೂ ದೊಡ್ಡದು. (ಹೀಗಾಗಿ ನಾನು ಹೆಸರುಗಳನ್ನು ಪಟ್ಟಿಮಾಡಿಲ್ಲ)
ಹೈದರಾಬಾದ್ ಕರ್ನಾಟಕ ವಲಯವು ನಿಜಾಮರ ಆಳ್ವಿಕೆಯಲ್ಲಿದ್ದುದರಿಂದ ಇಲ್ಲಿ ಉರ್ದುವಿನ ಪ್ರಭಾವ ಸ್ವಾಭಾವಿಕವಾಗಿ ಹರಡಿಕೊಂಡಿದೆ. ಜೊತೆಗೆ ಗಡಿಭಾಗದ ಭಾಷೆಗಳ ಪ್ರಭಾವವೂ ಇದೆ.

baragur1

ಇದು ಹೋರಾಟಗಳ ಭೂವಲಯವೂ ಹೌದು. ನಿಜಾಮರ ವಿರುದ್ಧ ನಡೆದ ಕಾರ್ಯಾಚರಣೆಯಿಂದ 1948ರ ಸೆಪ್ಟಂಬರ್‍ನಲ್ಲಿ ಸ್ವತಂತ್ರವಾದ ಈ ಭೂಭಾಗದಲ್ಲಿ ರೈತ ಹೋರಾಟಗಳೂ ಇದ್ದವು. ನಿಜಾಮರ ದಮನದ ಜೊತೆಗೆ ರೈತ ಹೋರಾಟಗಳ ದಮನವೂ ನಡೆದ ವಿಪರ್ಯಾಸಕ್ಕೆ ತೆಲಂಗಾಣವನ್ನು ಒಳಗೊಂಡ ಈ ಭೂಭಾಗ ಸಾಕ್ಷಿಯಾದದ್ದು ಈಗ ಇತಿಹಾಸ. ಇಷ್ಟಾದರೂ ಇದು ಸೌಹಾರ್ದ ಸಂಸ್ಕøತಿಯ ಬೀಡು. ಸೂಫಿ ಸಂತರು ಮತ್ತು ತತ್ವ ಪದಕಾರರ ಪರಂಪರೆಯುಳ್ಳ ಭೂಮಿ. ಇಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನವು ಸೌಹಾರ್ದ ಸಂಸ್ಕøತಿಯ ವಿಸ್ತರಣೆಗೆ ಕಾರಣವಾಗಲಿ, ಎಂದು ಹಾರೈಸುತ್ತೇನೆ.
ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣವೆಂದರೆ ನೆರೆದ ಜನಕ್ಕೆ ಮತ್ತು ನಾಡಿಗೆ  ಕೊಡುವ ಸಂದೇಶವೆಂದು ತಿಳಿಯುತ್ತ ಬರಲಾಗಿದೆ. ಜನರು, ಸಾಹಿತಿಗಳ ಚರ್ಚೆ, ಚಿಂತನೆಗಳ ಮೂಲಕ ಬೌದ್ಧಿಕ ಬೆಳಕು ಪಡೆಯಲು ಬರುತ್ತಾರೆಂದೂ ಸಮ್ಮೇಳನದ ಚಿಂತನೆಗಳಿಂದ ಒಂದಿಷ್ಟು ಕಲಿಯುತ್ತಾರೆಂದೂ ಕಲಿಯಬೇಕೆಂದೂ ಆಶಿಸಲಾಗಿದೆ. ಇದು ನಿಜವಾದ ಆಶಯವೇ ಇರುಬಹುದು. ಆದರೆ ನನಗನ್ನಿಸುತ್ತದೆ: ಇಲ್ಲಿ ನೆರೆದಿರುವ ನೀವು ನಮ್ಮಿಂದ ಕಲಿಯುವುದಲ್ಲ. ವೇದಿಕೆಯ ಮೇಲಿರುವ ನಾವು ನಿಮ್ಮಿಂದ  ಕಲಿಯಬೇಕು. ನೀವು  ನಮ್ಮನ್ನು ನೋಡುವುದು ಮುಖ್ಯವಲ್ಲ; ನಾವು ನಿಮ್ಮನ್ನು ನೋಡುವುದು ಮುಖ್ಯ. ನಾವು  ನಿಮ್ಮನ್ನು ನೋಡುತ್ತಲೇ ನೀವಾಗುವುದು, ನೀವು ನಮ್ಮನ್ನು ನೋಡುತ್ತಲೇ  ನಾವಾಗುವುದು, ಹೀಗೆ ಪರಸ್ಪರ ಪ್ರವೇಶ ಪ್ರಕ್ರಿಯೆಯಲ್ಲಿ ತೊಡಗುವುದು ಮುಖ್ಯವೆಂದು ನಾನು ತಿಳಿದಿದ್ದೇನೆ. ಕನ್ನಡದ ಹೆಸರಲ್ಲಿ, ಕರ್ನಾಟಕದ ಹೆಸರಲ್ಲಿ, ಸಾಹಿತ್ಯಾಸಕ್ತಿಯಲ್ಲಿ ಇಲ್ಲಿ ನೆರೆದಿರುವ ಈ ಬಹು ದೊಡ್ಡ ಸಮೂಹವು ವೇದಿಕೆಯಲ್ಲಿರುವವರಿಗೊಂದು ವಿವೇಕದ ಎಚ್ಚರ ಎಂದು ನಾನು ಭಾವಿಸುತ್ತೇನೆ.

ಆದ್ದರಿಂದ ನಮ್ಮಿಂದ ನೀವು ಕಲಿಯುವುದೆಷ್ಟೆಂದು ಲೆಕ್ಕ ಹಾಕುವುದರ ಬದಲು ನಿಮ್ಮಿಂದ ನಾವು ಕಲಿಯುವುದು ಬಹಳಷ್ಟಿದೆ ಎಂದು ತಿಳಿಯಬೇಕಿದೆ. ಒಂದು ಸಮ್ಮೇಳನಕ್ಕೆ ಇಷ್ಟೊಂದು ಅಪಾರ  ಸಂಖ್ಯೆಯಲ್ಲಿ ಸೇರಿದ್ದಾರಲ್ಲ,  ಇವರ ವಿಶ್ವಾಸಾರ್ಹತೆಗೆ ಧಕ್ಕೆ ತರಬಾರದು ಎಂಬ  ಎಚ್ಚರ  ನಮಗಿರಬೇಕು; ಅಪಾರ ನಿರೀಕ್ಷೆಯಿಂದ ನೆರೆದವರಿಗೆ ನಿರಾಶೆಯಂಟು ಮಾಡದಿರಬೇಕೆಂಬ ಹೊಣೆಗಾರಿಕೆ ನಮ್ಮದಾಗಬೇಕು. ಈ ಸಂದರ್ಭದಲ್ಲಿ ರಷ್ಯಾದ ಚಿಂತಕ ಪ್ಲೆಖನೋವ್ ಹೇಳಿದ ಒಂದು ಅಭಿಪ್ರಾಯ ನೆನಪಿಗೆ ಬರುತ್ತಿದೆ: “ಕಲಾಕಾರರು ಜನಗಳಿಂದ ಗೌರವ ಮತ್ತು ಮನ್ನಣೆಗಳನ್ನು ಬಯಸುತ್ತಾರೆ. ಜನರು  ಕಲಾಕಾರರಿಂದ ಜವಾಬ್ದಾರಿಯನ್ನು ಬಯಸುತ್ತಾರೆ.”
ಹೌದು; ಜನರು ನಮ್ಮಿಂದ ಜವಾಬ್ದಾರಿಯನ್ನು ಬಯಸುತ್ತಾರೆ. ಆದ್ದರಿಂದ ಸಾಂಸ್ಕøತಿಕ ಪ್ರತಿನಿಧಿಗಳೆಂಬ ಹಣೆಪಟ್ಟಿಯ ನಾವು ಆತ್ಮವಂಚನೆ ಮಾಡಿಕೊಳ್ಳಬಾರದು; ಜನರು ನಮ್ಮ ಮೇಲಿಟ್ಟಿರುವ  ವಿಶ್ವಾಸಕ್ಕೆ ವಂಚನೆ ಮಾಡಬಾರದು. ನಾವು ಜನಗಳಿಗೆ ಜವಾಬ್ದಾರರಾಗಬೇಕು. ಇದು ಈ ಸಮ್ಮೇಳನದಿಂದ ನಾವು ಕಲಿಯಬೇಕಾದ ಪ್ರಥಮ ಪಾಠ.ಏಕೀಕರಣ, ಪ್ರತ್ಯೇಕೀಕರಣ ಮತ್ತು ಪರಕೀಯತೆ.
ಕರ್ನಾಟಕದ ಏಕೀಕರಣವಾಗಿ 60 ವರ್ಷಗಳು ತುಂಬಿ ವಜ್ರ ಮಹೋತ್ಸವವನ್ನು ಆಚರಿಸುವ ಸಂಭ್ರಮದಲ್ಲಿ ಸಮ್ಮೇಳನ ನಡೆಯುತ್ತಿದೆ. ಸಹಜವಾಗಿಯೇ ಏಕೀಕರಣದ ಫಲಿತಗಳನ್ನು  ಕುರಿತ ಪ್ರಶ್ನೆ ಎದುರಾಗುತ್ತದೆ. ಕನ್ನಡ ಮಾತು  ಪ್ರಧಾನವಾಗಿರುವ ಪ್ರದೇಶಗಳೆಲ್ಲ ಒಂದಾಗಬೇಕೆಂಬ ಏಕೀಕರಣದ ಪ್ರಧಾನ ಆಶಯ ಬಹುಮಟ್ಟಿಗೆ ಈಡೇರಿದ್ದರೂ ಇನ್ನೂ ಕೆಲವು ಕನ್ನಡ ಮಾತಿನ ಪ್ರದೇಶಗಳು ಬೇರೆ ರಾಜ್ಯದಲ್ಲಿ ಉಳಿದಿವೆ. ಮಹಾರಾಷ್ಟ್ರ, ಕೇರಳ ಮತ್ತು ಕರ್ನಾಟಕದ ಗಡಿವಿವಾದ ಬಗೆಹರಿಸಲು ರಚಿತವಾದ ಮಹಾಜನ್  ಆಯೋಗದ ವರದಿಯು ಇನ್ನೂ ಅನುಷ್ಠಾನಗೊಂಡಿಲ್ಲ.

ಕೇರಳದ ಕಾಸರಗೋಡು ಕರ್ನಾಟಕವಾಗಲಿಲ್ಲ.  ಆಂಧ್ರದಲ್ಲಿರುವ ಕನ್ನಡ ಪ್ರಧಾನ ಮಡಕಶಿರಾ ಕರ್ನಾಟಕಕ್ಕೆ ಸೇರಲಿಲ್ಲ. ತಮಿಳುನಾಡಿನಲ್ಲಿರುವ  ತಾಳವಾಡಿಫಿರ್ಕಾ, ಕೇರಳದಲ್ಲಿರುವ  ಕಾಸರಗೋಡು, ಹೊಸದುರ್ಗ.  ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆ, ಮುಂತಾದ ಕನ್ನಡ ಪ್ರಧಾನ  ಪ್ರದೇಶಗಳು ನಮ್ಮ ನಾಡಿನ ಭಾಗವಾಗಿಲ್ಲ. ಅಷ್ಟೇಕೆ ಕರ್ನಾಟಕ ಸರ್ಕಾರವು ಹೊರ ರಾಜ್ಯದ ಕೆಲವು ಪ್ರದೇಶಗಳಿಗೆ  ನೀಡಿರುವ ಅಧಿಕೃತ ಗಡಿಗ್ರಾಮ ಮನ್ನಣೆಯು ರಾಯಚೂರು ಪಕ್ಕದ ಮೆಹಬೂಬುನಗರ ಜಿಲ್ಲೆಯ ಕೃಷ್ಣಾ, ಗುರ್ಜಾಲೆ, ತಂಗಡಗಿ, ಕುಸಮುರ್ತಿ,  ಹೈನಾಪುರ, ಜೆಗುಂಟಾ, ಶುಕ್ರಲಿಂಗದಹಳ್ಳಿ, ಖಾನಾಪುರ, ಕುನಸಿ, ಹಾಲಂಪಲ್ಲಿ, ಕೊತ್ತಪಲ್ಲಿ ಗುಡೆವೆಲ್ಲೂರ್, ಇಂದುಪುರ-ಎಂಬ  ಹದಿನೂರು ಗ್ರಾಮಗಳಿಗೆ ಲಭ್ಯವಾಗಿಲ್ಲ.

ಗೋವಾದಲ್ಲಿರುವ ಕನ್ನಡಿಗರ ಬವಣೆ ಬತ್ತಿಲ್ಲ. ಕರ್ನಾಟಕದ ಒಳನಾಡಿನವರಿಗೆ ಸಿಗುವ ಶೈಕ್ಷಣಿಕ ಮತ್ತು ಔದ್ಯೋಗಿಕ ಸೌಲಭ್ಯಗಳು ಕನ್ನಡಮಾಧ್ಯಮದಲ್ಲೇ ವ್ಯಾಸಂಗ ಮಾಡಿದ ಹೊರನಾಡಿನ ಕನ್ನಡಿಗರಿಗೆ ಪೂರ್ಣಪ್ರಮಾಣದಲ್ಲಿ ಸಿಗುತ್ತಿಲ್ಲ, ಸಿಗಬೇಕು. ಕರ್ನಾಟಕವು ಇನ್ನೂ ಒಳನಾಡು, ಗಡಿನಾಡು ಮತ್ತು ಹೊರನಾಡು ಎಂಬ ವಿಂಗಡನೆಯ ವಿಷಾದವನ್ನು ಒಡಲುರಿಯಾಗಿ ಅನುಭವಿಸುತ್ತಿದೆ. ಇಂಥ ಒಡಲುರಿ ಇರಬಾರದೆಂದೇ  ಅಂದು  ಏಕೀಕರಣದ ಹೋರಾಟ ಹುಟ್ಟಿಕೊಂಡಿತ್ತು. ಧಾರವಾಡದಲ್ಲಿ  20.07.1890ರಲ್ಲಿ ಸ್ಥಾಪಿತವಾದ  ಕರ್ನಾಟಕ ವಿದ್ಯಾವರ್ಧಕ ಸಂಘದ `ವಾಗ್ಭೂಷಣ’ ಪತ್ರಿಕೆಯಲ್ಲಿ ಆಲೂರು ವೆಂಕಟರಾಯರು. “ಕರ್ನಾಟಕವು ಒಂದಾಗದಿದ್ದರೆ ಕರ್ನಾಟಕದ ಸ್ಥಿರ ಏಳಿಗೆಯು ಎಂದೆಂದಿಗೂ ಸಾಧ್ಯವಿಲ್ಲ” ಎಂದು ಬರೆದರು.

1917ರ ಜನವರಿ 7ರಂದು ವಿದ್ಯಾವರ್ಧಕ ಸಂಘದ  ವ್ಯವಸ್ಥಾಪಕ ಸಮಿತಿಯು ಒಂದು ಗೊತ್ತುವಳಿಯನ್ನು ಸ್ವೀಕರಿಸಿ ಏಕೀಕರಣದ ಆಶಯವನ್ನು ದಾಖಲಿಸಿತು. “ಬ್ರಿಟಿಷ್ ಅಧಿಕಾರಕ್ಕೆ ಒಳಗಾದ. ಎಲ್ಲ ಕನ್ನಡ ಊರು, ತಾಲ್ಲೂಕು ಮತ್ತು ಜಿಲ್ಲೆಗಳನ್ನು ಒಟ್ಟುಗೂಡಿಸಿ, ಒಂದು ರಾಜಕೀಯ ವಿಭಾಗವನ್ನಾಗಿ ಮಾಡಿ, ಅದನ್ನು ಕರ್ನಾಟಕವೆಂದು ಕರೆಯಬೇಕು” ಎಂದು ಈ ಗೊತ್ತುವಳಿಯು ಕರೆ ನೀಡಿತು. 1915ರಲ್ಲಿ ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ತು ಏಕೀಕರಣದ ಹೋರಾಟಕ್ಕೆ ಒತ್ತಾಸೆಯಾಗಿ ನಿಂತಿತು. 1916ರಲ್ಲಿ  ಏಕೀಕರಣದ ಉದ್ದೇಶಕ್ಕಾಗಿಯೇ `ಕರ್ನಾಟಕ ಏಕೀಕರಣ ಸಭೆ’ ಎಂಬ  ಸಂಸ್ಥೆ ಸ್ಥಾಪನೆಯಾಯಿತು. ಆನಂತರದ ದಿನಗಳಲ್ಲಿ ಇದಕ್ಕೆ `ಕರ್ನಾಟಕ ಏಕೀಕರಣ ಸಂಘ’ ಎಂದು ಮರುನಾಮಕರಣ ಮಾಡಲಾಯಿತು. ಈ ಸಂಸ್ಥೆಯು ಏಕೀಕರಣದ ಉದ್ದೇಶಕ್ಕಾಗಿಯೇ 1926ರಿಂದ 1947ರೊಳಗೆ ಒಟ್ಟು 12 ಸಮ್ಮೇಳನಗಳನ್ನು ನಡೆಸಿತು. ನಮ್ಮ ದೇಶ ಸ್ವಾತಂತ್ರ್ಯಗಳಿಸಿದ ನಂತರವೂ ಏಕೀಕರಣದ ಹೋರಾಟ ಮತ್ತಷ್ಟು ಪ್ರಬಲಗೊಂಡಿತು.

ವಿಶೇಷವೆಂದರೆ 1951ರಲ್ಲಿ ಕಮ್ಯುನಿಸ್ಟ್ ಪಕ್ಷವೂ ಏಕೀಕರಣಕ್ಕೆ ಬೆಂಬಲವಾಗಿ ನಿಂತಿತು. ಕಮ್ಯೂನಿಸ್ಟರು, ಸೋಷಲಿಸ್ಟರು ತಮ್ಮ ಸಮಾನತೆಯ ಆಶಯಗಳ ಮೂಲ ಆಶಯವನ್ನಿಟ್ಟುಕೊಂಡೇ ಏಕೀಕರಣದ ಅಗತ್ಯವನ್ನು ಪ್ರತಿಪಾದಿಸಿದರು. ಈ ನಡುವೆ 1952ರಲ್ಲಿ ಆಂದ್ರದ ಪೊಟ್ಟಿಶ್ರೀರಾಮುಲು ಅವರು ತೆಲುಗು ಮಾತಿನ ಪ್ರದೇಶಗಳ  ಏಕೀಕರಣಕ್ಕಾಗಿ  ಆಮರಣಾಂತ ಉಪವಾಸ ಆರಂಭಿಸಿದರು. 58 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದ ಪೊಟ್ಟಿಶ್ರೀರಾಮುಲು ನಿಧನ ಹೊಂದಿ ಹುತಾತ್ಮರಾದರು. ಕನ್ನಡನಾಡಿನಲ್ಲಿ ಬಳ್ಳಾರಿಯ ರಂಜಾನ್ ಸಾಬ್  ಅವರು ಏಕೀಕರಣ ಹೋರಾಟದಲ್ಲಿ ಜೀವ ತೆತ್ತರು. ಈ ಜೀವ ಕನ್ನಡನಾಡಿನ ಜಾತ್ಯತೀತ ಮೌಲ್ಯದ ಒಂದು ಮಾದರಿಯಾಗಿ ಇಂದಿಗೂ ಸ್ಮರಣೀಯವಾಗಿದೆ.

ಹೀಗೆ ಕನ್ನಡ ಮತ್ತು ತೆಲುಗು ಕೇಂದ್ರಿತ ಏಕೀಕರಣ ಹೋರಾಟಗಳ ಫಲವಾಗಿ ಕೇಂದ್ರ ಸರ್ಕಾರವು  1953ರಲ್ಲಿ ಫಜಲ್ ಆಲಿ ಅವರ  ನೇತೃತ್ವದಲ್ಲಿ ರಾಜ್ಯ ಪುನರ್‍ವಿಂಗಡನಾ ಆಯೋಗವನ್ನು ರಚಿಸಿತು. ಇದೇ ವರ್ಷ, ಪೊಟ್ಟಿ ಶ್ರೀರಾಮುಲು ಅವರ ಹೋರಾಟ ಮತ್ತು ಮರಣದ ಫಲವೆಂಬಂತೆ ತೆಲುಗು ಪ್ರಧಾನ ಪ್ರಾಂತ್ಯವಾಗಿ `ಆಂದ್ರಪ್ರದೇಶ’ ರಚನೆಯಾಯಿತು. ಮುಂದೆ ಫಜಲ್ ಆಲಿ ಆಯೋಗದ ಶಿಫಾರಿಸಿನಂತೆ  ಭಾಷಾವಾರು ಪ್ರಾಂತ್ಯಗಳ ರಚನೆಯಾಗಿ 1.11.1956 ರಂದು `ವಿಶಾಲ ಮೈಸೂರು’ ಅಸ್ತಿತ್ವಕ್ಕೆ ಬಂದಿತು.  ಕನ್ನಡ ಮಾತು ಪ್ರಧಾನವಾದ ಕೇರಳದ ಕಾಸರಗೋಡು, ಹೊಸದುರ್ಗವನ್ನೂ ಒಳಗೊಂಡಂತೆ  ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಲ್ಲಿರುವ ಕನ್ನಡಪ್ರಧಾನ  ಪ್ರದೇಶಗಳನ್ನು  ಒಳಗೊಳ್ಳದೆ `ವಿಶಾಲ ಮೈಸೂರು’ ಎಂಬ ಕನ್ನಡದ ಬಹುಪಾಲು ಪ್ರದೇಶದ ಏಕೀಕೃತ ರಾಜ್ಯ ಅಸ್ತಿತ್ವಕ್ಕೆ ಬಂದಿತು. ಆದರೆ `ಕರ್ನಾಟಕ’ ಎಂದು ಹೆಸರಿಡಲು 1973ರವರೆಗೆ ಕಾಯಬೇಕಾಯಿತು.

ಅದರಲ್ಲೂ `ಮೈಸೂರು’ ಹೆಸರಿನ ಪರವಾಗಿದ್ದ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿ `ಕರ್ನಾಟಕ’   ಎಂದು ಹೆಸರಿಡಬೇಕಾಯಿತು. ಜನಾಭಿಪ್ರಾಯಕ್ಕೆ  ಮನ್ನಣೆಕೊಟ್ಟ ದೇವರಾಜ ಅರಸು  ತಮ್ಮ ಹಿಂದಿನ ಅಭಿಪ್ರಾಯವನ್ನು ಬದಿಗೊತ್ತಿ 1.11.1973 ರಂದು ಈ ‘ವಿಶಾಲ ಮೈಸೂರು’ ಬದಲು `ಕರ್ನಾಟಕ’ ಎಂದು ಹೆಸರು ಬದಲಾಯಿಸಿದ್ದು ಸಾಂಕೇತಿಕವಾಗಿ ಜನಾಭಿಪ್ರಾಯದ ವಿಜಯ. ಅರಸು ಅವರ ಪ್ರಜಾಸತಾತ್ಮಕ ನಿಲುವಿನ ಫಲ. ಅಂದು ಅರಸು ಅವರು ಕರ್ನಾಟಕದ ಜನಮಾನಸದ ಅಭಿನಂದನೆಗೆ ಪಾತ್ರರಾದರು. ಹಾಗೆ ನೋಡಿದರೆ ಕರ್ನಾಟಕದೊಳಗಿನ ವಿವಿಧ ಸಾಮಾಜಿಕ ಮತ್ತು ಭೌಗೋಳಿಕ ವಲಯಗಳನ್ನು ಒಳಗೊಳ್ಳುವಂತೆ ಪ್ರತಿನಿಧೀಕರಣದ ಪ್ರಕ್ರಿಯೆಗೆ ಕಾರಣರಾದ ಅರಸು  `ಸಾಮಾಜಿಕ ಏಕೀಕರಣ’ದ ರೂವಾರಿ ಎಂದರೂ ತಪ್ಪಾಗಲಾರದು.

ಕರ್ನಾಟಕದ ವಿಧಾನ ಮಂಡಲದಲ್ಲಿ ವಿವಿಧ ಪ್ರದೇಶ, ವಿವಿಧ ಸಾಮಾಜಿಕ ಹಿನ್ನಲೆಯ ಸಂಕೇತಗಳು ಸಮಾವೇಶಗೊಳ್ಳುವಂತೆ ಮಾಡಿದ ಅರಸು ಅವರ `ಸಾಮಾಜಿಕ ಏಕೀಕರಣ’ದ   ರಾಜಕಾರಣ ಅಸಾಧಾರಣ. ಆದರೆ ಆಮೇಲೆ ಏನಾಯಿತು? ಭಾಷೆ ಮತ್ತು ಭೂಗೋಳವನ್ನು ಬೆಸೆದ ಏಕೀಕರಣವು ಮಾನಸಿಕ ಏಕೀಕರಣಕ್ಕೆ ಕಾರಣವಾಯಿತೆ? ಏಕೀಕರಣದ ವಿಸ್ತರಣೆಗಾಗಿ ಭೂಗೋಳ ಪ್ರಜ್ಞೆಯೇ ಪ್ರಧಾನವಾಯಿತೆ? ಸ್ವಲ್ಪಮಟ್ಟಿಗೆ ಹೌದು. ಆದ್ದರಿಂದಲೇ ಕರ್ನಾಟಕದ ವಿಸ್ತಾರವನ್ನು ಕುರಿತು ಮತ್ತೆ ಮತ್ತೆ  ಮಾತನಾಡುವವರು ಭೂಗೋಳ ಪ್ರಜ್ಞೆಯ ಪರಿಧಿಯಲ್ಲೇ ಉಳಿದಿದ್ದಾರೆ. ನಿಜ; ಕಾವೇರಿಯಿಂದ ಗೋದಾವರಿವರೆಗೆ ನಮ್ಮ ಅಂದಿನ ನಾಡು ಇತ್ತು ಎಂದುಕೊಳ್ಳೋಣ. ಅಷ್ಟೇಕೆ ಅಚ್ಚಕನ್ನಡ ರಾಜವಂಶವೆಂಬ ಕೀರ್ತಿಗೆ ಭಾಜನರಾದ ಮತ್ತು 215 ವರ್ಷಗಳವರೆಗೆ  ಆಳಿದ  ಕದಂಬರ ಸಾಮ್ರಾಜ್ಯವು ಮೃಗೇಶ ವರ್ಮನ ಕಾಲದಲ್ಲಿ ಉತ್ತರದ ನರ್ಮದಾ ನದಿಯವರೆಗೆ ವಿಸ್ತಾರಗೊಂಡಿತ್ತು.

new-picture

ಬಾದಾಮಿ ಚಾಲುಕ್ಯರ ಸಾಮ್ರಾಜ್ಯದಲ್ಲಿ ಅಜಂತ, ಎಲ್ಲೋರ, ನಾಸಿಕ್, ಓರಂಗಲ್ ಮುಂತಾದ ಪ್ರದೇಶಗಳೂ ಇದ್ದವು. ರಾಷ್ಟ್ರಕೂಟರ ಸಾಮ್ರಾಜ್ಯದಲ್ಲಿಯೂ ಅಜಂತ, ಎಲ್ಲೋರ, ಇದ್ದವು. ಕಲ್ಯಾಣಿ ಚಾಲುಕ್ಯರ ಸಾಮ್ರಾಜ್ಯದಲ್ಲಿ ಓರಂಗಲ್ಲು, ಪಂಡರಪುರ, ದೇವಗಿರಿ, ನವಸಾರಿಕ ಮುಂತಾದ ಪ್ರದೇಶಗಳಿದ್ದವು. ಹೊಯ್ಸಳರ ಸಾಮ್ರಾಜ್ಯದಲ್ಲಿ ಕಂಚಿ, ಕಣ್ಣಾನೂರುಗಳಿದ್ದವು. ವಿಜಯನಗರ ಸಾಮ್ರಾಜ್ಯದಲ್ಲಿ ತೇಡಪತ್ರಿ, ಲೇಪಾಕ್ಷಿ, ತಿರುಪತಿ, ವೆಲ್ಲೂರು, ಮಧುರೆ, ಪಾಂಡಿಚೆರಿ ಮುಂತಾದ ಪ್ರದೇಶಗಳು ಇದ್ದವು. ಹೀಗೆ ವಿವಿಧ ಸಾಮ್ರಾಜ್ಯಗಳಲ್ಲಿದ್ದ ಪ್ರದೇಶಗಳಲ್ಲಿ ಕನ್ನಡವೂ ಇತ್ತು.  ಆದರೆ ಎಲ್ಲ ಪ್ರದೇಶಗಳಲ್ಲೂ  ಕನ್ನಡವಿರಲಿಲ್ಲ. ಇದರರ್ಥ ಏನು? ಈ ಪ್ರದೇಶಗಳೆಲ್ಲ ಕನ್ನಡ ಪ್ರದೇಶಗಳಲ್ಲ; ಕನ್ನಡ ಬಲ್ಲ ರಾಜರ ಪ್ರದೇಶಗಳು. ಇದಕ್ಕೆ ಉತ್ತಮ ಉದಾಹರಣೆಯೆಂದರೆ ವಿಜಯನಗರ ಸಾಮ್ರಾಜ್ಯ ಮತ್ತು  ಶ್ರೀಕೃಷ್ಣದೇವರಾಯ. ಆಂಧ್ರಪ್ರದೇಶದವರು ಶ್ರೀಕೃಷ್ಣದೇವರಾಯನನ್ನು ತಮ್ಮವನೆಂದು ತಿಳಿದಿದ್ದಾರೆ.

ನಾವು ಕನ್ನಡಿಗರು ನಮ್ಮವನೆಂದು ತಿಳಿದಿದ್ದೇವೆ. ಆಂಧ್ರದಲ್ಲಿ ನಮಗಿಂತ ಮೊದಲೇ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ ಸ್ಥಾಪನೆಯಾಗುತ್ತದೆ. ಶ್ರೀಕೃಷ್ಣ ದೇವರಾಯ ತೆಲುಗು ಸಿನಿಮಾ ತಯಾರಾಗುತ್ತದೆ.  ಆನಂತರ ನಮ್ಮಲ್ಲಿ ಶ್ರೀಕೃಷ್ಣದೇವರಾಯ ಸಿನಿಮಾ ನಿರ್ಮಾಣ; ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಸ್ಥಾಪನೆ. ಇದರರ್ಥ ಏನು? ಶ್ರೀಕೃಷ್ಣದೇವರಾಯನ ಸಾಮ್ರಾಜ್ಯ ಪೂರ್ಣ ಕನ್ನಡ ಸಾಮ್ರಾಜ್ಯವಲ್ಲ. ಅಷ್ಟೇಕೆ, ಯಾವುದೇ ರಾಜರ ಸಾಮ್ರಾಜ್ಯಗಳು ಒಂದೇ ಭಾಷೆಯ ರಾಜ್ಯಗಳಲ್ಲ. ಆದ್ದರಿಂದ ಕನ್ನಡ ರಾಜವಂಶಗಳ ಸಾಮ್ರಾಜ್ಯಗಳನ್ನು ಇಡಿಯಾಗಿ  ಕನ್ನಡ ಪ್ರದೇಶಗಳೆಂದು ಕರೆಯುವುದು ಚಾರಿತ್ರಿಕವಾಗಿ ಸರಿಯಲ್ಲ.
ಸಮಸ್ಯೆ  ಇರುವುದೇ ಇಲ್ಲಿ. ಭೂಗೋಳಪ್ರಜ್ಞೆ ಮತ್ತು ಚರಿತ್ರೆಯ ಪ್ರಜ್ಞೆ ಒಂದಾಗಿ ಬೆಸೆದ  ಕನ್ನಡ ಪ್ರಜ್ಞೆಯ ಕೊರತೆಯಿಂದ ಸಾಮ್ರಾಜ್ಯಪ್ರಜ್ಞೆಯೇ ಪ್ರಧಾನವಾಗಿಬಿಡುತ್ತದೆ. ಚರಿತ್ರೆಯ ಪ್ರಜ್ಞೆಯೆಂಬುದು ಸಹ ಗತಕಾಲದ ಕನವರಿಕೆಯಲ್ಲ.

ಇಲ್ಲಿ ಡಿ.ಡಿ. ಕೊಸಾಂಬಿಯವರ ವ್ಯಾಖ್ಯಾನವನ್ನು ಉಲ್ಲೇಖಿಸಬೇಕು: “ಚರಿತ್ರೆಕಾರನ ಕೆಲಸ ಕೇವಲ ಭೂತಕಾಲವನ್ನು ಪ್ರೀತಿಸುವುದು ಅಥವಾ ಭೂತ ಕಾಲದಿಂದ ದೂರವಾಗುವುದಲ್ಲ. ವರ್ತಮಾನವನ್ನು ಅರ್ಥಮಾಡಿಕೊಳ್ಳಲು ಭೂತಕಾಲವನ್ನು ಕೀಲಿಕೈ ಎಂದು ತಿಳಿಯಬೇಕು. ಭೂತಕಾಲದ ಬೆಳಕಿನಲ್ಲಿ ವರ್ತಮಾನವನ್ನು ಅರಿಯುವುದೆಂದರೆ, ವರ್ತಮಾನದ ಬೆಳಕಿನಲ್ಲಿ, ಭೂತಕಾಲವನ್ನು ಸಹ ಅರಿಯುವುದು ಎಂದರ್ಥ” ಭಾಷಾಭಿಮಾನಕ್ಕೆ ಭೂತಕಾಲ ಮತ್ತು ವರ್ತಮಾನಗಳ ಉಚಿತಾನುಸಂಧಾನ ಮುಖ್ಯ. ಭೂತದಲ್ಲೇ ಹೂತು ಹೋಗುವುದು ಕೇವಲ ಕನವರಿಕೆಯಾಗುತ್ತದೆ. ವರ್ತಮಾನವೇ ಸರ್ವಸ್ವ ಎಂದುಕೊಂಡರೆಪರಂಪರೆಯ ಪ್ರಜ್ಞೆ ಪತನಗೊಳ್ಳುತ್ತದೆ. ಒಂದರಿಂದ ಇನ್ನೊಂದನ್ನು ಅರಿಯುವ ಅರ್ಥಪೂರ್ಣತೆ ಮುಖ್ಯ.
ಆದ್ದರಿಂದ, ನಾವು ಅರ್ಥಮಾಡಿಕೊಳ್ಳಬೇಕು: ಭಾಷೆ ಮತ್ತು ಭೂಗೋಳದ ಸಂಬಂಧವಷ್ಟೇ ಕನ್ನಡಾಭಿಮಾನವಲ್ಲ. ಭೂಗೋಳ ಮಿತಿಯ ಚಿಂತನೆಯೊಂದೇ ಕರ್ನಾಟಕದ ಮನಸ್ಸನ್ನು ಒಂದುಗೂಡಿಸುವ ಅಂತಿಮ ಸಾಧನವಾಗುವುದಿಲ್ಲ. ಸಾಮಾಜಿಕ-ಆರ್ಥಿಕ  ಸಮಾನತೆಯ ಆಧಾರದಲ್ಲಿ ಅಭಿವೃದ್ಧಿಯ ಸಮತೋಲನವನ್ನು ಸಾಧಿಸದಿದ್ದರೆ ಕರ್ನಾಟಕದ ಒಳಗೆ ಒಡಕು ಹುಟ್ಟುತ್ತದೆ. ಹುಟ್ಟುತ್ತದೆ ಅನ್ನುವುದಾದರೂ ಏಕೆ? ಹುಟ್ಟುತ್ತಿದೆ. ಅಭಿವೃದ್ಧಿಯಲ್ಲಿ ಪ್ರಾದೇಶಿಕ ಅಸಮತೋಲನದ ಅಸಮಾಧಾನ ಪ್ರಕಟಗೊಳ್ಳುತ್ತಿದೆ. ನಿಜ; ದಕ್ಷಿಣ ಕರ್ನಾಟಕದ ಕೆಲವು ಪ್ರದೇಶಗಳೂ ಹಿಂದುಳಿದಿವೆ. ಆದರೆ ಮೈಸೂರು ರಾಜ್ಯಕ್ಕೆ ಸೇರಿದ  ಹೊಸ ಪ್ರದೇಶಗಳು ಹೆಚ್ಚು ಹಿಂದುಳಿದಿವೆ. ಕೇವಲ ಆರ್ಥಿಕ ಅಭಿವೃದ್ಧಿಯ  ಅಸಮತೋಲನವಷ್ಟೇ ಅಲ್ಲ, ಸಾಂಸ್ಕøತಿಕ ಪ್ರಾತಿನಿಧ್ಯದ ಪರಕೀಯತೆಯೂ  ಇವರನ್ನು ಕಾಡಿಸುತ್ತಿದೆ.

baraguru-4

ರಾಜಧಾನಿ ಕೇಂದ್ರಿತ ನೋಟದಿಂದ ಸಿಗುವ ಸಾಂಕೇತಿಕ ಪ್ರಾತಿನಿಧ್ಯವು ಸಾಂಸ್ಕøತಿಕ ಪರಕೀಯತೆಯನ್ನು ಸಲೀಸಾಗಿ ಹೋಗಲಾಡಿಸಲಾರದು. ಕರ್ನಾಟಕದ ಸಮಸ್ತ ಭೂಗೋಳದೊಳಗೆ ಇರುವ ಜನರ ಸಾಂಸ್ಕøತಿಕ ವೈಶಿಷ್ಟ್ಯಗಳನ್ನು ಉಳಿಸಿ ಬೆಳೆಸಬೇಕಾದ್ದು ಒಂದು ಹೊಣೆಗಾರಿಕೆಯಾದರೆ, ಏಕೀಕರಣದ ಫಲವಾಗಿ ಜೊತೆಗೂಡಿದ ಪ್ರದೇಶಗಳ ಪ್ರತಿಭಾವಂತರಿಗೆ ಪ್ರತೀಕಾತ್ಮಕ ಪ್ರಾತಿನಿಧ್ಯ ನೀಡುವ ಹೊಣೆಗಾರಿಕೆಯೂ ಆಡಳಿತಗಾರರ ಮೇಲಿದೆ; ಸಾಂಸ್ಕøತಿಕ ಸಂಘಸಂಸ್ಥೆಗಳ  ಜವಾಬ್ದಾರಿಯೂ ಆಗಿದೆ. ಅಷ್ಟೇಕೆ ಸಾಮಾಜಿಕವಾಗಿ ತುಳಿತಕ್ಕೊಳಗಾದವರನ್ನು ಪರಕೀಯತೆಯಿಂದ ಪಾರು ಮಾಡಬೇಕಾಗಿದೆ.

ಸಮಗ್ರ ಸಾಮಾಜಿಕ, ಆರ್ಥಿಕ, ಸಾಂಸ್ಕøತಿಕ ದೃಷ್ಟಿ ಕೋನದ ದೂರಗಾಮಿಚಿಂತನೆ ಮತ್ತು ಬದ್ಧಕ್ರಿಯಾಶೀಲತೆಯಿಂದ ಮಾತ್ರ ಇದು ಸಾಧ್ಯ. ಇಲ್ಲದಿದ್ದರೆ, ಬೇಕೊ ಬೇಡವೊ, ಪ್ರತ್ಯೇಕ ರಾಜ್ಯದ  ಬೇಡಿಕೆ ಇಡುತ್ತಿರುವವರ ದನಿ ಮುಂದೊಂದು ದಿನ ಸಮೂಹ ಸನ್ನಿಯಾದರೆ ಅಚ್ಚರಿಯಿಲ್ಲ. ಏಕೀಕರಣದಿಂದ  ಪ್ರತ್ಯೇಕೀಕರಣದ ಕಿರುದನಿಯತ್ತ ವಾಲುತ್ತಿರುವ ನಮ್ಮ ಸಂದರ್ಭದಲ್ಲಿ ಆತ್ಮಾವಲೋಕನ ಅಗತ್ಯ  ಎಂದು ನಾನು ಭಾವಿಸುತ್ತೇನೆ.   ಪ್ರತ್ಯೇಕ ರಾಜ್ಯದ ಬೇಡಿಕೆ ಇಡುತ್ತಿರುವವರು ಪ್ರತ್ಯೇಕತೆಯೊಂದೇ  ಪರಿಹಾರವೇ ಎಂದು ತಮ್ಮೊಳಗನ್ನು ಕೇಳಿಕೊಳ್ಳಬೇಕು. ಪ್ರತ್ಯೇಕ ರಾಜ್ಯವೆನ್ನುವುದು ಭೂಗೋಳ ವಿಭಜನೆ ಮತ್ತು ಅಧಿಕಾರ ಹಂಚಿಕೆಗೆ ನೆರವಾಗಬಹುದು.

ಆದರೆ ಒಂದು ರಾಜ್ಯದ ಅಭಿವೃದ್ಧಿಗೆ ಅದಷ್ಟೇ ಸಾಕೆ? ನಿರ್ದಿಷ್ಟ ಭೂಗೋಳದೊಳಗೆ ಇರುವ ಸಾಮಾಜಿಕ ಪ್ರತ್ಯೇಕತೆ ಮತ್ತು ಸಾಂಸ್ಕøತಿಕ ಪ್ರತ್ಯೇಕತೆಯು ಪ್ರತ್ಯೇಕ ರಾಜ್ಯ ರಚನೆಯಿಂದ ಪರಿಹಾರವಾಗುತ್ತದೆಯೆ? ಖಂಡಿತ ಇಲ್ಲ. ಜಾತಿ, ವರ್ಣ,                      ಲಿಂಗತ್ವ ಅಸಮಾನತೆಗಳನ್ನು ಆಧಾರಿಸಿದ ಸಾಮಾಜಿಕ ಪ್ರತ್ಯೇಕತೆಗೆ ಸಾಮಾಜಿಕ ನ್ಯಾಯದ ರಾಜ್ಯಬೇಕು; ಪ್ರತ್ಯೇಕರಾಜ್ಯವಲ್ಲ. ಸಾಂಸ್ಕøತಿಕ ಪ್ರತ್ಯೇಕತೆಯನ್ನು ಹೋಗಲಾಡಿಸಲು ಬಹುತ್ವ ಬದ್ಧ ಚಿಂತನೆ ಮತ್ತು ಕ್ರಿಯೆ ಬೇಕು. ನಾವು ತಿಳಿಯಬೇಕು: ಸಾಮಾಜಿಕ ಪ್ರತ್ಯೇಕತೆ ಮತ್ತು ಸಾಂಸ್ಕøತಿಕ ಪ್ರತ್ಯೇಕತೆಯನ್ನುವುದು ಕೇವಲ ಪ್ರತ್ಯೇಕತೆಯಲ್ಲ. ಅದು ಪರಕೀಯತೆ. ಕನ್ನಡ ಭಾಷಾ  ಭೂಗೋಳದಲ್ಲೇ ಅನುಭವಿಸುವ ಪರಕೀಯತೆ. ಈ ಪರಕೀಯತೆ ಏಕೀಕೃತ ಅಖಂಡ ಕರ್ನಾಟಕದಲ್ಲಿಯೇ ಕೊನೆಗಾಣಬೇಕು. ಪ್ರತ್ಯೇಕ ರಾಜ್ಯಬೇಡಿಕೆಯವರಿಗೆ ಅಭಿವೃದ್ಧಿಯ ಅಸಮತೋಲನ ಮತ್ತು ಅಧಿಕಾರ ಮುಖ್ಯವಾದಂತೆ ಸಾಮಾಜಿಕ ಮತ್ತು ಸಾಂಸ್ಕøತಿಕ ಸಮಸ್ಯೆ ಮುಖ್ಯವಾದಂತೆ ಕಾಣಿಸುತ್ತಿಲ್ಲ.

ಆದ್ದರಿಂದ ಪ್ರತ್ಯೇಕ ರಾಜ್ಯ ಬೇಡಿಕೆಯವರಲ್ಲಿ ನನ್ನದೊಂದು ಬೇಡಿಕೆ. ನಾವು ಒಂದಾಗಿ ಸಮಸ್ಯೆಗಳನ್ನು ಬಿಡಿಸೋಣ. ಸವಾಲುಗಳನ್ನು ಒಂದಾಗಿ  ಎದುರಿಸೋಣ. ಭಾವನಾತ್ಮಕವಾಗಿ ಮಾತ್ರವಲ್ಲ. ಕ್ರಿಯಾತ್ಮಕವಾಗಿ ಕೆಲಸ ಮಾಡೋಣ. ಕರ್ನಾಟಕದ ಯಾವುದೇ ಪ್ರದೇಶಕ್ಕೆ ಅನ್ಯಾಯವಾದರೂ ಒಂದಾಗಿ  ಪ್ರತಿಭಟಿಸೋಣ. ಒಡೆದು ಹೋಗುವುದಕ್ಕೆ ನಾವು ಒಂದಾಗಲಿಲ್ಲ ಎಂಬುದನ್ನು ತೋರಿಸಿಕೊಡೋಣ. ಇಂಥದೊಂದು ಕ್ರಿಯೆಗೆ ಕರ್ನಾಟಕ ಎಲ್ಲ ಪ್ರದೇಶಗಳ ನೋಟವೇ ಬದಲಾಗಬೇಕು. ಅಪನಂಬಿಕೆಯ ವಾತಾವರಣ ಹೋಗಬೇಕು. ಈ ನಿಟ್ಟಿನಲ್ಲಿ ಆಳುವ  ಸರ್ಕಾರಗಳ ಜವಾಬ್ದಾರಿಯೂ ದೊಡ್ಡದಾಗಬೇಕು. ಎಲ್ಲ ಪ್ರದೇಶದ ಜನಪ್ರತಿನಿಧಿಗಳ ದನಿ ಗಟ್ಟಿಯಾಗಬೇಕು.

7 thoughts on “ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರ ನುಡಿ

 • October 18, 2017 at 4:18 PM
  Permalink

  hey there and thank you for your information – I’ve definitely picked up something new from right here. I did however expertise a few technical points using this website, since I experienced to reload the web site a lot of times previous to I could get it to load correctly. I had been wondering if your web hosting is OK? Not that I am complaining, but slow loading instances times will often affect your placement in google and can damage your high-quality score if ads and marketing with Adwords. Well I’m adding this RSS to my email and could look out for a lot more of your respective exciting content. Ensure that you update this again very soon.

 • October 20, 2017 at 6:48 PM
  Permalink

  hello there and thank you for your info – I’ve certainly picked up anything new from right here. I did however expertise several technical points using this website, as I experienced to reload the website lots of times previous to I could get it to load properly. I had been wondering if your web host is OK? Not that I’m complaining, but sluggish loading instances times will very frequently affect your placement in google and can damage your high quality score if advertising and marketing with Adwords. Well I’m adding this RSS to my email and can look out for a lot more of your respective interesting content. Ensure that you update this again very soon.

 • October 20, 2017 at 8:04 PM
  Permalink

  I’m very happy to find this page. I need to to thank you for ones time for this wonderful read!!
  I definitely really liked every part of it and
  I have you bookmarked to see new things on your website.

 • October 20, 2017 at 9:58 PM
  Permalink

  I pay a quick visit day-to-day some web sites and sites to read posts, but this website offers quality based content.

 • October 20, 2017 at 10:26 PM
  Permalink

  Thanks for some other informative website. The place else could I get that type of information written in such an ideal manner?
  I have a challenge that I am simply now working on,
  and I have been on the look out for such info.

 • October 20, 2017 at 11:48 PM
  Permalink

  Magnificent items from you, man. I’ve keep in mind your stuff prior to and you’re simply extremely excellent. I actually like what you’ve acquired here, really like what you’re stating and the way in which through which you say it. You make it enjoyable and you continue to care for to stay it sensible. I can not wait to read much more from you. That is really a wonderful web site.

 • October 24, 2017 at 11:42 AM
  Permalink

  I don’t wish to tell you how to run your blog, however what if you added a post title that makes people want more? I mean BLOG_TITLE is kinda plain. You should glance at Yahoo’s front page and see how they write post headlines to grab people to open the links. You might add a related video or a picture or two to grab people excited about everything’ve got to say. Just my opinion, it would bring your blog a little livelier.

Comments are closed.

Social Media Auto Publish Powered By : XYZScripts.com