ನೋಟ್ ಬ್ಯಾನ್ ಮಾಡಿದ ಮೋದಿ ನಡೆ ಹಿಂದಿನ ಸತ್ಯ ಎಷ್ಟು..? ಮಿಥ್ಯ ಎಷ್ಟು..?

– ಶಶಿಕಲಾ ವೆಂಕನಗೌಡ ಪಾಟೀಲ

ಪ್ರಜಾತಂತ್ರದಲ್ಲಿ ಪ್ರಶ್ನಿಸುವುದೇ ತಪ್ಪು. ಪ್ರಶ್ನೆ ಮಾಡಿದ್ರೆ ಅವರು ದೇಶದ್ರೋಹಿ. ಕಪ್ಪುಹಣ ಉಳ್ಳವರು. ಕಾಂಗ್ರೆಸ್ಸಿನವರು. ಇಂಥ ಮಾತುಗಳು 500- 1000 ನೋಟುಗಳ ಅಮಾನ್ಯ ಮಾನ್ಯ ಪ್ರಧಾನಿ ಮೋದಿಯವರ ನಿರ್ಧಾರದ ನಂತರ ಈಗ ಸರ್ವೆ ಸಾಮಾನ್ಯ ಎಂಬಂತಾಗಿವೆ. ಆದರೆ, ಪ್ರಜಾತಂತ್ರದಲ್ಲಿ ಪ್ರಶ್ನಿಸುವುದೆ  ತಪ್ಪು ಎಂಬುದು ಹೇಗಾಗುತ್ತದೆ. ಪ್ರಶ್ನೆ, ಚರ್ಚೆ, ಸಂವಾದ ಎಂಬುದೇ ನಮ್ಮ ಪ್ರಜಾತಂತ್ರದ ಸೌಂದರ್ಯ. ಆದರೆ, ಈ ಸೌಂದರ್ಯವನ್ನು ತಮ್ಮ ಮೂಗಿನ ನೇರಕ್ಕೆ ಎಲ್ಲವೂ ನಡೆಯಬೇಕು ಎಂಬ ಮನಸ್ಥಿತಿ ಹೊಂದಿದ ಕೆಲವರು ಕೂರುಪಗೊಳಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ದೇಶದ ಪ್ರಜೆಯಾಗಿ ಪ್ರಶ್ನಿಸುವ ಹಕ್ಕನ್ನು ಚಲಾಯಿಸುತ್ತ, ನೋಟು ರದ್ದು ಸನ್ಮಾನ್ಯ ಮೋದಿ ಹೇಳಿದ್ದೇನು?  ನಡೆಯುತ್ತಿರುವುದೇನು?  ಸತ್ಯ ಎಷ್ಟು?  ಮಿತ್ಯ ಎಷ್ಟು ? ಎಂದು ತಿಳಿಯುವ ಸಣ್ಣ ಪ್ರಯತ್ನ.

ನೋಟು ಬದಲಾವಣೆ ನಂತರ ತಾವು ದುಡಿದ ಶ್ರಮದ ದುಡ್ಡು ಪಡೆಯಲು ಹೋಗಿ ಇಲ್ಲಿಯವರೆಗೆ 76 ಜನ ಜೀವ ಕಳೆದುಕೊಂಡಿದ್ದಾರೆ. ಇಂದು ಬಿಹಾರದಲ್ಲಿ ಹಣಕ್ಕಾಗಿ ಬ್ಯಾಂಕ್ ಮುಂದೆ ಸಾಲುಗಟ್ಟಿ ನಿಂತಿದ್ದ ಸಂದರ್ಭದಲ್ಲಿ ಮಗುವೊಂದು ತನ್ನ ತಾಯಿಯ ಮಡಿಲಲ್ಲಿ ಜೀವ ಕಳೆದುಕೊಂಡಿದೆ. ನೋಟು ಬದಲಾವಣೆಗಾಗಿ ಇಂತಹ ದಾರುಣ ಘಟನೆಗಳು ನಡೆಯುತ್ತಲೇ ಇವೆ. ಆದರೆ, ತಮ್ಮದಲ್ಲದ ತಪ್ಪಿಗೆ ದುರಂತ ಸಾವು ಕಂಡ ಆ ನಿಷ್ಪಾಪಿ ಜನರ ಕುಟುಂಬಕ್ಕೆ ಸಾಂತ್ವನ ಹೇಳುವ ಸಣ್ಣ ಕಾರ್ಯ ನೋಟು ಬದಲಾವಣೆ ಮಾಡಿ ಜನರನ್ನು ಬೀದಿಗೆ ತಂದು ನಿಲ್ಲಿಸಿದ ಸನ್ಮಾನ್ಯ ಮೋದಿಯವರಿಂದಾಗಲಿ ಅವರ ಸರಕಾರದಿಂದಾಗಲಿ ಇಲ್ಲಿಯವರೆಗೆ ಆಗಿಲ್ಲ.

modi-note-ban-gimmickಈ ನಡುವೆ ನೋಟು ಬದಲಾದ್ರೆ ದೇಶ ಬದಲಾಗುತ್ತದೆ. ಹಳೆ ನೋಟು ಹೋಗಿ ಹೊಸ ನೋಟು ಬಂದ್ರೆ ಕಪ್ಪು ಹಣ ಹೊರಬರುತ್ತದೆ. ನಕಲಿ ನೋಟಿನ ಹಾವಳಿ ತಪ್ಪುತ್ತದೆ. ದೇಶದ ಆರ್ಥಿಕತೆ ಸದೃಡವಾಗುತ್ತದೆ. ಹೊಸ ನೋಟಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ಹೀಗಾಗಿ ನಕಲಿ ಮಾಡಲು ಸಾಧ್ಯವೇ ಇಲ್ಲ ಎಂದು ನಮ್ಮ ಪ್ರಧಾನಿ ಮೋದಿ ದೊಡ್ಡ ಗಂಟಲಿನಲ್ಲಿ ಅಬ್ಬರದ ಭಾಷಣ ಮಾಡಿ ಜನರನ್ನು ಮೋಡಿ ಮಾಡಿದ್ದು ಆಗಿದೆ. ಆದರೆ , ವಾಸ್ತವ ಏನೆಂದರೆ ಇದು ಭಾಷಣಕ್ಕೆ ಸೀಮಿತ. ಪ್ರಧಾನಿ ಹೇಳುತ್ತಿರುವುದು ಸುಳ್ಳು ಎಂಬ ಒಂದೊಂದು ಸಂಗತಿಗಳು ಇದೀಗ ಬಯಲಾಗುತ್ತಿವೆ.

ಘಟನೆ ಒಂದು : ಕಪ್ಪು ಹಣ ಎಷ್ಟು ವಾಪಸ್ಸು ಆಗಿದೆಯೋ ಗೊತ್ತಿಲ್ಲ. ಆದರೆ, ಹೊಸ ನೋಟುಗಳು ಮಾತ್ರ ಕಾಳಧನಿಕರ ಕೈ ಸೇರಿದ್ದು ಮಾತ್ರ ಸತ್ಯ.  ಘಟನೆ ಒಂದು- ಸಿಎಂ ಆಪ್ತರು ಎಂಬ ಕೆಲವರ ಬಳಿ ಇಂದು ನಾಲ್ಕು ಕೋಟಿಗೂ ಅಧಿಕ ಹೊಸ 2000 ನೋಟುಗಳು ಪತ್ತೆಯಾಗಿವೆ. ಚಿಕ್ಕರಾಯಪ್ಪ ಎಂಬ ಭ್ರಷ್ಟ ಮತ್ತು ಮೂವರ ಬಳಿ ಇಷ್ಟು ಹಣ ಅವರ ಬಂದಿದ್ದು ಎಲ್ಲಿಂದ. ಸಾಮಾನ್ಯ ಜನ 2000ಸಾವಿರಕ್ಕಾಗಿ ಬ್ಯಾಂಕ್ ಎಟಿಎಂಗಳ ಮುಂದೆ ಕ್ಯೂ ನಿಂತು ಜೀವ ಕಳೆದುಕೊಳ್ಳುತ್ತಿರುವಾಗ ಇಷ್ಟು ದೊಡ್ಡ ಮಟ್ಟದ ಹಣ ಅವರ ಕೈ ಸೇರಿದ್ದು ಹೇಗೆ. ಇದನ್ನು ಕಾಳಧನ ಅಂತ ಗುರುತಿಸಬಹುದಾ?

ಘಟನೆ ಎರಡು : ನಾನು ದೇಶಕ್ಕಾಗಿ ಬ್ಯಾಂಕ್ ಗಳ ಮುಂದೆ ಕ್ಯೂ ನಿಲ್ಲಲು ಸಿದ್ದ. ಮೋದಿ ನಿರ್ಧಾರವನ್ನು ನಾನು ಬೆಂಬಲಿಸುತ್ತೇನೆ. ದೇಶಪ್ರೇಮವಿದ್ರೆ ಕ್ಯೂ ನಿಲ್ಲಿ, ಕಪ್ಪು ಹಣವನ್ನು ಸೋಲಿಸಿ ಎಂದು ದೇಶಪ್ರೇಮದ ಉನ್ಮಾದ ಸೃಷ್ಠಿಸುತ್ತಿದ್ದ ಮೋದಿ ಭಕ್ತನೊಬ್ಬ 20 ಲಕ್ಷ 55ಸಾವಿರೆ ಹಣದೊಂದಿಗೆ ಸಿಕ್ಕಿಬಿದ್ದಿದ್ದಾನೆ. ಇವೆಲ್ಲವೂ ಹೊಸ ನೋಟುಗಳು. ಆದರೆ, ಈತ ಇ ಹಣ ಪಡೆಯಲು ಎಲ್ಲಿಯೂ ಕ್ಯೂ ನಿಂತಿಲ್ಲ. ಈತನ ಹೆಸರು ಜೆ ವಿ ಆರ್ ಅರುಣ. ತಮಿಳುನಾಡು ರಾಜ್ಯದ ಬಿಜೆಪಿ ಯುವಮೋರ್ಚಾ ಪ್ರಧಾನಕಾರ್ಯದರ್ಶಿ.

ಹೊಸ ನೋಟುಗಳ ತೈಲಿ ತುಂಬಿಕೊಂಡ ಹಲವು ಕುಳಗಳ ಇನ್ನು ಹಲವು ಘಟನೆಗಳು ಇವೆ. ಒಟ್ಟಿನಲ್ಲಿ ನೋಟು ಬದಲಾವಣೆ ನಂತ್ರ ನಡೆಯುತ್ತಿರುವ ಇಂಥ ಘಟನೆಗಳು ಭ್ರಷ್ಟಚಾರ ತಡೆಗಟ್ಟುತ್ತೇವೆ ಎಂದು ದೊಡ್ಡ ಗಂಟಲಿನಲ್ಲಿ ಭಾಷಣ ಮಾಡುವ ಸನ್ಮಾನ್ಯ ಮೋದಿಜಿಯವರಿಗೆ,  ಸುಳ್ಳುಗಳನ್ನು ಮಾತ್ರ ಹೇಳಲು ನಿಮ್ಮಿಂದ ಸಾಧ್ಯ ಎಂದು ಅಣುಕಿಸುವಂತಿವೆ. ಅಲ್ಲದೇ ಕಪ್ಪು ಹಣ ಹೊರತೆಗೆಯುವ ಹೇಳಿಕೆಗೆ ಸವಾಲೊಡ್ಡುವ ರೀತಿಯಲ್ಲಿ ನಡೆಯುತ್ತಿವೆ.

ಘಟನೆ ಮೂರು : ಹೊಸ ನೋಟು ನಕಲಿ ಸಾಧ್ಯವೇ ಇಲ್ಲ. ಇದು ಮೋದಿಜಿ…. ಹೇಳಿದ ಇನ್ನೊಂದು ಹೇಳಿಕೆ. ಆದ್ರೆ, ಪ್ರಧಾನಿಗಳು ಸುಳ್ಳು ಹೇಳುತ್ತಿದ್ದಾರೆ. ಹೊಸ ನೋಟು ನಕಲಿ ಮಾಡಲು ಸಾಧ್ಯ ಎಂದು ಅವರ make in India ದ ಹೊಸ ಸಾಧಕನೊಬ್ಬ ತೋರಿಸಿಕೊಟ್ಟಿದ್ದಾನೆ. ಆತನ ಹೆಸರು ಅಭಿನವ ವರ್ಮಾ ಎಂಬಿಎ ಪದವಿಧರ. ಪಂಜಾಬ ರಾಜ್ಯದ ಮೋಹಾಲಿಯ ಹುಡುಗ. ಅಂಧರಿಗೆ ಸ್ಪರ್ಶಜ್ಞಾನ ನೀಡುವ ಉಂಗುರವೊಂದನ್ನು ಆವಿಷ್ಕಾರ ಮಾಡಿರುವ ಈತ make In India ದಲ್ಲಿ ಗುರುತಿಸಿಕೊಂಡಿದ್ದಾನೆ. ಹೀಗೆ ವಿಶಿಷ್ಟ ಸಾಧನೆ ಮಾಡಿದ ಈತ ಈಗ ನಕಲಿ ನೋಟು ಮಾಡಲು ದಾವುದ್, ಸಯಿದ್ ಅಥವಾ ಪಾಕಿಸ್ತಾನ ಯಾಕೆ ಬೇಕು ನಾನೆ ಮಾಡ್ತಿನಿ ಅಂತ ಮತ್ತೊಂದು ಸಾಧನೆ ಮಾಡಿ ಸಿಕ್ಕಿಬಿದ್ದಿದ್ದಾನೆ. ಹೊಸ 2000 ನೋಟು ಹೊರಬಿದ್ದದ್ದೇ ತಡ ಈತ ತನ್ನ ಸಹೋದರಿ ಜೊತೆ ಸೇರಿ ಈಗಾಗಲೆ 3ಕೋಟಿ ನಕಲಿ ಹಣ ಮುದ್ರಿಸಿ ಮಾರುಕಟ್ಟೆಗೆ ಬಿಟ್ಟಿದ್ದಾನಂತೆ. ಇದನ್ನು ಇಂದು ಪೊಲೀಸರ ಕೈಗೆ ಸಿಕ್ಕು ಬಿದ್ದಾಗ ಆತನೆ ಬಾಯಿಬಿಟ್ಟಿದ್ದು, ಆತನಿಂದ 42ಲಕ್ಷ ನಕಲಿ ನೋಟುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಘಟನೆ ನಾಲ್ಕು : ಕಾನ್ಪುರದಲ್ಲಿ ಎಟಿಎಂ ಒಂದರಲ್ಲಿ ಹೊಸ 2000 ರೂಪಾಯಿಯ ನಕಲಿ ನೋಟೊಂದು ಪತ್ತೆಯಾಗಿದೆ. ಇದರರ್ಥ ಹೊಸ ನಕಲಿ ನೋಟುಗಳು ಆರ್ ಬಿಐನ ಅಸಲಿ ನೋಟುಗಳ ಜೊತೆಗೆ ಸೇರಿ  ಎಟಿಎಂ ಪ್ರವೇಶ ಮಾಡಿವೆ ಎಂಬುದು ಸ್ಪಷ್ಟ.
ಇಂತಹ ಹಲವು ಘಟನೆಗಳು ನಡೆದಿವೆ, ನಡೆಯುತ್ತಿವೆ. ಆದರೆ, ಇವುಗಳಿಗೆ ಕಡಿವಾಣ ಹಾಕಬೆಕಿದ್ದ ಸರಕಾರ ಮಾತ್ರ ಈ ಬಗ್ಗೆ ಮಾತನಾಡದೆ ದೇಶಪ್ರೇಮದ ಉನ್ಮಾದದಲ್ಲಿ ಜನರನ್ನು ವಂಚಿಸುತ್ತಿದೆ. ಹೊಸ ನೋಟು ನಕಲಿ ಮಾಡಲು ಸಾಧ್ಯವೇ ಇಲ್ಲ ಎಂದು ಅಬ್ಬರದಿಂದ ಹೇಳಿದ್ದ ಮೋದಿಜಿಯವರಿಗೆ ನೀವು ಸುಳ್ಳು ಹೇಳುತ್ತಿದ್ದೀರಾ ಎಂದು ಈ ಘಟನೆಗಳು ಅಣಕಿಸುತ್ತಿವೆ.

ಘಟನೆ ಐದು : ಹೊಸ ನೋಟುಗಳಿಂದ ದೇಶ ಬದಲಾಗುತ್ತದೆ. ಆರ್ಥಿಕತೆ ಪ್ರಗತಿ ಸಾಧಿಸುತ್ತದೆ ಎಂದು ಮೋದಿ ಭಾಷಣ ಹೇಳಿದೆ. ಆದರೆ ಇದು ಕೂಡಾ ಸುಳ್ಳು ಎನ್ನುತ್ತದೆ ಅವರ ನಡೆ. ಸದ್ಯ ದೇಶದಲ್ಲಿ ಸರಕಾರದ ಹಣಕಾಸು ಸಚಿವರೇ ಹೇಳಿದ ಹಾಗೆ15.44 ಲಕ್ಷ ಕೋಟಿ ಹಣ 500,1000 ನೋಟಿನ ರೂಪದಲ್ಲಿದೆಯಂತೆ. ಇದರಲ್ಲಿ 8.58 ಲಕ್ಷ ಕೋಟಿ 500ರ ನೋಟಿದ್ರೆ, 6.86 ಲಕ್ಷ ಕೋಟಿ 1000 ನೋಟಿದೆಯಂತೆ. ಈಗ ಇದರಲ್ಲಿ ಬ್ಯಾಂಕಗಳಿಗೆ ಜಮೆಯಾದ ಹಣ ಇಲ್ಲಿಯವರೆಗೆ 10ಲಕ್ಷ ಕೋಟಿ ದಾಟಿಲ್ಲ. ಈ ಹಣಕ್ಕೆ ಪರ್ಯಾಯವಾಗಿ ಹೊಸ ನೋಟು ಮುದ್ರಣ ಮಾಡಲು ನಮ್ಮ ದೇಶದಲ್ಲಿ 66ಪ್ರಂಟಿಂಗ್ ಪ್ರೆಸ್ ಗಳಿವೆ. ಇವು ಸತತ ಮುದ್ರಣ ಕಾರ್ಯ ಮಾಡಿದರೂ ಹಳೆಯ ನೋಟುಗಳ ಲೆಕ್ಕ ಸರಿದೂಗಿಸಲು ಕನಿಷ್ಟ 7 ತಿಂಗಳು ಬೇಕು ಎನ್ನುತ್ತವೆ ತಜ್ಞ ಮೂಲಗಳು.

ಅಲ್ಲದೇ ದೇಶದ ಜನಸಂಖ್ಯೆ 126 ಕೋಟಿ ಇದ್ದು, ಇಷ್ಟು ಜನಸಂಖ್ಯೆಗೆ ಇರುವ ಬ್ಯಾಂಕಗಳ ಸಂಖ್ಯೆ ಒಂದು ಅಂದಾಜಿನಂತೆ 4.5 ಲಕ್ಷ ಮಾತ್ರ. ಎಟಿಎಂಗಳ ಸಂಖ್ಯೆ 2.54ಲಕ್ಷ. ಇನ್ನೊಂದೆಡೆ, ಹಿಂದಿನ ಸರಕಾರದ ಶತಪ್ತಿಶತ ಆರ್ಥಿಕ ಒಳಗೊಳ್ಳುವಿಕೆ ಯೋಜನೆಯ ಹೊಸ ರೂಪಾಂತರವಾಗಿರುವ ಜನಧನ್ ಯೋಜನೆ ಪೂರ್ಣ ಯಶಸ್ವಿಯಾಗಿಲ್ಲ ಎನ್ನಬಹುದು. ಕಾರಣ ದೇಶದಲ್ಲಿ ಇನ್ನು ಬ್ಯಾಂಕ್ ಖಾತೆ ಹೊಂದಿರದ ಲಕ್ಷಾಂತರ ಕುಟುಂಭಗಳಿವೆ. ಪರಿಸ್ಥಿತಿ ಹೀಗಿದ್ದಾಗ, 50 ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ಅಬ್ಬರದ ಭಾಷಣ ಮಾಡುವ ಪ್ರಧಾನಿ  ಸನ್ಮಾನ್ಯ ಮೋದಿಯವರ ಮಾತುಗಳನ್ನು ನಂಬುವುದಾದರೂ ಹೇಗೆ?  ಅವರು ಹೇಳಿದಂತೆ 50ದಿನದಲ್ಲಿ ಆರ್ಥಿಕ ಸ್ಥಿತಿ ಸರಿ ಹೋಗಲು ಸಾಧ್ಯವೆ?  ಸಾಧ್ಯವಾಗದಿದ್ದರೆ ಮುಂದೆ ದೇಶ, ದೇಶದ ಆರ್ಥಿಕತೆ ಮತ್ತು ದೇಶವಾಸಿಗಳ ಪರಿಸ್ಥಿತಿ ಏನಾಗಲಿದೆ ಎಂಬ ನಿಟ್ಟಿನಲ್ಲಿ ವಿಮರ್ಶೆ, ಚರ್ಚೆ, ಸಂವಾಧ ನಡೆಯಬೇಕಾದ ಅಗತ್ಯ ಇದೆ ಎಂಬುದು ನನ್ನ ಭಾವನೆ. ಹಲವು ಮಹನೀಯರ ತ್ಯಾಗ,ಬಲಿದಾನದಿಂದ ಕಟ್ಟಿದ ಈ ದೇಶ ವ್ಯಕ್ತಿಯೊಬ್ಬನ ನಿರ್ಧಾರದಿಂದ ಸಾಕಷ್ಟು ಆವಾಂತರ ಸೃಷ್ಠಿಸುತ್ತಿದ್ದರೆ ಈ ಬಗ್ಗೆ ಗಂಭೀರ ಚಿಂತನೆ ನಡೆಸುವುದು ನಿಜವಾದ ದೇಶಪ್ರೇಮಿಯ ಕರ್ತವ್ಯ ಎಂಬುದು ನನ್ನ ಅನಿಸಿಕೆ.

ಇದೆಲ್ಲದರ ನಡುವೆ ಮೋದಿ ಸರಕಾರ ಮಾಡಿದ ಇನ್ನೊಂದು ಆವಾಂತರ ಹೊರಬಿದ್ದಿದೆ. ಅದೇನೆಂದರೆ ಹೊಸ ಹೆಸರನ್ನಿಟ್ಟುಕೊಂಡು ಬಂದು ಹೊಸ ನೋಟಿನ ವಿನ್ಯಾಸಕ್ಕೆ ತಕ್ಕಂತೆ ಕಾಗದ, ಕೆಮಿಕಲ್ ಸೇರಿದಂತೆ ಮುದ್ರಣ ಹೊಣೆಗಾರಿಕೆಯನ್ನು The la Ro ಎಂಬ ಇಂಗ್ಲೇಂಡ್ ಕಂಪನಿಗೆ ವಹಿಸಲಾಗಿದೆಯಂತೆ. ಈ ಕುಖ್ಯಾತ ಕಂಪನಿ ಎಂತಹದ್ದು ಎಂದರೆ ಇದು ಈಗಾಗಲೆ ಜಾಗತಿಕ ಮಟ್ಟದಲ್ಲಿ ಕಪ್ಪು ಪಟ್ಟಿಗೆ ಸೇರಿದೆ. ಪನಾಮಾ ಹಗರಣದಲ್ಲೂ ಈ ಕಂಪನಿಯ ಖದಿಮತನ ಬಯಲಾಗಿದೆ. ಅಲ್ಲದೇ ಇದೆ ಕಂಪನಿ ಈ ಹಿಂದೆ ಭಾರತಕ್ಕೆ ನೋಟುಗಳ ಮುದ್ರಣ ಕಾಗದ, ಕೆಮಿಕಲ್ ಮತ್ತು ಮುದ್ರಣವನ್ನೂ ಮಾಡಿತ್ತು. ಆಗ ಇದೆ ಕಂಪನಿ ಪಾಕಿಸ್ತಾನಕ್ಕೂ ನಮ್ಮ ನೋಟುಗಳನ್ನು ಮುದ್ರಿಸಿಕೊಟ್ಟಿತ್ತು. ಹೀಗಾಗಿ ಈ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿತ್ತು ಎಂದು ಸ್ಲ್ಯಾಬೆರಲ್ ಮತ್ತು ಗ್ರೇಟ್ ಗೇನ್ ಎಂಬ ಎರಡು ಆಂಗ್ಲ ಮ್ಯಾಗಜಿನ್ ಗಳು ವರದಿ ಮಾಡಿವೆ.  ಇದೆಲ್ಲ ಗೊತ್ತಿದ್ದು, ನಮ್ಮ ಸರಕಾರ, ಪ್ರಧಾನಿ ಮೋದಿಜಿ ಹೊಸ ಹೆಸರಿನೊಂದಿಗೆ ಬಂದಿರುವ ಈ ಕಂಪನಿಯಿಂದ ನೋಟು ಮುದ್ರಣದ ಕಾಗದ, ಕೆಮಿಕಲ್ ಮತ್ತು ತಂತ್ರಜ್ಞಾನ ವನ್ನು ಪಡೆಯುತ್ತಿದ್ದಾರಂತೆ. ಜೊತೆಗೆ ಹೊಸ ನೋಟಿನ ಕೊರತೆ ನೀಗಿಸಲು ವಿದೇಶಗಳಲ್ಲಿ ನೋಟು ಮುದ್ರಣ ಮಾಡುವ ಆಲೋಚನೆಯು ಇದೆಯಂತೆ. ಇದು ಎಷ್ಟರ ಮಟ್ಟಿಗೆ ನಿಜವೋ ಗೊತ್ತಿಲ್ಲ. ಯಾಕಂದ್ರೆ, ಮೋದಿಯವರಾಗಲಿ ಅಥವಾ ಅವರ ಸರಕಾರವಾಗಲೀ ಈ ನಿಟ್ಟಿನಲ್ಲಿ ಏನನ್ನು ಹೇಳುತ್ತಿಲ್ಲ. ಹೀಗಾಗಿ, ಇವರು ಎಲ್ಲಿ, “ಇಲಿ ಹಿಡಿಯಲು ಹೋಗಿ ಗಣೇಶನಿಗೆ ಧಕ್ಕೆ ಮಾಡುತ್ತಾರೊ” ಎಂಬ ಆತಂಕ  ಪ್ರಜ್ಞಾವಂತರನ್ನು  ಕಾಡುತ್ತಿದೆ.

ಒಟ್ಟಿನಲ್ಲಿ ದೇಶದಲ್ಲಿರುವ ಕೆಲವೇ ಕೆಲವು ಮೆಲ್ಮಧ್ಯಮ ವರ್ಗದ ಶ್ರೀಮಂತರ ಅಟ್ಟಹಾಸ ದೇಶದ ಬಡ,ಮಧ್ಯಮ ವರ್ಗದವರಲ್ಲಿ ಆಕ್ರೋಶ ಹುಟ್ಟಿಸಿದೆ. ಹೀಗಾಗಿ ಕಣ್ಣೆದುರೇ ಕಾಣುವ ಮೆಲ್ಮಧ್ಯಮ ವರ್ಗದ ಶ್ರೀಮಂತರಿಗೆ ನೋಟು ಬದಲಾವಣೆ ಮೂಲಕ ತಾನು ಪಾಠ ಕಲಿಸುತ್ತಿದ್ದೇನೆ. ಆ ಮೂಲಕ. ದೇಶವನ್ನು ಬಲಿಷ್ಟಗೊಳಿಸುತ್ತಿದ್ದೇನೆ ಎಂಬ ಭ್ರಮೆಯಲ್ಲಿ ಜನಸಾಮಾನ್ಯ ಬೀಗುತ್ತಿದ್ದಾನೆ. ಶ್ರೀಮಂತರು, ಭ್ರಷ್ಟರು ಮತ್ತು ಕಾಳಧನಿಕರ ಮೇಲಿರುವ ಆತನ ಸಿಟ್ಟು ಆಕ್ರೋಶವನ್ನೇ ಮೋದಿಜಿ ಬಂಡವಾಳ ಮಾಡಿಕೊಂಡಿದ್ದು, ಸ್ವರ್ಗವನ್ನೆ ಧರೆಗೆ ತರುತ್ತಿದ್ದೇನೆ. ಬಡವನ ಬಾಳು ಹಸನಾಗಲಿದೆ. ದೇಶ ಸಮೃದ್ಧವಾಗಲಿದೆ ಎಂಬಂತ ಭ್ರಮೆ ಸೃಷ್ಟಿಸುತ್ತಿದ್ದಾರೆ.

ಆದರೆ ಅದಾನಿ, ಅಂಬಾನಿಯಂತ ಬಂಡವಾಳಗಾರರನ್ನು ಜೊತೆಗಿಟ್ಟುಕೊಂಡು ಬಡವನ ಬಾಳು ಹಸನಾಗಿಸುತ್ತೇನೆ ಎಂಬುದು, ಹೊಸ ನೋಟು ನಕಲಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದಷ್ಟೇ ಸುಳ್ಳು ಹೇಳಿಕೆಯಾಗುತ್ತದೆ. ಅಲ್ಲದೆ, ಬಡ,ಮಧ್ಯಮ ವರ್ಗದವರ ಬದುಕು ಬೀದಿಗೆ ಬಂದಿದ್ದು ಇದೇ ಅದಾನಿ,ಅಂಬಾನಿಗಳ ಲಾಭ ಬಡುಕತನದಿಂದ ಎಂಬುದು ಸರಕಾರಗಳಿಂದ ಅವರು ಪಡೆದಿರುವ ಲಾಭಗಳಿಂದ ಸಾಬೀತಾಗುತ್ತದೆ. ಹೀಗಾಗಿ ಚುನಾವಣೆಯ ಹಣಕ್ಕಾಗಿ ಅವರೊಂದಿಗೆ ಬಾಂಧವ್ಯ ಇಟ್ಟುಕೊಂಡಿರುವ ಮೋದಿಯವರಿಂದಾಗಲಿ, ಅವರ ಪಕ್ಷದಿಂದಾಗಲಿ ಅಥವಾ ಮೋದಿ ಹಾಗೂ ಬಿಜೆಪಿಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಪಕ್ಷ, ರಾಹುಲ್ ಗಾಂಧಿಯಿಂದಾಗಲಿ ಈ ದೇಶದ ಜನಸಾಮಾನ್ಯನ ಬದುಕು ಬದಲಾಗದು. ಸಮಸ್ಯೆಗಳಿಂದ ಮುಕ್ತಿ ಖಂಡಿತ ಸಿಗದು.

ಈಗ ನಮ್ಮ ಮುಂದೆ ಉಳಿದಿರುವ ಏಕೈಕ ಮಾರ್ಗ ಎಂದರೆ ಇವರ ಸುಳ್ಳುಗಳನ್ನ ಅರ್ಥ ಮಾಡಿಕೊಳ್ಳುವುದು. ಇವರ ಭಾವನಾತ್ಮಕ ವಂಚನೆಗೆ ಒಳಗಾಗದಿರುವುದು. ಬಂಡವಾಳಗಾರರೊಂದಿಗೆ ಇರುವ ಇವರ ಸಂಬಂಧ ಮತ್ತು ಅವರಿಗೆ ಇವರು ಮಾಡಿಕೊಡುವ ಆರ್ಥಿಕ ಅನುಕೂಲಗಳನ್ನು ಅರಿತುಕೊಳ್ಳುವುದು. ಆ ಅರಿವಿನ ಮೂಲಕ ಜನಸಾಮಾನ್ಯನ ಬದುಕು ಹಸನುಗೊಳಿಸಲು ಪರ್ಯಾಯ ಜನಚಳುವಳಿ ಕಟ್ಟುವುದು ಮಾತ್ರ ಸಧ್ಯ ಜನತೆಯ ಮುಂದಿರುವ ಏಕೈಕ ದಾರಿ.

One thought on “ನೋಟ್ ಬ್ಯಾನ್ ಮಾಡಿದ ಮೋದಿ ನಡೆ ಹಿಂದಿನ ಸತ್ಯ ಎಷ್ಟು..? ಮಿಥ್ಯ ಎಷ್ಟು..?

  • October 18, 2017 at 3:32 PM
    Permalink

    I think other web-site proprietors should take this web site as an model, very clean and fantastic user genial style and design, as well as the content. You’re an expert in this topic!

Comments are closed.

Social Media Auto Publish Powered By : XYZScripts.com