ಡಚ್ಚರ ನಾಡಲ್ಲಿ ಕನ್ನಡ ಕಲರವ

ಲೇಖನ – ಚೈತ್ರ ಎಲ್ ಹೆಗಡೆ

chitra

ಅಮೂಲ್ಯ ರತ್ನವನ್ನು ಕಳೆದುಕೊಂಡಾಗಲೇ ಅದರ ಬೆಲೆ ಗೊತ್ತಾಗುವುದು. ಹಾಗಾಗಿ ನಮ್ಮದಲ್ಲದ ನಾಡಲ್ಲಿ ನಮ್ಮವರು ಸಿಗುತ್ತಾರೆ ಎಂದರೆ ಬಿಡಲಾದೀತೆ? ದೇಶದ ಯಾವ ಮೂಲೆಯಲ್ಲಾದರೂ ಸರಿ, ಕನ್ನಡ ರಾಜ್ಯೋತ್ಸವಕ್ಕೆ ಹೋಗಲೇ ಬೇಕು ಎಂದು ನಾವು ನಿರ್ಧರಿಸಿದ್ದೆವು..

ಹೇಳಿದ ದಿನ  ಸ್ವಲ್ವ ಮುಂಚೆಯೇ ತಯಾರಾಗಿ ರೈಲು ಹತ್ತಿದೆವು. ಅರ್ಧ ಗಂಟೆ ಬಸ್ ಪ್ರಯಾಣ ನಂತರ ಒಂದು ತಾಸು ರೈಲು ಬಳಿಕ ಮತ್ತೆ ಅರ್ಧ ಗಂಟೆ ಬಸ್ ಡಚ್ಚರ ನಾಡಲ್ಲಿ ಕನ್ನಡ ಕಲರವ.

kannada-rajyosthava-443434

ಉಪ್ಪು ಹುಳಿ ಖಾರ ತಿನ್ನದೇ ಹೋದರೆ ನಾಲಿಗೆಯೆಲ್ಲ ಹೇಗಾಗಿರುತ್ತದೆಯೋ ಹಾಗೆ ನಮ್ಮ ನಾಲಿಗೆಯಲ್ಲ ಕನ್ನಡ ಮಾತನಾಡದೇ ಜಡ್ಡು ಹಿಡಿದು ಹೋಗಿತ್ತು. ಶ್ರೀಗಂಧ ಕನ್ನಡ ಹಾಲೆಂಡ್ ಬಳಗದಿಂದ ಕನ್ನಡ ರಾಜ್ಯೋತ್ಸವ ಎಂದಾಗ ತಟ್ಟನೆ ರಿಜಿಸ್ಟರ್ ಮಾಡಿಕೊಂಡೆವು. ಮಾತನಾಡಲು ಹಾಗೂ ಭಾವನೆಗಳನ್ನು ಹಂಚಿಕೊಳ್ಳಲಾದರೂ ನಮ್ಮವರು ಸಿಗುತ್ತಾರೆ ಎಂಬ ಖುಷಿ ನಮಗೆ….

ಅದು ಹಾಗೇ….ದೇಶ ಬಿಟ್ಟ ಬಂದ ಮೇಲೆ ನಮಗೆ ನಮ್ಮ ದೇಶದ ಬೆಲೆ ಗೊತ್ತಾಗುವುದು.. ನಮ್ಮವರೆಲ್ಲ ದೂರ ಹೋದ ಮೇಲೆ ನಮ್ಮವರ ಬೆಲೆ ಗೊತ್ತಾಗುವುದು.. ನಮ್ಮ ನೆಲವನ್ನು ಬಿಟ್ಟು ಹೋದ ಮೇಲೆ ನಮಗೆ ನಮ್ಮ ಭಾಷೆಯ ಬೆಲೆ ಗೊತ್ತಾಗುವುದು.. ಗಟ್ಟಿಯಾದ ನೆಲೆಯೇ ಇಲ್ಲದವರನ್ನು ನೋಡಿದಾಗ ನಮ್ಮ ಸಂಸ್ಕೃತಿಯ ಬೆಲೆ ಗೊತ್ತಾಗುವುದು. ಒಟ್ಟು 2 ತಾಸು ಪ್ರಯಾಣ ಮಾಡಿ ಐಂಡಹೊವನ್ ತಲುಪಿದೆವು. ಅಲ್ಲಿ ಹೋದರೆ, ಇನ್ನೂ ವೇದಿಕೆ ಸಜ್ಜಾಗತೊಡಗಿತ್ತು. ನೋಡನೋಡುತ್ತಲೇ ಚೇರ್ ಗಳನ್ನೆಲ್ಲ ಹಾಕಿ ಕುಳಿತುಕೊಳ್ಳಲು ಸಿದ್ಧತೆ ಮಾಡಲಾಯಿತು. ಅಷ್ಟರಲ್ಲಿ ಒಬ್ಬೊಬ್ಬರಾಗಿ ಹಾಲ್ ಗೆ ಬರತೊಡಗಿದರು. ಹಾಗೇ ಬಂದವರೆಲ್ಲ ಪರಿಚಯಿಸಿಕೊಂಡು ನಾವಿಲ್ಲಿದ್ದೇವೆ, ನೀವೆಲ್ಲಿದ್ದೀರಾ ಎಂದು ಮಾತನಾಡಿಕೊಂಡದ್ದಾಯಿತು. ನಂಬರ್ ಗಳನ್ನು ಬದಲಾಯಿಸಿಕೊಂಡದ್ದಾಯಿತು. ಅಬ್ಬ ಇಷ್ಟು ಪುಟ್ಟ ದೇಶದಲ್ಲಿ ಇಷ್ಟೆಲ್ಲ ಕನ್ನಡಿಗರು ಜಮಾಯಿಸಿದ್ದಾರಾ ಎಂದೆನಿಸಿತು.

kannada-rajyosthava-1

ಅಷ್ಟರಲ್ಲಾಗಲೇ ಚಿಣ್ಣರ ಕಾರ್ಯಕ್ರಮಗಳು ಆರಂಭವಾಯಿತು. ವೇದಿಕೆ ಮೇಲೆ ಕನ್ನಡ ಹಾಡುಗಳು ಮೊಳಗತೊಡಗಿತು. ಕನ್ನಡ ಸಂಸ್ಕೃತಿ ಬಿಂಬಿಸುವ ನೃತ್ಯಗಳು, ಫ್ಯಾಷನ್ ಶೋ, ನಾಟಕ ಸೇರಿದಂತೆ ಹಲವು ಕಾರ್ಯಕ್ರಮಗಳು ಒಂದಾದ ಮೇಲೆ ಒಂದು ಬರತೊಡಗಿದವು. ಕಾವೇರಿ ನೀರಿನ ಗಲಾಟೆ, ನೋಟ್ ಬ್ಯಾನ್ ಹೀಗೆ ಪ್ರತಿಯೊಂದು ವೇದಿಕೆಯಲ್ಲಿ ಚರ್ಚೆಯಾಗತೊಡಗಿತು. ಇದರ ಮಧ್ಯೆ, ದಾವಣಗೆರೆ ಬೆಣ್ಣೆ ದೋಸೆ, ಬೆಳಗಾವಿಯ ಕುಂದಾ, ಧಾರವಾಡದ ಪೇಡಾ, ಮಂಗಳೂರು ಬಜ್ಜಿ ಹೀಗೆ ನಮ್ಮ ರಾಜ್ಯದ ವಿಶೇಷ ಖಾದ್ಯಗಳನ್ನು ನಿರೂಪಕ ಹೇಳುತ್ತಿದ್ದರೆ ಕುಳಿತವರ ಬಾಯಲ್ಲಿ ನೀರೂರಿತ್ತು…

ಇಷ್ಟೆಲ್ಲದರ ಮಧ್ಯೆ, ಪ್ರೇಕ್ಷಕರೇನೂ ಕಡಿಮೆ ಇಲ್ಲ ಎಂಬಂತೆ ಕನ್ನಡ ಪರ ಜಯಘೋಷಗಳನ್ನು ಹಾಕಿದರು.  ಕರ್ನಾಟಕದಲ್ಲಿ ಡಚ್ ರು ತಮ್ಮ ಆಳ್ವಿಕೆ ನಡೆಸಿದರೋ ಇಲ್ಲವೋ ಗೊತ್ತಿಲ್ಲ. ಆದರೆ ಶ್ರೀಗಂಧ ಹಾಲೆಂಡ್ ಬಳಗ ಡಚ್ ರ ನಾಡಲ್ಲಿ ಕನ್ನಡದ ಕಂಪು ಪಸರಿಸಿತ್ತು. ಕಾರ್ಯಕ್ರಮದ ಮಧ್ಯೆ ಜಯಕಾರಗಳು ನಡೆಯುತ್ತಲೇ ಇತ್ತು. ಸುಮಾರು 250ಕ್ಕೂ ಅಧಿಕ ಕನ್ನಡಿಗರು ಕಾರ್ಯಕ್ರಮದಲ್ಲಿ ಜಮಾಯಿಸಿದ್ದರು. 2 ದಶಕಗಳ ಹಿಂದೆ ಕೇವಲ ಬೆರಳೆಣಿಕೆಯಷ್ಟಿದ್ದ ಕನ್ನಡಿಗರು ಇಂದು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಹೋಳಿಗೆ ಊಟ ನೆರೆದಿದ್ದವರಿಗೆ ಇನ್ನಷ್ಟು ಖುಷಿ ನೀಡಿತು. ಹೋಳಿಗೆ, ಇಡ್ಲಿ, ಪುಳಿಯೋಗರೆ, ಕೋಸುಂಬರಿ ಸೇರಿದಂತೆ ಪಕ್ಕಾ ದಕ್ಷಿಣ ಭಾರತದ ಊಟ ನೀಡಲಾಗಿತ್ತು. ಸದಾ ಬ್ರೆಡ್, ಚೀಸ್, ಪಿಜ್ಜಾ, ಪಾಸ್ತಾ ತಿನ್ನುತ್ತಿದ್ದವರಿಗೆ ಹೋಳಿಗೆ ಊಟದಿಂದಾಗಿ ರಸದೌತಣವನ್ನೇ ಬಡಿಸಿದಂತಾಗಿತ್ತು. ಕಾರ್ಯಕ್ರಮವನ್ನು ಅದೆಷ್ಟು ಖುಷಿಯಿಂದ ನೋಡಿದರೋ ಅಷ್ಟೇ ಖುಷಿಯಿಂದ ಊಟವನ್ನು ಸವಿದರು.kannada-rajyosthava-5

ಕಾರ್ಯಕ್ರಮ ಇಷ್ಟಕ್ಕೇ ಮುಗಿಯಲಿಲ್ಲ. ಮಕ್ಕಳಿಂದ ಹಿಡಿದು ದೊಡ್ಡವರಾದಿಯಾಗಿ ಹಾಲ್ ನ ತುಂಬೆಲ್ಲ ಏನೇನು ಕಸ ಹಾಕಿದ್ದರೋ ಅದನ್ನೆಲ್ಲ ಒಬ್ಬೊಬ್ಬರಾಗಿ ಸ್ವಚ್ಛ ಮಾಡತೊಡಗಿದರು. ಊಟದ ತಟ್ಟೆ, ಟೇಬಲ್ ಗಳು, ನೆಲ ಹೀಗೆ ಎಲ್ಲೆಲ್ಲಿ ಗಲೀಜಾಗಿತ್ತೋ ಅದನ್ನೆಲ್ಲ ಹುಡುಕಿ ಹುಡುಕಿ ಒಂದೊಂದಾಗಿ ಶುಚಿ ಮಾಡಲಾಯಿತು. ಚೇರ್ ಗಳನ್ನೆಲ್ಲ ಹಿಂದಿನಂತೆ ಜೋಡಿಸಿಡಲಾಯಿತು. ಮೈಕ್ ಸಿಸ್ಟಮ್ ಜೋಡಿಸಿ ತೆಗೆದಿರಿಸಲಾಯಿತು. ಟೇಬಲ್ ಗಳನ್ನು ಬದಿಗಿರಿಸಲಾಯಿತು. ಮೋದಿಯ ಸ್ವಚ್ಛ ಭಾರತ್ ಸಂದೇಶ ಹಾಲೆಂಡ್ ನಲ್ಲಿರುವ ಕನ್ನಡಿಗರು ಸಾಕಾರಗೊಳಿಸುತ್ತಿದ್ದಾರೇನೋ ಎಂಬಂತೆ ಭಾಸವಾಯಿತು.

ಹೀಗೆ ಸ್ವಚ್ಛಗೊಳಿಸಲು ಕಾರಣವೂ ಇದೆ. ಇಲ್ಲಿ ಕಾರ್ಯಕ್ರಮದ ಬಳಿಕ ಉಪಯೋಗಿಸಿದ ಜಾಗವನ್ನು ಕಸಗುಡಿಸಲು, ಸ್ವಚ್ಛ ಮಾಡಲು ಪ್ರತ್ಯೇಕ ಜನರಿರುವುದಿಲ್ಲ. ಎಲ್ಲ ಕೆಲಸವನ್ನು ಎಲ್ಲರೂ ಮಾಡುತ್ತಾರೆ. ಯಾವುದೇ ಕೆಲಸ ಉತ್ತಮ ಅಥವಾ ಕೀಳು ಎಂದಿಲ್ಲ. ಹಾಗಿರುವಾಗ ಇಂಥಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಾಗ ಆಯೋಜಕರೇ ಎಲ್ಲ ಜವಾಬ್ದಾರಿಯನ್ನು ಹೊರಬೇಕು.  ಕನ್ನಡವನ್ನು ಪೋಷಿಸುತ್ತಿರುವ ಇಂಥಹ ಕಾರ್ಯಕ್ರಮದಲ್ಲಿ ಎಲ್ಲ ಕೆಲಸಕ್ಕೂ ಪ್ರತಿಯೊಬ್ಬರೂ ಕೈ ಜೋಡಿಸಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಏಷ್ಟು ಜನರಿದ್ದರೋ, ಅಂತಿಮಘಟ್ಟ ತಲುಪುವಾಗಲೂ ಅಷ್ಟೇ ಜನರಿದ್ದರು. ಅದಕ್ಕಿಂತ ಹೆಚ್ಚಾಗಿ ಕಾರ್ಯಕ್ರಮ ನಡೆಸಿದ ಹಾಲ್ ಆರಂಭದಲ್ಲಿ ಹೇಗಿತ್ತೋ ಹಿಂದಿರುಗಿಸುವಾಗಲೂ ಹಾಗೆಯೇ ಇತ್ತು. 250 ಜನ ಕುಳಿತು ಕಾರ್ಯಕ್ರಮ ನೋಡಿದ್ದೇ ಸುಳ್ಳು ಎಂಬಂತೆ ಹಾಲ್ ಪುನಃ ತನ್ನ ಹಿಂದಿನ ಸ್ಥಿತಿಗೆ ತಲುಪಿತ್ತು. ಚುಮು ಚುಮು ಚಳಿಯ ಮಧ್ಯೆ ನಿಜವಾದ ಕನ್ನಡ ರಾಜ್ಯೋತ್ಸವ ಆಚರಿಸಿದೆವು. ಜೊತೆಗೆ ಹೊಸ ಮುಖಗಳೊಂದಿಗೆ ಗೆಳೆತನದ ಭರವಸೆಯೊಂದಿಗೆ ಸಂತಸದಿಂದ ಮನೆಯತ್ತ ಹೆಜ್ಜೆ ಹಾಕಿದೆವು.

ಛಾಯಾಗ್ರಾಹಕ – ವಿಜಯೇಂದ್ರ ಪಾಗಾ

Comments are closed.

Social Media Auto Publish Powered By : XYZScripts.com