ಪಾಳೇನ್ಯಾಗ ನಿಲ್ಲಾಕುಂತಾರ ಈ ಮಂದಿ!

d-garud-columnಇಂಟ್ರೋ:

ಪಾಳೇನ್ಯಾಗ! ಅರ್ಥ ಆಗಂಗಿಲ್ಲ ಬಿಡ್ರಿ ನಿಮಗ. ಲೈನ್ ಅಂತನ ಹೇಳಬೇಕಾತ್ತದ. ಲೈನ್ ವಿಷಯಾ ಹೇಳಾಕ ಶುರು ಹಚಗೋತೀನಿ. ಸ್ವಲ್ಪ ಸೈಲೆಂಟ್ ಮನಸು ಇಟಕೊಂಡು ಮನಸ್ಸಿನ ಕಿವಿಯಿಂದ ಓದಿಕೊಂಡು ಹೋಗ್ರಿ. ಇದ್ದದ್ದು ಇದ್ದ ಹಾಂಗ ಹೇಳಿದ್ರ ನೀವು, ಎದ್ದು ಬಂದು ಎದಿಗೆ ಒದಿಬ್ಯಾಡ್ರಿ. ಒದ್ರು ಓಕೆ. ಸತ್ಯಾ ಹೇಳಿ ಒದಿಸಿಕೊಂಡ ನಮ್ಮ ಮುತ್ಯಾನ ಪ್ರತಿಮೆ ಆಗ್ಯಾನ. ನಾ ಯಾವ ಮೂಲಿ ಕಳೆಯೊಳಗಿನ ಮೂಲಂಗಿ. ಈ ಸಲ ಲೈನ್ ಬಗ್ಗೆ ಒಂದಿಷ್ಟು ಅಕ್ಷರಾ ಉದರಸ್ತೀನಿ. ಓದೋ ಮನಸಿದ್ರ ಓದ್ರಿ; ಇಲ್ಲಂದ್ರ ಉದುರಿಸಿದ ಅಕ್ಷರ ಉದುರಿ ಬಿದ್ದು ಕಳೆ ಆಗ್ತಾವ, ಇಲ್ಲಾ ಬೆಳೆ ಆಗ್ತಾವ!

ಲೈನ್ ನಮಗೇನು ಹೊಸಾದೇನ್ರಿ? ಇಲ್ಲ ಬಿಡ್ರಿ. ಲೈನ್ ಹೊಡೆಯೋದ್ರಿಂದ ಲೈನ್ ದಾಗ ನಿಲ್ಲೋದು ಎಲ್ಲಾನೂ ನಮಗ ಗೊತ್ತಿರೊ ಭಪ್ಪರೆ ಆರ್ಟ್. ಲೈನ್ ವಿಷಯಕ್ಕ ಬಂದರ ಚಿಮಣಿ ಎಣ್ಣಿಯಿಂದ ರೇಷನ್ ಅಕ್ಕಿ-ಸಕ್ಕರಿ ತಗೊಳ್ಳಾಕೂ ನಮ್ಮದು ಲೈನ್ ಸಂಸ್ಕೃತಿ. ಅದ್ಯಾವದೋ ಕನ್ನಡದ ಮನಷ್ಯಾ ರಷ್ಯಾದಾಗ ಭಾಳ ಹಿಂದ ಕ್ಯಾಟೀನ್ ಊಟಕ್ಕೂ ಗಂಟೆಗಟ್ಟಲೆ ಲೈನ್ ಹಚಗೊಂಡು ನಿಂತಿದ್ದರ ಬಗ್ಗೆ ಬರದಿದ್ದಾ. ಆ ಆಸಾಮಿ ಹೆಸರು ನೆಪ್ಪಾಗ್ತಿಲ್ಲ, ಆದ್ರ ಆ ಮನಷ್ಯಾ ರಷ್ಯಾದಾಗಿನ ಲೈನ್ ವಿಷಯಾನ ಮಸ್ತಾಗಿ ತಿಳಿ ಹೇಳಿದ್ದ. ಪುಕ್ಕಟೆ ಇಲ್ಲಾ ಕಡಿಮಿ ರೇಟಿಗೆ ಏನಾರ ಕೊಡತೀವಿ ಅಂತ ಯ್ಯಾರರ ಹೇಳಿದ್ರ ಲೈನ್ ನಮಗ ಕಾಮನ್. ನಿನ್ನೆನ ನೋಡ್ರಿ ಮೈಸೂರಿನ್ಯಾಗ ಒಂದು ರೂಪಾಯಿಗ ಪಾನಿಪುರಿ, ಎರಡು ರೂಪಾಯಿಗ ಮಸಾಲಪುರಿ ಕೊಡತಾರ ಅಂದ್ರ, ಲೈನ್ ಕಿತ್ತು ಹೋಗೋಹಂಗ ಜನಾ ಜಮಾಯಿಸಿದ್ರು. ಕೊನಿಕೊನಿಗ ಪೋಲಿಸ್ರು ಬಂದು ಬವರು ಸುರಿಸಿ ಜನಪುರಿ ಪ್ರಿಯರನ್ನ ಲೈನಿನ್ಯಾಗ ನಿಲ್ಲಸಬೇಕಾತು. ಲೈನ್ ವಿಷಯಕ್ಕ ಬಂದ್ರ ಗುರವಾರ ಒಬ್ಬ ಸ್ವಾಮಿ ಮಠಕ್ಕ ಹೋದ್ರ ಗೊತ್ತಾಗತ್ತ. ಅಲ್ಲಿ ದೇವರ ದರ್ಶನಕ್ಕ ನಿಲ್ಲೋ ಲೈನ್‍ಮನ್‍ಗಳು ಹಾಗೂ ಲೈನ್‍ಮನ್ನಿಯರು ಅವರ ನಡುವ ಲೈನ್ ಹೊಡಿಯ್ಯಾಕ ನಿಲ್ಲೋ ಲವ್ ಲೆನ್ಸ್ ಮನ್ ನೋಡಿದ್ರ ನಮಗ ಲೈನ್ ವಿಷಯ ದೊಡ್ಡದೇನಲ್ಲ ಅನಸ್ತದ.

ದಕ್ಷಿಣ ಕರ್ನಾಟಕ ಭಾಗದಾಗಿನ ದೇವಸ್ತಾನದಾಗ ದಿನಾನೂ ನಸಕಿನ್ಯಾಗಿಂದ ಕ್ಯೂವ್‍ನ್ಯಾಗ ನಿಲ್ಲೋ ಸಾವಿರಾರು ಮಂದಿನ್ನ ನೋಡಿದ್ರಂತೂ ಸಾಲಿನ್ಯಾಗ ನಿಲ್ಲೊದು ನಮ್ಮ ಮಂದೀಗ ಸವಾಲಂತೂ ಅಲ್ಲ. ಆ ಬಣ್ಣದ ಕಾರ್ಡು – ಈ ಬಣ್ಣದ ಕಾರ್ಡು ಅಂತ ರೇಷನ್ ಅಂಗಡಿ ಮುಂದ ಸಾಲಿನ್ಯಾಗ ನಿಲ್ಲೊ ಮಂದಿ ಮುಂದ ಯಾವ ಟಿವಿ ನ್ಯೂಸ್ ಕ್ಯಾಮರಾ ಇರಂಗಿಲ್ಲ. ಆದ್ರ, ನವೆಂಬರ್ ಎಂಟರ ಮರದಿನಾ ನೋಡಬೇಕು. ಅಲ್ಲಿ ಲೈನ್, ಇಲ್ಲಿ ಲೈನ್… ಅಂತ ಲಬೊ ಲಬೊ ಅಂತ ಬಡಕೊಳ್ಳಾಕ ಶುರು ಮಾಡಿದ್ರು. ಲೈನ್ ನೋಡಬೇಕಂದ್ರ ಬರ್ರಿ ಆ ನಾಗಪ್ಪನ ಹೆಸರಿನ ದೇವಸ್ತಾನದಾಗ, ಲೈನ್ ನೋಡಬೇಕಂದ್ರ ಬರ್ರಿ ಆ ದೊಡ್ಡಣ್ಣಪ್ಪನ ದೇವಸ್ತಾನದಾಗ, ಲೈನ್ ನೋಡಬೇಕಂದ್ರ ಬರ್ರಿ ಆ ಸಮಾಧಿ ಮಹಾತ್ಮನ ಮಠದಾಗ, ಲೈನ್ ನೋಡಬೇಕಂದ್ರ ಬರ್ರಿ ಆ ಶ್ರೀಮಂತ ದೇವಸ್ಥಾನದಾಗ, ಲೈನ್ ನೋಡಬೇಕಂದ್ರ ಬರ್ರಿ ಆ ಎಣ್ಣೆ ಸುರಿಯೋ ಕಲ್ಲಿನ ದೇವಸ್ತಾನದಾಗ, ಲೈನ್ ನೋಡಬೇಕಂದ್ರ ಬರ್ರಿ ಗುರವಾರ, ಶನಿವಾರ ವಾರಕ್ಕ ಯೋಗ್ಯರಾದ ದೇವರ ಗುಡಿನ್ಯಾಗ. ಬೆಳಗಿನ ಫ್ಲೈಟ್ ಹಿಡಿಯ್ಯಾಕ ವಿಮಾನ ನಿಲ್ದಾಣದಾಗ, ಸಾಲು ರಜೆ ಬಂದಾಗ ರೈಲ್ವೇ ಮತ್ತ ಬಸ್ ಸ್ಟ್ಯಾಂಡಿನ್ಯಾಗ… ಆಗ ಗೊತ್ತಾಗತ್ತದ, ಕ್ಯೂವ್ ಹಚಗೊಂಡು ನಿಲ್ಲೋದು ನಮ್ಮ ಮಂದೀಗ ಭಾಳ ಕಷ್ಟ ಆಗೋಹಂಗನ ಇಲ್ಲ!

long-q

ಪಾಳೇನ್ಯಾಗ ನಿಲ್ಲೋದು ದೊಡ್ಡ ವಿಷಯಾನ ಅಲ್ಲ. ಆದಾವುದೋ ಪಕ್ಷದ ದೊಡ್ಡ ಮನಷ್ಯಾ ಪಾಳೇನ್ಯಾಗ, ಅಂದ್ರ ಲೈನಿನ್ಯಾಗ ನಿಂತ ಅಂತ ಈ ಚಾನಲ್ಲೋರು ಜೋರಾಗಿ ಸುದ್ದಿ ಹೊಡದ್ರು. ಇನ್ನ ಅದ್ಯಾವದೋ ದೊಡ್ಡ ಮನಷ್ಯಾನ ಅವ್ವ ಲೈನಿನ್ಯಾಗ ನಿಂತು ರೊಕ್ಕಾ ತೊಗೊಂಡ್ಳು ಅಂತಾನೂ ಅರ್ಧಾತಾಸು ಸುದ್ದಿ ಬಡಕೊಂಡ್ರು. ಸಾಲಿನ್ಯಾಗ ನಿಲ್ಲೋದೇನರ ಸುದ್ದಿ ಮಾಡೋ ವಿಷಯಾ ಏನ್ರಿ?! ಪಾಳೇನ್ಯಾಗ ನಿಂತಕೊಳ್ರಿ ಅಂತ ಬಿಸಿಯೂಟ ಬಡಸೊ ಅಕ್ಕೋರೂ (ಲೇಡಿ ಟೀಚರ್) ಹೇಳತಾರ. ಆದ್ರ ಹದಿನೈದು ದಿವಸ ಆತು ಅದೇನು ವಾರ್ತಾ ಬರಾಕ ಹತ್ಯದ, ಲೈನ್…ಲೈನ್…ಕ್ಯೂವ್…ಕ್ಯೂವ್… ಕೇಳಿ ಕೇಳಿ ತಲಿ ಕೆಟ್ಟು ಹೋಗ್ಯದ. ಅವರ ರೊಕ್ಕಾ ಅವರೀಗ ಬೇಕು, ಲೈನಿನ್ಯಾಗ ನಿಂತಾರ. ಅದು ಭಾಳ ಕಷ್ಟ ಅಂತಪಾ, ಕೇಳ್ರಪಾ. ಅವರ ಭಕ್ತಿ ಅವರ ದಕ್ಷಿಣೆ; ಪಾಳೇನ್ಯಾಗ ನಿಂತಾರ ಅವರಿಗೆಲ್ಲ ಕಷ್ಟ ಆಗಾಕ ಹತ್ಯದ ಅಂತ ಪರಮಾತ್ಮಗ ಒಂದು ಕಂಪ್ಲೆಂಟ್ ಹಾಕಿ ಒಂದು ಅರ್ಧ ತಾಸು ನ್ಯೂಸ್ ಹೊಡಿಲಿ ನೋಡಣ. ರೇಷನ್ ಅಂಗಡಿ ಮುಂದ ಕಡಿಮಿ ರೊಕ್ಕಕ್ಕ ರೈಸ್ ತಗೊಳ್ಳಾಕ ಲೈನ್‍ನ್ಯಾಗ ನಿಂತಾರ ಅಂತ ಲಬೊ…ಲಬೊ ಬಡಕೊಂಡಿದ್ದಂತೂ ನಾನು ನೋಡಿಲ್ಲ.

ಉತ್ತರ ಕರ್ನಾಟಕದಾಗ ಲೈನಿನ್ಯಾಗ ನಿಂತು ಕೈಪಂಪು ಬೋರ್‍ವೆಲ್ ನೀರು ತಗೊತಾರ ಅಂತ ಬಡಕೊಳ್ಳಲಿಲ್ಲ. ಗದಗ ಜಿಲ್ಲ್ಯಾಗ ಬರಬಾರದ ರೋಗ ಬಂದು ಸರಕಾರಿ ಆಸ್ಪತ್ರ್ಯಾಗ ಜನಾ ಲೈನಿನ್ಯಾಗ ನಿಂತಿದ್ರ ಯಾರೂ ಏನಾತಂತ ಕೇಳಲಿಲ್ಲ. ಈಗ ಬೆಂಗಳೂರಿನ್ಯಾಗಿನ ಒಂದಿಷ್ಟು ಎಟಿಎಂ ಮತ್ತ ಬ್ಯಾಂಕ್ ಚಿತ್ರಾ ತೋರಿಸಿ ಪಾಳೇನ್ಯಾಗ ನಿಂತವ್ರಿಗ ಕಷ್ಟ ಆಗಾತೈತಿ ಅಂತ ಮತ್ತ ಮತ್ತ ಮತ್ತೇರಿದವರಹಾಂಗ ಹೇಳಾಕ ಅದೆಲ್ಲಿಂದ ಬಂತಪ್ಪಾ ಇವರಿಗೆ ತಾಕತ್ತು. ಲೈನಿನ್ಯಾಗ ನಿಂತವ್ರು, ಲೈನಿನ್ಯಾಗ ನಿಲ್ಲದವ್ರು ಎಲ್ಲಾರಿಗೂ ಒಂದ ರೀತಿ ನ್ಯಾಯ. ಅದು ಈಗಿನ ರೊಕ್ಕದ ವಿಷಯ. ಬಡವರ ದೇಶಾ ನಮ್ಮದು ಅಂತ ಬಡಕೊಂಡಿದ್ದು ನೋಡಿದ್ರ ಖರೇನ ನಮ್ಮ ದೇಶ ಬಡವರದ್ದು ಅಂತ ಅನಿಸಿತ್ತು. ಆದ್ರ ಒಂದು ದಿನಗೂಲಿ ಮಾಡೋ ಕೆಲಸಕ್ಕ ಹತ್ತು ದಿನಗೂಲಿಗಳನ್ನ ಹಚ್ಚಿದ್ದ ಮೇಸ್ತ್ರಿ ಹತ್ತು ಲಕ್ಷ ಹ್ಯಾಂಗ ಹೊಸಾ ರೊಕ್ಕಾ ಮಾಡೋದ್ರಿ ಸರ ಅಂತ ಕೇಳಿದಾಗ ಮನದೊಳಗ ನಕ್ಕಿದ್ದೆ. ನಕ್ಕಿದ್ದು ಯ್ಯಾಕ ಗೊತ್ತೇನು? ನಮ್ಮದು ಬಡವರ ದೇಶ ಅಲ್ಲ ಅಂತ.

ಭಾಂಡೆ ತೊಳೆಯ್ಯಾಕ ಬರೊ ಹೆಣ್ಣಮಗಳೂ ಕೇಳಿದ್ಲು ನನ್ನಕಡೀಗ ಕ್ಯಾಷ್ ಐತಿ ಅದನ್ನ ಹೊಸಾ ರೊಕ್ಕಾ ಮಾಡೋದು ಹೆಂಗ ಅಂತ! ಅಂತೂ ನಮ್ಮ ದೇಶ ಬಡವರ ದೇಶ ಅಲ್ಲಂತ ಗೊತ್ತಾತಲ್ಲ. ಇನ್ನ ಪಾಳೇನ್ಯಾಗ ನಿಲ್ಲೊ ವಿಷಯ; ಮೊದಲ ಹೋಗಿ ಎಲ್ಲಾ ದೇವಳದ ಲೈನ್ ಮತ್ತ ಕ್ಯೂವ್‍ನ್ಯಾಗ ನಿಂತರವ ಲೆಕ್ಕಾ ಹಾಕ್ರಿ. ಆಮೇಲ ಬಂದು ಅರ್ಧಾ ತಾಸು ಟಿವಿನ್ಯಾಗ ಬಡಕೊಳ್ರಿ!

Comments are closed.

Social Media Auto Publish Powered By : XYZScripts.com