ಸಖೀಗೀತ -2 : ಉದಯವಾಗುತ್ತಲೇ ಇರಲಿ ಚೆಲುವ ಕನ್ನಡನಾಡು

geetha-vasanth

‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಎಂಬ ಹುಯಿಲಗೋಳ ನಾರಾಯಣರಾವ್ ಅವರ ಮಾತುಗಳು ಮಂತ್ರದಂತೆ ಮೊಳಗುತ್ತ ಒಳಗಣ್ಣು  ಉದ್ದೀಪಿಸುತ್ತಿದ್ದ ಕಾಲವದು. ಕನ್ನಡ-ಕರ್ನಾಟಕ-ಕರ್ನಾಟಕತ್ವ ಎಂಬ ಪರಿಕಲ್ಪನೆ ಹಲವು ಆಯಾಮಗಳನ್ನು ಪಡೆದುಕೊಂಡು ದೃಢಗೊಂಡ ಕಾಲ. ಕರ್ನಾಟಕದ ಆಧುನಿಕ ಚರಿತ್ರೆಯಲ್ಲಿ ‘ಕರ್ನಾಟಕ ಏಕೀಕರಣ’ ಮಹತ್ವದ ಮೈಲಿಗಲ್ಲು. ‘ಕರ್ನಾಟಕ’ ಎಂಬ ಪರಿಕಲ್ಪನೆಯ ಜೊತೆ ‘ಕನ್ನಡಿಗರು’ ಎಂಬ ಪರಿಕಲ್ಪನೆಯೂ ಬೆಳೆಯುತ್ತ ಹೋಯಿತು. ಇಂದು ನಾವು ಈ ಅಸ್ಮಿತೆಯನ್ನು ಬಲವಾಗಿ ಪ್ರತಿಪಾದಿಸುತ್ತೇವೆ. ಕನ್ನಡ ಸಂಘಟನೆಗಳು, ಕನ್ನಡ ಚಳುವಳಿ ಬೆಳೆಯುತ್ತ ‘ಕನ್ನಡ’ ಎಂಬುದು ಭಾವನಾತ್ಮಕ ಅಸ್ಮಿತೆಯಾಗಿ ಮಾತ್ರ ಉಳಿಯದೇ ರಾಜಕೀಯ ಅಸ್ಮಿತೆಯೂ ಆಗಿದೆ.

ನವಂಬರ್ ಬಂತೆಂದರೆ ಕನ್ನಡದ ಚರ್ಚೆಗಳು ಕಾವೇರುತ್ತವೆ. ಈ ಸಲವಂತೂ ಕಾವೇರಿ ಕಾವು ಬೇರೆ! ಭಾಷಾ ಅಸ್ಮಿತೆಯು ಗಡಿ, ನೆಲ, ಜಲ, ಸಂಸ್ಕೃತಿ ಇತ್ಯಾದಿ ಮೂರ್ತ-ಅಮೂರ್ತ ಸಂಗತಿಗಳೊಂದಿಗೆ ಬೆಸೆದುಕೊಂಡಿರುವುದರಿಂದ ಅರಿಯದ ಉದ್ವಿಗ್ನತೆಯೊಂದು ತಂತಾನೇ ವಾತಾವರಣದಲ್ಲೊಂದು ಕಿಡಿ ಕಾವುಗೊಳ್ಳುವಂತೆ ಮಾಡುತ್ತಿರುತ್ತದೆ. ಇಂದಿನ ಈ ಸ್ಥಿತಿಯನ್ನು ಅರಿಯಲು ಚಾರಿತ್ರಿಕ ಬೆಳವಣಿಗೆಯನ್ನು ಒಮ್ಮೆ ಮೆಲಕು ಹಾಕುವುದು ಅಗತ್ಯವೆನಿಸುತ್ತದೆ. ಸ್ವಾತಂತ್ರ್ಯಾನಂತರ ಭಾರತವನ್ನು ಆಡಳಿತಾತ್ಮಕ ಘಟಕಗಳನ್ನಾಗಿ ವಿಭಜಿಸುವಾಗ ಯಾವ ಮಾನದಂಡಗಳನ್ನು ಇರಿಸಿಕೊಳ್ಳಬೇಕೆಂಬ ಪ್ರಶ್ನೆ ಎದುರಾಯ್ತು. ಪ್ರಾಕೃತಿಕವಾದ ವಿಭಜನೆ ಅಂಥ ಒಂದು ಸಾಧ್ಯತೆಯಾಗಿತ್ತು. ನೈಸರ್ಗಿಕವಾದ ಬೃಹತ್ ಪರ್ವತಶ್ರೇಣಿಗಳು, ನದಿಗಳು ಈ ದೇಶವನ್ನು ಹಲವಾರು ಬಗೆಯಲ್ಲಿ ವಿಭಜಿಸಿದ್ದವು. ಭಾಷಾಧಾರಿತವಾಗಿ ರಾಜ್ಯಗಳನ್ನು ನಿರ್ಮಾಣ ಮಾಡುವ ಮತ್ತೊಂದು ಸಾಧ್ಯತೆಯ ಕುರಿತು ಪ್ರಮುಖ ಚರ್ಚೆಗಳಾದವು.

kannada flag

ಆ ಸಮಯದಲ್ಲಿ ಆಡಳಿತ ನಡೆಸುತ್ತಿದ್ದ ಸರಕಾರವು ಒಂದು ಸಮಿತಿಯನ್ನು ರಚಿಸಿ ಭಾಷಾಧಾರಿತ ವಿಭಜನೆಯ ಸಾಧಕ-ಬಾಧಕಗಳನ್ನು ಸಮಗ್ರವಾಗಿ ವಿವೇಚಿಸಿ ವರದಿನೀಡಲು ನಿಯುಕ್ತಿಗೊಳಿಸಿತು. ಭಾಷೆಯನ್ನು ಆಧರಿಸಿ ರಾಜ್ಯಗಳ ನಿರ್ಮಾಣ ಮಾಡುವಲ್ಲಿ ಅನೇಕ ಸೂಕ್ಷ್ಮ ಸಮಸ್ಯೆಗಳು ಎದುರಾದವು. ಭಾರತೀಯ ಭಾಷೆಗಳು ಎಷ್ಟಿವೆ? ಅವುಗಳಲ್ಲಿ ಯಾವುದು ಸ್ವತಂತ್ರ ಭಾಷೆ? ಯಾವುದು ಉಪಭಾಷೆ? ಲಿಪಿಬದ್ಧ ಭಾಷೆಗಳು ಯಾವವು? ಎಂಬೆಲ್ಲ ಅಧ್ಯಯನಗಳ ಕೊರತೆ ಒಂದೆಡೆಯಾದರೆ, ಕೆಲವು ಭಾಷೆಗಳನ್ನು ಮಾತನಾಡುವ ಜನರು ದೇಶದಾದ್ಯಂತ ವಿಸ್ತರಿಸಿರುವುದು ಇನ್ನೊಂದು ಸಮಸ್ಯೆಯಾಗಿತ್ತು. ಉದಾಹರಣೆಗೆ, ಹಿಂದಿ, ಉರ್ದು ಭಾಷಿಕರು. ಭೌಗೋಳಿಕ ವಾಸ್ತವ ಹಾಗೂ ಭಾಷೆಯ ಚಲನಶೀಲತೆಯನ್ನು ಒಂದುಮಾಡಿ ನೋಡುವಲ್ಲಿ ತೊಡಕುಗಳಿದ್ದವು. ಇವೆಲ್ಲ ಗೊಂದಲಗಳ ನಡುವೆಯೂ ಭಾಷಾವಾರು ಪ್ರಾಂತ್ಯಗಳು ರಚನೆಯಾದವು.

ಹಾಗೆ ಉದಯಿಸಿದ ಕರ್ನಾಟಕ-ಕನ್ನಡ-ಕನ್ನಡಿಗ ಈ ತ್ರಿಕೋನ ರಚನೆಗೆ ಭಾವನಾತ್ಮಕ ಆಯಾಮವನ್ನು ಸೃಷ್ಟಿಸುವ ಕೆಲಸ ಆಕಾಲದಲ್ಲಿ ನಡೆಯಿತು. ಆಲೂರು ವೆಂಕಟರಾಯರು, ಬಿ.ಎಂ.ಶ್ರೀ, ಗೋವಿಂದ ಪೈ, ಸಕ್ಕರಿ ಬಾಳಾಚಾರ್ಯ ಮುಂತಾದವರು ಕನ್ನಡದ ಅಭಿಮಾನವು ತಲೆಯೆತ್ತುವಂಥ ಕೆಲಸಗಳನ್ನು ತಮ್ಮದೇ ಆದ ರೀತಿಯಲ್ಲಿ ಮಾಡಿದರು. ಕನ್ನಡ ಭಾಷೆಯ ಪ್ರಾಚೀನತೆಯನ್ನು ಕುರಿತು ಸಂಶೋಧನೆಗಳು ಪ್ರವರ್ಧಮಾನಕ್ಕೆ ಬಂದವು. ಕ್ರೈಸ್ತ ಮಿಷನರಿಗಳು, ವಿದೇಶೀ ವಿದ್ವಾಂಸರು ನಡೆಸಿದ ನಿಘಂಟು ನಿರ್ಮಾಣ, ಕನ್ನಡದ ಸಾಹಿತ್ಯ ಹಾಗೂ ಶಾಸ್ತ್ರಗ್ರಂಥಗಳ ಸಂಗ್ರಹ ಕಾರ್ಯವನ್ನು ಉತ್ಸಾಹದಿಂದ ಮುಂದುವರೆಸಲಾಯಿತು. ಸಾಹಿತ್ಯದಲ್ಲಿ ಹೊಸಗನ್ನಡದ ಅರುಣೋದಯವುಂಟಾಗಿ ಭಾವಗೀತದ ಮಾದರಿಗಳು ಆರಂಭವಾದವು. ನಾಡು-ನುಡಿಗಳ ಅಭಿಮಾನವನ್ನು ಉದ್ದೀಪಿಸುವಂತಹ ಗೀತೆಗಳು ರಚನೆಗೊಂಡವು. ಅವುಗಳಲ್ಲಿ ಕನ್ನಡನಾಡಿನ ವಿಸ್ತಾರ, ಹಿರಿಮೆ, ಸಮೃದ್ಧತೆ, ಸಾಂಸ್ಕೃತಿಕ ಶ್ರೀಮಂತಿಕೆಗಳನ್ನು ಪದೇಪದೇ ಪುನರುಚ್ಚರಿಸಲಾಯಿತು. ನದಿ, ಪರ್ವತಗಳು ಕೂಡ ಭಾವನಾತ್ಮಕ ಪರಿಧಿಯೊಳಗೆ ಬಂದವು. ಕರ್ನಾಟಕದ ರಾಜಮನೆತನಗಳು, ಆಳಿದ ರಾಜರುಗಳನ್ನು ಉಲ್ಲೇಖಿಸುತ್ತ ಅವರ ಶೌರ್ಯ, ಔದಾರ್ಯಗಳನ್ನು ವಿಜ್ರಂಭಿಸಲಾಯಿತು.

b-m-shri-and-govind-pai

ಸಾಂಸ್ಕೃತಿಕ ಅಸ್ಮಿತೆಯನ್ನು ಕಟ್ಟುವ ನಿಟ್ಟಿನಲ್ಲಿ ಸಂಗೀತ, ನೃತ್ಯ, ನಾಟಕ ಇತ್ಯಾದಿ ಶಾಸ್ತ್ರೀಯ ಹಾಗೂ ಜನಪದ ಕಲಾಪ್ರಕಾರಗಳನ್ನು ಮುನ್ನೆಲೆಗೆ ತರುವ ಕೆಲಸವಾಯಿತು. ವೃತ್ತಿರಂಗಭೂಮಿಯ ಆರಂಭ ಕಾಲದಲ್ಲಿ ಕನ್ನಡದ ನಾಟಕಗಳಾಗಲೀ, ಕನ್ನಡಿಗರಿಂದ ನಡೆಯುವ ವೃತ್ತಿ ನಾಟಕ ಕಂಪನಿಗಳಾಗಲೀ ಇರಲಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಮರಾಠಿ ನಾಟಕಗಳು ಜನರನ್ನು ಆಕರ್ಷಿಸಿದ್ದವು. ಇಂಥ ಸಂದರ್ಭದಲ್ಲಿ ಸಕ್ಕರಿ ಬಾಳಾಚಾರ್ಯರು ಕನ್ನಡ ನಾಟಕಗಳನ್ನು ಬೆಳೆಸಲು ಕಟಿಬದ್ಧರಾದರು. ಗುಬ್ಬಿ ವೀರಣ್ಣನವರಂಥ ಪ್ರತಿಭೆಗಳ ಸಂಘಟಿತ ಪ್ರಯತ್ನದಿಂದ ಅಚ್ಚಗನ್ನಡ ಸಂವೇದನೆಯ ನಾಟಕಗಳು ರಾಜ್ಯಾದ್ಯಂತ ಪ್ರಯೋಗಗೊಳ್ಳತೊಡಗಿದವು. ಸಾಂಸ್ಕೃತಿಕವಾಗಿ, ಚಾರಿತ್ರಿಕವಾಗಿ ಕರ್ನಾಟಕವನ್ನು ಪುನಾರಚಿಸುವ ಸ್ಪಷ್ಟ ಉದ್ದೇಶ ಈ ಎಲ್ಲ ಚಟುವಟಿಕೆಗಳ ಹಿಂದೆ ಇತ್ತು. ಈ ಉದ್ದೇಶದ ಸಾಫಲ್ಯಕ್ಕೆ ಬುನಾದಿಯಾಗಿದ್ದು ಮಾತೃ ಭಾಷೆಯೆ.

raj-kannada

ಇಂದಿನ ಮುಖ್ಯ ಭಾಷೆಗಳಲ್ಲಿ ಒಂದಾದ ಸಿನಿಮಾ ಕೂಡ ಕನ್ನಡವೆಂಬ ಅರಿವನ್ನು ಕಟ್ಟುವಲ್ಲಿ ವಿಶೇಷ ಪಾತ್ರವಹಿಸಿದೆ. ಸ್ಕೂಲ್ ಮಾಸ್ಟರ್, ಗಂಧದಗುಡಿಯಂತಹ ಸಿನಿಮಾಗಳನ್ನು ಇಲ್ಲಿ ಕೆಲ ಉದಾಹರಣೆಯಾಗಿ ಹೆಸರಿಸಬಹುದು. ಕನ್ನಡಿಗರ ಸಹೃದಯತೆ, ನೈತಿಕಶಕ್ತಿ, ಸ್ವಾಭಿಮಾನಗಳನ್ನು ಪ್ರತಿನಿಧಿಸುವಂತಹ ‘ನಾಯಕ’ನನ್ನು ಆರಂಭದ ಕನ್ನಡ ಚಲನಚಿತ್ರಗಳು ಕಟ್ಟುವ ಪ್ರಯತ್ನ ಮಾಡಿವೆ. ಅಂತಹ ಪ್ರಮುಖ ಚಿತ್ರಗಳಲ್ಲಿ ಅಭಿನಯಿಸಿದವರು ಡಾ.ರಾಜ್‍ಕುಮಾರ್. ಆದ್ದರಿಂದಲೇ ಅವರು ಕನ್ನಡಿಗರ ಐಕಾನ್ ಆಗಿ ರೂಪುಗೊಳ್ಳುತ್ತ ನಡೆದರು. ಮುಂದೆ ಚಳುವಳಿಗಳ ಸಂದರ್ಭದಲ್ಲಿಯೂ ಇವರ ಇಮೇಜನ್ನು ಬಳಸಿಕೊಳ್ಳಲಾಯಿತು. ಇತ್ತೀಚಿನ ಕಾವೇರಿ ಪ್ರತಿಭಟನೆಯ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ನಟರಾದ ಪ್ರಕಾಶ್ ರೈ ಹಾಗೂ ಯುವ ಐಕಾನ್ ಆಗಿ ಜನಪ್ರಿಯರಾಗುತ್ತಿರುವ ಯಶ್ ಅನುಭವಿಸಿದ ಒತ್ತಡಗಳ ಹಿಂದೆ ಇಂಥ ಅಮೂರ್ತ ಭಾವನಾತ್ಮಕ ಹಿನ್ನೆಲೆಯ ಪ್ರೇರಣೆಯಿದೆ.

kannada-film

‘ನೀರು ಹಂಚಿಕೆಯ ಸಮಸ್ಯೆಯ ಕುರಿತು ಮಾತನಾಡಲು ವಿಜ್ಞಾನಿಗಳು, ಪರಿಸರ ತಜ್ಞರು, ಕಾನೂನು ತಜ್ಞರಿದ್ದಾರೆ. ಸಮಸ್ಯೆಯ ಸ್ಪಷ್ಟ ಅರಿವು ಹಾಗೂ ರಾಜಕೀಯ ಇಚ್ಛಾಶಕ್ತಿ ಈ ಸಂದರ್ಭದ ಅಗತ್ಯ…’ ಎಂಬರ್ಥದ ಅವರ ಸಹಜವಾದ ಉತ್ತರವನ್ನು ಕನ್ನಡ-ಕನ್ನಡಿಗರ ಬಗೆಗಿನ ನಿರ್ಲಕ್ಷ್ಯ ಧೋರಣೆಯೆನ್ನುವಂತೆ ಬಿಂಬಿಸುವ ಪ್ರಯತ್ನಗಳು ನಡೆದವು. ಇಲ್ಲೆಲ್ಲ ಕನ್ನಡಾಭಿಮಾನ ಎಂಬ ಪರಿಕಲ್ಪನೆ ರಾಜಕೀಯ ಹಾಗೂ ಭಾವನಾತ್ಮಕ ನೆಲೆಗಳಲ್ಲಿ ಸಂಕೀರ್ಣವಾಗಿ ಬೆರೆತು ಸಮಸ್ಯಾತ್ಮಕವಾಗಿಬಿಡುತ್ತದೆ. ಇತ್ತೀಚೆಗೆ ನಡೆದ ಸರಣಿ ಬಂದ್‍ಗಳು, ಪ್ರತಿಭಟನೆ, ಹಿಂಸಾಚಾರ, ಭಾಷಿಕ ಅಸಹಿಷ್ಣುತೆ ಎಲ್ಲವೂ ‘ಕರ್ನಾಟಕತ್ವ’ದ ಇನ್ನೊಂದು ಮಗ್ಗಲು. ಭಾಷಾ ಅಸ್ಮಿತೆಯ ಮೂಲಕ ರಾಜಕಾರಣವು ರೂಪುಗೊಂಡಾಗ ಸಮಸ್ಯೆಗಳು ಇನ್ನಷ್ಟು ಕಗ್ಗಂಟಾಗುತ್ತವೆ. ಸರಕಾರಗಳು ಕೂಡ ಸಂದಿಗ್ಧತೆಯನ್ನು ಎದುರಿಸಬೇಕಾಗುತ್ತದೆ. ‘ಜನಹಿತ’, ‘ಜನಾಭಿಪ್ರಾಯ’ ಎಂಬ ದೊಡ್ಡಧ್ವನಿಗಳಲ್ಲಿ ಸೂಕ್ಷ್ಮತೆಗಳು ಅಳಿಸಿಹೋಗುತ್ತವೆ. ಇಂಥ ಗದ್ದಲದಲ್ಲಿ ಕನ್ನಡವನ್ನು ಕಟ್ಟುವುದೆಂದರೇನು? ಕನ್ನಡದ ಮೂಲಕ ನಮ್ಮನ್ನು ಕಟ್ಟಿಕೊಳ್ಳುವುದು ಹೇಗೆ? ಎಂಬ ಪ್ರಶ್ನೆಗಳು ಹಾಗೆಯೇ ಉಳಿದುಬಿಡುತ್ತವೆ.

ದೇಶದ ಸಮಗ್ರತೆಯ ಹಿನ್ನೆಲೆಯಲ್ಲಿಯೇ ಕನ್ನಡ, ಕರ್ನಾಟಕತ್ವವನ್ನು ನೋಡಬೇಕಾದ ಜವಾಬ್ದಾರಿಯನ್ನು ಭಾಷಾಚಳುವಳಿಗಳು ಅರ್ಥಮಾಡಿಕೊಂಡಿರಬೇಕಾಗುತ್ತದೆ. ಕುವೆಂಪು ಹೇಳುವಂತೆ, ‘ಭಾರತ ಜನನಿಯ ತನುಜಾತೆ’ಯಾಗಿ ಕರ್ನಾಟಕ ಮಾತೆ ಇದ್ದಾಳೆ! ದೇಶದ ಬಹುತ್ವ ಹಾಗೂ ಕರ್ನಾಟಕದೊಳಗೇ ಇರುವ ಭಾಷಿಕ ಬಹುತ್ವಗಳನ್ನು ಸಹಿಷ್ಣುತೆಯಿಂದ ಕಾಣದಿದ್ದರೆ ಅಪಾಯ ತಪ್ಪಿದ್ದಲ್ಲ. ಕರ್ನಾಟಕದೊಳಗೇ ಕೊಂಕಣಿ, ಕೊಡವ, ತುಳು, ಉರ್ದು, ಬ್ಯಾರಿ, ಮುಂತಾಗಿ ಅನೇಕ ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಅವರ ಸಾಂಸ್ಕøತಿಕ ವೈವಿಧ್ಯಗಳೂ ಇವೆ. ಬಹುಜನರಿಗೆ ಮಾತೃಭಾಷೆಯಾದ ಕನ್ನಡ ಇವರಿಗೆ ರಾಜ್ಯಭಾಷೆ, ಶಿಕ್ಷಣದ ಭಾಷೆಯಾಗುತ್ತದೆ. ಇದು ಭಾಷಾಧಾರಿತ ಏಕತೆಯೊಳಗಿನ ಬಹುತ್ವದ ಅರಿವು.

ಇನ್ನು ಬಾಹ್ಯವಾಗಿ ನೋಡಿದರೆ, ನಮ್ಮ ಜಗತ್ತು ಇಂದು ವಿಸ್ತಾರವಾಗಿದೆ. ಕನ್ನಡಿಗರು ದೇಶದ, ಜಗತ್ತಿನ ಎಲ್ಲೆಡೆ ಹರಡಿದ್ದಾರೆ. ಎಲ್ಲ ಸಂಸ್ಕೃತಿಗಳ ಮುಕ್ತ ಬೆರಕೆ ನಡೆಯುತ್ತಿದೆ. ಇದನ್ನು ಕೊಡು-ಕೊಳುವಿಕೆ ಎಂಬ ಘನತೆಯಲ್ಲಿ ಕಾಣುವುದೋ ಅಥವಾ ನಮ್ಮ ಸಾಂಸ್ಕೃತಿಕ ಅಸ್ಮಿತೆ ನಾಶವಾಗುತ್ತಿದೆಯೆಂದು ಆತಂಕದಿಂದ ನೋಡುವುದೋ? ಎಂಬ ದ್ವಂದ್ವದಲ್ಲಿ ಜನಸಾಮಾನ್ಯರಿದ್ದಾರೆ. ಇದರ ನಡುವೆ ವ್ಯಾವಹಾರಿಕ ಭಾಷೆಯಾದ ಇಂಗ್ಲಿಷ್ ಹೊಸಪೀಳಿಗೆಯನ್ನು ಆವರಿಸಿಕೊಳ್ಳುತ್ತಿದೆ. ಅವರಿಗದು ಜ್ಞಾನದ ಭಾಷೆಯೂ ಹೌದು. ಅವಕಾಶಗಳ ಸಾಧ್ಯತೆಯೂ ಹೌದು. ನಿರ್ದಿಷ್ಟ ಭೂಭಾಗ, ನಿರ್ದಿಷ್ಟ ಭಾಷೆ ಎಂಬ ಸ್ಥಿತಿ ಬದಲಾಗಿ ಜಗತ್ತಿನ ಚಲನಶೀಲತೆಯ ಪ್ರವಾಹದಲ್ಲಿ ತೇಲಿಹೋಗುತ್ತಿರುವ ಸಾಮಾನ್ಯನಿಗೆ ‘ಕನ್ನಡವನ್ನು ಕಟ್ಟುವುದು’,’ಕನ್ನಡವನ್ನು ಉಳಿಸಿ ಬೆಳೆಸುವುದು’ ಎಂಬುದು ಪ್ರಾಥಮಿಕ ಅಗತ್ಯವಾಗಿಲ್ಲ. ಆದ್ದರಿಂದ ಈಗ ಕನ್ನಡ ಅರಿವಿನ ಭಾಷೆಯಷ್ಟೇ ಅಲ್ಲ, ಅನ್ನದ ಭಾಷೆಯೂ ಆಗಬೇಕೆಂಬ ಕೂಗು ಕೇಳುತ್ತಿದೆ. ಕನ್ನಡಿಗರಿಗೆ, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರಿಗೆ ಉದ್ಯೋಗ, ಮೀಸಲಾತಿ ನೀಡುವ ಮೂಲಕ ಮತ್ತೆ ಕನ್ನಡವನ್ನು ಸ್ಥಾಪಿಸಬಹುದೆಂಬ ಪ್ರಸ್ತಾಪಗಳೂ ಎದುರಿಗಿವೆ.

ಕನ್ನಡ ಅರಿವು, ಕನ್ನಡ ಪ್ರಜ್ಞೆ, ಕನ್ನಡ ಸಂಸ್ಕೃತಿ, ಕನ್ನಡ ಸಂವೇದನೆ ಹೀಗೆ ಅಮೂರ್ತ ಪರಿಕಲ್ಪನೆಗಳನ್ನು ಕೂಡ ನಾವು ಭಾಷಾಧಾರಿತವಾಗಿಯೇ ಕಟ್ಟಿಕೊಂಡಿದ್ದೇವೆ. ನಿರ್ದಿಷ್ಟ ಭೌಗೋಳಿಕ ಪರಿಸರದಲ್ಲಿ ವಾಸಮಾಡುವ ಹಾಗೂ ಒಂದೇ ಭಾಷೆಯನ್ನು ಮಾತನಾಡುವ ಜನರು ಸಾಂಸ್ಕøತಿಕವಾಗಿಯೂ ಒಂದಾಗಿರುತ್ತಾರೆ ಎಂಬ ಭಾವನೆ ಇದರ ಹಿಂದಿದೆ. ಭಾಷೆಯು ಅರಿವನ್ನು ಬಿತ್ತುತ್ತದೆ. ಪ್ರಜ್ಞೆಯಾಗಿ ವಿಕಾಸವಾಗುತ್ತದೆ. ಸಂಸ್ಕೃತಿಯಾಗಿ ಹರಡುತ್ತದೆ ಎಂಬುದು ಸತ್ಯವೂ ಹೌದು. ಜೀವಂತ ಪರಂಪರೆಯೊಂದು ಸಾಮೂಹಿಕವಾಗಿ ಮುಂಚಲಿಸುತ್ತಿದೆಯೆಂದಾದರೆ, ಅಲ್ಲಿ ಭಾಷೆಯ ಪಾತ್ರವು ನಿರ್ಣಾಯಕವಾಗಿರುತ್ತದೆ. ಅಮೂರ್ತವಾದ ‘ಕನ್ನಡ’, ‘ಕನ್ನಡ ನಾಡನ್ನು’ ನಮ್ಮ ಗುರುತಾಗಿ ಪರಿವರ್ತಿಸುವಲ್ಲಿ ನಮ್ಮ ನಡೆ ಜವಾಬ್ದಾರಿಯದಾಗಿರಬೇಕಾಗುತ್ತದೆ. ನಮ್ಮ ರಾಜಕಾರಣ, ಚಳುವಳಿಗಳು, ಭಾಷೆ-ಸಂಸ್ಕೃತಿಯ ಸಂವಾದಗಳು ಕನ್ನಡದ ಅಂತಃಸತ್ವವನ್ನು ಅರಗಿಸಿಕೊಳ್ಳುವುದರ ಜೊತೆಗೆ ಚಲನಶೀಲ ಜಗತ್ತಿನ ನಾಡಿಮಿಡಿತವನ್ನೂ ಅರಿತು ಹೊಸ ಅರಿವಿಗೆ ತಕ್ಕಂತ ಕ್ರಿಯಾಶೀಲತೆಯನ್ನು ರೂಢಿಸಿಕೊಳ್ಳಬೇಕಾಗುತ್ತದೆ. ಸೃಜನಶೀಲತೆ ಎಂದಿಗೂ ಸ್ಥಗಿತವಲ್ಲ. ಚೆಲುವ ಕನ್ನಡನಾಡು ಉದಯವಾಯಿತು ಎಂಬುದು ಒಂದು ಚಾರಿತ್ರಿಕ ಘಟನೆ. ಆದರೆ, ಉದಯವಾಗುತ್ತಲೇ ಇರುವ ಚೆಲುವ ಕನ್ನಡನಾಡು ನಮ್ಮ ಆದ್ಯತೆ.

ಡಾ|| ಗೀತಾ ವಸಂತ

5 thoughts on “ಸಖೀಗೀತ -2 : ಉದಯವಾಗುತ್ತಲೇ ಇರಲಿ ಚೆಲುವ ಕನ್ನಡನಾಡು

 • October 20, 2017 at 9:20 PM
  Permalink

  It’s difficult to acquire knowledgeable people about this topic, but the truth is be understood as there’s more you’re referring to! Thanks

 • October 24, 2017 at 12:29 PM
  Permalink

  Unquestionably believe that which you said. Your favorite reason appeared to be on the net the simplest thing to be aware of. I say to you, I certainly get annoyed while people think about worries that they plainly don’t know about. You managed to hit the nail upon the top as well as defined out the whole thing without having side effect , people could take a signal. Will probably be back to get more. Thanks

 • October 24, 2017 at 12:55 PM
  Permalink

  Hi just wanted to give you a quick heads up and let you know a few of the images aren’t loading properly. I’m not sure why but I think its a linking issue. I’ve tried it in two different internet browsers and both show the same outcome.

 • October 25, 2017 at 9:32 AM
  Permalink

  I have been browsing online more than three hours today, but I never discovered any fascinating article like yours. It is beautiful worth sufficient for me. In my view, if all webmasters and bloggers made excellent content as you did, the net will be much more helpful than ever before.

Comments are closed.