ಸಖೀಗೀತ-1 : ಮಣ್ಣಪಾಟಿಯಲ್ಲಿ ಕಣ್ಣಾಗಿ ಮೂಡಿದ ಕನ್ನಡ

  – ಗೀತಾ ವಸಂತ
ಕನ್ನಡ ಎಂದಾಕ್ಷಣ ಚಿತ್ತಭಿತ್ತಿಯಲ್ಲಿ ಮೂಡುವುದು ಮಣ್ಣಪಾಟಿಯ ಮೇಲೆ ಸುಣ್ಣದ ಬಳಪ ಹಿಡಿದು ನುಣ್ಣಗೆ ಅಕ್ಷರ ತಿದ್ದುವ ಕಪ್ಪು-ಬಿಳುಪು ನೆನಪುಗಳು. ಅಪ್ಪ ಪೇಟೆಯೆಂಬೋ ವಿಸ್ಮಯ ಲೋಕದಿಂದ ತಂದುಕೊಟ್ಟ ಕಪ್ಪು ಪಾಟಿಗೆ ಬಿಳಿಯ ಚೌಕಟ್ಟು. ಮೊದಲಸಲ ಅದನ್ನು ಮುಟ್ಟುವಾಗ ತಣ್ಣಗಿತ್ತು. ಯಾವುದೋ ಜಾದೂ ಪೆಟ್ಟಿಗೆಯನ್ನು ಮುಟ್ಟಿದಂಥ ಸಂಭ್ರಮ ಅರಳಿಸಿತ್ತು. ಅಲ್ಲಿ ಮೂಡಲಾರಂಭಿಸಿದ ಅಕ್ಷರಗಳು ಅಕ್ಷಯವಾಗುತ್ತ ಇಂದು ನನಗೆ ಬರಹಗಾರ್ತಿಯೆಂಬ ಅಸ್ಮಿತೆಯನ್ನು ದಯಪಾಲಿಸಿದ್ದು ಬೆಚ್ಚಗಿನ ಅಚ್ಚರಿ!

village-school
ಕನ್ನಡಶಾಲೆಯೆಂಬ ಪ್ರಪಂಚದೊಳಗೆ ಪ್ರವೇಶಿಸುವ ಮುಂಚೆ ಈ ಅಕ್ಷರಗಳ ಪರಿಚಯವೇ ಇರಲಿಲ್ಲ. ಈಗಿನಂತೆ ಎಲ್ಕೇಜಿ ಯೂಕೇಜಿಗಳಿರಲಿ, ಅಂಗನವಾಡಿಯೂ ಇಲ್ಲದ ಪುಟ್ಟಹಳ್ಳಿ ನನ್ನದು. ಹಳ್ಳಿ-ಊರು ಎಂಬೆಲ್ಲ ಪದಗಳು ಅದಕ್ಕೆ ಹೊಂದುವುದಿಲ್ಲವೇನೋ! ಕಾಡನಡುವಿನ ಕಾಲುದಾರಿಯಲ್ಲಿ ಸಾಗಿದರೆ ಅಲ್ಲೊಂದು ಇಲ್ಲೊಂದು ಮನೆಗಳು. ಅಡಿಕೆತೋಟ, ಭತ್ತದಗದ್ದೆಗಳ ಸುತ್ತ ಕವುಚಿಕೊಂಡ ದಟ್ಟ ಕಾನನ. ಧ್ಯಾನಸ್ಥ ನೀರವತೆಯನ್ನು ಆಗಾಗ ಕಲಕುವ ಹಕ್ಕಿಗಳ ಕೂಗು. ಎಲ್ಲಿ ನೋಡಿದರೂ ದಟ್ಟ ಹಸಿರು, ತಿಳಿಹಸಿರು, ಬೆಳಕಲ್ಲಿ ಕಲಸಿದ ಬಂಗಾರಛಾಯೆಯ ಹಸಿರು….. ಬೆಟ್ಟ ಸಾಲುಗಳ ತುತ್ತತುದಿಯ ಡೊಂಕು ಗೆರೆಗಳು ಆಕಾಶದ ನೀಲಿಯಲ್ಲಿ ಕಲೆಸಿಹೋಗಿ ಅನಂತ ಅನಂತದಲ್ಲಿ ಧ್ಯಾನಲೀನ. ಕರೆಂಟು ಗಿರೆಂಟು ಬಂದಿರದ ಕಾಡುಮನೆ ಕತ್ತಲಲ್ಲಿ ಮಾತ್ರ ಅಸ್ತಿತ್ವವಿಲ್ಲದೇ ಕರಗಿಹೋಗುತ್ತಿತ್ತು. ಆದರೂ ನನ್ನ ಆ ಮನೆಗೆ ಹೆಸರೆಂಬುದೊಂದು ಉಂಟು. ಕಾಟೀಮನೆ… ಕಾಟಿ ಎಂದರೆ ಕಾಡೆಮ್ಮೆ. ಕಾಡೆಮ್ಮೆಗಳ ನೆಲೆಯದು. ಈಗಲೂ ಅಪರೂಪಕ್ಕೊಮ್ಮೆ ಅವು ಭೇಟಿಯಾಗುವುದುಂಟು.
ಇಂಥ ಪ್ರಕೃತಿಯ ಲೀಲಾಮಯ ಲೋಕದಲ್ಲಿ ನನ್ನ ‘ಇರವು’ ಏನು? ಹೇಗೆ? ಎಂಬ ಅರಿವೇ ಇಲ್ಲದ ಅದ್ಭುತ ಕಾಲವದು. ಪಂಚೇಂದ್ರಿಯಗಳು ನೀಡುತ್ತಿದ್ದ ಅರಿವಿನ ಹೊರತಾಗಿ ಇನ್ನೊಂದು ಸಾಧ್ಯತೆ ತಿಳಿದಿರಲಿಲ್ಲ. ಪ್ರಕೃತಿಯೊಂದಿಗೆ ತಾದಾತ್ಮ್ಯಹೊಂದಿ, ನೋಡುತ್ತ, ಕೇಳುತ್ತ, ಸವಿಯುತ್ತ, ಸ್ಪರ್ಶಿಸುತ್ತಾ, ಆಘ್ರಾಣಿಸುತ್ತ ಸದಾ ಮುಕ್ತ ಗ್ರಹಿಕೆಗೆ ತೆರೆದುಕೊಂಡಿದ್ದ ಕಾಲವದು. ಶಾಲೆಯ ನಾಲ್ಕು ಗೋಡೆಗಳು, ಬೆಲ್ಲು, ಗಡಿಯಾರಗಳೆಂಬ ಪದಗಳು ಪರಲೋಕವೇನೋ ಎಂಬ ಭಾವ. ಗಡಿಯಾರದ ಮುಳ್ಳುಗಳೋ ಕಸಬರಿಗೆ ಕಡ್ಡಿಗೆ ಸಮ! ಕಾಡಿನ ಮಕ್ಕಳಾದ ನಮಗೆ ಇಂಬಳ, ಕಂಬಳಿಹುಳ, ಕಡ್ಡಿಯಂತೆ ನಡುಬಳುಕಿಸುವ ಹುಳ, ಎಲೆಯೊಳಗೆ ಕೈಕಾಲು ಅಡಗಿಸಿಕೊಂಡ ಮಾಟಗಾತಿ ಹುಳ, ಚಿಪ್ಪೊಳಗೆ ಅಡಗುವ ಠಣ್ಣಠಣ್ಣ ಜಿಗಿಯುವ ನೂರಾರು ಹುಳಗಳ ಲೋಕ ಕಾಲಕೆಳಗೆ ಸರಪರ. ಶಾಲೆಯ ಕಾಲುದಾರಿಯಲ್ಲಿ ಪೊದೆಗಳಿಂದ ಸರಕ್ಕನೆ ಜಿಗಿದು ಓಡುವ ಕಡವೆ, ಜಿಂಕೆ, ಪುಟುಕ್ಕನೆ ಪುಟಿವ ಇಣಚಿ, ಮೊಲಗಳ ಸಾಂಗತ್ಯ. ಏನೇನೋ ಹೊತ್ತೊಯ್ಯುವ ಇರುವೆ ಸಾಲಿನ ಸಂಭ್ರಮ, ರಾತ್ರಿ ಬೆಳಗಾಗುವುದರೊಳಗೆ ಹುತ್ತಕಟ್ಟುವ ಗೆದ್ದಲುಹುಳದ ಶ್ರಮ, ಮಂಡಲಗಳಂತೆ ಜಾಲಹೆಣೆವ ಜೇಡದ ಜಾಣ್ಮೆ……. ದಿನಕ್ಕೊಂದು ಹೊಸ ಅಚ್ಚರಿ, ಹೊಸಪಾಠ! ಶಾಲೆಯ ಪಾಠಗಳಿಗೆ ಹೊಂದಿಕೊಳ್ಳದ ಮನಕ್ಕೆ ಒಳಗೊಳಗೆ ಉಮ್ಮಳ.
ಆದರೆ, ಎಷ್ಟುದಿನ ಸಣ್ಣವರಾಗಿರುವುದು ಸಾಧ್ಯ?! ‘ಇರುವು’ ‘ಅರಿವಾಗುವ’ ಘಳಿಗೆಗೆ ತೆರೆದುಕೊಳ್ಳುವುದೇ ವಿಕಾಸ. ಅದನ್ನು ಕನ್ನಡದ ಅಕ್ಷರಗಳು ಸಾಧ್ಯವಾಗಿಸಿದವು ಎಂಬುದೊಂದೇ ಸಾಕು ಕನ್ನಡವನ್ನು ಪ್ರೀತಿಸಲು. ಶಾಲೆಯಲ್ಲಿ ಅಕ್ಷರಗಳ ಮಡಿಲಿಂದ ಬುದಬುದನೆ ಹೊರಬಂದು ನದಿಯಾಗಿ ಹರಿದ ಹೊಸಲೋಕ ತನ್ನೊಳಗೆ ನಮ್ಮನ್ನು ಸೆಳೆದುಕೊಂಡುಬಿಟ್ಟಿತು. ಆಗಲೇ ಎದೆಯ ಹಸಿ ಮಣ್ಣಿನಲ್ಲಿ ಮೊಳೆಯಿತು ಕನ್ನಡ. ಕನ್ನಡದ ಮೂಲಕ ನನ್ನ ಜಗತ್ತಿಗೆ ‘ಅನ್ಯ’ವಾಗಿದ್ದ ಎಷ್ಟೆಲ್ಲ ಶಬ್ದಗಳು, ಪರಿಕಲ್ಪನೆಗಳು ಮೆದುಳಿನೊಳಗೆ ನುಗ್ಗತೊಡಗಿದವು. ಎದೆಯ ಆಳಕ್ಕಿಳಿದು ಅರಳತೊಡಗಿದವು. ನಾಡು, ನುಡಿ, ಗಡಿ, ದೇಶ, ವಿಶ್ವ….. ಸಮುದ್ರ, ಹಡಗು, ಬಂದರು, ಮರುಭೂಮಿ……. ಗುರುತ್ವಾಕರ್ಷಣೆ, ದ್ಯುತಿಸಂಷ್ಲೇಷಣೆ…… ಮಾರುಕಟ್ಟೆ, ವ್ಯವಹಾರ, ಲಾಭ-ನಷ್ಟ, ಆಮದು-ರಫ್ತು…… ಏನು ಹಾಗಂದರೆ? ಬಿಳಿಯ ಲೇಖಕ್ ಪಟ್ಟಿಯ ತುಂಬ ಪ್ರಶ್ನೋತ್ತರಗಳ ಕಾತರ. ಎಷ್ಟು ಒಳಹೊಕ್ಕರೂ ತೆರೆದುಕೊಳ್ಳುವ ಕೊನೆಯಿಲ್ಲದ ಅರಿವಿನ ಪ್ರಪಂಚ.
ನಿಧಾನಕ್ಕೆ ಮನಸ್ಸು ಪುಸ್ತಕಗಳ ಘಮಕ್ಕೆ ನವಿರೆದ್ದು ಕುಣಿಯತೊಡಗಿತು.. ಚಂದಮಾಮ, ಬೊಂಬೆಮನೆ ಎಂಬ ಗೆಳೆಯ ಗೆಳತಿಯರು ತಮ್ಮ ಮಾಯಾಲೋಕಕ್ಕೆ ಸೆಳೆದುಕೊಂಡರು. ಆ ಫ್ಯಾಂಟಸಿಯ ಲೋಕದೊಳಕ್ಕೆ ಕನಸಿನಲ್ಲಿ ನಡೆದಂತೆ ನಡೆಯತೊಡಗಿದರೆ….. ಎಚ್ಚರವೇ ಅಪರೂಪ! ಅಂಕಲಿಪಿಯ ಅಗಸ, ಆನೆ, ಇಲಿಗಳಾಚೆ ಇದೊಂದು ಚಂದದ ಲೋಕ. ಬಸವ, ಕಮಲರ ಶಿಸ್ತಿನ ಲೋಕದ ಆಚೆಗಿನ ಸ್ವಚ್ಛಂದ ಲೋಕ. ಆ ನೀಟಾದ ಬಣ್ಣಬಣ್ಣದ ಚಿತ್ರಗಳು ಸಜೀವವಾಗಿ ಕದಲುತ್ತ ಭಾವಕೋಶದೊಳಗೆ ಅಚ್ಚಾಗಿಬಿಟ್ಟವು. ಅವು ಬರಿ ಅಕ್ಷರಗಳಲ್ಲ, ಸಂಕೇತಗಳಲ್ಲ… ನನ್ನೊಳಗಾದ ಕಲ್ಪನಾ ವಿಸ್ತಾರ, ಭಾವದ ಪರಿಷ್ಕರಣ, ಸಂವೇದನೆಯ ಮುಲುಕಾಟ. ಆಗೆಲ್ಲ ಕನ್ನಡಶಾಲೆಯೆಂಬುದು ಪುಳಕ.
ಕನ್ನಡಶಾಲೆ ಕೇವಲ ಅಕ್ಷರಗಳನ್ನಷ್ಟೇ ಅಲ್ಲ, ಸಹಬಾಳ್ವೆಯನ್ನೂ ಕಲಿಸಿತು. ಅದೊಂದು ಮಿನಿ ಸಮಾಜ. ಅದಕ್ಕೆ ಯೂನಿಫಾರ್ಮಿನ ಹಂಗಿರಲಿಲ್ಲ. ಅಷ್ಟು ವೈವಿಧ್ಯಗಳನ್ನು ತೆಕ್ಕೆಗೆ ಹಾಕಿಕೊಳ್ಳುವ ತಾಯಿ ಅದು. ಶಂಕ್ರ, ರಮೇಸ, ಗಿರ್ಜಾ, ಸಾವಿತ್ರಿ, ಕಮಲಿ…. ದನಕಾಯುವ, ಏಡಿ ಹಿಡಿಯುವ, ಬಲೆಬೀಸಿ ಮೀನು ಹಿಡಿವ, ಬಲೆಹಾಕಿ ಮೊಲ, ಮಿಕ ಕಬಳಿಸುವ, ಹಂದಿಬೇಟೆ ಕತೆ ಹೇಳುವ, ಕೋಳಿ ಅಂಕದ ಮೋಜು ಬಿತ್ತರಿಸುವ ಎಷ್ಟೆಲ್ಲ ಗೆಳೆಯರು! ಭಿನ್ನ ಸಂಸ್ಕೃತಿ, ಆಹಾರ ಕ್ರಮದ ಅರಿವು-ಅಚ್ಚರಿ. ಅಜ್ಜನ ದೇವರ ಪೀಠದಾಚೆ ಜಿಗಿದ ಮುಕ್ಕೋಟಿ ದೇವರುಗಳು ಕಾಡು, ಬನಗಳಲ್ಲಿ ಪ್ರತ್ಯಕ್ಷ! ಕನ್ನಡದ ಜೊತೆ ಅರಿವಾಗುತ್ತ ನಡೆದ ಕರ್ನಾಟಕತ್ವ, ಕನ್ನಡವೆಂಬ ಸಂಸ್ಕೃತಿ ಕೋಶ! ಸರ್ವಜನಾಂಗದ ಶಾಂತಿಯ ತೋಟಾ… ಎಂಬ ಹಾಡಿಗೆ ನಮ್ಮದೇ ಎಳೆಕಂಠ. ಕರ್ನಾಟಕದ ಮ್ಯಾಪಿನ ಮೇಲೆ ಕೈಯಾಡಿಸಿದರೆ ಹತ್ತಿರಾಗುವ ಬೀದರ್, ಗುಲ್ಬರ್ಗ,ರಾಯಚೂರು, ಬಳ್ಳಾರಿ, ಮಂಡ್ಯ, ಮೈಸೂರು ಎಂಬ ದೂರದ ಊರುಗಳು. ಇದನ್ನೆಲ್ಲ ಸಾಧ್ಯವಾಗಿಸಿದ್ದು ಕನ್ನಡವೆಂಬ ಅರಿವು.
ಹೈಸ್ಕೂಲು ದಿನಗಳಲ್ಲಿ ವಿಕಸಿತವಾದ ಯೌವ್ವನ ಹಲವು ಭಾವಗಳ ಬುಗ್ಗೆ. ಅಲ್ಲಿ ‘ಕನ್ನಡ’ ಎಂಬುದು ಲೇಖಕ್ ಪಟ್ಟಿಯ ಮಿತಿದಾಟಿ ಹೊಸ ಆದರ್ಶಗಳ ಕಿಚ್ಚುಹೊತ್ತಿಸಿಕೊಂಡಿತು. ‘ಬಾರಿಸು ಕನ್ನಡ ಡಿಂಡಿಮವಾ, ಓ ಕರ್ನಾಟಕ ಹೃದಯ ಶಿವಾ’ ಎಂದಾಗಲೆಲ್ಲ ಎದೆಯ ನಗಾರಿ ಲಬ್-ಡಬ್ ಜೋರಾಗಿ ಬಾರಿಸುವುದು. ನರನಾಡಿಗಳಲ್ಲೆಲ್ಲ ಏನೋ ಹರಿದಾಡಿದಂತಾಗಿ ಬೆಚ್ಚಗಾಗುವುದು. ಹಚ್ಚೇವು ಕನ್ನಡದ ದೀಪಾ… ಒಲವೆತ್ತಿ ತೋರುವಾ ದೀಪಾ… ನರನರಗಳೆಲ್ಲ ಹುರಿಗೊಳಿಸಿ ಹೊಸೆದು ಹಚ್ಚೇವು ಕನ್ನಡದ ದೀಪಾ… ಇಂಥ ಕವಿತೆಗಳ ಕನವರಿಕೆ. ವಿಚಾರಗಳಿಂದ ದೀಪ್ತಗೊಳ್ಳುವ ಲೋಕ ನಿಚ್ಚಳವಾಗತೊಡಗಿದ್ದು ಕೂಡ ಕನ್ನಡದ ಮೂಲಕವೇ. ಕಟ್ಟುವೆವು ಹೊಸನಾಡೊಂದನು… ಎಂಬೆಲ್ಲ ಕಿಚ್ಚಿನ ಅಚ್ಚರಿ ಕಂಗಳಲ್ಲಿ ಹೊಸ ದೀಪಾವಳಿ. ನಿಧಾನಕ್ಕೆ ಅಕ್ಷರವು ಅರಿವಾಗಿ, ಅರಿವು ಹೊಸೆದು ಹೊಸ ಅಸ್ಮಿತೆಯನ್ನು ನೀಡಿ, ಬರಹದ ಬೀಜವನ್ನು ಬಿತ್ತುವ ಕಾಯಕ ಆಕರ್ಷಕವೆನಿಸಿತು. ಓದು-ಬರಹಗಳ ಗೀಳು ತನ್ನ ಒಳಸುಳಿಗಳಲ್ಲಿ ಮುಳುಗಿಸಿಬಿಟ್ಟಿತು. ಈ ಹಿತವಾದ ಕಳೆದುಕೊಳ್ಳುವಿಕೆಯಲ್ಲಿ ಪಡೆದದ್ದು ಅಪಾರ ಅನಂತ.
ಅರಿವೆಂಬುದು ಯಾವಾಗಲೂ ಸಂಭ್ರಮವಲ್ಲ. ಅದು ಹಿಂಸೆಯೂ ಹೌದು! ತರತಮಗಳ ಲೋಕ, ಅಂಚಿಗೆ ತಳ್ಳಲ್ಪಟ್ಟವರ ಲೋಕ, ಶೋಷಕ-ಶೋಷಿತರ ಅರಿವುಗಳು ಮೆಲ್ಲಗೆ ಬಿಚ್ಚಿಕೊಳ್ಳತೊಡಗಿದಾಗ ಇದೇ ಕನ್ನಡ ನುಡಿ ಜವಾಬ್ದಾರಿಗಳನ್ನು ಕಲಿಸಿತು. ಕಾರಂತರ ಚೋಮ ಬಾರಿಸಿದ ದುಡಿ, ಸಮಾಧಿಯಿಂದೆದ್ದು ಬಂದ ಸರಸಮ್ಮ, ಛಂಗಛಂಗನೆ ನೆಗೆಯುತ್ತಬಂದ ದೇವನೂರರ ಅಮಾಸನ ಹುಲಿಯಾಸ, ಚಂದ್ರಗಿರಿ ತೀರದಲ್ಲಿ ವಿಲಪಿಸುವ ಆ ಅವಳು, ಹೊಡೆತ ತಿಂದು ಮುಲುಗುವ ವೈದೇಹಿಯವರ ಅಕ್ಕು… ಇವೆಲ್ಲ ಸುಡುಸುಡು ಕೆಂಡಗಳಾಗಿ ಮನದಲ್ಲಿ ಹೊರಳುವಂತೆ ಮಾಡಿದ್ದು ಇದೇ ಕನ್ನಡ. ಮತ್ತೆ ಕನ್ನಡದ ಮೂಲಕವೇ ಮರುಪಯಣ… ಪಂಪನಿಂದ ಕಲ್ಬುರ್ಗಿಯವರೆಗೆ… ಯುನಿವರ್ಸಿಟಿಯ ಎತ್ತರದ ಸೌಧಗಳಲ್ಲಿ ಜೇನ್ನೊಣದಂತೆ ಗೂಡುಕಟ್ಟುವ ಈ ಪುಟ್ಟ ಮನದಲ್ಲಿ ಅನುದಿನವು ಅನುರಣಿಸಿದ್ದು ಇದೇ ಕನ್ನಡ… ಕನ್ನಡ.
ವೈಯಕ್ತಿಕವೆಲ್ಲವೂ ರಾಜಕೀಯವೇ! ಅರಿವಿನ ಮೂಲಕ ಮರುರಚಿಸುವ, ಹಾಗೆ ಮರುರಚಿಸುತ್ತ ನಾವೇ ಮರುರಚನೆಗೊಳಗಾಗುವ ಬೌದ್ಧಿಕ ಲೋಕ ಹೇಳಿದ್ದು ಹೀಗೆ. ಅಕ್ಷರ, ಭಾಷೆ ಇಂದು ರಾಜಕೀಯ ಅಸ್ಮಿತೆಯೂ ಹೌದು. ವೈಯಕ್ತಿಕ ಅಸ್ಮಿತೆ ಸಾಮುದಾಯಿಕ ಅಸ್ಮಿತೆಯಲ್ಲಿ ಕರಗುವ ರೋಚಕ ಕ್ಷಣವನ್ನು ಕಾಣಿಸಿದ್ದು ಇದೇ ಕನ್ನಡ ವಾಙ್ಮಯ. ಕನ್ನಡ ಸಂಸ್ಕೃತಿ, ಕನ್ನಡ ಮನಸ್ಸು ಎಂಬೆಲ್ಲ ಪದಪುಂಜಗಳು ಅರ್ಥಪಡೆದದ್ದು ಹೀಗೆಯೇ ಅಲ್ಲವೆ? ಸಾಹಿತ್ಯದಲ್ಲಿ ಸಮೂಹದ ಮನಸ್ಸುಗಳ ಜೊತೆ ಕೊಂಡಿ ಬೆಸೆಯುತ್ತ ಅರಿವಿನ ಪರಿಧಿ ವಿಸ್ತರಿಸಿಕೊಳ್ಳುತ್ತ ನಡೆಯುವ ನಡೆ ಅನೂಹ್ಯವಾದದ್ದು.. ಕನ್ನಡದ ತಾಯಿ ತಾವರೆಯ ಪರಿಮಳವುಂಡು ಬೀರುತಿಹ ಗಾಳಿ ನಾನು ಎಂದು ಬೇಂದ್ರೆ ಹೇಳಿದ್ದು ನೆನಪಾಗುತ್ತಿದೆ. ಅರ್ಧಚಂದ್ರನೊಳಗೆ ಅಡ್ಡಗೆರೆ ನಿಲ್ಲಿಸಿ ಬರೆದ ‘ಅ’. ಚಂದ್ರನ ಕೊರಳ ಬಳಸಿ ನಾಟ್ಯವಾಡಿದಂತೆ ಬಳುಕಿ ಬರೆದ ‘ಆ’. ಮಣ್ಣಪಾಟಿಯಲ್ಲಿ ಅ, ಆ, ತೀಡಿದ ಸ್ಪರ್ಷವಿನ್ನೂ ಹಸಿಯಾಗಿದೆ. ಅಂದು ಮೂಡಿದ ಕಣ್ಣು ಕಾಣಿಸುತ್ತಿರುವ ಅನಂತ ಸಾಧ್ಯತೆಗಳ ಬೆರಗಿನಲ್ಲಿ ನಾನಿಂದು ‘ಸಖೀಗೀತ’ಕ್ಕೆ ಅಣಿಯಾಗಿದ್ದೇನೆ!

One thought on “ಸಖೀಗೀತ-1 : ಮಣ್ಣಪಾಟಿಯಲ್ಲಿ ಕಣ್ಣಾಗಿ ಮೂಡಿದ ಕನ್ನಡ

  • October 24, 2017 at 4:09 PM
    Permalink

    This information is invaluable. How can I find out more?

Comments are closed.

Social Media Auto Publish Powered By : XYZScripts.com