ಬೆಳೆಗಳಿಗೆ ನೀರಿಲ್ಲ! ರೈತನ ಮೊಗದಲ್ಲಿ ನಗುವಿಲ್ಲ!!

ಹೇಮಾವತಿ ಅಚ್ಚುಕಟ್ಟು ಪ್ರದೇಶದ 72,360 ಎಕರೆ ಪ್ರದೇಶದಲ್ಲಿ ಮಳೆಯಾಶ್ರಯದಲ್ಲಿ ಬೆಳೆ ಬೆಳೆಯಲು ಸಾಹಸ ಮಾಡಿದ ರೈತರು ಇದೀಗ ದುಸ್ಸಾಹಸಕ್ಕೆ ಕೈ ಹಾಕಿದಂತಾಗಿದೆ. ಇಲ್ಲಿ ಬೆಳೆಯಲಾಗಿರುವ 7,258.74 ಎಕರೆ ಭತ್ತ, 1,999.82 ಎಕರೆ ತೆಂಗು, 2650.07 ಎಕರೆ ರಾಗಿ, 3,945.07 ಎಕರೆ ಜೋಳ ಹಾಗೂ 1,662 ಎಕರೆ ಶುಂಠಿ ಮತ್ತು ಕಬ್ಬು ಬೆಳೆಗಳು ನೀರಿಲ್ಲದೆಯೇ ಇದೀಗ ನಾಶದ ಅಂಚಿನಲ್ಲಿದೆ. ಈ ಪ್ರದೇಶದಲ್ಲಿನ ಭತ್ತ, ರಾಗಿ ಹಾಗೂ ಜೋಳದ ಬೆಳೆಗಳು ಒಣಗುತ್ತಿವೆ. ಅಂತೆಯೇ, ಈ ಬೆಳೆಗಳನ್ನು ಬೆಳೆದ ರೈತರ ಮುಖಗಳು ಮುದುಡಿ ಹೋಗಿವೆ.
ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಪ್ರತಿಬಾರಿಯೂ ನ್ಯಾಯಾಲಯದ ತೀರ್ಪುಗಳಿಂದ ರಾಜ್ಯಕ್ಕೆ ಮೇಲಿಂದ ಮೇಲೆ ಅನ್ಯಾಯವಾಗುತ್ತಿದೆ ಭಾರತದ ಸವೋಚ್ಛ ನ್ಯಾಯಾಲಯವು ತನ್ನ ಆದೇಶಗಳನ್ನು ಹೊರಡಿಸುವ ಮುನ್ನ ರಾಜ್ಯಕ್ಕೆ ಕೇಂದ್ರ ಅಧ್ಯಯನ ತಂಡವನ್ನು ಕಳುಹಿಸಿ ವಾಸ್ತವ ಚಿತ್ರಣವನ್ನು ಅರಿತು ತೀರ್ಪು ನೀಡಿದ್ದಲ್ಲಿ ಕರ್ನಾಟಕಕ್ಕೆ ನಿಶ್ಚಿತವಾಗಿಯೂ ನ್ಯಾಯ ದೊರೆಯುತ್ತಿತ್ತು ಎಂಬ ಅಭಿಪ್ರಾಯ ಇಲ್ಲಿನ ಜನರಲ್ಲಿದೆ.

crop-dry
ಕೃಷ್ಣರಾಜ ಸಾಗರ ಜಲಾಶಯವು ನೀರಿಲ್ಲದೇ ಬರಿದಾಗಿರುವ ದೃಶ್ಯವು ಈ ಜಲಾಶಯದ ಸುದೀರ್ಘ ಇತಿಹಾಸದಲ್ಲೇ ಒಂದು ಕರಾಳ ಅಧ್ಯಾಯಕ್ಕೆ ಸಾಕ್ಷಿಯಾಗಿದೆ.
ಪ್ರಸ್ತುತ ಜಲ ವರ್ಷದ ಜೂನ್‍ನಿಂದ ಸೆಪ್ಟೆಂಬರ್‍ವರೆಗಿನ ಅವಧಿಯಲ್ಲಿ ಕಬಿನಿ ಜಲಾಶಯದಲ್ಲಿ 36.910 ಟಿ.ಎಂ.ಸಿ ನೀರು ಒಳಹರಿವಿನ ಪ್ರಮಾಣಕ್ಕೆ ಪ್ರತಿಯಾಗಿ ಕೇವಲ 8.029 ಟಿ.ಎಂ.ಸಿ. ನೀರು ಹರಿದು ಬಂದಿದೆ. ಕೃಷ್ಣರಾಜ ಸಾಗರ ಜಲಾಶಯದಲ್ಲಿ 63.50 ಟಿ.ಎಂ.ಸಿ. ನೀರು ಒಳ ಹರಿವಿನ ಪ್ರಮಾಣಕ್ಕೆ ಪ್ರತಿಯಾಗಿ 10.01 ಟಿ.ಎಂ.ಸಿ ನೀರು ತಲುಪಿದೆ. ಅಂತೆಯೇ ಹಾರಂಗಿ ಜಲಾಶಯದಲ್ಲಿ 27.88 ಟಿ.ಎಂ.ಸಿ ನೀರು ಒಳ ಹರಿವಿನ ಪ್ರಮಾಣಕ್ಕೆ ಪ್ರತಿಯಾಗಿ 5.121 ಟಿ.ಎಂ.ಸಿ ಹಾಗೂ ಹೇಮಾವತಿ ಜಲಾಶಯದಲ್ಲಿ 31.50 ಟಿ.ಎಂ.ಸಿ. ನೀರು ಒಳ ಹರಿವಿನ ಪ್ರಮಾಣಕ್ಕೆ ಪ್ರತಿಯಾಗಿ 6.33 ಟಿ.ಎಂ.ಸಿ. ನೀರು ಹರಿದು ಬಂದಿದೆ. ಅಂದರೆ ಈ ಜಲ ವರ್ಷದ ಈ ಅವಧಿಯಲ್ಲಿ ಈ ನಾಲ್ಕೂ ಜಲಾಶಯಗಳಲ್ಲಿ 159.99 ಟಿ.ಎಂ.ಸಿ ನೀರು ಒಳ ಹರಿವಿನ ಪ್ರಮಾಣಕ್ಕೆ ಪ್ರತಿಯಾಗಿ 29.686 ಟಿ.ಎಂ.ಸಿ. ನೀರು ಬಂದಿದೆ ಎಂಬುದು ಒಳ ಹರಿವಿನ ಪ್ರಮಾಣದಲ್ಲಿ ಶೇಕಡಾ 80 ರಷ್ಟು ಕೊರತೆಯನ್ನು ಸೂಚಿಸುತ್ತದೆ.

Comments are closed.

Social Media Auto Publish Powered By : XYZScripts.com