ಮಾತುಕತೆ ಮೂಲಕ ಮಹಾದಾಯಿಗೆ ಮಂಗಳ:ಸಿಎಂ ಸಹಮತ

ಮಹದಾಯಿ ನದಿ ನೀರಿನ ವಿವಾದವನ್ನು ಮಾತುಕತೆ ಮೂಲಕ ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳುವಂತೆ ನ್ಯಾಯಮಂಡಳಿ ನೀಡಿರುವ ಸಲಹೆಯನ್ನು ಸ್ವಾಗತಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಈ ಕುರಿತು ಪ್ರಧಾನಿ ಹಾಗೂ ಗೋವಾ, ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.
ಒಕ್ಕೂಟ ವ್ಯವಸ್ಥೆಯಲ್ಲಿ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ ಎಂದು ನ್ಯಾಯ ಮಂಡಳಿ ಹೇಳಿರುವುದು ಒಳ್ಳೆಯ ಬೆಳವಣಿಗೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟಿದ್ದಾರೆ.

cm
ನ್ಯಾಯ ಮಂಡಳಿಯೇ ಸಲಹೆ ನೀಡಿರುವುದರಿಂದ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಮಾತುಕತೆಗೆ ಸಿದ್ಧರಾಗಬಹುದು. ನಾವಂತೂ ತಯಾರಿದ್ದೇವೆ ಎಂದು ತಿಳಿಸಿದರು. ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ. ಸರ್ವಪಕ್ಷ ಮುಖಂಡರೊಂದಿಗೆ ಭೇಟಿಯಾದಾಗ ಮತ್ತು ಬರಗಾಲ ಕುರಿತಾದ ಚರ್ಚೆಗೆ ಹೋದಾಗಲೂ ಪ್ರಧಾನಿಯವರಿಗೆ ಮನವಿ ಮಾಡಿದ್ದೇವೆ ಎಂದರು.
ನ್ಯಾಯ ಮಂಡಳಿ ಸಲಹೆ ನೀಡಿದ ಬಳಿಕ ಗೋವಾ, ಮಹಾರಾಷ್ಟ್ರ ಪರ ವಕೀಲರು ನಮ್ಮ ಮುಖ್ಯಮಂತ್ರಿಗಳಿಗೆ ಈ ಬಗ್ಗೆ ನಾವೂ ಸಲಹೆ ನೀಡುತ್ತೇವೆ ಎಂದಿದ್ದಾರೆ. ನಮ್ಮ ವಕೀಲರೂ ಇದೇ ಮಾತು ಹೇಳಿದ್ದಾರೆ. ಇದು ಸ್ವಾಗತಾರ್ಹ. ಇದಕ್ಕಾಗಿ ನ್ಯಾಯ ಮಂಡಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿಯವರು ತಿಳಿಸಿದರು.
ವಿವಾದವನ್ನು ಬಗೆಹರಿಸಲು ತಾವು ಮಧ್ಯೆಪ್ರವೇಶ ಮಾಡಬೇಕು ಎಂದು ಪ್ರಧಾನಿಯವರಿಗೆ ಪತ್ರ ಬರೆದು ಮನವಿ ಮಾಡಿದ್ದೆ. ಜಲ ಸಂಪನ್ಮೂಲ ಸಚಿವರೊಂದಿಗೆ ಈ ಬಗ್ಗೆ ಮಾತುಕತೆ ನಡೆಸುವಂತೆ ಪತ್ರ ಮೂಲಕ ಗೋವಾ ಮುಖ್ಯಮಂತ್ರಿಗಳನ್ನೂ ಕೋರಲಾಗಿತ್ತು. ಈಗ ನ್ಯಾಯ ಮಂಡಳಿಯೇ ಸಲಹೆ ನೀಡಿರುವುದರಿಂದ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಮಾತುಕತೆಗೆ ಮುಂದಾಗಬಹುದು. ನಾವೂ ತಯಾರಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಪ್ರಧಾನಿ, ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಶೀಘ್ರವೇ ಪತ್ರ ಬರೆಯುತ್ತೇನೆ. ಮೂರೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ಪ್ರಧಾನಿಯವರನ್ನೂ ಕೋರುತ್ತೇನೆ ಎಂದರು.
ಮಾತುಕತೆಗೆ ಬೆಂಗಳೂರಿಗೆ ಬರುವಂತೆ ಗೋವಾ, ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗುವುದು. ಒಂದು ವೇಳೆ ಗೋವಾ ಅಥವಾ ಮಹಾರಾಷ್ಟ್ರ ಸಿಎಂ ಕರೆದರೂ ಮಾತುಕತೆಗೆ ಹೋಗುತ್ತೇನೆ. ಪ್ರಧಾನಿಯವರು ಏನಾದರೂ ಕರೆದರೆ ದೆಹಲಿಗೆ ಹೋಗುತ್ತೇವೆ. ನನ್ನ ಪ್ರಕಾರ ಪ್ರಧಾನಿಯವರು ಸಭೆ ಕರೆಯುವುದೇ ಒಳ್ಳೆಯದು ಎಂದು ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದರು. ಮಾತುಕತೆ ಮೂಲಕ ವಿವಾದ ಇತ್ಯರ್ಥಕ್ಕೆ ನಾವು ಸಿದ್ಧವಿರುವಾಗ ಎಲ್ಲಾದರೂ ಮಾತುಕತೆ ನಡೆಯಲಿ ಹೋಗಲು ತಯಾರು ಎಂದರು.

Comments are closed.

Social Media Auto Publish Powered By : XYZScripts.com