ನಮ್ಗೆ ನೀರಿಲ್ಲ, ನಿಮಗೆಲ್ಲಿ ಕೊಡೋಣ ಅಂದ್ರು ಸಿಎಂ ಸಿದ್ದು

ಮಳೆ ಕೊರತೆಯಿಂದಾಗಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಸಂಕಷ್ಟ ಉಂಟಾಗಿದೆ. ಹೀಗಾಗಿ ನೀರಾವರಿ ಉದ್ದೇಶಕ್ಕೆ ತಮಿಳುನಾಡಿಗೆ ನೀರು ಬಿಡುವುದು ಸಧ್ಯದ ಪರಿಸ್ಥಿತಿಯಲ್ಲಿ ಕಷ್ಟ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಇಂದು ತಮ್ಮನ್ನು ಭೇಟಿ ಮಾಡಿ ನೀರು ಬಿಡುಗಡೆಗೆ ಮನವಿ ಮಾಡಿದ ತಮಿಳುನಾಡಿನ ರೈತ ಮುಖಂಡರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ನೀರು ಬಿಡುಗಡೆ ಮಾಡುವುದಾಗಿ ತಿಳಿಸಿದರು.

siddu 2
ನೀರಿಲ್ಲದೆ ನಮ್ಮ ರೈತರಿಗೆ ಭಾರಿ ತೊಂದರೆಯಾಗಿದೆ. ಬೆಳೆ ನಷ್ಟದ ಆತಂಕ ಎದುರಾಗಿದೆ. 9 ಎಕರೆ ಪ್ರದೇಶದಲ್ಲಿರುವ ಸಾಂಬಾ ಬೆಳೆಗೆ ಅನುಕೂಲ ಆಗುವಂತೆ ನೀರು ಬಿಡುಗಡೆ ಮಾಡಬೇಕು ಎಂದು ತಮಿಳುನಾಡಿನ ರೈತ ಮುಖಂಡರು ಮನವಿ ಮಾಡಿದರು.
ಕಾವೇರಿ ಜಲಾನಯನ ಪ್ರದೇಶದಲ್ಲಿರುವ ಅಣೆಕಟ್ಟುಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ. ಕುಡಿಯುವ ಉದ್ದೇಶಕ್ಕೂ ನೀರು ಒದಗಿಸಲು ಆಗದಂತಯ ವಾತಾವರಣ ಇದೆ. ಹೀಗಾಗಿ ಸಂಕಷ್ಟ ಸೂತ್ರದ ಅನ್ವಯವೂ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಕಷ್ಟವಾಗಿದೆ. ನಮ್ಮ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿಯವರು ರೈತ ಮುಖಂಡರಿಗೆ ಹೇಳಿದರು.
ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ತಮಿಳುನಾಡಿನ ನಿಯೋಗದಲ್ಲಿ ನೀರಾವರಿ ರಕ್ಷಣಾ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಸಂಸದ ಡಾ. ಕೆ.ಪಿ. ರಾಮಲಿಂಗಂ, ತಮಿಳು ಕೃಷಿಕರ ಸಂಘದ ಅಧ್ಯಕ್ಷ ಕೆ. ಚೆಲ್ಲಮುತ್ತು, ಕಾರ್ಯದರ್ಶಿ ಎ.ಪಿ. ತಿರುವುನಕ್ಕರಸು ಹಾಗೂ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮತ್ತಿತರರು ಇದ್ದರು.

Comments are closed.

Social Media Auto Publish Powered By : XYZScripts.com