ಬ್ಯಾಡ್ಮಿಂಟನ್ ಫೈನಲ್ ಗೆ ಸಿಂಧು, ಚಿಗುರಿತು ಕನಸು

ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಅವರು ಒಲಿಂಪಿಕ್ಸ್ ಕ್ರೀಡಾ ಕೂಟದಲ್ಲಿ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಆಗಸ್ಟ್ 18ರಂದು ನಡೆದ ವನಿತೆಯರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಜಯ ಸಾಧಿಸಿದರು. ಈ ಮೂಲಕ ಪ್ರಶಸ್ತಿ ಸುತ್ತಿಗೆ ಅರ್ಹತೆಯನ್ನು ಪಡೆದ ಮೊದಲ ಭಾರತೀಯ ಮಹಿಳೆ ಎಂಬ ಶ್ರೇಯಕ್ಕೆ ಇವರು ಪಾತ್ರರಾಗಿದ್ದಾರೆ.
ರೋಚಕತೆಯಿಂದ ಕೂಡಿದ್ದ ಸೆಮಿಫೈನಲ್ ಪಂದ್ಯದಲ್ಲಿ ಆಕರ್ಷಕ ಆಟವನ್ನು ಆಡಿದ ಸಿಂಧು, ಜಪಾನ್ ಎದುರಾಳಿ ವಿರುದ್ಧ ಭರ್ಜರಿ ಆಟವನ್ನು ಪ್ರದರ್ಶಿಸಿ ಫೈನಲ್‌ಗೆ ಅರ್ಹತೆಯನ್ನು ಪಡೆದುಕೊಂಡರು. ಗುರುವಾರ  ಒಲಿಂಪಿಕ್ಸ್ ಅಂಗಳದಲ್ಲಿ ನಡೆದ ಉಪಾಂತ್ಯ ಕಾದಾಟದಲ್ಲಿ ಸಿಂಧು ಅವರು ೨೧-೧೯, ೨೧-೧೦ ಅಂಕಗಳಿಂದ ಜಪಾನ್‌ನ ನೋಜೋಮಿ ಓಕಹಾರ ಅವರು ವಿರುದ್ಧ ಎರಡು ನೇರ ಸೆಟ್‌ಗಳಲ್ಲಿ ಜಯ ಸಾಧಿಸಿ ಅಂತಿಮ ಸುತ್ತು ಪ್ರವೇಶಿಸಿದರು.
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಕಂಚಿನ ಪದಕವನ್ನು ಗೆದ್ದಿದ್ದ ಭಾರತದ ಸಿಂಧು ಅವರು, ತಮ್ಮ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿಕೊಂಡಿದ್ದಾರೆ.
ಭಾರತದ ಅಭಿಮಾನಿಗಳ ಸಮ್ಮುಖದಲ್ಲಿ ಸೊಗಸಾದ ಆಟವನ್ನು ಆಡಿದ ಸಿಂಧು ಅವರು ಕೋಟ್ಯಾಂತರ ಬ್ಯಾಡ್ಮಿಂಟನ್ ಅಭಿಮಾನಿಗಳನ್ನು ರಂಜಿಸಿದರು. ಅಲ್ಲದೆ ಭಾರತದ ಪರ ಬಂಗಾರದ ಕನಸನ್ನು ಚಿಗುರಿಸಿದ್ದಾರೆ.

pv-sindhu-rio-2016 semis
ಮೊದಲ ಸೆಟ್‌ನಲ್ಲಿ ನೋಜೋಮಿ ಅವರು ಅಂಕಗಳ ಖಾತೆ ತೆರೆದರು. ಸಿಂಧು ಅವರು ಸತತ ಮೂರು ಅಂಕಗಳನ್ನು ಕಲೆ ಹಾಕಿ ಎದುರಾಳಿ ಆಟಗಾರ್ತಿಯ ಮೇಲೆ ಒತ್ತಡವನ್ನು ಹೇರಿದರು. ೪-೧ ಅಂಕಗಳಿಂದ ಮುನ್ನಡೆ ಸಾಧಿಸಿದ್ದ ಸಿಂಧು ಅವರಿಗೆ ನೋಜೋಮಿ ಕೊಂಚ ಕಾಡಿದರು. ಫಲವಾಗಿ ೫-೩ ಅಂಕಗಳಿಂದ ಚೇತರಿಕೆ ಕಂಡರು. ಈ ಹಂತದಲ್ಲಿ ಸಾಧಿಸಿದ್ದ ಮುನ್ನಡೆಯನ್ನು ಬಿಟ್ಟು ಕೊಡದೆ ಸಿಂಧು ಮೊದಲಾವಧಿಯಲ್ಲಿ ಜಯ ಸಾಧಿಸಿದರು.
ಈ ಅವಧಿಯಲ್ಲಿ ಸಿಂಧು ಪ್ರದರ್ಶಿಸಿದಿ ಗ್ಯಾಪ್ ಶಾಟ್‌ಗಳು, ಸ್ನ್ಯಾಶ್‌ಗಳಿಗೆ ಜಪಾನ್ ಆಟಗಾರ್ತಿಯ ಬಳಿ ಉತ್ತರವೇ ಇರಲಿಲ್ಲ. ನೆಟ್ ಪಕ್ಕದಲ್ಲಿ ಶಟಲ್ ಬಿಟ್ಟು ಅಂಕಗಳನ್ನು ಕದಿಯುವ ತಮ್ಮ ನೈಜ ಕಲೆಯನ್ನು ಸಿಂಧು ಮುಂದುವರೆಸಿದರು. ಅಲ್ಲದೆ ಲಾಂಗ್ ರ‍್ಯಾಲಿಗಳ ಮೂಲಕ ನೋಜೋಮಿ ಅವರನ್ನು ಕೆಣಕಿ ಅಂಕಗಳನ್ನು ಕಲೆ ಹಾಕಿದರು. ೧೨-೯, ೧೪-೧೦, ೧೬-೧೩ ಅಂಕಗಳಿಂದ ಮುನ್ನಡೆ ಸಾಧಿಸಿದ್ದ ಸಿಂಧು ಕೊನೆಯ ಹಂತದಲ್ಲೂ ಧೃತಿ ಗೆಡದೆ ಉತ್ತಮ ಸರ್ವ್‌ಗಳನ್ನು ಮಾಡಿ ಅಂಕಗಳನ್ನು ಬಾಚಿಕೊಂಡರು. ೨೧-೧೯ ಅಂಕಗಳಿಂದ ಸೆಟ್ ಗೆದ್ದ ಸಿಂಧು ಪಂದ್ಯದಲ್ಲಿ ಮುನ್ನಡೆ ಸಾಧಿಸಿದ್ದರು.

P V sindhu
ಎರಡನೇ ಹಾಗೂ ನಿರ್ಣಾಯಕ ಸೆಟ್‌ನಲ್ಲಿ ಸಿಂಧು ಸತತ ಮೂರು ಅಂಕಗಳನ್ನು ಕಲೆ ಹಾಕಿ ಮನಮೋಹಕ ಆಟವನ್ನು ಆಡಿದರು. ಆದರೆ ಈ ಹಂತದಲ್ಲಿ ಸಿಂಧುಗೆ ಶಾಕ್ ನೀಡಿದ ನೋಜೋಮಿ ೩-೫ ಅಂಕಗಳಿಂದ ಕೊಂಚ ಮುನ್ನಡೆ ಸಾಧಿಸಿದ್ದರು. ಆದರೆ ೫-೫, ೭-೭, ೯-೯ ಅಂಕಗಳಿಂದ ಸಮಬಲದಲ್ಲಿ ಸಾಗುತ್ತಿದ್ದ ಪಂದ್ಯದಲ್ಲಿ ಸಿಂಧು ನಂತರ ಅತ್ಯಾಕರ್ಷಕ ಆಟವನ್ನು ಆಡಿ ಗಮನ ಸೆಳೆದರು. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಮುನ್ನಡೆ ಹೊಂದಿದ್ದ ನೋಜೋಮಿಗೆ ಎರಡನೇ ಸೆಟ್‌ನಲ್ಲಿ ಅಂಕಗಳನ್ನು ನೀಡಲೇ ಇಲ್ಲ. ಕ್ರಾಸ್ ಕೋರ್ಟ್ ಹಾಗೂ ಆಕರ್ಷಕ ಸ್ನ್ಯಾಶ್‌ಗಳ ಮೂಲಕ ಗಮನ ಸೆಳೆದ ಸಿಂಧು ಸತತ ೧೧ ಅಂಕ ಕಲೆ ಹಾಕಿ ಸೆಟ್ ಗೆದ್ದು ಇತಿಹಾಸ ನಿರ್ಮಿಸಿದರು.

Comments are closed.