ಇನ್ಮುಂದೆ ಸರ್ಕಾರಿ ಬಸ್ಸುಗಳೇ ಬಾಸ್

KSRTCರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಗಳೇ ಇನ್ನು ರಾಜ್ಯಭಾರ ಮಾಡುವ ದಿನಗಳು ಎದುರಾಗಲಿವೆ. ಈಗಾಗಲೇ ಅನೇಕ ಕಡೆಗಳಲ್ಲಿ ಏಕಸ್ವಾಮ್ಯ ಸಾಧಿಸಿರುವ ಕೆಎಸ್ ಆರ್ ಟಿಸಿಗೆ ಸದ್ಯದಲ್ಲೇ ಇಡೀ ರಾಜ್ಯದ ಏಕಸ್ವಾಮ್ಯ ಸಿಗಲಿದೆ. ಯಾಕೆಂದರೆ ಇನ್ನು ಮುಂದೆ ಖಾಸಗಿ ಬಸ್ ಗಳಿಗೆ ಹೊಸ ಪರವಾನಗಿ ಕೊಡದಿರುವ ರೀತಿಯಲ್ಲಿ ಪ್ರದೇಶ ಸಾರಿಗೆ ಸಮಗ್ರ ರಾಷ್ಟ್ರೀಕರಣಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.

ದೇಶದಲ್ಲೇ ಅತ್ಯುತ್ತಮ ರಾಜ್ಯ ಸಾರಿಗೆ ನಿಗಮ ಎನ್ನುವ ಹೆಗ್ಗಳಿಕೆ ಕೆಎಸ್ ಆರ್ ಟಿಸಿಯದ್ದು. ಉತ್ತರ ಕರ್ನಾಟದಲ್ಲಿ ವಾಯುವ್ಯ ಸಾರಿಗೆ, ಈಶಾನ್ಯ ಸಾರಿಗೆ, ಬೆಂಗಳೂರಿನಲ್ಲಿ ಬಿಎಂಟಿಸಿ ಏಕಸ್ವಾಮ್ಯ ಸಾಧಿಸಿದ್ದು, ಕೆಎಸ್ ಆರ್ ಟಿಸಿ ಬಸ್ ಗಳು ರಾಜ್ಯಾದ್ಯಂತ ಸಂಚಾರ ಮಾಡುತ್ತಿದ್ದರೂ ಎಲ್ಲಿಯೂ ಏಕಸ್ವಾಮ್ಯ ಸಾಧಿಸಿಲ್ಲ. ಇನ್ಮುಂದೆ ಕೆಎಸ್ ಆರ್ ಟಿಸಿಯೂ ರಾಜ್ಯಾದ್ಯಂತ ಏಕಸ್ವಾಮ್ಯ ಪಡೆದುಕೊಳ್ಳುವಂತೆ ಪೂರಕವಾಗಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಇದರ ಪ್ರಕಾರ ಆರ್.ಟಿ.ಓ ಕಚೇರಿಗಳು ಖಾಸಗಿ ಬಸ್ ಗಳ ಸಂಚಾರಕ್ಕೆ ನೀಡುತ್ತಿದ್ದ ಪರವಾನಗಿ ಅಧಿಕಾರ ಮೊಟಕುಗೊಳ್ಳಲಿದೆ. ಸಾರಿಗೆ ಆಯುಕ್ತರೇ ಅಗತ್ಯ ಹೊಸ ಕೆಎಸ್ ಆರ್ ಟಿಸಿ ಬಸ್ ಗಳ ಸಂಚಾರಕ್ಕೆ ಅನುಮತಿ ನೀಡಲಿದ್ದಾರೆ.

ಹೊಸದಾಗಿ ಖಾಸಗಿ ಬಸ್ ಗಳಿಗಿಲ್ಲ ಪರ್ಮಿಟ್

busesಈವರೆಗೂ ರಾಜ್ಯದಲ್ಲಿ ಖಾಸಗಿ ಬಸ್ ಗಳು ಪ್ರಯಾಣಿಕರ ಸಂಚಾರ ಸೇತುವೆಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದವು. ಹಳ್ಳಿ ಮೂಲೆಗಳಿಗೆ ಕೂಡ ಖಾಸಗಿ ಬಸ್ ಗಳನ್ನು ಓಡಿಸುತ್ತಿದ್ದಾರೆ. ಆದರೆ ಅವುಗಳ ಸಂಚಾರಕ್ಕೆ ಯಾವುದೇ ಕುತ್ತಿಲ್ಲ. ಆದರೆ ಹೊಸದಾಗಿ ಬಸ್ ಗಳನ್ನು ಓಡಿಸಲು ಪರ್ಮಿಟ್ ನೀಡುವಂತಿಲ್ಲ. ಇದರಿಂದಾಗಿ ಇನ್ನು ಮುಂದೆ ಬಸ್ ಗಳಿಗೆ ಹೊಸ ಪರ್ಮಿಟ್ ಸಿಗುವುದಿಲ್ಲ. ಹಳೆ ಪರ್ಮಿಟ್ ಗಳಲ್ಲಿಯೇ ವಾಹನಗಳನ್ನು ಓಡಿಸಬೇಕಾಗಲಿದೆ. ಆದರೆ ಪರವಾನಗಿ ನವೀಕರಣದ ಬಗ್ಗೆ ಇನ್ನು ಯಾವುದೇ ಸ್ಪಷ್ಟತೆ ಇಲ್ಲದಿರುವುದು ಖಾಸಗಿ ಬಸ್ ಮಾಲೀಕರಲ್ಲಿ ಆತಂಕ ಮೂಡಿಸಿದೆ.

ಈ ಮಾದರಿಯನ್ನು ಈಗಾಗಲೇ ನೆರೆ ರಾಜ್ಯಗಳಾದ ತಮಿಳುನಾಡು ಹಾಗೂ ಮಹಾರಾಷ್ಟ್ರ ಸರ್ಕಾರಗಳು ಅನುಷ್ಠಾನಗೊಳಿಸಿವೆ. ಅಲ್ಲಿ ರಾಜ್ಯ ಸಾರಿಗೆ ನಿಗಮದ್ದೇ ಏಕಸ್ವಾಮ್ಯ ಇದೆ. ಅದೇ ಮಾದರಿಯನ್ನು ರಾಜ್ಯದಲ್ಲಿಯೂ ಅನುಸರಿಸಲು ಸರ್ಕಾರ ಮುಂದಾಗಿದ್ದು, ಸಧ್ಯಕ್ಕೆ ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಸಲ್ಲಿಕೆಗೆ ಒಂದು ತಿಂಗಳ ಗಡುವು ನೀಡಿದೆ. ಆಕ್ಷೇಪಣೆ ಸಲ್ಲಿಕೆ ಬಳಿಕ ಅಹವಾಲು ಸ್ವೀಕರಿಸಿ ನಂತರ ಸಾಧಕ ಬಾಧಕಗಳನ್ನು ಪರಿಶೀಲಿಸಿ ಆಮೇಲಷ್ಟೇ ಅಂತಿಮ ಅಧಿಸೂಚನೆ ಹೊರಡಿಸಲಿದೆ.vidhana soudha

ರಾಜ್ಯ ಸರ್ಕಾರದ ಈ ನಿರ್ಧಾರವನ್ನು ಖಾಸಗಿ ಬಸ್ ಮಾಲೀಕರ ಸಂಘ ಯಾವ ರೀತಿ ಪರಿಗಣಿಸಲಿದೆ ಎನ್ನುವುದು ಸಧ್ಯದ ಪ್ರಶ್ನೆಯಾಗಿದೆ. ಆದರೂ ಇರುವ ಬಸ್ ಗಳ ಪರವಾನಗಿಯನ್ನು ರದ್ದುಗೊಳಿಸದ ಹಿನ್ನಲೆಯಲ್ಲಿ ಈಗಾಗಲೇ ಸಂಚರಿಸುತ್ತಿರುವ ಬಸ್ ಗಳ ಸಂಚಾರಕ್ಕೆ ಕುತ್ತಿಲ್ಲ. ಆದ್ದರಿಂದ ಖಾಸಗಿ ಬಸ್ ಮಾಲೀಕರು ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಕಡಿಮೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನೆರಡು ತಿಂಗಳಿನಲ್ಲಿ ನೂತನ ಸಾರಿಗೆ ನೀತಿ ಜಾರಿಗೆ ಬರಲಿದ್ದು, ರಾಜ್ಯದ ರಸ್ತೆ ಸಾರಿಗೆ ಕ್ಷೇತ್ರದಲ್ಲಿ ಕೆಎಸ್ ಆರ್ ಟಿಸಿ ಅಧಿಪತ್ಯ ಸ್ಥಾಪಿತಗೊಳ್ಳಲಿದೆ.

Comments are closed.

Social Media Auto Publish Powered By : XYZScripts.com