ಪಂಚಭೂತಗಳಲ್ಲಿ ಕಾಶಿ ಲೀನ

kashiಸಂಕೇತ್ ಕಾಶಿಯವರ ಅಂತ್ಯ ಕ್ರಿಯೆಯನ್ನು ಬನಶಂಕರಿಯ ರುದ್ರಭೂಮಿಯಲ್ಲಿ ವೀರಶೈವ ವಿಧಿವಿಧಾನದಂತೆ ನೆರವೇರಿಸಲಾಯಿತು. ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ಕಾಶಿಯವರು ನಿನ್ನೆ ಕೊನೆಯುಸಿರೆಳೆದಿದ್ದರು. 1989ರಲ್ಲಿ `ಮಧುಮಾಸ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಕಾಶಿಯವರು ರಂಗಭೂಮಿಯಲ್ಲೂ ಸಕ್ರಿಯರಾಗಿದ್ದರು. ಸಜ್ಜನ, ಸಹೃದಯಿ ಕಾಶಿಯವರ ಅಗಲಿಕೆಗೆ ರಂಗಭೂಮಿ ಮತ್ತು ಚಿತ್ರರಂಗ ಕಂಬನಿ ಮಿಡಿದಿದೆ.

ನವರಸ ನಾಯಕ ಜಗ್ಗೇಶ್, ರಂಗಾಯಣ ರಘು, ಶ್ರೀನಿವಾಸ್ ಮೂರ್ತಿ, ಜಯಶ್ರೀ, ಅರುಣ್ ಸಾಗರ್ ಸೇರಿ ಸಾಕಷ್ಟು ಕಲಾವಿದರು ಕಾಶಿಯವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಮಾತ್ರವಲ್ಲದೇ ಅಂತ್ಯಕ್ರಿಯೆಯಲ್ಲೂ ಪಾಲ್ಗೊಂಡರು. ದಿವಂಗತ ಕಾಶಿಯವರು ತಾಯಿಯ ಹಾರೈಕೆಗೋಸ್ಕರ ಮದುವೆಯಾಗದೇ ಕೊನೆವರೆಗೂ ಬ್ರಹ್ಮಚಾರಿಯಾಗಿಯೇ ಉಳಿದರು ಅಂತ ಅವರ ಆಪ್ತರು ಹೇಳುತ್ತಾರೆ. ಅವರು ಬಹುತೇಕ ಹಾಸ್ಯಪ್ರಧಾನ ಪಾತ್ರಗಳಿಂದಲೇ ಕನ್ನಡ ಸಿನಿಮಾಗಳಲ್ಲಿ ಮತ್ತು ರಂಗಭೂಮಿಯಲ್ಲಿ ಗಮನಸೆಳೆದಿದ್ದರು.

ದಿವಂಗತ ಶಂಕರ್ನಾಗ್ ಕಟ್ಟಿದ ಸಂತೇತ್ ತಂಡದಲ್ಲಿ ಒಬ್ಬರಾಗಿದ್ದ ಇವರು ಸಂಕೇತ್ ಕಾಶಿ ಅಂತಲೇ ಮುಂದೆ ಚಿರಪರಿಚಿತರಾದರು. ಶಂಕರ್ನಾಗ್ ಅವರ ಪರಮಾಪ್ತ ಸ್ನೇಹಿತರಲ್ಲಿ ಇವರು ಒಬ್ಬರಾಗಿದ್ದ ಕಾಶಿಯವರು ಉಲ್ಟಾ ಪಲ್ಟಾ, ನಮ್ಮೂರ ಮಂದಾರ ಹೂವೆ, ಮನೆ ದೇವ್ರು, ಅಣ್ಣಯ್ಯ, ಮಾಂಗಲ್ಯಂ ತಂತುನಾನೇನಾ, ವೆಂಕಟಾ ಇನ್ ಸಂಕಟ, ಅಲೆಮಾರಿ, ಕಿರಾತಕ ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ್ದರು. ಪುನೀತ್ ರಾಜ್ಕುಮಾರ್ ಅವರ ರಾಜ್ಕುಮಾರ ಸಿನಿಮಾ ಮತ್ತು ಜಾನ್ ಜಾನಿ ಜನಾರ್ಧನ್ ಕಾಶಿ ಅವರು ನಟಿಸಿದ ಕೊನೆಯ ಚಿತ್ರಗಳು.

Comments are closed.

Social Media Auto Publish Powered By : XYZScripts.com