ಗಾರ್ಡನ್ ಸಿಟಿಯಲ್ಲಿ ಹೂಗಳ ಹಬ್ಬ ಶುರುವಾಗಿದೆ

flower showಸಸ್ಯಕಾಶಿ ಲಾಲ್ ಬಾಗಿನಲ್ಲಿ ಹೂಗಳ ಹಬ್ಬ ಮತ್ತೆ ಶುರುವಾಗಿದೆ. ಸ್ವಾತಂತ್ರ್ಯೋತ್ಸವದ ಫಲಪುಷ್ಪ ಪ್ರದರ್ಶನ ಆಗಸ್ಟ್ 6ರಿಂದ 15ರವರಗೆ ನಡೆಯಲಿದೆ. ಲಕ್ಷಾಂತರ ಜನ ಈಗಾಗಲೇ ಲಾಲ್ ಬಾಗಿಗೆ ಭೇಟಿ ಕೊಡುತ್ತಿದ್ದು ಇಂದು ಭಾನುವಾರ ಆಗಿರುವುದರಿಂದ ಅಂದುಕೊಂಡದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಕರು ಗಾಜಿನ ಮನೆಗೆ ಭೇಟಿ ಕೊಟ್ಟಿದ್ದಾರೆ ಎನ್ನಲಾಗಿದೆ.

ಈ ಬಾರಿ ಫಲಪುಷ್ಪ ಪ್ರದರ್ಶನದ ಮುಖ್ಯ ಆಕರ್ಷಣೆ ಹೂಗಳಲ್ಲೇ ನಿರ್ಮಿಸಿದ ಸಂಸತ್ ಭವನದ ಪ್ರತಿರೂಪ. ಸುಮಾರು 4 ಲಕ್ಷ ಡಚ್ ತಳಿಯ ಗುಲಾಬಿಗಳಿಂದ ನಿರ್ಮಾಣವಾಗಿರುವ ಈ ಬೃಹತ್ ಪ್ರತಿಕೃತಿ ಬರೋಬ್ಬರಿ 27 ಅಡಿ ಎತ್ತರವಿದ್ದು 40 ಅಡಿ ಸುತ್ತಳತೆ ಹೊಂದಿದೆ. ಇದೇ ಮೊದಲ ಬಾರಿಗೆ ಗಾಜಿನ ಮನೆಯೊಳಗೆ ಕೃತಕ ಮಂಜಿನ ವ್ಯವಸ್ಥೆ ಮಾಡಲಾಗಿದೆ. ಇಸ್ರೇಲ್ ತಂತ್ರಜ್ಞಾನದ ಮಿಸ್ಟಿಂಗ್ ಮಶೀನ್ ಪ್ರತಿ 10 ನಿಮಿಷಗಳಿಗೊಮ್ಮೆ ಗಾಜಿನ ಮನೆಯ ತುಂಬೆಲ್ಲಾ ಮಂಜನ್ನು ಸಿಂಪಡಿಸುತ್ತದೆ. ಇದರಿಂದ ಹೂಗಳು ಹೆಚ್ಚು ಹೊತ್ತು ಫ್ರೆಶ್ ಆಗಿ ಇರಲು ಸಾಧ್ಯವಾಗುತ್ತದೆ.lal2

ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಈ ಬಾರಿಯ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದೆ. ಲಾಲ್ ಬಾಗಿನ 4 ದ್ವಾರಗಳಲ್ಲೂ ಮೆಟಲ್ ಡಿಟೆಕ್ಟರ್ ಇರಿಸಲಾಗಿದ್ದು ಭದ್ರತೆಗಾಗಿ ಸುಮಾರು 300 ಪೋಲಿಸರ ವಿಶೇಷ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ. ವಾರಾಂತ್ಯದಲ್ಲಿ 50 ರೂಪಾಯಿ ಪ್ರವೇಶ ದರ ನಿಗದಿಪಡಿಸಿದ್ದು ಉಳಿದ ದಿನಗಳಲ್ಲಿ 40 ರೂಪಾಯಿ ಟಿಕೆಟ್ ದರ ಇರಲಿದೆ. 12 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶವಿದ್ದು ಉಳಿದಂತೆ ಮಕ್ಕಳಿಗೆ 20 ರೂಪಾಯಿ ಪ್ರವೇಶ ದರ ಇದೆ. ತೋಟಗಾರಿಕಾ ಸಚಿವ ೆಸ್ ಎಸ್ ಮಲ್ಲಿಕಾರ್ಜುನ ಸ್ವಾತಂತ್ರ್ಯೋತ್ಸವದ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿದರು.

ಇಕ್ಸೋರಾ, ಪೆಂಟಾಸ್, ಗುಲಾಬಿ, ಪೆಟೂನಿಯಾ, ಚೆಂಡು ಹೂ, ಫ್ಲಾಕ್ಸ್, ಜರೇನಿಯಂ ಮುಂತಾದ ಬೇಸಿಗೆಯ ಹೂಗಳು ಸ್ವಾತಂತ್ರ್ಯೋತ್ಸವದ ಫಲಪುಷ್ಪ ಪ್ರದರ್ಶನದಲ್ಲಿ ನಳಸಳಿಸುತ್ತಿವೆ. 10 ದಿನಗಳ ಫಲಪುಷ್ಪ ಪ್ರದರ್ಶನಕ್ಕೆ 2.5ರಿಂದ 3 ಲಕ್ಷ ಜನ ಭೇಟಿ ನೀಡುವ ನಿರೀಕ್ಷೆ ತೋಟಗಾರಿಕಾ ಇಲಾಖೆಗಿದೆ.

Comments are closed.