ನಾಳೆಯಿಂದ ಸಂಸತ್ತಿನ ಮುಂಗಾರು ಅಧಿವೇಶನ…

ನಾಳೆಯಿಂದ 20 ದಿನಗಳ ಕಾಲ ಸಂಸತ್ ಮುಂಗಾರು ಅಧಿವೇಶನ ನಡೆಯಲಿದೆ. ಸುಗಮ ಕಲಾಪದ ಜೊತೆಗೆ ಮಹತ್ವಕಾಂಕ್ಷಿ ಜಿಎಸ್ಟಿ ಮಸೂದೆಗೆ ಅಧಿವೇಶನದಲ್ಲಿ ಶತಾಯಗತಾಯ ಅಂಗೀಕಾರ ಪಡೆಯೋಕೆ ಮುಂದಾಗಿದೆ. ಆದ್ರೆ, ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಪ್ರಹಾರ ನಡೆಸಲು ಪ್ರಬಲ ಅಸ್ತ್ರಗಳನ್ನೆ ಹಿಡಿದು ಕಾಯುತ್ತಿದೆ. ಹೀಗಾಗಿ ಸಂಸತ್ ಕಲಾಪ ಕುತೂಹಲ ಮೂಡಿಸಿದೆ..

ಈ ಬಾರಿಯ ಸಂಸತ್ ಅಧಿವೇಶನ ತೀವ್ರ ಕುತೂಹಲ ಮೂಡಿಸಿದೆ. ಕೇವಲ 20 ಗಳ ಶಾರ್ಟ್ ಟರ್ಮ್ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ತನ್ನ ಮಹತ್ವಾಕಾಂಕ್ಷಿ ಜಿಎಸ್ಟಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಶತಾಯಗತಾಯ ಅಂಗೀಕಾರ ಪಡೆಯಲು ಶತಪ್ರಯತ್ನ ನಡೆಸ್ತಿದೆ. ಈ ಸಂಬಂಧ ಇಂದು ದೆಹಲಿಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಹಿತಾಸಕ್ತಿಗಾಗಿ ಜಿಎಸ್ಟಿ ಮಸೂದೆ ಅಂಗೀಕಾರಕ್ಕೆ ಸಹಕಾರ ನೀಡಿ ಅಂತಾ ಮನವಿಮಾಡಿದ್ದಾರೆ.

ರಾಷ್ಟ್ರೀಯ ಹಿತಾಸಕ್ತಿಯೇ ಮುಖ್ಯ:

ಬೇರೆಲ್ಲದಕ್ಕಿಂತ ಹೆಚ್ಚಾಗಿ ನಾವೆಲ್ಲರು ರಾಷ್ಟ್ರೀಯ ಹಿತಾಸಕ್ತಿಯನ್ನ ಗೌರವಿಸಬೇಕು.ರಾಷ್ಟ್ರೀಯ ಹಿತಾಸಕ್ತಿ ವಿಚಾರಗಳಲ್ಲಿ ಕೇಂದ್ರ ಸರ್ಕಾರ ಲಾಭದ ಚಿಂತನೆ ನಡೆಸಲಾಗದು. ಹೀಗಾಗಿ ನಾಳಿನ ಅಧಿವೇಶನದಲ್ಲಿ ಜಿಎಸ್ಟಿ ಸೇರಿ ಹಲವು ಮಸೂದೆಗಳು ಪ್ರಸ್ತಾಪವಾಗಲಿದೆ. ಅರ್ಥಪೂರ್ಣ ಚರ್ಚೆ ಜೊತೆ ಪೂರಕ ಫಲಿತಾಂಶವನ್ನ ನಾನು ಈ ಅಧಿವೇಶನದಲ್ಲಿ ನಿರೀಕ್ಷಿಸುತ್ತೇನೆ ಅಂತ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಆದ್ರೆ ಕೇಂದ್ರ ಸರ್ಕಾರದ ಈ ಪ್ರಯತ್ನಕ್ಕೆ ಈ ಬಾರಿಯೂ ಭಾರೀ ಸವಾಲುಗಳೇ ಎದುರಾಗುವ ಸಾಧ್ಯತೆ ಇದೆ. ಯಾಕೆಂದ್ರೆ, ಕೇಂದ್ರ ಸಚಿವರ ಮಾತುಕತೆಗೆ ಮಣಿಯದ ಕಾಂಗ್ರೆಸ್ ಮುಖಂಡರು ಜಿಎಸ್ಟಿ ಮಸೂದೆಗೆ ರಾಜ್ಯಸಭೆಯಲ್ಲಿ ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ.ಈ ಬಗ್ಗೆ ಈಗಾಗ್ಲೇ ಕಾಂಗ್ರೆಸ್ ಮುಖಂಡರು ಮುನ್ಸೂಚನೆಯನ್ನು ನೀಡಿದ್ದಾರೆ. ಅಷ್ಟೆ ಅಲ್ಲಾ ಲೋಕಸಭೆಯಲ್ಲಿ ಪ್ರಸ್ತುತ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರ ಪ್ರಕರಣ ಸಂಬಂಧ ಕಾಂಗ್ರೆಸ್ ಸರ್ಕಾರದ ಉತ್ತರ ಕೇಳಲು ಬಯಸಿದೆ. ಮೇಲಾಗಿ ಅರುಣಾಚಲ ಪ್ರದೇಶದ ವಿಚಾರದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನ ಪ್ರಸ್ತಾಪಿಸಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಲು ಸಿದ್ಧತೆ ನಡೆಸಿದೆ. ಇದರ ಜೊತೆಯಲ್ಲಿ ಏಕರೂಪ ನಾಗರಿಕ ಸಂಹಿತೆ ವಿಚಾರ, ಎನ್ಎಸ್ಜಿ ಸದಸ್ಯತ್ವ ಪಡೆಯುವಲ್ಲಿ ವಿಫಲವಾಗಿರೋ ಬಗ್ಗೆ, ಬೆಲೆ ಏರಿಕೆ, ಪ್ರವಾಹ ಪರಿಸ್ಥಿತಿ ನಿರ್ವಹಣೆ ಬಗ್ಗೆ ಪ್ರತಿಪಕ್ಷಗಳು ಸರ್ಕಾರವನ್ನ ತರಾಟೆ ತೆಗೆದುಕೊಳ್ಳಲಿವೆ ಎನ್ನಲಾಗ್ತಿದೆ..ಇವೆಲ್ಲದರ ನಡುವೆ ಹಲವು ಮಸೂದೆಗಳು ಅಂಗೀಕಾರ ಪಡೆಯೋಕೆ ಸಿದ್ಧವಾಗಿದೆ.

ಮುಂಗಾರು ಅಧಿವೇಶನದ ಹೈಲೆಟ್ಸ್

ಲೋಕಸಭೆಯಲ್ಲಿ 10 ಮಸೂದೆ ಚರ್ಚೆಗೆ

ಗ್ರಾಹಕ ಸಂರಕ್ಷಣಾ ಮಸೂದೆ 2015

ಬೇನಾಮಿ ವ್ಯವಹಾರ ತಡೆ ತಿದ್ದುಪಡಿ ವಿಧೇಯಕ 2015

ಲೋಕಪಾಲ,ಲೋಕಾಯುಕ್ತ ಹಾಗು ಇತರೆ ಕಾನೂನು ತಿದ್ದುಪಡಿ

ರಾಜ್ಯಸಭೆಯಲ್ಲಿ ಜಿಎಸ್ಟಿ ಮಸೂದೆ ಚರ್ಚೆ

ಭ್ರಷ್ಟಾಚಾರ ನಿಗ್ರಹ ತಿದ್ದುಪಡಿ ವಿದೇಯಕ 2013

ವಿಶಲ್ ಬ್ಲೋವರ್ಸ್ ಸಂರಕ್ಷಣೆ ತಿದ್ದುಪಡಿ ವಿದೇಯಕ 2015

ಅಂಗೀಕಾರಕ್ಕೆ ಕಾಯುತ್ತಿದೆ 45 ಮಸೂದೆ

20 ದಿನಗಳ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಕನಿಷ್ಟ 10 ಮಸೂದೆಗಳಿಗೆ ಕೇಂದ್ರ ಸರ್ಕಾರ ಅಂಗೀಕಾರ ಪಡೆಯುವ ನಿರೀಕ್ಷೆಯಿದೆ. ಗ್ರಾಹಕ ಸಂರಕ್ಷಣಾ ಮಸೂದೆ 2015, ಬೇನಾಮಿ ವ್ಯವಹಾರ ತಡೆ ತಿದ್ದುಪಡಿ ವಿಧೇಯಕ 2015, ಲೋಕಪಾಲ, ಲೋಕಾಯುಕ್ತ ಹಾಗು ಇತರೆ ಕಾನೂನು ತಿದ್ದುಪಡಿ ವಿಧೇಯಕಗಳು ಅಂಗೀಕಾರಕ್ಕೆ ಕಾಯುತ್ತಿವೆ. ಲೋಕಸಭೆಯಲ್ಲಿ ಬಹುಮತ ಹೊಂದಿರೋದ್ರಿಂದ ಈ ಮಸೂದೆಗಳಿಗೆ ಸರ್ಕಾರ ಅಂಗೀಕಾರ ಪಡೆಯೋದು ಸುಲಭ. ಆದ್ರೆ ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ ಬಹುಮತದ ಕೊರತೆ ಇದೆ. ಈ ಕಾರಣಕ್ಕೆ ಸರ್ಕಾರ ರಾಜ್ಯಸಭೆಯಲ್ಲಿ ಜಿಎಸ್ಟಿ ಮಸೂದೆ ಅಂಗೀಕಾರಕ್ಕೆ ಶತಪ್ರಯತ್ನ ಪಡುತ್ತಿರೋದು. ಇದಲ್ಲದೆ, ಭ್ರಷ್ಟಾಚಾರ ನಿಗ್ರಹ ತಿದ್ದುಪಡಿ ವಿದೇಯಕ 2013, ವಿಶಲ್ ಬ್ಲೋವರ್ಸ್ ಸಂರಕ್ಷಣೆ ತಿದ್ದುಪಡಿ ವಿಧೇಯಕ 2015 ಸೇರಿದಂತೆ 45 ಮಸೂದೆಗಳು ರಾಜ್ಯಸಭೆಯಲ್ಲಿ ಅಂಗೀಕಾರದ ನಿರೀಕ್ಷೆಯಲ್ಲಿದೆ.. ಒಟ್ಟಾರೆ, ಅಜೆಂಡಾದಂತೆ ಮುಂಗಾರು ಅಧಿವೇಶನ ಆರಂಭವಾದ್ರೂ, ಪ್ರತಿಪಕ್ಷಗಳ ಪ್ರತಿರೋಧ, ಕೇಂದ್ರ ಸರ್ಕಾರದ ಒತ್ತಾಸೆಗಳ ಮಧ್ಯೆ ಉಭಯ ಸದನಗಳ ಕಲಾಪ ವ್ಯರ್ಥವಾಗ್ತಿರೋದಕ್ಕೆ ಹಿಂದಿನ ಅಧಿವೇಶನಗಳು ಸಾಕ್ಷಿಯಾಗಿದೆ. ಆದ್ರೆ, ಮೋದಿ ಸಂಪುಟ ಪುನಾರಚನೆ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಹಿಂದಿನ ಕಲಾಪಕ್ಕಿಂತ ಭಿನ್ನವಾಗಿ ನಡೆಯಬೇಕಿದೆ..

Comments are closed.

Social Media Auto Publish Powered By : XYZScripts.com