ಜೈಲಿಂದ ಹೊರಬಂದ ಪಟೇಲ್ ಗೆ “ಹಾರ್ದಿಕ” ಸ್ವಾಗತ

ಪಟೇಲ್ ಕಮ್ಯೂನಿಟಿಗೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ಗುಜರಾತ್ ನಲ್ಲಿ ಭಾರೀ ಸಂಚಲನ ಮೂಡಿಸಿದ್ದ ಹಾರ್ದಿಕ್ ಪಟೇಲ್ ಗೆ ಕೊನೆಗೂ ಜಾಮೀನು ಸಿಕ್ಕಿದೆ. ಗುಜರಾತ್ ಹೈಕೋರ್ಟ್ ಜಾಮೀನು ನೀಡಿದ್ದು, ಮುಂದಿನ 48 ಗಂಟೆಗಳ ಒಳಗೆ ಗುಜರಾತ್ ತೊರೆಯುವಂತೆ ಸೂಚಿಸಿದೆ. ಹಾಗೇ ಆರು ತಿಂಗಳ ಕಾಲ ರಾಜ್ಯದಿಂದ ಹೊಗುಳಿಯುವಂತೆ ಸೂಚಿಸಿದೆ. ಹೀಗಾಗಿ ಮುಂದಿನ ಆರು ತಿಂಗಳು ಕಾಲ ಹಾರ್ದಿಕ್ ಉದಯ್ ಪುರದ ರಾಜಸ್ಥಾನ್ ನಲ್ಲಿ ವಾಸಿಸಲಿದ್ದಾರೆ.

ಒಂಬತ್ತು ತಿಂಗಳು ಕಾಲ ಜೈಲುವಾಸ ಅನುಭವಿಸಿ ಹೊರಬಂದ ಹಾರ್ದಿಕ್ ಪಟೇಲ್ ತನ್ನ ಹೋರಾಟವನ್ನ ಯಾರಿಂದಲೂ ಹತ್ತಿಕ್ಕುವದಕ್ಕೆ ಸಾಧ್ಯವಿಲ್ಲ ಅಂತ ಗುಡುಗಿದ್ದಾರೆ. ಸೌರಾಷ್ಟ್ರ ಭಾಗದ ಹಲವೆಡೆ ರೋಡ್ ಶೋ ನಡೆಸಿದ ಪಟೇಲ್ ಗೆ ತಮ್ಮ ಹುಟ್ಟೂರಾದ ಅಹಮದಾಬಾದ್ ಜಿಲ್ಲೆಯ ವಿಮಾಗ್ರಾಮ್ ಗೆ ಆಗಮಿಸುತ್ತಿದ್ದಂತೆ ಭರ್ಜರಿ ಸ್ವಾಗತ ಸಿಕ್ಕಿತು.

ತನ್ನೂರಿಗೆ ಬಂದ ಹಾರ್ದಿಕ್ ಅವರನ್ನ ಸ್ಥಳೀಯ ಕಾಂಗ್ರೇಸ್ ಶಾಸಕಿ ತೇಜಶ್ರೀ ಪಟೇಲ್ ಸ್ವಾಗತ  ಮಾಡಿದರು. ನಂತರ ತಮ್ಮ ಶಾಲೆಗೆ ಭೇಟಿ ನೀಡಿ ಕೆಲ ಸಮಯ ಕಳೆದರು. ಅದಾದ ಮೇಲೆ ಮನೆಗೆ ತೆರಳಿದ ಅವರು ಅಲ್ಲಿ ಕುಟುಂಬ, ಬೆಂಬಲಿಗರು  ಹಾಗೂ ಮಿತ್ರರ  ಜೊತೆ ಇದ್ದದ್ದು ಕೇವಲ 20 ನಿಮಿಷ ಮಾತ್ರ.

ನನಗೆ ರಾಜಕೀಯದಲ್ಲಿ ಆಸಕ್ತಿಯಿಲ್ಲ. ನಾನು ನಮ್ಮ ಸಮುದಾಯದ ಹಕ್ಕುಗಳಿಗಾಗಿ ಈ ಹೋರಾಟ ಮಾಡುತ್ತಿರುವುದು

ಹೀಗೆ ತಮ್ಮ ರ್ಯಾಲಿಯುದ್ದಕ್ಕೂ ಹೇಳುತ್ತಿದ್ದ ಹಾರ್ದಿಕ್ ಮತ್ತೇ ಪ್ರಧಾನಿ ಮೋದಿ ಅವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಈ ಹೋರಾಟ ಮತ್ತೆ ಗರಿಗೆದರಲಿದೆ ಅನ್ನುವದರ ಸುಳಿವು ಅವರ ಪ್ರತಿ ಮಾತಿನಲ್ಲಿಯೂ ವ್ಯಕ್ತವಾಗ್ತಾಯಿತ್ತು.

ನಮ್ಮ ಪಟೇಲ್ ಸಮುದಾಯಕ್ಕೆ ಮೀಸಲಾತಿ ಬೇಕಿದೆ ಹೊರತು, 56 ಇಂಚಿನ ಎದೆಯಲ್ಲ. ಈ ಹೋರಾಟ ನಾನಿಲ್ಲದಿದ್ದರೂ ನಿರಂತರವಾಗಿರುತ್ತೆ

ಈಗಾಗಲೇ ಹಾರ್ದಿಕ್ ಪಟೇಲ್ ಆಮ್ ಆದ್ಮಿ ಪಕ್ಷ ಸೇರಿಕೊಳ್ತಾರೆ ಅನ್ನೋ ಸುದ್ದಿ ಹಬ್ಬಿದ್ದು, ಅವರನ್ನ ಮುಂದಿನ ಗುಜರಾತ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲಾಗುತ್ತದೆ ಅನ್ನೋ ಮಾತು ಕೇಳಿ ಬರುತ್ತಿವೆ. ಈ ಊಹಾಪೋಹಗಳಿಗೆ ಪ್ರತಿಕ್ರಿಯೆ ನೀಡಿದ ಹಾರ್ದಿಕ್ “ಇದೆಲ್ಲಾ ಗಾಳಿಸುದ್ದಿ” ಅಂತಷ್ಟೇ ಹೇಳಿದ್ದು.

 

Comments are closed.

Social Media Auto Publish Powered By : XYZScripts.com