ಕಾಶ್ಮೀರ್ ಅಗ್ನಿಕುಂಡ: ಟೀವಿ, ನ್ಯೂಸ್ ಪೇಪರ್ ಬ್ಯಾನ್

ಹೊತ್ತಿ ಉರಿಯುತ್ತಿರುವ ಕಾಶ್ಮೀರ ಯಾಕೋ ತಣ್ಣಗಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಕಳೆದ ಕೆಲವು ದಿನಗಳಿಂದ ಭುಗಿಲೆದ್ದಿರುವ ಆಂತರಿಕ ಹಿಂಸಾಕಾಂಡ ನಿಯಂತ್ರಣಕ್ಕೆ ಬರುತ್ತಿಲ್ಲ. ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವಿನ ಸಂಘರ್ಷ ಮುಂದುವರೆದಿದ್ದು ಈಗಾಗಲೇ ಪ್ರಾಣ ಕಳೆದುಕೊಂಡವರ ಸಂಖ್ಯೆ 40 ದಾಟಿದೆ. ಸಾವಿರಾರು ಜನ ಗಾಯಗೊಂಡಿದ್ದಾರೆ.

ಪರಿಸ್ಥಿತಿ ಹತೋಟಿಗೆ ಬರದ ಕಾರಣ ಕರ್ಫ್ಯೂ ಮುಂದುವರೆದಿದ್ದು,  ಸರ್ಕಾರ ತೀವ್ರ ನಿರ್ಧಾರಗಳನ್ನ ತೆಗೆದುಕೊಳ್ಳುತ್ತಿದೆ. ಅದಾಗಲೇ ಮೊಬೈಲ್ ಹಾಗೂ ಇಂಟರ್ ನೆಟ್ ಸೇವೆ ಭಾಗಶಃ ಸ್ಥಗಿತಗೊಂಡಿದ್ದು, ಈಗ ಸರ್ಕಾರದ ವಕ್ರದೃಷ್ಟಿ ಮಾಧ್ಯಮಗಳ ಮೇಲೆ ಬಿದ್ದಿದೆ.

ಪತ್ರಕರ್ತರಿಗೆ ಮನೆಯಲ್ಲಿ ರೆಸ್ಟ್ ತೆಗೆದುಕೊಳ್ಳುವದಕ್ಕೆ ಹೇಳಿದ ಸರ್ಕಾರ

ಗಲಭೆಯನ್ನ ಹತ್ತಿಕ್ಕುವಲ್ಲಿ ವಿಫಲವಾಗಿರುವ ಸರ್ಕಾರ ತನ್ನ ಕೋಪವನ್ನ ಮಾಧ್ಯಮಗಳ ಮೇಲೆ ತೋರಿಸಿಕೊಂಡಿದೆ. ಈಗಾಗಲೇ ಕೆಲ ಪ್ರಮುಖ ಇಂಗ್ಲೀಷ್ ಹಾಗೂ ಸ್ಥಳೀಯ ದಿನಪತ್ರಿಕೆಗಳ ಕಛೇರಿ ಮೇಲೆ ದಾಳಿ ಮಾಡಿರುವ ಕಾಶ‍್ಮೀರ್ ಪೊಲೀಸ್ ಪತ್ರಿಕಾ ಪ್ರತಿಗಳನ್ನ ವಶಪಡಿಸಿಕೊಂಡು, ಮುದ್ರಣ ಮಾಡದಂತೆ ತಾಕೀತು ಮಾಡಿದ್ದಾರೆ. ಜೊತೆಗೆ ಎಲ್ಲಾ ನ್ಯೂಸ್ ಚಾನೆಲ್ ಪ್ರಸಾರ ಸ್ಥಗಿತಗೊಳಿಸಿದ್ದು, ಕೇವಲ ಮನರಂಜನಾ ವಾಹಿನಿಗಳು ಮಾತ್ರ ಲಭ್ಯವಾಗುತ್ತಿವೆ.

ಸರ್ಕಾರದ ಈ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪತ್ರಕರ್ತರು ಇದು ಪತ್ರಿಕಾ ಸ್ವಾತಂತ್ರ್ಯ ಹರಣ. ಇದನ್ನ ಯಾವ ಕಾರಣಕ್ಕೂ ಸಹಿಸಿಕೊಳ್ಳುವದಕ್ಕೆ ಸಾಧ್ಯವಿಲ್ಲ ಅಂತ ಪ್ರತಿಕ್ರಿಯಿಸಿದ್ದಾರೆ.

ಕೆಲ ದಿನಗಳ ಮಟ್ಟಿಗೆ ನೀವು ಮನೆಯಲ್ಲಿ ಇರೋದು ಒಳ್ಳೇದು    – ಬಿಜೆಪಿ-ಪಿಡಿಪಿ ಸರ್ಕಾರದ ಹಿರಿಯ ಮಂತ್ರಿ

ಸರ್ಕಾರದ ಈ ನಡೆ ಹೊಸದೇನಲ್ಲ. ಇಂಥಹ ನಿರ್ಧಾರಗಳನ್ನ 2008 ಹಾಗೂ 2010ರ ಹಿಂಸಾಚಾರದ ವೇಳೆಯಲ್ಲಿಯೂ ತೆಗೆದುಕೊಳ್ಳಲಾಗಿತ್ತಂತೆ. ಒಟ್ಟಿನಲ್ಲಿ ಕಣಿವೆ ರಾಜ್ಯದಲ್ಲಿನ ಸಂಘರ್ಷ ಹಾಗೇ ಮುಂದುವರೆದಿದ್ದು, ಸರ್ಕಾರಕ್ಕೆ ಪರಿಸ್ಥಿತಿ ನಿಭಾಯಿಸುವುದೇ ಬಹು ದೊಡ್ಡ ಸವಾಲಾಗಿ ಪರಿಣಮಿಸಿದೆ.

Comments are closed.