ಸರ್ಕಾರದ ಭಿಕ್ಷೆ ಬೇಕಿಲ್ಲ… ಅಭಿಮಾನ್ ಸ್ಟುಡಿಯೋಗೆ ಕಾಲಿಡಲ್ಲ…!!

1

ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿಚಾರ ಸದ್ಯಕ್ಕೆ ಬಗೆಹರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಒಂದು ಹಂತದಲ್ಲಿ ಇಂದು(ಜೂನ್೧೮) ಸಮಸ್ಯೆಗಳೆಲ್ಲಾ ಬಗೆಹರಿಯಿತು, ಇನ್ನು ಸ್ಮಾರಕ ನಿರ್ಮಾಣಕ್ಕೆ ಚಾಲನೆ ಕೊಡುವುದಷ್ಟೆ ಬಾಕಿ ಅಂದುಕೊಳ್ಳೊ ಸಮಯದಲ್ಲಿ ಭಾರತಿ ವಿಷ್ಣುವರ್ಧನ್ ಹೊಸ ಬಾಂಬ್ ಸಿಡಿಸಿ ಅಭಿಮಾನಿಗಳ ಸ್ಮಾರಕ ನಿರ್ಮಾಣ ಆಸೆಗೆ ತಣ್ಣೀರೆರೆಚಿದ್ದಾರೆ.

ಸ್ಮಾರಕವನ್ನ ಮೈಸೂರಿಗೆ ಸ್ಥಳಾಂತರಬಾರದು ಅಂತ ಹಲವು ದಿನಗಳಿಂದ ಅಭಿಮಾನಿಗಳು ಹೋರಾಟ ನಡೆಸುತ್ತಾ ಬರುತ್ತಿದ್ದಾರೆ. ಅದರಲ್ಲೂ ಡಾ. ವಿಷ್ಣು ಸೇನಾ ಸಮಿತಿ ಸದಸ್ಯರು ಕಳೆದೆರಡು ವಾರಗಳಿಂದ ಧರಣಿ ಕೂಡ ನಡೆಸುತ್ತಿದ್ದರು. ಇಂದು ಧರಣಿ ಸ್ಥಳಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ವಿ. ಶಂಕರ್ ‘ಸರ್ಕಾರ ಮತ್ತು ಬಾಲಕೃಷ್ಣ ಕುಟುಂಬದ ನಡುವೆ ನಡೆದ ಸಂಧಾನ ಯಶಸ್ವಿಯಾಗಿದೆ, ಸ್ಮಾರಕ ನಿರ್ಮಾಣಕ್ಕೆ ಬೇಕಾಗಿದ್ದ ಭೂಮಿಯ ವಿವಾದ ಬಗೆಹರಿದಿದೆ ಕೂಡಲೇ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ ಅಂದರು.
23
ಬಾಲಕೃಷ್ಣ ಮಕ್ಕಳು ಕೂಡ ಅಲ್ಲಿಗೆ ಆಗಮಿಸಿ ಕಾನೂನು ರೀತಿಯಾಗಿ ಎರಡು ಎಕರೆ ಜಾಗ ಕೊಡಲು ಒಪ್ಪಿಗೆ ಸೂಚಿಸಿದರು. ಅಲ್ಲದೇ ದೂರನ್ನ ವಾಪಸ್ ಪಡೆಯೋ ಆಶ್ವಾಸನೆ ನೀಡಿದರು. ಸಂವಹನ ಕೊರತೆಯಿಂದ ಇಷ್ಟೆಲ್ಲಾ ಸಮಸ್ಯೆ ಉದ್ಭವವಾಯಿತು ಅಂದರು. ಸ್ಮಾರಕ ನಿರ್ಮಾಣಕ್ಕೆ ನಮ್ಮದೇನು ಅಭ್ಯಂತರವಿಲ್ಲ ಅಂತ ಹೇಳಿದರು. ಇದನ್ನ ಕೇಳಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ಧರಣಿಯನ್ನ ಕೈಬಿಡಲು ಡಾ. ವಿಷ್ಣು ಸೇನಾ ಸಮಿತಿ ಸದಸ್ಯರು ಒಪ್ಪಿದರು.

ಈ ವಿಚಾರವನ್ನು ಭಾರತಿ ವಿಷ್ಣುವರ್ಧನ್ ಗಮನಕ್ಕೆ ತರಲು ಡಾ. ವಿಷ್ಣು ಅಭಿಮಾನಿಗಳು ಮುಂದಾದರು. ಅದಕ್ಕಾಗಿ ಜಯನಗರದಲ್ಲಿರೋ ಡಾ. ವಿಷ್ಣು ನಿವಾಸಕ್ಕೆ ತೆರಳಿದರೆ, ಭಾರತಿ ವಿಷ್ಣುವರ್ಧನ್ ಮನೆಯಲ್ಲಿ ಇರಲಿಲ್ಲ. ಇದರಿಂದ ಬೇಸತ್ತ ಅಭಿಮಾನಿಗಳು ಮೌನ ಪ್ರತಿಭಟನೆಗೆ ಮುಂದಾದರು. ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಪ್ರತಿಭಟನಾನಿರತರ ನಡುವೆ ವಾಗ್ವಾದ ನಡೆಯಿತು.ಆ ನಂತರ ಫೋನ್ ಮೂಲಕ ಭಾರತಿ ವಿಷ್ಣುವರ್ಧನ್ ಅವರನ್ನು ಸಂಪರ್ಕಿಸುವ ಪ್ರಯತ್ನ ನಡೆಯಿತು.
36
‘ಸರ್ಕಾರದ ಭಿಕ್ಷೆ ನಮಗೆ ಬೇಕಿಲ್ಲ, ಯಾವುದೇ ಕಾರಣಕ್ಕೂ ಅಭಿಮಾನ್ ಸ್ಟುಡಿಯೋದಲ್ಲಿ ಕಾಲಿಡಲ್ಲ, ೬ವರ್ಷದಿಂದ ಇಲ್ಲದ ಅಕ್ಕರೆ ಈಗ ಬಂತಾ’ ಅಂತ ಕಿಡಿಕಾರಿದರು. ಇದರಿಂದ ಅಭಿಮಾನಿಗಳಿಗೂ ತೀವ್ರ ನಿರಾಸೆಯಾಗಿದೆ. ಆದರೆ ಡಾ. ವಿಷ್ಣು ಸೇನಾಸಮಿತಿ ರಾಜ್ಯಾಧ್ಯಕ್ಷ ಭಾರತಿ ವಿಷ್ಣುವರ್ಧನ್ ಮನವೊಲಿಸುವುದಾಗಿ ಹೇಳಿದ್ದಾರೆ. ಭೂಮಿ ವಿವಾದ ಮುಗಿದರೆ ಸ್ಮಾರಕ ನಿರ್ಮಾಣಕ್ಕೆ ಇನ್ಯಾವುದೇ ಅಡ್ಡಿ ಇರಲ್ಲ ಅಂತ ಭಾವಿಸಿದ್ದವರಿಗೆ ಭಾರತಿ ವಿಷ್ಣುವರ್ಧನ್ ಹೇಳಿಕೆಯಿಂದ ದಿಕ್ಕು ತೋಚದಂತಾಗಿದೆ. ಒಟ್ಟಾರೆ ಡಾ. ವಿಷ್ಣು ಸ್ಮಾರಕ ವಿವಾದ ಸದ್ಯಕ್ಕಂತೂ ಬಗೆಹರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ.