ವೈನ್ ಕೂಡ ಕ್ಯಾನ್ಸರ್ ತರಬಲ್ಲದು !

2ಧೂಮಪಾನ ಮಾಡಿದರೆ ಕ್ಯಾನ್ಸರ್ ಖಚಿತ ಎನ್ನುವುದನ್ನು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಲಂಡನ್ನಿನ ಕ್ಯಾನ್ಸರ್ ರಿಸರ್ಚ್ ಸೆಂಟರ್ ಮದ್ಯಪಾನದಿಂದಲೂ ಕ್ಯಾನ್ಸರ್ ಬರುತ್ತದೆ ಎಂದು ದಾಖಲೆ ಸಮೇತ ನಿರೂಪಿಸಿದೆ. ಹಾಗಂತ ಕಂಠಪೂರ್ತಿ ಕುಡಿದು ಕಂಡಕಂಡಲ್ಲಿ ಬೀಳುವವರು ಮಾತ್ರ ಅಪಾಯದಲ್ಲಿದ್ದಾರೆ ಅಂದುಕೊಳ್ಳಬೇಡಿ. ರಾತ್ರಿ ಊಟವಾದಮೇಲೆ ಲೈಟಾಗಿ ಒಂದು ಪೆಗ್ ಹಾಕಿ ಮಲಗಿಕೊಳ್ಳುವ ‘ಸಂಭಾವಿತರು’ ಕೂಡ ಡೇಂಜರ್ ಜೋನ್ ನಲ್ಲಿ ಇದ್ದಾರೆ ಎನ್ನುತ್ತದೆ ಈ ಸಂಶೋಧನೆ.

ನೀವು ಎಷ್ಟು ಕಡಿಮೆ ಕುಡಿಯುತ್ತೀರೋ ಕ್ಯಾನ್ಸರ್ ನಿಂದ ಅಷ್ಟು ದೂರವಿರುತ್ತೀರಿ ಎನ್ನುತ್ತಿದ್ದಾರೆ ಕ್ಯಾನ್ಸರ್ ರಿಸರ್ಚ್ ಸೆಂಟರ್ ನ ವಿಜ್ಞಾನಿಗಳು. ಹಾಗಂತ ಕುಡಿಯುವವರಿಗೆಲ್ಲಾ ಕ್ಯಾನ್ಸರ್ ಬರುತ್ತದೆ ಎಂದು ಇದರ ಅರ್ಥವಲ್ಲ. ಮದ್ಯಪಾನ ಮಾಡುವವರಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ಉಳಿದವರಿಗಿಂತ ಹೆಚ್ಚು. ಯುಕೆಯೊಂದರಲ್ಲೇ ಪ್ರತಿವರ್ಷ ಸರಿಸುಮಾರು 12 ಸಾವಿರಕ್ಕೂ ಹೆಚ್ಚು ಮದ್ಯಪಾನಿಗಳು ಕ್ಯಾನ್ಸರ್ ಗೆ ಜೀವ ಕಳೆದುಕೊಳ್ಳುತ್ತಿರುವುದು ಅಂಕಿ ಅಂಶಗಳಿಂದ ದೃಢಪಟ್ಟಿದೆ.

ಹಾಗಂತ ಅರ್ಧ ಗ್ಲಾಸ್ ವೈನ್ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಬಿಡಿ ಎನ್ನುವವರಿದ್ದಾರೆ. ಆದರೆ ಯುಕೆಯಂಥ ದೇಶಗಳಲ್ಲಿ ಅನೇಕ ಹೆಂಗಸರು ಪ್ರತಿದಿನ ಒಂದು ಗ್ಲಾಸ್ ವೈನ್ ಕುಡಿಯುವುದನ್ನು ರೂಢಿಸಿಕೊಂಡಿರುತ್ತಾರೆ. ಅವರಿಗೆ ಬೇರೆ ದುರಭ್ಯಾಸಗಳು ಯಾವುವೂ ಇಲ್ಲದಿದ್ದರೂ ಕ್ಯಾನ್ಸರ್ ಅವರನ್ನು ಆಕ್ರಮಿಸಿಕೊಂಡಿದೆ. ಇಂಥಹ ಉದಾಹರಣೆಗಳು ಮದ್ಯಪಾನ ಮತ್ತು ಕ್ಯಾನ್ಸರ್ ನಡುವಿನ ಅಂತರವನ್ನು ಮತ್ತಷ್ಟು ಕಡಿಮೆ ಮಾಡಿವೆ.alcohol-info

ಮದ್ಯಪಾನದಿಂದ ಯಾವ್ಯಾವ ಬಗೆಯ ಕ್ಯಾನ್ಸರ್?

ಮದ್ಯಪಾನದಿಂದ ನಿರ್ದಿಷ್ಟವಾಗಿ ದೇಹದ ಯಾವ್ಯಾವ ಅಂಗಗಳಿಗೆ ಹಾನಿಯಾಗುತ್ತದೆ ಎನ್ನುವುದನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಒಟ್ಟು ಏಳು ವಿವಧ ಬಗೆಯ ಕ್ಯಾನ್ಸರ್ ಗಳಿಗೆ ಮದ್ಯಪಾನ ಮೂಲವಂತೆ. ಬಾಯಿ, ಗಂಟಲು, ಅನ್ನನಾಳ, ಧ್ವನಿಪೆಟ್ಟಿಗೆ, ಸ್ತನ, ಯಕೃತ್ತು ಮತ್ತು ಕರುಳಿನ ಕ್ಯಾನ್ಸರ್ ಗೆ ಮದ್ಯಪಾನ ರಹದಾರಿ ನಿರ್ಮಿಸುತ್ತದೆ ಎಂದಿದ್ದಾರೆ ವಿಜ್ಞಾನಿಗಳು

ಮದ್ಯಪಾನದಿಂದ ಕ್ಯಾನ್ಸರ್ ಹೇಗೆ?

ವೈನ್, ವೋಡ್ಕಾ, ವಿಸ್ಕಿ, ಬೀರ್, ಬ್ರಾಂಡಿ ಮುಂತಾದ ಎಲ್ಲಾ ಬಗೆಯ ಮದ್ಯಗಳಲ್ಲಿ ಇರುವ ಆಲ್ಕೊಹಾಲ್ ಅಂಶ ನಮ್ಮ ದೇಹದೊಳಗೆ ಇಳಿದ ಕೂಡಲೇ acetaldehyde ಆಗಿ ಬದಲಾಗುತ್ತದೆ. ಈ acetaldehyde ಡಿಎನ್ಎ ಹಾನಿ ಮಾಡುವುದು ಮಾತ್ರವಲ್ಲ, ಅವುಗಳ ರಿಪೇರಿಗೂ ಅಡ್ಡಿಪಡಿಸುತ್ತದೆ. ಆಲ್ಕೊಹಾಲ್ ನ್ನು ಅರಗಿಸುವ ಕೆಲಸ ಯಕೃತ್ತಿನದ್ದು. ಆದರೆ ಯಕೃತ್ತಿನ ಡಿಎನ್ಎ ಹಾಳಾಗುವುದರಿಂದ ಅಲ್ಲಿ ಏರುಪೇರು ಉಂಟಾಗಿ ಇಡೀ ದೇಹದ ಆರೋಗ್ಯಕ್ಕೆ ಹಾನಿ ಉಂಟಾಗುತ್ತದೆ.

ಇನ್ನು ಮದ್ಯಪಾನದ ಜೊತೆಗೆ ಧೂಮಪಾನದ ಅಭ್ಯಾಸವೂ ಇರುವವರು ಕ್ಯಾನ್ಸರ್ ನ ತೂಗುಗತ್ತಿಯ ಅಡಿಯಲ್ಲೇ ಇರುತ್ತಾರೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

Comments are closed.