ಮತ್ತೆ ಮುಂಗಾರು ಮಳೆ ಹರಿಯುತ್ತಾ ಪ್ರೀತಿಯ ಹೊಳೆ ?

male2
೨೦೦೬ರಲ್ಲಿ ಬಂದ ಮುಂಗಾರು ಮಳೆ ಕನ್ನಡ ಚಿತ್ರರಂಗದ ಭವಿಷ್ಯವನ್ನೇ ಬದಲಿಸಿತ್ತು. ಯೋಗ್‌ರಾಜ್ ಭಟ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಗಣೇಶ್ ನಟಿಸಿ ಗೋಲ್ಡನ್ ಸ್ಟಾರ್ ಆದರು. ಇಷ್ಟೇ ಅಲ್ಲದೆ ಈ ಚಿತ್ರ ಪಕ್ಕದ ರಾಜ್ಯದಲ್ಲೂ ರಿಮೇಕ್ ಆಗುವಷ್ಟು ಹೆಸರು ಮಾಡಿತ್ತು. ಇನ್ನೇನು ಸ್ಯಾಂಡಲ್‌ವುಡ್ ಕಥೆ ಮುಗಿಯಿತು ಅನ್ನುವಾಗಲೇ ಮುಂಗಾರು ಮಳೆ ಸುರಿದು ಚಂದನವನಕ್ಕೆ ತಂಪು ಎರೆಯಿತು. ಆದರೂ ಮತ್ತೆ ಮಳೆ ಸುರಿಸುವ ಸಾಹಸಕ್ಕೆ ಭಟ್ಟರಾಗಲಿ, ಗೋಲ್ಡನ್ ಸ್ಟಾರ್ ಆಗಲಿ ಹೋಗಲಿಲ್ಲ.

ಆದರೆ ಬರೋಬ್ಬರಿ ಹತ್ತು ವರ್ಷಗಳ ಬಳಿಕ ಅದೇ ಈ.ಕೆ. ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಮತ್ತೆ ಮುಂಗಾರು ಮಳೆಯನ್ನ ಸುರಿಸಲು ಸಿದ್ಧತೆ ನಡೆಸಿದೆ. ಈ ಬಾರಿ ಯೋಗ್‌ರಾಜ್‌ಭಟ್ ಬದಲು ಈ ಸೀಕ್ವೆಲ್‌ಗೆ ನಿರ್ದೇಶಕ ಶಶಾಂಕ್ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ ಸಿನಿಮಾದ ಶೂಟಿಂಗ್ ಕೂಡ ಮುಗಿದಿದ್ದು, ಮುಂಗಾರು ಮಳೆ-೨ ಚಿತ್ರದ ಟೀಸರ್ ಅನ್ನೂ ಹೊರಬಿಟ್ಟಿದೆ.

ಈ ಟೀಸರ್ ಅನ್ನ ನೋಡುತ್ತಿದ್ದರೆ, ಚಿತ್ರದಲ್ಲಿ ದೃಶ್ಯ ಕಾವ್ಯಗಳಿಗೇನು ಕಮ್ಮಿಯಿರಲ್ಲ. ಜೋಗಜಲಪಾತದ ಸುಳಿವಿಲ್ಲ.. ಕೇವಲ ಮಳೆಯಷ್ಟೇ ಅಲ್ಲದೆ ಈ ಪ್ರೀತಿಗೆ ಬಿಸಿಲಿನ ತಾಪ ಕೂಡ ತಟ್ಟಿದೆ ಅಂತ ಅನಿಸುತ್ತೆ. ಅಲ್ಲದೆ ಆಗಾಗ ಮಂಜು ಸುರಿದಿದ್ದರಿಂದ ಸಿನಿಮಾ ನೋಡುವಾಗ ಚಳಿಯಾಗುತ್ತಾ ಅನ್ನೋ ನಿರೀಕ್ಷೆಯಿದೆ. ಹೀಗಾಗಿ ಈ ಮುಂಗಾರು ಮಳೆ ಸೀಕ್ವೆಲ್ ಕೇವಲ ಮಳೆಗಾಲದಲ್ಲಷ್ಟೇ ಅಲ್ಲದೆ ಬೇಸಿಗೆ ಹಾಗು ಚಳಿಗಾಲದಲ್ಲೂ ಸುರಿಯತ್ತೆ ಅನ್ನೋದು ಕನ್ಫರ್ಮ್.

ವಿಶೇಷ ಅಂದ್ರೆ, ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಗಣೇಶ್ ಈ ಬಾರಿ ಐಂದ್ರಿತಾ ರೇ, ನೇಹಾ ಶೆಟ್ಟಿ, ಶಿಲ್ಪ ಮಂಜುನಾಥ್ ಜೊತೆ ಪ್ರೀತಿ ಮಾಡಲಿದ್ದು, ಯಾರ ಪ್ರೀತಿ ತ್ಯಾಗ ಮಾಡುತ್ತಾರೆ ಅನ್ನೋದೇ ಕುತೂಹಲ. ಉಳಿದಂತೆ ರವಿಶಂಕರ್, ಸಾಧುಕೋಕಿಲಾ ಮತ್ತಿತರರು ನಟಿಸಿದ್ದು, ಮುಂಗಾರು ಮಳೆ-೨ಗೆ ಇನ್ನಷ್ಟು ರಂಗು ತಂದಿದೆ.

Comments are closed.