4ಜಿ ಗೆ ಕ್ಯಾಜಿ ಅಂತಿಲ್ಲಂತೆ ಮೊಬೈಲ್ ಗ್ರಾಹಕರು

ಇಂಟರ್ ನೆಟ್ ಕ್ರಾಂತಿ ಆಗಿದ್ದೆ ತಡ ವಿಶ್ವವೇ ಕೈ ಬೆರಳ ತುದಿಯಲ್ಲಿ ಬಂದ ಹಾಗೇ ಆಗಿತ್ತು. ಅದ್ರಲ್ಲೂ ಮೊಬೈಲ್ ಗಳಿಗೆ ಇಂಟರ್ ನೆಟ್ ಕನೆಕ್ಷನ್ ಸಿಕ್ಕಿದ್ದೆ ತಡ ಜಗತ್ತು ಅಂಗೈಯೊಳಗೆ ಬಂದು ಕುಳಿತಿತ್ತು. ತಿರುಗಿ, ತಿರುಗಿ ಓಪನ್ ಆಗುವ 2ಜಿ ಇಂಟರ್ ನೆಟ್ ಕನೆಕ್ಷನ್ ಈಗ ಬಹುತೇಕರ ಮೊಬೈಲ್ ಆವರಿಸಿಕೊಂಡಿದೆ. ಇದೇ ಉತ್ಸಾಹದಲ್ಲಿ ಏರ್ ಟೆಲ್ ಹಾಗೂ ವೋಡಾಫೋನ್ 3ಜಿ ಯ ಹಾಲತ್ ಹೇಗಿದೆ ಅಂತ ತಿಳಿದುಕೊಳ್ಳೋ ಮುಂಚೆನೆ 4ಜಿ ಪರಿಚಯಿಸಿ ಬೀಗಿದ್ದೆ ಬಂತು. ಅಸಲಿ ಸುದ್ದಿ ಏನಪ್ಪಾ ಅಂದ್ರೆ ಈಗ 4ಜಿ ಕನೆಕ್ಷನ್ ನ್ನ ಕೇಳುವವರೆ ಗತಿ ಇಲ್ಲವಂತೆ.

ಹೌದು! ಇತ್ತೀಚಿಗೆ ಪರಿಚಯವಾಗಿರುವ 4ನೇ ಜನರೇಷನ್ ಇಂಟರ್ ನೆಟ್ ಸಂಪರ್ಕ ಭಾರೀ ಬೇಡಿಕೆ ಪಡೆದುಕೊಳ್ಳುತ್ತೆ ಅಂತಾನೆ ನೆಟ್ ವರ್ಕ್ ಪ್ರೊವೈಡರ್ ಗಳು ಭಾವಿಸಿದ್ದರು. ಆದ್ರೆ ಸಧ್ಯದ ಪರಿಸ್ಥಿತಿ ನೋಡಿದ್ರೆ ಅವರ ಊಹೆಯೆಲ್ಲಾ ತಲೆಕೆಳಗಾಗುವ ಲಕ್ಷಣ ಕಾಣಿಸುತ್ತಿವೆ. ಭಾರತದಲ್ಲಿ 4ಜಿ ಗೆ ಭಾರೀ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ ಅನ್ನೋದು ಲೆಟೇಸ್ಟ್ ಸುದ್ದಿ

ಇಷ್ಟಕ್ಕೂ 4ಜಿ ಗೆ ಕ್ಯಾಜಿ ಅನ್ನುತ್ತಿಲ್ಲ ಯಾಕೆ?

ಅತ್ಯಧಿಕ ಸ್ಪೀಡ್ ನಲ್ಲಿ ಇಂಟರ್ ನೆಟ್ ಗೆ ಸಂಪರ್ಕ ಒದಗಿಸೋ 4ಜಿ ಕನೆಕ್ಷನ್ ಯಾಕಪ್ಪಾ ಗ್ರಾಹಕರನ್ನ ಸೆಳೀತಿಲ್ಲ ಅನ್ನೋದು ಕುತೂಹಲದ ಪ್ರಶ್ನೆಯೇ. ಇದಕ್ಕೆ ಕಾರಣ ಕೂಡಾ ಅಷ್ಟೇ ಕುತೂಹಲಕಾರಿಯಾಗಿದೆ. ವಿಷಯ ಏನಪ್ಪಾ ಅಂದ್ರೆ ಇನ್ನು ಅದೆಷ್ಟೋ ಗ್ರಾಹಕರು 2ಜಿ ಯನ್ನೇ ಬಳಸುತ್ತಿಲ್ಲವಂತೆ. ಇನ್ನೂ ಅವರಿಗೆ 4ಜಿ ಕಥೆ ದೂರದ ಮಾತೇ. ಒಂದು ಅಧ್ಯಯನದ ಪ್ರಕಾರ 2020ರ ಹೊತ್ತಿಗೂ ಶೇ.50ರಷ್ಟು ಗ್ರಾಹಕರು 2ಜಿ ಇಂಟರ್ ನೆಟ್ ಬಳಸುವದರಲ್ಲಿಯೇ ಪರಮಾನಂದ ಕಾಣ್ತಾರಂತೆ. ಇನ್ನು ಅವರೆಲ್ಲಾ 3ಜಿ, 4ಜಿ ಅಂದ್ರೆ ಕ್ಯಾಜಿ ಅನ್ನದೇ ಇರ್ತಾರಾ?

ಸಧ್ಯ ಅಂದಾಜು ಶೇ.10 ರಿಂದ 15ರಷ್ಟು ಜನ ಮಾತ್ರ 3ಜಿ ಇಂಟರ್ ನೆಟ್ ಬಳಸುತ್ತಿದ್ದಾರಂತೆ. ಅವರು ಕೂಡಾ 4ಜಿ ಕಡೆ ಮುಖ ಮಾಡುವುದು ಇನ್ನ್ಯಾವಾಗೋ. ಇದಲ್ಲದೇ 4ಜಿ ಕ್ಲಿಕ್ ಆಗದಿರುವದಕ್ಕೆ ಮತ್ತೊಂದು ಕಾರಣ ದುಬಾರಿ ಬೆಲೆ. ಪ್ರಸ್ತುತ ಪರಿಚಯಿಸಿರುವ 4ಜಿ ಕನೆಕ್ಷನ್ ತುಂಬಾ ದುಬಾರಿಯದಾಗಿದ್ದು, ಗ್ರಾಹಕರು ಅದರತ್ತ ಆಸಕ್ತಿ ತೋರಿಸುತ್ತಿಲ್ಲ ಅನ್ನೋದು ಕೂಡಾ ಪ್ರಮುಖ ಕಾರಣವಾಗಿದೆ. ಜೊತೆಗೆ 4ಜಿ ಸೇವೆ ಕೂಡಾ ತೀರಾ ಹೇಳಿಕೊಳ್ಳುವ ಹಾಗಿಲ್ಲ. ಸ್ಪೀಡ್ ಅಷ್ಟಕ್ಕಷ್ಟೇ ಅನ್ನೋ ಮಾತು ಕೂಡಾ ಇದೆ. ಒಟ್ಟಿನಲ್ಲಿ 4ಜಿ ಗೆ ಅದ್ಯಾವಾಗ ಗ್ರಾಹಕ ಜೀ ಹುಜೂರು ಅಂತಾನೋ.

Comments are closed.