ಕೆಂಪುತೋಟದಲ್ಲಿ ಬಂಗಾರದ ಸೇಬು !

ಕೆಂಪು ಬಣ್ಣದ ಸೇಬನ್ನು ನಾವೆಲ್ಲರೂ ನೋಡಿರುತ್ತೇವೆ. ಆದರೆ, ಬಂಗಾರದ ಬಣ್ಣದ ಸೇಬನ್ನ ನೀವೆಲ್ಲಾದ್ರೂ ನೋಡಿದ್ದೀರಾ? ಇನ್ನೊಂದೆರಡು ದಿನಗಳೊಳಗೆ ನೀವು ಸಸ್ಯಕಾಶಿ ಲಾಲ್ ಬಾಗಿಗೆ ಭೇಟಿ ಕೊಟ್ಟರೆ ಅಲ್ಲಿ ಬಲು ಅಪರೂಪದ ಬಂಗಾರದ ಸೇಬನ್ನು ನೋಡಬಹುದು.

IMG_20160429_112613

ಬರೀ ನೋಡೋದು ಮಾತ್ರ ಯಾಕೆ, ಬಂಗಾರದ ಸೇಬಿನ ಅದ್ಭುತ ರುಚಿಯನ್ನೂ ಸವಿಯುವ ಅವಕಾಶ ಇಲ್ಲಿದೆ. ಅಂದ್ಹಾಗೆ ಕರ್ನಾಟಕದಲ್ಲಿ ಇದೇ ಮೊಟ್ಟಮೊದಲ ಬಾರಿಗೆ ಸೇಬಿನ ಮೇಳ ಲಾಲ್ ಬಾಗಿನಲ್ಲಿ ನಡೆಯುತ್ತಿದೆ. ಅದರಲ್ಲೂ ಚೀನಾದಿಂದ ಆಮದು ಮಾಡಿಕೊಂಡ ಸೇಬು ಹಣ್ಣುಗಳೇ ಇಲ್ಲಿ ಹೆಚ್ಚಾಗಿರುವುದು ವಿಶೇಷ. ಮೂರು ದಿನಗಳ ಮೇಳದಲ್ಲಿ 12ರಿಂದ 16 ವಿವಿಧ ಬಗೆಯ ಸೇಬುಗಳನ್ನು ನೋಡಿ, ಕೊಳ್ಳುವ ಅವಕಾಶ ಇದೆ. ಈ ಎಲ್ಲಾ ಸೇಬುಗಳೂ ಸಾವಯವ ಪದ್ಧತಿಯಲ್ಲಿ ಬೆಳೆದವು ಎನ್ನುವುದು ಸಂತಸದ ಸಂಗತಿ.

ಕಡುಗೆಂಪು ಬಣ್ಣದ ನ್ಯೂಜೀಲ್ಯಾಂಡ್ ತಳಿಯ ಸೇಬು, ಗುಲಾಬಿ ಬಣ್ಣದ ರಸವತ್ತಾದ  ಫುಜಿ ಸೇಬು, ಸಿಪ್ಪೆಯೂ ಸಿಹಿಯಾಗಿರುವ ಇರಾನಿ ಸೇಬು, ಹೆಚ್ಚು ದಿನ ಕೆಡದೆ ಉಳಿಯುವ ಕ್ರಿಪ್ಸ್ ಸೇಬು ಹೀಗೆ ಬಗೆಬಗೆಯ ಸೇಬು ಜನರನ್ನು ಕೈಬೀಸಿ ಕರೆಯುತ್ತಿವೆ. ಹಣ್ಣಿನ ಅಂಗಡಿಗಳಲ್ಲಿ, ಮಾರ್ಕೆಟ್ಟಿನಲ್ಲಿ ಸೇಬು ಎಂದರೆ ಕೆಂಪು ಬಣ್ಣದ್ದು ಎಂದಷ್ಟೇ ಆಲೋಚಿಸಿ ಕೊಳ್ಳುವ ಮಂದಿ ಈ ಮೇಳಕ್ಕೆ ಬಂದು ಆಶ್ಚರ್ಯಪಟ್ಟರು.IMG_20160429_112557

ಕೆಂಪು, ಗುಲಾಬಿ, ಹಸಿರು, ಹಳದಿ, ಕಡುಗೆಂಪು ಮತ್ತು ಇವೆಲ್ಲಕ್ಕಿಂತ ವಿಶೇಷವಾದ ಬಂಗಾರದ ಬಣ್ಣದ ಗೋಲ್ಡನ್ ಡೆಲೀಶಿಯಸ್ ಆಪಲ್ ಮೇಳ ಶುರುವಾದ ಮೊದಲ ದಿನದಿಂದಲೇ ಸಾಕಷ್ಟು ಬೇಡಿಕೆ ಪಡೆದುಕೊಂಡಿವೆ. ಹಾಪ್ ಕಾಮ್ಸ್ ಆಯೋಜಿಸಿರುವ ಈ ಮೇಳದಲ್ಲಿ ರಿಯಾಯಿತಿ ದರದಲ್ಲಿ ವ್ಯಾಪಾರ ನಡೆಸಲಾಗುತ್ತಿದೆ. ಹಾಗಾಗಿ ಒಂದು ಕೆ.ಜಿ ಸೇಬು 160 ರೂಪಾಯಿಗೂ ಸಿಗುವಂತಾಗಿದೆ.IMG_20160429_112509

ಹೊಸ ಬಗೆಯ ಪ್ರಯತ್ನ ಇದಾಗಿರುವುದರಿಂದ ವಹಿವಾಟಿನ ಬಗ್ಗೆ ಆತಂಕಗೊಂಡಿದ್ದ ಹಾಪ್ ಕಾಮ್ಸ್ ಅಧಿಕಾರಿಗಳಿಗೆ ಅಚ್ಚರಿಯಾಗಿದೆ. ಮೇಳದ ಮೊದಲ ದಿನವೇ ತಂದಿದ್ದ ಅಷ್ಟೂ ಗೋಲ್ಡನ್ ಆಪಲ್ ಗಳು ಖಾಲಿಯಾಗಿ ಬೇಡಿಕೆಯನ್ನು ದುಪ್ಪಟ್ಟಾಗಿಸಿವೆ. ಬರೀ ಹಣ್ಣುಗಳ ಮಾರಾಟವಷ್ಟೇ ಅಲ್ಲದೆ ಪ್ರತಿಯೊಂದು ಬಗೆಯ ಸೇಬಿನ ಉಪಯೋಗಗಳು ಮತ್ತು ಆರೋಗ್ಯ ಸೂತ್ರಗಳ ಮಾಹಿತಿಯನ್ನೂ ಕೊಡುತ್ತಿರುವುದು.

ದಿನಕ್ಕೊಂದು ಒಂದು ಸೇಬು ತಿಂದರೆ ವೈದ್ಯರನ್ನು ದೂರ ಇಡಬಹುದು ಎನ್ನುವುದಾದರೆ ಇಲ್ಲಿರುವ ಇಷ್ಟೆಲ್ಲಾ ಬಗೆಯ ಸೇಬುಗಳು ಆರೋಗ್ಯದ ಗಣಿಯಂತೆಯೇ ಕಂಡರೆ ಆಶ್ಚರ್ಯವಿಲ್ಲ.

Comments are closed.

Social Media Auto Publish Powered By : XYZScripts.com