ಅಭಿಮನ್ಯು ಆಗಲಿಲ್ಲ ಅಪ್ಪು !

puneeth-
ಪವರ್ ಸ್ಟಾರ್ ಸಿನಿಮಾ ಅಂದ್ರೆ ಹಾಗೆ ರಿಲೀಸ್ ಆಗುವುದನ್ನೇ ಕಾಯುತ್ತಿರುತ್ತಾರೆ ಸಿನಿಮಾ ಪ್ರೇಮಿಗಳು. ಅದರಲ್ಲೂ ಒಂದು ವರ್ಷದ ಬಳಿಕ ಥಿಯೇಟರ್‌ಗೆ ಬರುತ್ತಿದೆ ಅಂದರಂತೂ ರಾತ್ರಿಯಿಡಿ ನಿದ್ದೆ ಮಾಡುವುದೇ ಇಲ್ಲ ಬಿಡಿ. ಚಕ್ರವ್ಯೂಹ ಕೂಡ ಇಂತಹದ್ದೇ ನಿರೀಕ್ಷೆಯನ್ನ ಹುಟ್ಟಾಕಿತ್ತು. ಬನ್ನಿ ಹಾಗಿದ್ದರೆ ಆ ನಿರೀಕ್ಷೆಗಳೆಲ್ಲ ಏನಾಗಿವೆ..? ಅಂತ ನೋಡೋಣ.

ಪುನೀತ್ ರಾಜ್‌ಕುಮಾರ್ ಆಗಾಗ ತಮ್ಮ ಪಾತ್ರಗಳಲ್ಲಿ ಪ್ರಯೋಗಗಳನ್ನ ಮಾಡುತ್ತಲೇ ಇರುತ್ತಾರೆ. ಅದರಲ್ಲೂ ಸಮಾಜದಲ್ಲಿ ನಡೆಯುವ ಅಥವಾ ನಡೆದಿರುವ ಸಂಗತಿಗಳಿಗೆ ಪರಿಹಾರ ಸೂಚಿಸುವ ನಿಟ್ಟಿನಲ್ಲೇ ಅವರ ಚಿತ್ರಗಳಿಗೆ ಕಥೆ ಹೆಣೆಯಲಾಗುತ್ತಿದೆ ಅನ್ನುವುದು ಒಂದು ಆಶ್ಚರ್ಯ ಸಂಗತಿ. ಯಾಕೀ ಮಾತು ಅಂದರೆ, ಪುನೀತ್ ‘ಪೃಥ್ವಿ’ ಸಿನಿಮಾದ ಬಳಿಕ ಮತ್ತೆ ಸಮಾಜದ ಸಮಸ್ಯೆಗಳ ವಿರುದ್ಧ ಹೋರಾಟಕ್ಕೆ ನಿಂತಿರುವುದು ‘ಚಕ್ರವ್ಯೂಹ’ ಚಿತ್ರದ ಮೂಲಕವೇ… ಹೀಗಾಗಿ ಅವರ ಅಭಿಮಾನಿಗಳಿಗೆ ಇದೊಂದು ಸಂದೇಶ ಸಾರುವ ಅದ್ಭುತ ಚಿತ್ರ.

ಹಾಗಂತ ಚಕ್ರವ್ಯೂಹವನ್ನ ಬರೀ ಸಂದೇಶಕ್ಕಷ್ಟೇ ಸೀಮಿತ ಮಾಡಿಕೊಂಡಿಲ್ಲ. ಇಲ್ಲಿ ಪವರ್ ಸ್ಟಾರ್ ಇಮೇಜಿಗೆ ಬೇಕಾಗಿರುವಂತಹ ಎಲ್ಲಾ ಕಮರ್ಷಿಯಲ್ ಎಲಿಮೆಂಟ್ಸ್ ಅನ್ನ ಸೇರಿಸಲಾಗಿದೆ. ಹಾಗಾಗಿ ಈ ಕಥೆಯನ್ನ ಪಕ್ಕಾ ಪ್ರಬುದ್ಧ ಚಿತ್ರಕತೆ ಅಂತ ನಿಸ್ಸಂದೇಹವಾಗಿ ಹೇಳಬಹುದು. ಸಮಾಜದಲ್ಲಿ ತಮಗೆ ತೊಂದರೆಯಾದರೆ ಮಾತ್ರ ಬೀದಿಗಿಳಿಯುತ್ತಾರೆ. ಇಲ್ಲಾ ಅಂದರೆ ತಮ್ಮ ಕಣ್ಣ ಮುಂದೆ ಬೇರೆಯವರಿಗೆ ತೊಂದರೆಯಾದರೂ ಸಹಾಯಕ್ಕೆ ಮುಂದಾಗುವುದಿಲ್ಲ. ಇಂತಹ ಜನರ ಮನಸ್ಥಿತಿಗೆ ಪರಿಹಾರ ಸೂಚಿಸುವ ಕಾರ್ಯದಲ್ಲೀಗ  ಪುನೀತ್ ನಿರತರಾಗಿದ್ದಾರೆ ಅನ್ನುವುದನ್ನ ಹೇಳಬಹುದು.
puneeth-rajkumar-amp
ಅಷ್ಟೇ ಯಾಕೆ ಈ ಸಿನಿಮಾ ನೋಡಿದವರಿಗೆ ಪವರ್ ಸ್ಟಾರ್ ಜನಸಾಮಾನ್ಯರ ನಾಯಕರಾಗುತ್ತಿದ್ದಾರಾ…? ಅನ್ನುವ ಪ್ರಶ್ನೆ ಹುಟ್ಟುವುದು ಅಷ್ಟೇ ಸತ್ಯ. ಇದಕ್ಕೆ ಉತ್ತರ ಚಿತ್ರದಲ್ಲಿ  ಪುನೀತ್‌ಗಾಗೇ ಬರೆದ ಕೆಲ ಸಂಭಾಷಣೆಗಳು. ಅದರಲ್ಲೂ “ಒಬ್ಬ ಡ್ರೈವರ್‌ಗೆ ತೊಂದರೆಯಾದರೆ ಎಲ್ಲಾ ಡ್ರೈವರ್ಸ್ ಒಂದಾಗ್ತಾರೆ. ಒಬ್ಬ ಪೊಲಿಟಿಷಿಯನ್‌ಗೆ ತೊಂದರೆಯಾದರೆ, ಆ ಪಾರ್ಟಿ ಮೆಂಬರ್ ಎಲ್ಲಾ ಒಂದಾಗ್ತಾರೆ. ಅದೇ ಒಬ್ಬ ಪಬ್ಲಿಕ್‌ಗೆ ತೊಂದರೆಯಾದ್ರೆ.. ಯಾಕೆ ಪಬ್ಲಿಕ್ ಎಲ್ಲಾ ಒಂದಾಗಲ್ಲ…” ಅನ್ನುವ ಡೈಲಾಗ್‌ಗೆ ಪುನೀತ್ “ಪಬ್ಲಿಕ್‌ಗೆ ತೊಂದರೆಯಾದ್ರೆ ಇನ್ನೊಬ್ಬ ಪಬ್ಲಿಕ್ ಬರ‍್ತಾನೆ ಅಂತ ಗೊತ್ತಾಗ್ಬೇಕು” ಅಮತ ಹೇಳುವ ಕೌಂಟರ್ ಡೈಲಾಗ್ ಅವರನ್ನ ಸಿನಿಮಾದಲ್ಲಿ ಜನನಾಯಕನನ್ನಾಗಿ ಮಾಡುತ್ತದೆ.

ಭ್ರಷ್ಟ ರಾಜಕಾರಣಿಗಳ ವಿರುದ್ಧ ನೇರವಾಗಿ ಹೋರಾಟಕ್ಕೆ ಇಳಿದು ಯುದ್ಧ ಗೆಲ್ಲುವ ಸನ್ನಿವೇಶಗಳನ್ನ ನೋಡಿದ್ದವರಿಗೆ ಇದು ಕಂಪ್ಲೀಟ್ ಡಿಫ್ರೆಂಟ್. ಇಂತಹವರ ವಿರುದ್ಧ ಚಕ್ರವ್ಯೂಹ ರಚಿಸಿ, ಗುರುತು ಮುಚ್ಚಿಡಲು ಮುಖವಾಡ ಧರಿಸಿ ಹೋರಾಟ ಮಾಡಿ, ನ್ಯಾಯ ದೊರಕಿಸಿಕೊಡುವ ಜನನಾಯಕನ ಕಥೆಯಿದು. ಹಾಗಾಗಿ ಕಥೆ ಸಿಂಪಲ್ ಆಗಿದ್ದರೂ, ಸ್ಕ್ರೀನ್ ಪ್ಲೇ ವಿಭಿನ್ನ ಅಂತ ಅನಿಸುತ್ತೆ. ಹೀಗಾಗಿ ನಿರ್ದೇಶಕ ಸರವಣನ್ ಮತ್ತೆ ತಮ್ಮ ತಾಖತ್ತು ಚಿತ್ರಕಥೆ ಹೆಣೆಯುವುದರಲ್ಲಿದೆ ಅನ್ನುವುದನ್ನ ಸಾಭೀತು ಮಾಡಿದ್ದಾರೆ…

ಎಲ್ಲಕ್ಕಿಂತ ಹೆಚ್ಚಾಗಿ ಪಕ್ಕಾ ಆಕ್ಷನ್ ಥ್ರಿಲ್ಲರ್ ಕೆಟಗರಿಗೆ ಸೇರಿಸಬಹುದಾದ ಚಕ್ರವ್ಯೂಹದಲ್ಲಿ ಪವರ್ ಸ್ಟಾರ್ ಪರ್ಫಾಮೆನ್ಸ್ ಬಗ್ಗೆ ಮಾತಾಡುವ ಹಾಗಿಲ್ಲ. ತನ್ನ ಇಮೇಜಿಗೂ ಧಕ್ಕೆ ಮಾಡಿಕೊಳ್ಳದೆ, ಜನರಿಗೂ ನಿರಾಸೆ ಮಾಡದೆ, ಆಯ್ಕೆ ಮಾಡಿಕೊಂಡ ಪಾತ್ರದಲ್ಲಿ ಪುನೀತ್ ಗೆಲ್ಲುತ್ತಾರೆ. ಇನ್ನು ನಾಯಕನೊಂದಿಗೆ ಖಳನಾಯಕರೂ ಕೂಡ ಇಲ್ಲಿ ಅಬ್ಬರಿಸೋದು ವಿಶೇಷ. ಕೇವಲ ಕಥೆಯಲ್ಲಿಷ್ಟೇ ಹೊಡೆದಾಡದೆ, ಅಭಿನಯದಲ್ಲೂ ನಾಯಕ ಹಾಗು ಖಳನಾಯಕರ ಪೈಪೋಟಿಗೆ ಬಿದ್ದಿರುವುದು ಚಿತ್ರದ ನಿಜವಾದ ಹೈಲೈಟ್. ಅಂದ ಹಾಗೆ ಖಳನಾಯಕರಾಗಿರುವ ತಮಿಳಿನ ಅರುಣ್ ವಿಜಯ್ ಹಾಗು ಅಭಿಮನ್ಯು ಸಿಂಗ್‌ರನ್ನ ನೋಡಿ ಬೇರಗಾಗುವುದು ಇದೇ ಕಾರಣಕ್ಕೆ…

ಇನ್ನು ಹಾಡುಗಳು ಈಗಾಗಲೇ ಅಬ್ಬರಿಸಿವೆ. ಅವು ಚಿತ್ರಕ್ಕೆ ಪೂರಕವಾದ ಸನ್ನಿವೇಶದಲ್ಲೇ ಬಂದು ಹೋಗುತ್ತವೆ. ಹಾಗೆ ಸಬ್ಜೆಕ್ಟ್ ಸೀರಿಯಸ್ ಆಗಿದೆ ಅಂದರೆ ಅಲ್ಲಿ ಹಾಸ್ಯವನ್ನ ತೋರಿಸೋಕೆ ಕಷ್ಟ ಪಡ್ಬೇಕಾಗುತ್ತೆ. ಇದನ್ನ ನಿರ್ದೇಶಕರು ಇಲ್ಲೂ ಅನುಭವಿಸಿದ್ದಾರೆ. ಸಾಧು ಕೋಕಿಲಾ ಇದ್ದರೂ ಹಾಸ್ಯದ ಅಭಾವ ಎದ್ದು ಕಾಣುತ್ತದೆ. ರಚಿತಾ ರಾಮ್ ಅಭಿನಯ ಅಲ್ಲಲ್ಲಿ ಕೊಂಚ ಮಟ್ಟಿಗೆ ಇರಿಸು-ಮುರಿಸು ತರಿಸುತ್ತದೆ. ಅಷ್ಟು ಬಿಟ್ಟರೆ ಚಕ್ರವ್ಯೂಹ ಬೇಧಿಸುವಲ್ಲಿ ಪವರ್ ಸ್ಟಾರ್ ಅಭಿಮನ್ಯು ಆಗಲಿಲ್ಲ ಅನ್ನುವುದನ್ನ ನಿಸ್ಸಂದೇಹವಾಗಿ ಹೇಳಬಹುದು.

Comments are closed.