ರಾತ್ರಿರಾಣಿ ಕತ್ತಲಾದಮೇಲೆ ಮಾಡೋ ಕೆಲಸವೇನು ಗೊತ್ತಾ?

ಬೆಳಕು ಕಳೆದು ಕತ್ತಲು ಸುರಿಯುತ್ತಿದ್ದಂತೆ ಅವಳು ಅರಳುತ್ತಾಳೆ. ಅದಕ್ಕಾಗೇ ಕಾದು ಕುಳಿತ ದುಂಬಿಯೊಂದು ಹಾಡುತ್ತಾ, ಗುನುಗುತ್ತಾ ಇವಳ ಘಮವನ್ನರಸಿ ತೇಲಿಕೊಂಡು ಬರುತ್ತದೆ. ಇದು ರಾತ್ರಿರಾಣಿಯ ಕತ್ತಲರಾಜ್ಯದ ಕಥೆ.

IMG-20160415-WA0005
ಕೆಲವೊಂದಿಷ್ಟು ಹೂವುಗಳಿರುತ್ತವೆ. ಅವು ಬೆಳಗಿನ ಕಿರಣಗಳಿಗೆ ಮೈಯೊಡ್ಡಿ ಬಣ್ಣದ ಪಕಳೆಗಳನ್ನು ಅರಳಿಸಿ ಚಿಟ್ಟೆಗಳನ್ನು, ದುಂಬಿಗಳನ್ನು ಸೆಳೆಯುವುದಿಲ್ಲ. ಬದಲಿಗೆ ಸೂರ್ಯ ನಿದ್ದೆಗೆ ಜಾರಿ ನಿಶೆ ಮೇಲೇರಿದಾಗ ಇವು ಮೆಲ್ಲಗೆ ಅರಳುತ್ತವೆ. ಇವುಗಳಲ್ಲಿ ರಾತ್ರಿರಾಣಿ, ನಾಗಸಂಪಿಗೆ, ಪಾರಿಜಾತ, ಬ್ರಹ್ಮಕಮಲ, ಜಾಜಿ ಮಲ್ಲಿಗೆ ಮುಂತಾದವು ಚಿರಪರಿಚಿತ ಹೆಸರುಗಳು. ಈ ಹೂಗಳೆಲ್ಲಾ ರಾತ್ರಿಯ ಸಮಯದಲ್ಲಿ ಅರಳುತ್ತವೆ. ಬೆಳಕು ಹರಿಯುವುದರೊಳಗೆ ಆಯಸ್ಸು ಮುಗಿದು ಮುದುಡಿ, ಉದುರಿ ಬದುಕು ಮುಗಿಸಿಬಿಡುತ್ತವೆ.

IMG-20160415-WA0007

ಅಷ್ಟಕ್ಕೂ ಈ ಹೂಗಳು ರಾತ್ರಿಯೇ ಅರಳುವುದಕ್ಕೆ ಏನು ಕಾರಣ? ಅದು ಪತಂಗ, ಬಾವಲಿ ಮುಂತಾದ ನಿಶಾಚರ ಜೀವಿಗಳು ಕ್ರಿಯಾಶೀಲವಾಗಿರುವ ಸಮಯ.
ಯಾವುದೇ ಗಿಡ ಹೂವರಳಿಸುವುದು ತನ್ನ ಸಂಕುಲ ಮುಂದುವರೆಸುವುದಕ್ಕೆ. ಈ ನಿಶಾಚರ ಹೂಗಿಡಗಳೂ ಪ್ರಕೃತಿಯ ನಿಯಮಕ್ಕೆ ಹೊರತಲ್ಲ. ಆದ್ದರಿಂದ ರಾತ್ರಿ ಹೊತ್ತು ಸಂಚರಿಸುವ ಜೀವಿಗಳಿಂದ ಪರಾಗಸ್ಪರ್ಶ ಉಂಟಾಗಿ ಆ ಮೂಲಕ ಕಾಯಿಕಟ್ಟಿ, ಹಣ್ಣಾಗಿ ತನ್ನ ಸಂಕುಲವನ್ನು ವೃದ್ಧಿಸಿಕೊಳ್ಳಲು ಈ ಹೂಗಳು ಕತ್ತಲೆಯಲ್ಲಿ ಅರಳುತ್ತವೆ. ಬೆಳಕು ಇಲ್ಲದೇ ಇರುವುದರಿಂದ ಈ ಹೂಗಳಿಗೆ ಪತಂಗವನ್ನು ಸೆಳೆಯುವುದಕ್ಕೆ ಆಕರ್ಷಕ ಬಣ್ಣಗಳ ಅವಶ್ಯಕತೆಯಿಲ್ಲ. ಆದರೆ ಬಹಳ ಗಾಢವಾದ ಪರಿಮಳ ಖಂಡಿತಾ ಇರುತ್ತದೆ.

IMG-20160415-WA0006
ಪತಂಗ, ಸಣ್ಣ ಬಾವಲಿ ಮುಂತಾದ ನಿಶಾಚರಿಗಳು ಈ ಘಮವನ್ನೇ ಅರಸಿ ಹೂಗಳ ಬಳಿ ಬಂದು, ಅವುಗಳ ಮಕರಂದವನ್ನು ಹೀರಿ, ಪರಾಗಸ್ಪರ್ಶಕ್ಕೆ ಅನುಕೂಲ ಮಾಡಿಕೊಡುತ್ತವೆ. ಆದ್ದರಿಂದ ರಾತ್ರಿ ಅರಳುವ ಸುಮಗಳ ಪರಿಮಳ ಗಾಢವಾಗಿರುವುದರ ಜೊತೆಗೆ ಅವು ಸಾಮಾನ್ಯವಾಗಿ ಬಿಳಿ ಅಥವಾ ಮಬ್ಬು ಬಣ್ಣವನ್ನು ಹೊಂದಿರುತ್ತವೆ.

IMG-20160415-WA0008
ಸಾಮಾನ್ಯವಾಗಿ ಬೇಸಿಗೆ ಎಂದರೆ ಎಲ್ಲಾ ಗಿಡಗಳೂ ಮೈತುಂಬಾ ಹೂವರಳಿಸಿಕೊಂಡು ನಂತರ ಹಣ್ಣು ಬಿಡುವ ಕಾಲ. ರಾತ್ರಿರಾಣಿಯೂ ಹೂಬಿಟ್ಟು, ಕಾಯಿಕಟ್ಟಿ ಸಂಭ್ರಮಿಸುವ ದೃಶ್ಯಗಳು ಈಗೀಗ ಎಲ್ಲಾ ಕಡೆ ಕಂಡುಬರುತ್ತವೆ. ಇದು ಅವುಗಳಿಗೂ ರಮ್ಯಚೈತ್ರಕಾಲ.

Comments are closed.