ಕಣ್ಣಿಗೆ ಬಿಸಿ ತಾಕದಿರಲಿ !

sunglasses

ಬೇಸಿಗೆ ಬಂದರೆ ಒಂದಷ್ಟು ಆರೋಗ್ಯ ಸಮಸ್ಯೆಗಳು ಅದರ ಜೊತೆಜೊತೆಗೇ ಬಂದುಬಿಡುತ್ತವೆ. ಬಿರುಬೇಸಿಗೆಯಲ್ಲಿ ಹೆಚ್ಚುವ ಧೂಳಿನ ಪ್ರಮಾಣ ಅತೀ ಹೆಚ್ಚು ಹಾನಿ ಉಂಟುಮಾಡುವುದು ಕಣ್ಣಿಗೆ. ಸಮ್ಮರ್ನಲ್ಲಿ ಕಣ್ಣುಗಳ ರಕ್ಷಣೆ ಮಾಡಿಕೊಳ್ಳುವುದು ಬಹಳ ಮುಖ್ಯ.
ಒಂದು ಕಡೆ ನೆತ್ತಿ ಸುಡುವ ಬಿಸಿಲು, ಮತ್ತೊಂದು ಕಡೆ ಎಲ್ಲೆಲ್ಲೂ ಆವರಿಸುವ ಧೂಳು…ಬೇಸಿಗೆಯಲ್ಲಿ ಮನೆಯಿಂದ ಹೊರಗೆ ಬರುವುದೇ ಬೇಡಪ್ಪಾ ಎನ್ನಿಸಿಬಿಡುತ್ತದೆ. ಇದರ ಜೊತೆಗೆ ಬೋನಸ್ ಎನ್ನುವಂತೆ ಬೆಂಗಳೂರಿನಲ್ಲಂತೂ ಎಲ್ಲೆಂದರಲ್ಲಿ ಕಟ್ಟಡಗಳ ನಿರ್ಮಾಣ ಕೆಲಸ ನಡೆಯುತ್ತಿದೆ. ಇದೆಲ್ಲದರಿಂದ ಬರುವ ಧೂಳು ಕಣ್ಣಿಗೆ ಸುಲಭವಾಗಿ ಅಲರ್ಜಿ ಮತ್ತು ಸೋಂಕುಗಳನ್ನು ಉಂಟುಮಾಡುತ್ತದೆ. ಕಣ್ಣಿನಲ್ಲಿ ನವೆ, ನೀರು ಸುರಿಯುವವುದು, ಗೀಜು ಕಟ್ಟುವುದು, ಕಣ್ಣೊಳಗೆ ಚುಚ್ಚಿದ ಅನುಭವ, ಇವೆಲ್ಲದರ ಜೊತೆಗೆ ಕಂಜಂಕ್ಟಿವೈಟಿಸ್ ಥರದ ಸೋಂಕುಗಳೂ ಬೇಸಿಗೆಯಲ್ಲಿ ಸರ್ವೇಸಾಮಾನ್ಯ.

eyes
ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅದರಲ್ಲೂ ಬೇಸಿಗೆಯಲ್ಲಿ ಹೆಚ್ಚಾಗಿ ಎಸಿ ಮತ್ತು ಫ್ಯಾನುಗಳನ್ನು ಬಳಸುತ್ತೇವೆ. ಇದರಿಂದಾಗಿ ಕಣ್ಣುಗಳು ಬೇಗ ಒಣಗುತ್ತವೆ. ಹಾಗಾಗಿ ತಣ್ಣಗಿನ ಶುದ್ಧ ನೀರಿನಲ್ಲಿ ದಿನಕ್ಕೆ ಎರಡರಿಂದ ಮೂರು ಬಾರಿ ಕಣ್ಣನ್ನು ಸ್ವಚ್ಛಗೊಳಿಸಬೇಕು. ಇನ್ನು ಬಿಸಿಲಿನಲ್ಲಿ ಓಡಾಡುವಾಗ ಗಾಗಲ್ಸ್ ಬಳಸುವುದು ಮತ್ತು ದ್ವಿಚಕ್ರ ಸವಾರರು ಆದಷ್ಟು ಕಣ್ಣು ಮುಚ್ಚಿರುವ ಹೆಲ್ಮೆಟ್ಗಳನ್ನು ಬಳಸುವುದು ಉತ್ತಮ.
ಬೇಸಿಗೆಯಲ್ಲಿ ನೀರು ಕೂಡ ಬಹಳಷ್ಟು ಕಲುಷಿತವಾಗಿರುತ್ತದೆ. ಹಾಗಾಗಿ ಕಣ್ಣುಗಳನ್ನು ಕ್ಲೀನ್ ಮಾಡಿಕೊಳ್ಳುವಾಗ ಎಚ್ಚರಿಕೆಯಿಂದ ಇರಬೇಕು. ಅಲ್ಲದೇ ಕಣ್ಣಿಗೆ ಧೂಳು ಅಥವಾ ಕಸ ಬಿದ್ದಾಗ ಕಣ್ಣುಗಳನ್ನು ಯಾವುದೇ ಕಾರಣಕ್ಕೂ ಉಜ್ಜಿಕೊಳ್ಳಬಾರದು. ಮೊದಲು ಸ್ವಚ್ಛ ನೀರು ಅಥವಾ ಬಟ್ಟೆಯಿಂದ ಒರೆಸಿ ನಂತರ ನೇತ್ರತಜ್ಞರನ್ನು ಕಾಣುವುದರಿಂದ ಹೆಚ್ಚಿನ ಅಪಾಯ ಆಗುವುದನ್ನು ತಪ್ಪಿಸಬಹುದು. ಇವೆಲ್ಲಾ ಬಹುತೇಕರಿಗೆ ಈಗಾಗ್ಲೇ ತಿಳಿದಿರುವ ಕಣ್ಣಿನ ಆರೋಗ್ಯ ಸೂತ್ರಗಳು. ಆದ್ರೆ ಬೇಸಿಗೆಯಲ್ಲಿ ಇವುಗಳನ್ನು ನೆನಪಿಟ್ಟುಕೊಂಡು ಪಾಲಿಸುವುದರಿಂದ ಕಣ್ಣಿನ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬಹುದು.

Comments are closed.

Social Media Auto Publish Powered By : XYZScripts.com