ಮಂಗಳನ ಅಂಗಳಕ್ಕೆ ತಲುಪಲು 3 ದಿನ ಸಾಕು!

ವಾಷಿಂಗ್ಟನ್: ಬಾಹ್ಯಾಕಾಶ ಯಾತ್ರೆಗೆ ಸಂಬಂಧಪಟ್ಟಂತೆ ನಾಸಾ ಹೊಸ ರೀತಿಯ ಪ್ರಯೋಗಗಳಿಗೆ ಕೈ ಹಾಕಿದ್ದು, ಈ ಪ್ರಯೋಗ ಯಶಸ್ವಿಯಾದರೆ ಕೇವಲ ಮೂರು ದಿನಗಳಲ್ಲಿ ಮಂಗಳನ ಅಂಗಳಕ್ಕೆ ತಲುಪಬಹುದು.

ಶಕ್ತಿಶಾಲಿ ಲೇಸರ್ ಕಿರಣಗಳ ಸಹಾಯದಿಂದ ಮಂಗಳ ಅಂಗಳಕ್ಕೆ ಅಂತರಿಕ್ಷ ನೌಕೆಗಳನ್ನು ಕಳುಹಿಸುವ ಬಗ್ಗೆ ನಾಸಾ ಪ್ರಯೋಗಗಳನ್ನು ಮಾಡುತ್ತಿದೆ.

ಒಂದು ಗ್ರಾಂನಷ್ಟಿರುವ ವಸ್ತುವನ್ನು ಶೇ. 25 ಪಟ್ಟು ವೇಗದಲ್ಲಿ ಸಂಚರಿಸುವಂತೆ ಮಾಡುವ ಶಕ್ತಿ ಲೇಸರ್‌ಗಿದೆ. ಇದು ಸಾಧ್ಯವಾಗುವುದಾದರೆ ಭೂಮಿಯಿಂದ ಅತೀ ಹತ್ತಿರವಿರುವ ನಕ್ಷತ್ರಕ್ಕೆ ಸಾಗಲು 20 ವರುಷಗಳಷ್ಟೇ ಸಾಕು. ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾನಿಲಯದ ಫಿಲಿಪ್ ಲುಬಿನ್ ಎಂಬವರು ನಡೆಸಿದ ಈ ಯೋಜನೆಗೆ ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ಸೈ ಎಂದಿದೆ.

ಪ್ರಸ್ತುತ ರಾಕೆಟ್ ಉಡ್ಡಯಣ ರೀತಿಯಲ್ಲಾದರೆ ಬಾಹ್ಯಾಕಾಶ ನೌಕೆಯೊಂದು ಭೂಮಿಯಿಂದ ಮಂಗಳ ಗ್ರಹಕ್ಕೆ ತಲುಪಬೇಕಾದರೆ 5 ತಿಂಗಳುಗಳೇ ಬೇಕು. ಆದರೆ ಲೇಸರ್ ತಂತ್ರಜ್ಞಾನ ಬಳಸಿದರೆ 100 ಕೆಜಿ ತೂಕದ ಬಾಹ್ಯಾಕಾಶ ನೌಕೆ 3 ದಿನಗಳಲ್ಲಿ ಮಂಗಳನ ಅಂಗಳ ಸೇರುತ್ತದೆ. ಲೇಸರ್‌ಗೆ ವಸ್ತುವೊಂದನ್ನು ಚಲಿಸುವಂತೆ ಮಾಡುವ ಗುಣವಿದೆ. ಈ ಆಧಾರದಲ್ಲಿ ಲೇಸರ್ ತಂತ್ರಜ್ಞಾನವನ್ನು ಇಲ್ಲಿ ಬಳಸಲಾಗುತ್ತದೆ. ಆದಾಗ್ಯೂ, ಈ ತಂತ್ರಜ್ಞಾನವನ್ನು ಬಳಸಿ ಅಂತರಿಕ್ಷ ನೌಕೆಯನ್ನು ಕಳುಹಿಸುವ ಕಾಲ ದೂರವಿಲ್ಲ ಎಂದು ನಾಸಾ ಹೇಳಿದೆ.

Comments are closed.