ಗೌರಿ-ಗಣೇಶ ಹಾಗೂ ಬಕ್ರೀದ್ ಹಿನ್ನೆಲೆ : ಶಾಂತಿ ಸುವ್ಯವಸ್ಥೆ ಕಾಪಾಡಲು ಸೂಚಿಸಿದ ಸಿಎಂ

ಗೌರಿ-ಗಣೇಶ ಮತ್ತು ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೈಗೊಳ್ಳಬೇಕಾದ ಬಂದೋಬಸ್ತ್ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿದ್ದಾರೆ.

ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಸೂಚನೆಗಳನ್ನು ನೀಡಿದ ಸಿದ್ದರಾಮಯ್ಯ ‘ ಗೌರಿ-ಗಣೇಶ ಮತ್ತು ಬಕ್ರೀದ್ ಹಬ್ಬ ಏಕಕಾಲಕ್ಕೆ ಬಂದಿದೆ. ಹೀಗಾಗಿ ಬಿಗಿ ಬಂದೋಬಸ್ತ್ ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಸಣ್ಣ ಅಹಿತಕರ ಘಟನೆಗಳನ್ನು ದೊಡ್ಡದಾಗಿ ಬಿಂಬಿಸಿ ರಾಜಕೀಯ ಲಾಭ ಪಡೆಯಲು ಕೆಲವರು ಪ್ರಯತ್ನ ಮಾಡಬಹುದು. ಅಂತಹ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು. ಗಣಪತಿ ಪ್ರತಿಷ್ಠಾಪನೆ, ಮರವಣಿಗೆ, ವಿಸರ್ಜನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಬೇಕು. ಗೌರಿ-ಗಣೇಶ, ಬಕ್ರೀದ್ ಹಬ್ಬ ಏಕಕಾಲದಲ್ಲಿ ಆಚರಿಸುವುದರಿಂದ ಶಾಂತಿ ಕದಡಬಹುದಾದ ಸಮಾಜ ಘಾತಕ ವ್ಯಕ್ತಿಗಳನ್ನು ಗುರುತಿಸಬೇಕು. ಅವರ ಚಲನವಲನದ ಮೇಲೆ ನಿಗಾ ಇಡಬೇಕು. ಅಗತ್ಯವಾದರೆ ಮುಂಜಾಗ್ರತಾ ಕ್ರಮವಾಗಿ ಬಂಧಿಸಬೇಕು. ಹಬ್ಬದ ಆಚರಣೆ ವೇಳೆ ಹಿರಿಯ ಅಧಿಕಾರಿಗಳು ಕೇಂದ್ರ ಸ್ಥಾನ ಬಿಡಬಾರದು. ತಮ್ಮ ಅಧೀನದ ಅಧಿಕಾರಿಗಳು, ಸಿಬ್ಬಂದಿ ಕರ್ತವ್ಯದ ಮೇಲಿರುವಂತೆ ನೋಡಿಕೊಳ್ಳಬೇಕು.

ಆಯಾ ಜಿಲ್ಲೆಯ ಕಮೀಷನರೇಟ್ ಉಸ್ತುವಾರಿ ಹೊಂದಿರುವ ಅಧಿಕಾರಿಗಳು ಆಗಾಗ ಮೇಲ್ವಿಚಾರಣೆ ನಡೆಸಬೇಕು‌ ಎರಡೂ ಹಬ್ಬಗಳು ಶಾಂತಿಯುತವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಕೆರೆ, ನದಿಯಲ್ಲಿ ಗಣಪತಿ ವಿಸರ್ಜಿಸುವಾಗ ಜೀವರಕ್ಷಕ ಸಾಧನಗಳು ಇರಬೇಕು. ಹಬ್ಬದ ವೇಳೆ ಪೊಲೀಸ್ ಗಸ್ತು ಸಹ ಬಿಗಿಯಾಗಿರಬೇಕು. ಮತೀಯ ಶಕ್ತಿಗಳ ಮೇಲೂ ಕಣ್ಣಿಡಬೇಕು. ಎಲ್ಲೆಡೆ ಶಾಂತಿ ಸಭೆಗಳನ್ನು ನಡೆಸಬೇಕು. ಉಸ್ತುವಾರಿ ಎಡಿಜಿಪಿಗಳು ತಮಗೆ ನಿಗಧಿಪಡಿಸಿರುವ ಜಿಲ್ಲೆಗಳಿಗೆ ಭೇಟಿ ಕೊಡಬೇಕು ‘ ಎಂದು ಹೇಳಿದರು.

ಈಗಾಗಲೇ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ವಿವರಿಸಿದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಕುಂಟಿಅ, ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಆರ್.ಕೆ.ದತ್ತಾ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಸುಭಾಷ್ ಚಂದ್ರ, ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್, ಎಲ್ಲ ವಲಯದ ಐಜಿಪಿಗಳು ಸಭೆಯಲ್ಲಿದ್ದರು.

Comments are closed.