ಕಿರುಚಿತ್ರದಲ್ಲಿ ಗಮನ ಸೆಳೆದ ವಿಜಯ್ ಗೆ ತೆರೆಯುವುದೇ ಬೆಳ್ಳಿತೆರೆಯ ಬಾಗಿಲು..?

 

‘ ಸರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ ‘ ಎನ್ನುವುದು ಕನ್ನಡದ ವರಕವಿ ದ ರಾ ಬೇಂದ್ರೆಯವರ ಸುಪ್ರಸಿದ್ಧ ಮಾತು. ಜೀವನದ ಅರ್ಥವನ್ನು ಒಂದೇ ಸಾಲಿನಲ್ಲಿ ತುಂಬ ಅರ್ಥಪೂರ್ಣವಾಗಿ ಹೇಳಿದ್ದಾರೆ. ಮದುವೆಯಾದವರಿಗೆ, ಮುಂದೆ ದಾಂಪತ್ಯ ಜೀವನಕ್ಕೆ ಕಾಲಿರಸಬೇಕೆಂದು ಕೊಂಡಿರುವ ಎಲ್ಲರಿಗೂ ಬೇಂದ್ರೆಯವರ ಈ ಮಾತು ದಾರಿದೀಪವಾಗಬಲ್ಲದು.

ಸರ್ವಜ್ಞ ಕವಿ ‘ ಬೆಚ್ಚನೆಯಾ ಮನೆಯಿರಲು, ವೆಚ್ಚಕ್ಕೆ ಹೊನ್ನಿರಲು, ಇಚ್ಛೆಯರಿತು ನಡೆಯುವ ಸತಿಯಿರಲು, ಸ್ವರ್ಗಕ್ಕೆ ಕಿಚ್ಚು ಹಚ್ಚೆಂದು ‘ ಹೇಳಿದ್ದಾನೆ. ಆದರೆ ಒಳ್ಳೆಯ ಮನೆ, ಕೈ ತುಂಬ ಸಂಬಳ ಇದ್ದರೂ, ಇಂದಿನ ಯುವ ದಂಪತಿಗಳು ಚಿಕ್ಕ ಪುಟ್ಟ ವಿಷಯಗಳಿಗೆ ಕಿತ್ತಾಡಿ ನೆಮ್ಮದಿ ಹಾಳುಮಾಡಿಕೊಂಡಿರುತ್ತಾರೆ. ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಈಗ ‘ ಗಂಡ ಹೆಂಡತಿ ಜಗಳ ಡಿವೋರ್ಸ್ ಆಗುವ ತನಕ ‘ ಎಂಬಂತಾಗಿಬಿಟ್ಟಿದೆ. ನಗರದ ಒತ್ತಡದ ಜೀವನಶೈಲಿಯಲ್ಲಿ busy ಯಾಗಿ ಪರಸ್ಪರರ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಸೋಲುತ್ತಾರೆ.

Related image

ಜೊತೆಗೆ ಸಮಯ ಕಳೆಯಲೂ ಆಗದೇ, ಸಾಮರಸ್ಯವೇ ಇಲ್ಲದಂತಾಗಿ ಬದುಕು ನರಕ ಎನಿಸತೊಡಗುತ್ತದೆ. ಕಾಳಜಿ ಪ್ರೀತಿಯ ಕೊರತೆಯೆನ್ನುದುರಿಸಿ ದೂರಾಗಲು ಹವಣಿಸತೊಡಗುತ್ತಾರೆ. ಒಂದಾಗಿ ಬಾಳಲು ಅಹಂ, ಸ್ವಯಂ ಪ್ರತಿಷ್ಟೆ ಅಡ್ಡಬಂದು ಡಿವೋರ್ಸ್ ಒಂದೇ ಪರಿಹಾರವೆಂಬ ನಿರ್ಧಾರಕ್ಕೆ ಬಂದು ಬಿಡುತ್ತಾರೆ.

ನಗರ ಪ್ರದೇಶಗಳಲ್ಲಿ ಹೆಚ್ಚಾಗುತ್ತಿರುವ ವಿಚ್ಛೇದನ ಪ್ರಕರಣಗಳ ವಿಷಯವನ್ನು ಆರಿಸಿಕೊಂಡು ವಿಜಯ್ ಭಾರದ್ವಾಜ್ ‘ ತೆರೆಯೋ ಬಾಗಿಲನು ‘ ಎಂಬ ಶಾರ್ಟ್ ಫಿಲ್ಮ್ ನಿರ್ಮಿಸಿದ್ದಾರೆ. ಇಷ್ಟ ಪಟ್ಟು ಮದುವೆಯಾಗಿದ್ದರೂ, ದಿನವೂ ಜಗಳ, ಕಿತ್ತಾಟ ಹೆಚ್ಚಾಗಿ ಯುವಜೋಡಿ ವಿಚ್ಛೇದನಕ್ಕೆ ಮುಂದಾಗುತ್ತಾರೆ.

ಕೆಲಸದ ಅವಧಿ ಮುಗಿದರೂ, ಆಫೀಸಿನಿಂದ ಮನೆಗೆ ಹೋಗಲೂ ಮನಸ್ಸಾಗದೆ ನಾಯಕ ಪಾರ್ಕಿನಲ್ಲಿ ಕೂತಿದ್ದಾಗ, ಹಿರಿಯರೊಬ್ಬರು ಬಂದು ಕಡ್ಲೆಪುರಿ ತಿನ್ನಲು ಕೊಟ್ಟು ಪ್ರೀತಿಯಿಂದ ಬುದ್ಧಿಮಾತು ಹೇಳುತ್ತಾರೆ. ಕಡ್ಲೆಪುರಿ ತಾತನ ಮಾತುಗಳಿಂದ ಮನಸ್ಸು ಬದಲಾಯಿಸಿಕೊಂಡ ನಾಯಕ, ಡಿವೋರ್ಸ್ ನಿರ್ಧಾರವನ್ನು ಕೈಬಿಟ್ಟು ಒಂದಾಗಿ ಬಾಳುವ ಮನಸ್ಸು ಮಾಡುತ್ತಾನೆ.

ಗಂಡ ಹೆಂಡತಿ ಮಧ್ಯೆ ವಿರಸ ಏರ್ಪಟ್ಟಾಗ ವಿಚ್ಛೇದನವೊಂದೇ ಮಾರ್ಗವಲ್ಲ. ತಾಳ್ಮೆಯಿಂದ ಪರಸ್ಪರರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಸಾಗಿದರೆ ಬದುಕು ಮತ್ತಷ್ಟು ಸುಂದರವಾಗಬಲ್ಲದು ಎಂಬ ಸಂದೇಶವನ್ನು ‘ತೆರೆಯೋ ಬಾಗಿಲನು’ ನೀಡುತ್ತದೆ. ಈ ಕಿರುಚಿತ್ರ ಸ್ಯಾಂಡಲ್ ವುಡ್ ನ ಹಲವು ಖ್ಯಾತನಾಮರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.  ನಿರ್ದೇಶಕ ಜಯತೀರ್ಥ, ವಿ.ಮನೋಹರ್, ರಾಕ್ ಲೈನ್ ವೆಂಕಟೇಶ್, ನಂದಕಿಶೋರ್, ರಿಷಭ್ ಶೆಟ್ಟಿ, ಸುಂದರ್ ರಾಜ್ ಮುಂತಾದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಚಿತ್ರದಲ್ಲಿ ಸನಿಹಾ ಯಾದವ್, ವಿಜಯ ಭಾರದ್ವಾಜ್ ಪುಷ್ಪ, ಕವೀಶ್ ಶೆಟ್ಟಿ, ನಟಿಸಿದ್ದಾರೆ. ವಿಜಯ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಶಿಶಿರ ಹಾಗೂ ಮಧು.ಎಮ್ ಅವರು ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ವಿಜಯರಾಜ್ ಬೆಂಗಳೂರಿನಲ್ಲಿ ಸ್ವರಾಗ್ ಹೆಸರಿನ ಸ್ಟುಡಿಯೋ ಇಟ್ಟಕೊಂಡಿದ್ದಾರೆ. ಫಟಿಂಗ ಕಿರುಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಶ್ರುತಿ ಹರಿಹರನ್ ನಟಿಸಿರುವ ‘ಎಬಿಸಿ’ ಹಿಂದಿ ಕಿರುಚಿತ್ರಕ್ಕೆ ಸಂಗೀತ ನೀಡಿ ‘ ಬೆಸ್ಟ್ ಮ್ಯೂಸಿಕ್ ಡೈರೆಕ್ಟರ್ ಅವಾರ್ಡ್ ‘ ತಮ್ಮದಾಗಿಸಿಕೊಂಡಿರುವ ವಿಜಯರಾಜ್, ಸ್ಟೋನ್ಡ್ ಮಂಕಿ ಫಿಲ್ಮ್ ಫೆಸ್ಟಿವಲ್ ನಲ್ಲಿ ಪ್ರಶಸ್ತಿ ಪಡೆದಿದ್ದಾರೆ.

ಸಾಮಾಜಿಕ ಸಂದೇಶ ನೀಡಲು ‘ ಸಿನೆಮಾ ‘ ಅತ್ಯದ್ಭುತ ಮಾಧ್ಯಮವಾಗಿ ಕೆಲಸ ಮಾಡಬಲ್ಲದು. ಆದರೆ ಈಗ 3-4 ಗಂಟೆ ಕುಳಿತು ನೋಡುವ ವ್ಯವಧಾನ ಜನರಲ್ಲಿ ಕಡಿಮೆಯಾಗಿದೆ. ಹಾಗಾಗಿ 20-30 ನಿಮಿಷಗಳ ಅವಧಿಯ ‘ ಕಿರುಚಿತ್ರ ‘ ನಿರ್ಮಾಣ ಈಗಿನ ಟ್ರೆಂಡ್ ಆಗಿಬಿಟ್ಟಿದೆ. ನಿರ್ದಿಷ್ಟ ವಿಷಯವನ್ನು ಆಯ್ದುಕೊಂಡು, ಅದರ ಬಗ್ಗೆ ಹೇಳಬೇಕಾದ್ದೆಲ್ಲವನ್ನು ಕೆಲವೇ ನಿಮಿಷಗಳಲ್ಲಿ ಕಥೆಯೊಂದರ ಮೂಲಕ ತೋರಿಸುವುದು ನಿಜಕ್ಕೂ ಚಾಲೆಂಜಿಂಗ್ ಆದ ಕೆಲಸ.

ಆಟೋಮೊಬೈಲ್ ಇಂಜಿನಿಯರ್ ಆಗಿದ್ದು, ಚಿತ್ರರಂಗಕ್ಕೆ ಬಂದಿರುವ ವಿಜಯ್ ‘ ನಿರ್ದೇಶಕನಾಗಬೇಕು ಎಂಬ ಕನಸನ್ನು ಸಾಕಾರಗೊಳಿಸುವ ಮೊದಲ ಹಂತದಲ್ಲಿ ನಾನು ಗೆದ್ದಿದ್ದೇನೆ. ತೆರೆಯೋ ಬಾಗಿಲನು ಕಿರುಚಿತ್ರವನ್ನು ನೋಡಿದ ಪ್ರತಿಯೊಬ್ಬರೂ ಮೆಚ್ಚಿಕೊಂಡಿದ್ದಾರೆ ‘ ಎನ್ನುತ್ತಾರೆ.

ಮುಂಗಾರು ಮಳೆ – 2 ಚಿತ್ರಕ್ಕೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ವಿಜಯ್, ‘ತೆರೆಯೋ ಬಾಗಿಲನು’ ನಿರ್ಮಿಸುವ ಮೂಲಕ ಪ್ರಥಮ ಬಾರಿಗೆ ನಿರ್ದೇಶಕರಾಗಿದ್ದಾರೆ. ಗೃಹಲಕ್ಷ್ಮಿ ಕಿರುತೆರೆ ಧಾರಾವಾಹಿಗೆ ಸಂಭಾಷಣೆಯನ್ನು ಬರೆದಿದ್ದಾರೆ. ಆ್ಯನಿಮೇಟೆಡ್ ಚಿತ್ರಗಳಲ್ಲಿ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ವಿಜಯ್ ಮುಂಬರುವ ತುಳು ಚಿತ್ರವೊಂದಕ್ಕೆ ಸ್ಕ್ರಿಪ್ಟ್ ಬರೆಯುವುದರಲ್ಲಿ ನಿರತರಾಗಿದ್ದಾರೆ. ಖ್ಯಾತ ನಿರ್ದೇಶಕ ಟಿ.ಎನ್ ಸೀತಾರಾಮ್ ಅವರಿಗೆ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಮಹಾಪರ್ವ ಧಾರಾವಾಹಿಯಲ್ಲಿ ‘ಡಿ.ಸಿ.ಪಿ ವಿಜಯನಾಥ್’ ಎಂಬ ಪೋಲೀಸ್ ಪಾತ್ರದಲ್ಲಿ ನಟಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.