ಪುತ್ರೋತ್ಸವದ ಸಂಭ್ರಮದಲ್ಲಿ ಸಾನಿಯಾ-ಶೋಯೆಬ್ : ಟ್ವಿಟರ್ನಲ್ಲಿ ಸಂತಸ ಹಂಚಿಕೊಂಡ ಪಾಕ್ ಕ್ರಿಕೆಟರ್

ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಮ್ಮ ಪ್ರಥಮ ಕಂದನ ಜನನದ ಶುಭ ಸುದ್ದಿಯನ್ನು ಮಂಗಳವಾರ ಬೆಳ್ಳಂಬೆಳಗ್ಗೆ ಖ್ಯಾತ ಪಾಕ್ ಕ್ರಿಕೆಟಿಗ ಶೋಯೆಬ್ ಮಲ್ಲಿಕ್ ಟ್ವೀಟರ್ ಮೂಲಕ ಹಂಚಿಕೊಂಡಿದ್ದು, ಮಗು ಮತ್ತು ನನ್ನ ಹುಡುಗಿ ಆರೋಗ್ಯದಿಂದಿದ್ದಾರೆ, ಸ್ಟ್ರಾಂಗ್ ಇದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಸಾನಿಯಾ ಮಿರ್ಜಾ ಟೆನಿಸ್ ಅಂಗಣದಿಂದ ದೂರಾಗಿ ಬಹಳ ದಿನಗಳಾಗಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಕ್ರಿಯಾಶೀಲರಾಗಿದ್ದರು. ಗರ್ಭಿಣಿಯಾಗಿದ್ದ ವೇಳೆಯ ಖುಷಿಯ ಕ್ಷಣಗಳನ್ನು ದಾಖಲಿಸಿಕೊಳ್ಳಲು ಫೋಟೋಶೂಟ್ ಕೂಡ ನಡೆಸಿದ್ದರು. ಗರ್ಭಿಣಿ ಸಾನಿಯಾಗೆ ಪುಕ್ಕಟೆ ಸಲಹೆ ನೀಡಿದ್ದ ಪುರುಷರನ್ನು ತರಾಟೆಗೆ ತೆಗೆದುಕೊಂಡ ವಿದ್ಯಮಾನವೂ ನಡೆದಿತ್ತು.

ಕೆಲವು ದಿನಗಳ ಹಿಂದೆಯೇ ಸಾನಿಯಾಗೆ ಮಗುವಾಗಿದೆ ಎಂದು ಸುದ್ದಿ ಹರಿದಾಡಿದ್ದಾಗ ಶೋಯೆಬ್ ನಿರಾಕರಿಸಿದ್ದರು. ನಾನು ಸೂಕ್ತ ರೀತಿಯಲ್ಲಿ ಘೋಷಣೆ ಮಾಡುತ್ತೇನೆ, ಅನಗತ್ಯ ಸುದ್ದಿ ಹರಡಬೇಡಿ ಎಂದು ಶೋಯೆಬ್ ಟ್ವೀಟ್ ಮಾಡಿದ್ದರು. 2010ರಲ್ಲಿ ಇವರಿಬ್ಬರು ವಿವಾಹವಾಗಿದ್ದರು. ಆರಂಭಿಕ ವರ್ಷಗಳಲ್ಲಿ ವೃತ್ತಿಯ ಕಡೆಗೆ ಸಾನಿಯಾ ಗಮನ ಹರಿಸಿದ್ದರು. 7 ವರ್ಷಗಳ ಬಳಿಕ ವೃತ್ತಿ ಜೀವನದಿಂದ ತಾತ್ಕಾಲಿಕ ಬ್ರೇಕ್ ತೆಗೆದುಕೊಂಡು ಪುತ್ರೋತ್ಸವವನ್ನು ಸಂಭ್ರಮಿಸಿದ್ದಾರೆ. ಬ್ರೇಕ್‌ನ ಬಳಿಕ ಮತ್ತೆ 2020ರ ಟೋಕಿಯೋ ಒಲಿಂಪಿಕ್ಸ್ ವೇಳೆಗೆ ಮತ್ತೆ ಕೋರ್ಟ್‌ಗೆ ಇಳಿಯುವ ಕನಸು ಸಾನಿಯಾ ಅವರಿಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.