73ನೇ ಸ್ವಾತಂತ್ರ್ಯೋತ್ಸವ : ದೆಹಲಿ ಕೆಂಪುಕೋಟೆ ಮೇಲೆ ಮೋದಿಜಿ ಧ್ವಜಾರೋಹಣ : ದೇಶವನ್ನುದ್ದೇಶಿಸಿ ಮಾತನಾಡಿದ ನಮೋ

ಇಂದು 73ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿ ಕೆಂಪುಕೋಟೆ ಮೇಲೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ  ಧ್ವಜಾರೋಹಣ ನೆರವೇರಿಸಿದರು.

ಈ ವೇಳೆ ಮಾತನಾಡಿದ ಅವರು ದೇಶದಲ್ಲಿರುವ ಬಡತನವನ್ನು ಹಾಗೂ ಬಡವರ ಸಂಖ್ಯೆಯನ್ನು ಕಡಿಮೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ವತಿಯಿಂದ 2022ರ ವೇಳೆಗೆ ಪ್ರತಿ ಬಡವರಿಗೂ ಶಾಶ್ವತ ಮನೆ ನೀಡಲಾಗುತ್ತದೆ. 100 ಲಕ್ಷ ಕೋಟಿ ರೂ.ವನ್ನು ಮೂಲ ಸೌಕರ್ಯಕ್ಕೆ ಹಾಗೂ ಜಲ ಜೀವನ್ ಮೀಷನ್ ಯೋಜನೆಗೆ 3.5 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ ಎಂದರು.

ಜಮ್ಮು ಕಾಶ್ಮೀರದಲ್ಲಿ ಹಿಂದೆ ಇದ್ದ ವ್ಯವಸ್ಥೆಯು ಅಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತಕ್ಕೆ ದಾರಿ ಮಾಡಿಕೊಟ್ಟಿತ್ತು. ಮಹಿಳೆಯರ ಹಕ್ಕುಗಳು, ಮಕ್ಕಳು, ದಲಿತರು, ಬುಡಕಟ್ಟು ಸಮುದಾಯದ ವಿಚಾರಕ್ಕೆ ಬಂದರ ತಾರತಮ್ಯಕ್ಕೆ ಎಡಮಾಡಿಕೊಟ್ಟಿತ್ತು. ಸಫಾಯಿ ಕರ್ಮಚಾರಿಗಳ ಕನಸುಗಳು ಕನಸಾಗಿಯೇ ಉಳಿದಿದ್ದವು. ಇದನ್ನೆಲ್ಲ ನಾವು ಒಪ್ಪಲು ಸಾಧ್ಯವಿತ್ತೇ?

ನಾವಿಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದ್ದೇವೆ. ಆದರೆ, ದೇಶದ ಹಲವು ರಾಜ್ಯಗಳಲ್ಲಿ ಮಳೆಯಿಂದಾಗಿ ಪ್ರವಾಹ ಉಂಟಾಗಿದೆ. ಜನ ಸಂತ್ರಸ್ತರಾಗಿದ್ದಾರೆ. ಅಂಥವರ ಪರವಾಗಿ ನಾವಿದ್ದೇವೆ.

ನೀರಿನ ಪ್ರಾಮುಖ್ಯತೆ ಮತ್ತು ಸಂರಕ್ಷಣೆಗೆ ಬಗ್ಗೆ ಈ ದೇಶಕ್ಕೆ ಸ್ಪಷ್ಟವಾದ ಅರಿವಿದೆ. ಅದಕ್ಕಾಗಿಯೇ ನಮ್ಮ ಸರ್ಕಾರ ಜಲಶಕ್ತಿ ಸಚಿವಾಲಯವನ್ನು ಹೊಸದಾಗಿ ರಚಿಸಿದೆ. ವೈದ್ಯಕೀಯ ಕ್ಷೇತ್ರವನ್ನು ಜನಸ್ನೇಹಿಗೊಳಿಸಲೂ ನಾವು ದಿಟ್ಟ ಹೆಜ್ಜೆಗಳನ್ನಿಟ್ಟಿದ್ದೇವೆ.

ಕೇಂದ್ರದಲ್ಲಿ ಸರ್ಕಾರ ರಚನೆಯಾಗಿ ಇನ್ನೂ ಹತ್ತು ವಾರವಾಗಿಲ್ಲ. ಈ ಸಣ್ಣ ಅವಧಿಯಲ್ಲೇ ಸರ್ಕಾರ ಎಲ್ಲ ರಂಗದಲ್ಲೂ ಮಹತ್ತರ ಹೆಜ್ಜೆಗಳನ್ನಿಟ್ಟಿದೆ. ಸಂವಿಧಾನದ ವಿಧಿ 370 ಅನ್ನು ರದ್ದು ಮಾಡಿದ್ದು ಸರ್ದಾರ್‌ ವಲ್ಲಭ ಬಾಯಿ ಪಟೇಲ್‌ ಅವರ ಕನಸು ಸಾಕಾರ ಮಾಡುವ ಕಡೆಗಿನ ಮಹತ್ವದ ಹಜ್ಜೆ.

2014ರ ಚುನಾವಣೆಗೂ ಮೊದಲು ಜನರ ಭಾವನೆಗಳನ್ನು ಅರಿತುಕೊಳ್ಳಲು ನಾನು ದೇಶಾದ್ಯಂತ ಸಂಚಾರ ಮಾಡಿದ್ದೆ. ಆಗ ಜನರಲ್ಲಿ ನಿರಾಶೆ ಮನೆ ಮಾಡಿತ್ತು. ಈ ದೇಶ ಬದಲಾಗಲು ಸಾಧ್ಯವೇ ಎಂದು ಜನ ಚಿಂತೆ ಮಾಡುತ್ತಿದ್ದರು. ಆದರೆ, 2019ರ ಈ ಸಮಯದಲ್ಲಿ ನನಗೆ ಆಶ್ಚರ್ಯವಾಗುತ್ತಿದೆ. ಜನರ ಭಾವನೆಗಳು ಬದಲಾಗಿವೆ. ನಿರಾಶೆ ಬದಿಗಿಟ್ಟು ಆಶಾಭಾವದಲ್ಲಿ ಬದುಕುತ್ತಿದ್ದಾರೆ. ಈ ದೇಶ ಬದಲಾವಣೆಯಾಗುತ್ತದೆ ಎಂಬುದನ್ನು ಅವರೀಗ ನಂಬಿದ್ದಾರೆ.

ಮೂರು ಸೇನಾ ಪಡೆಗಳ ಸಮನ್ವಯತೆಗಾಗಿ ಚೀಪ್ ಆಫ್ ಡಿಫೆನ್ಸ್ ನೇಮಕ. ‘ಚೀಫ್ ಆಫ್ ಡಿಫೆನ್ಸ್’ ನೇಮಕದಿಂದಾಗಿ ಯುದ್ಧ, ಸುರಕ್ಷತೆ ಮತ್ತಷ್ಟು ಹೆಚ್ಚಲಿದ್ದು, ಮೂರು ಸೇನಾ ಪಡೆಗಳಿಗೆ ಚೀಫ್ ಆಫ್ ಡಿಫೆನ್ಸ್ ಸಲಹೆ, ಸೂಚನೆ ನೀಡುತ್ತಾರೆ. ಹೀಗಾಗಿ ವಾಯು, ಭೂ ಮತ್ತು ನೌಕಾಸೇನೆಗೆ ಒಬ್ಬರ ನೇತೃತ್ವ.

ಭಯೋತ್ಪಾದನೆ ಪೋಷಿಸುವವರ ಬಣ್ಣ ಬಯಲಾಗಲಿದೆ. ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘನಿಸ್ತಾನ ಭಯೋತ್ಪಾದನೆಯಿಂದ ತೊಂದರೆಗೀಡಾಗಿವೆ. ಈ ದೇಶಗಳೆಲ್ಲ ಒಂದಾಗಿ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಕೈಜೋಡಿಸಬೇಕು.

ಇಂದು, ದೇಶದಲ್ಲಿ ಸುಸ್ಥಿರ ಸರ್ಕಾರವಿದೆ. ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ವಿದೇಶಗಳು ಉತ್ಸುಕವಾಗಿವೆ. ದೇಶದ ಅಭಿವೃದ್ಧಿಗೆ ವೇಗ ನೀಡಿದ್ದೇವೆ. ದೇಶದ ಆರ್ಥಿಕತೆ ಬಲವಾಗುತ್ತಿದೆ.

ಜನಸಾಮಾನ್ಯರ ಬದುಕಿನಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಕಡಿಮೆ ಮಾಡಲು ಸಾಧ್ಯವಿಲ್ಲವೇ ಎಂದು ನಾನು ಸದಾ ಪ್ರಶ್ನೆ ಮಾಡುತ್ತಿರುತ್ತೇನೆ. ಅವರ ಇಚ್ಛೆಯಂತೆ ಬದುಕಲು ಜನರಿಗೆ ಅವಕಾಶ ಕಲ್ಪಿಸೋಣ. ಅದೇ ಕಾರಣಕ್ಕೆ ನಾವು ಹಲವು ಕಾನೂನುಗಳನ್ನು ರದ್ದು ಮಾಡಿದ್ದೇವೆ.

ಜನಸಂಖ್ಯಾ ನಿಯಂತ್ರಣಕ್ಕೆ ಮನವಿ:
ಜನಸಂಖ್ಯಾ ಸ್ಫೋಟ ಮಿತಿ ಮೀರಿ ಹೋಗುತ್ತಿದೆ. ಮುಂದಿನ ಪೀಳಿಗೆಗೆ ಇದು ದೊಡ್ಡ ಸವಾಲು ಒಡ್ಡಲಿದೆ. ಮಗುವಿಗೆ ಜನ್ಮ ನೀಡುವ ಮುನ್ನ ಯೋಚಿಸಿ, ಮುಗುವಿನ ಎಲ್ಲ ಅವಶ್ಯಕತೆ ಪೂರೈಸಬಹುದೇ ಎಂಬುದನ್ನು ಯೋಚಿಸಿ ನಿರ್ಣಯ ಕೈಗೊಳ್ಳಿ ಎಂದು ಇದೇ ವೇಳೆ ಪ್ರಧಾನಿಯವರು ದೇಶದ ಜನರಲ್ಲಿ ಮನವಿ ಮಾಡಿಕೊಂಡರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.