230 ಹಸುಗಳು ಕೆಸರಿನಲ್ಲಿ ಸಿಲುಕಿದ್ದ ಪ್ರಕರಣ : ಸಚಿವರಿಂದ ತಪ್ಪಿತಸ್ಥ ಅಧಿಕಾರಿಗಳ ಅಮಾನತು

ಅಮೃತ್ ಮಹಲ್ ಕಾವಲ್ ನಲ್ಲಿ 230 ಅಮೃತ್ ಮಹಲ್ ತಳಿಯ ಹಸುಗಳು ಕೆಸರಿನಲ್ಲಿ ಸಿಲುಕಿದ್ದ ಪ್ರಕರಣ ಹಿನ್ನೆಲೆ ಇಂದು ಪಶುಸಂಗೋಪನಾ ಇಲಾಖೆ ಸಚಿವ ಪ್ರಭು ಚೌಹಾಣ್ ರವರು ಅಮೃತ್ ಮಹಲ್ ಗೆ ಭೇಟಿ ನೀಡಿ ಪರಿಶೀಲಿಸಿದ್ರು. ಕಳೆದ ಒಂದು ವಾರದ ಹಿಂದೆ 230 ಗೋವುಗಳು ಕೆಸರಿನಲ್ಲಿ ಸಿಲುಕಿ ನರಕ ಯಾತನೆ ಅನುಭವಿಸಿದ್ದವು. ಪಶುಸಂಗೋಪನಾ ಇಲಾಖೆ ಸಚಿವರು ಸ್ಥಳ ಪರಿಶೀಲನೆ ಅಧಿಕಾರಿಗಳೊಂದಿಗೆ ಚರ್ಚಿಸಿ ತಪ್ಪಿತಸ್ಥ ಮೂವರು ಅಧಿಕಾರಿಗಳನ್ನ ಅಮಾನತು ಮಾಡುವಂತೆ ಆದೇಶ ಹೊರಡಿಸಿದ್ದಾರೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಅಮೃತ್ ಮಹಲ್ ಕಾವಲ್ ನಲ್ಲಿ ಸುಮಾರು 230 ಹಸುಗಳು ಕೆಸರಿನಲ್ಲಿ ಸಿಲುಕಿ ನರಕ ಯಾತನೆ ಅನುಭವಿಸಿದ್ದವು. ಅಕ್ಟೋಬರ್ 27 ರಂದು ವಾಹಿನಿಗಳಲ್ಲಿ ವರದಿ ಪ್ರಸಾರವಾದ ಬಳಿಕ ಈ ಹಸುಗಳನ್ನು ಬಿರಕ್ಕ ಎಂಬ ಸ್ಥಳಕ್ಕೆ ಸ್ಥಳಾಂತರ ಮಾಡಿದ್ರು. ಜೊತೆಗೆ ಸಿಎಂ ಕೂಡ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ರು. ಇಂದು ಪಶುಸಂಗೋಪನಾ ಇಲಾಖೆ ಸಚಿವ ಪ್ರಭು ಚೌಹಾಣ್ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ರು. ಈ ಅಮೃತ್ ಮಹಲ್ ತಳಿಯು ಅಳಿವಿನಂಚಿನಲ್ಲಿದ್ದು, ಮೈಸೂರು ಮಹಾರಾಜರು 1542 ಎಕರೆ ಪ್ರದೇಶದಲ್ಲಿ ಈ ಅಮೃತ್ ಮಹಲ್ ಎಂಬ ವಿಶೇಷ ತಳಿ ಅಭಿವೃದ್ಧಿಗಾಗಿ ಈ ಜಾಗ ಮೀಸಲಿರಿಸಿದ್ದರು. ಪಶುಸಂಗೋಪನಾ ಇಲಾಖೆ ಸಚಿವ ಪ್ರಭು ಚೌವಾಣ್ ರವರು ಭೇಟಿ ಬಳಿಕ ಮಾತನಾಡಿ ಮಾಧ್ಯಮಗಳಲ್ಲಿ ಅಮೃತ್ ಮಹಲ್ ಕಾವಲ್ ನಲ್ಲಿ 230 ಹಸುಗಳು ಕೆಸರಿಗೆ ಸಿಲುಕಿವೆ ಎಂದು ಸುದ್ದಿ ಪ್ರಸಾರ ಮಾಡಿದ್ದೀರಿ ನಿಮಗೆ ಧನ್ಯವಾದಗಳು. ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೆ, ಈಗ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಯಾರೇ ಆಗಲೀ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇನೆ. ಸೂಕ್ತ ಮೂಲಭೂತ ಸೌಕರ್ಯ ಒದಗಿಸಲು ಈ ಸ್ಥಳಕ್ಕೆ 50 ಲಕ್ಷ ಹಣ ಬಿಡುಗಡೆ ಮಾಡಲಾಗಿದೆ. ಅಮೃತ್ ಮಹಲ್ ತಳಿ ಸಂರಕ್ಷಣೆಗೆ ಸರ್ಕಾರದಿಂದ ಸೂಕ್ತ ಕ್ರಮ ಕೈಗೊಂಡಿದ್ದೇವೆ. ನಾನು ಬೆಂಗಳೂರಿಗೆ ಹೋದ ತಕ್ಷಣ ಮೂವರು ಅಧಿಕಾರಿಗಳನ್ನ ಅಮಾನತುಗೊಳಿಸಿ ಆದೇಶ ಹೊರಡಿಸುತ್ತೇನೆ ಎಂದರು.

ಅಮೃತ್ ಮಹಲ್ ಕಾವಲ್ ನಿಂದ ಹಸುಗಳನ್ನ ಸ್ಥಳಾಂತರ ಮಾಡಿರುವ ಬಿದರಕ್ಕ ಎಂಬ ಸ್ಥಳ ವೀಕ್ಷಣೆಗೆ ತೆರಳುವ ವೇಳೆ ಸಚಿವರ ಸಂಚಾರಕ್ಕೆ ರೂಟ್ ಪ್ಲಾನ್ ಮಾಡದೆ ಸುತ್ತಾಡಿದ್ದು ಪ್ರವಾಸದ ವೇಳೆ ಅಧಿಕಾರಿಗಳು ಯಡವಟ್ಟು ಮಾಡಿದ್ರು. ಸರಿಯಾದ ಮಾರ್ಗದಲ್ಲು ಹೋಗದೇ ದಾರಿ ತಪ್ಪಿದ್ರು, ನಾನು ಎಲ್ಲಿ ಹೋಗಬೇಕು ಎಂದು ಅಧಿಕಾರಿಗಳ ತರಾಟೆ ತೆಗೆದುಕೊಂಡರು. ಯಾವ ರೋಡ್ ಎಲ್ಲಿ ಅಂತಾ ಗೊತ್ತಿಲ್ವಾ ಎಂದು ಸಚಿವರು ಅಧಿಕಾರಿಗಳ ಮೇಲೆ ಕಿಡಿಕಾರಿದ್ರು. ಪ್ರವಾಸ ವೇಳೆ ರಾಯಸಂದ್ರ ಗ್ರಾಮದಲ್ಲಿ ಸಚಿವ ಪ್ರಭು ಚವ್ಹಾಣ್ ಕಾರಿಗೆ ಲಘು ಅಪಘಾತವಾಯಿತು. ಸಚಿವರ ಕಾರಿಗೆ ಹಿಂಬಂದಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷ ನವಿಲೆ ಅಣ್ಣಪ್ಪರ ಕಾರು ಡಿಕ್ಕಿ ಹೊಡೆಯಿತು.

ಸಚಿವರ ಕಾರಿನ ಹಿಂದೆ ಚಲಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿತು, ಅನಾಹುತ ತಪ್ಪಿದ್ದು ಕಾರು ಸ್ವಲ್ಪ ಜಖಂಗೊಂಡಿತು. ಈ ವೇಳೆ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಮತ್ತು ಚನ್ನರಾಯಪಟ್ಟಣ ಶಾಸಕ ಬಾಲಕೃಷ್ಣರವರು ಸಚಿವರಿಗೆ ಸಾಥ್ ನೀಡಿದ್ರು. ಬಳಿಕ ಶಾಸಕ ಬಾಲಕೃಷ್ಣ ಮಾತನಾಡಿ ಸಚಿವರು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ‌. ಸರ್ಕಾರದಿಂದ ಆದಷ್ಟು ಬೇಗ ಕಾಮಗಾರಿ ಕೈಗೊಂಡು ಅಮೃತ್ ಮಹಲ್ ತಳಿ ಸಂರಕ್ಷಿಸಲಿ ಎಂದು ಆಗ್ರಹಿಸಿದ್ರು.

ಅಮೃತ್ ಮಹಲ್ ತಳಿಯನ್ನ ಸಂರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದ್ರೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಕೆಳ ಹಂತದ ನೌಕರರ ವಿರುದ್ದ ಕ್ರಮ ಕೈಗೊಳ್ಳುವ ಬದಲು ಆಯಕಟ್ಟಿನ ಹುದ್ದೆಯಲ್ಲಿರುವ ಹಿರಿಯ ಅಧಿಕಾರಿಗಳ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಇಷ್ಟೇ ಅಲ್ಲದೇ ಈ ಅಮೃತ್ ಮಹಲ್ ಕಾವಲ್ ನಲ್ಲಿ ಕೆಸರಿನಲ್ಲೊ ಸಿಲುಕಿದ್ದ ವೇಳೆ ಕೆಲವು ಹಸುಗಳು ಮೃತಪಟ್ಟಿವೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ಸರ್ಕಾರ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.