ಸಾಮಾನ್ಯ ವರ್ಗದ ಆರ್ಥಿಕ ದುರ್ಬಲರಿಗೆ 10% ಕೋಟಾ: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

ಸರ್ಕಾರಿ ಉದ್ಯೋಗಗಳು ಹಾಗೂ ಉನ್ನತ ಶಿಕ್ಷಣದಲ್ಲಿ ಸಾಮಾನ್ಯ ವರ್ಗದ ಆರ್ಥಿಕ ದುರ್ಬಲರಿಗೆ ಶೇ.10ರಷ್ಟು ಮೀಸಲಾತಿ ಕಲ್ಪಿಸುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ.
ಇದು ಜಾರಿಗೆ ಬರಬೇಕಾದರೆ ಸಂವಿಧಾನದ ತಿದ್ದುಪಡಿ ಅಗತ್ಯವಾಗಿದೆ. ಚುನಾವಣೆಗೆ ಕೆಲವೇ ತಿಂಗಳು ಇರುವಾಗ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಇಂತಹದ್ದೊಂದು ತೀರ್ಮಾನ ಕೈಗೊಳ್ಳಲಾಗಿದೆ. ಇದಸಕ್ಕಾಗಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಗಳವಾರ ಸಂಸತ್ತಿನಲ್ಲಿ ಮಂಡಿಸುವ ನಿರೀಕ್ಷೆ ಇದೆ. ಇದೇ ಉದ್ದೇಶಕ್ಕಾಗಿ ರಾಜ್ಯಸಭೆ ಅಧಿವೇಶವನ್ನು ಒಂದು ದಿನ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ.

ವರ್ಷಕ್ಕೆ 8 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವವರು, ಐದು ಎಕರೆ ಭೂಮಿಗಿಂತ ಕಡಿಮೆ ಆಸ್ತಿ ಹೊಂದಿರುವವರು ಈ ಮೀಸಲಿಗೆ ಅರ್ಹರಾಗಿರಲಿದ್ದಾರೆ ಎಂದು ಕೇಂದ್ರ ಸಚಿವ ವಿಜಯ ಸಂಪಲ ಹೇಳಿದ್ದಾರೆ. ಈಗಾಗಲೇ ಬಡ ಮತ್ತು ದುರ್ಬಲ ನಿಮ್ನ ವರ್ಗದವರಿಗೆ ಉದ್ಯೋಗಗಳಲ್ಲಿ ಮೀಸಲಾತಿ ಇದೆ. ಆರ್ಥಿಕ ಕೋಟಾದ ಮಾನದಂಡವು ಒಬಿಸಿಗೆ ಇರುವಂತೆಯೇ ಇರಲಿದೆ.
ಇದು ದೀರ್ಘ ಕಾಲದ ಬೇಡಿಕೆಯಾಗಿತ್ತು. ಮೋದಿ ಸರ್ಕಾರ ಇದನ್ನು ಅನುಷ್ಠಾನಗೊಳಿಸುವ ಧೈರ್ಯ ತೋರಿದೆ. ಬ್ರಾಹ್ಮಣರು, ಬನಿಯಾಗಳು, ಕ್ರಿಶ್ಚಿಯನ್ನರು, ಮುಸ್ಲಿಮರು ಎಲ್ಲರೂ ಇದರಿಂದ ಅನುಕೂಲ ಪಡೆಯಲಿದ್ದಾರೆ ಎಂದು ವಿಜಯ ಸಂಪಲ ಹೇಳಿದ್ದಾರೆ.
ಮೀಸಲಾತಿಗಳು ಶೇ.50 ಮೀರಬಾರದು ಎಂದು ಸುಪ್ರೀಂ ಕೋರ್ಟ್ ಆದೇಶವಿರುವುದರಿಂದ ಈ ಮೀಸಲಾತಿ ಅನುಷ್ಠಾನಗೊಳ್ಳಬೇಕಾದರೆ ಸಾಂವಿಧಾನಿಕ ತಿದ್ದುಪಡಿ ಅಗತ್ಯವಾಗಿದೆ. ಆದರೆ ಸಂಸತ್ತಲ್ಲಿ ಅನುಮೋದನೆ ದೊರಕುತ್ತಾ ಎಂಬುದೇ ಪ್ರಶ್ನೆ.
ಕಾಂಗ್ರೆಸ್ ಈಗಾಗಲೇ ಇದೊಂದು ಚುನಾವಣಾ ಗಿಮಿಕ್ ಎಂದು ಟೀಕಿಸಿದೆ. ಉದ್ಯೋಗ ಒದಗಿಸುವ ಕ್ರಮವನ್ನು ನಾವು ಬೆಂಬಲಿಸುತ್ತೇವೆ. ಆದರೆ ಚುನಾವಣೆಯ ಹೊತ್ತಲ್ಲಿ ನಿದ್ದೆಯಿಂದ ಎದ್ದಂತೆ ಸರ್ಕಾರ ಆಡುತ್ತಿರುವುದೇಕೆ? ಉದ್ಯೋಗ ಒದಗಿಸುವುದು ಯಾವಾಗ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಪ್ರಶ್ನಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.