ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿನ ಸ್ಪೋಟ ಪ್ರಕರಣ : ಆಮೆಗತಿಯಲ್ಲಿ ಸಾಗಿದ ಅಪರಾಧಿಗಳ ಪತ್ತೆ ಕಾರ್ಯ

ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿನ ಸ್ಪೋಟ ಪ್ರಕರಣದ ತನಿಖೆ ಹಳಿತಪ್ಪಿದೆ. ಘಟನೆ ನಡೆದು ಒಂದು ತಿಂಗಳಾದರೂ ಅಪರಾಧಿಗಳ ಸುಳಿವು ಪತ್ತೆಯಾಗಿಲ್ಲ. ದೇಶದ ಗಮನ ಸೆಳೆದಿದ್ದ ಸ್ಪೋಟ ಪ್ರಕರಣದ ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣಿಸುತ್ತಿಲ್ಲ. ಆಮೆಗತಿಯಲ್ಲಿ ಸಾಗಿರುವ ಸ್ಪೋಟ ಪ್ರಕರಣದ ತನಿಖೆಯ ಕುರಿತು ವರದಿ ಇಲ್ಲಿದೆ.

ಹುಬ್ಬಳ್ಳಿಯ ಕೇಂದ್ರ ರೈಲು ನಿಲ್ದಾಣದಲ್ಲಿ ಕಳೆದ ಅಕ್ಟೋಬರ್‌ 21ರಂದು ನಡೆದ ಸ್ಪೋಟ ಪ್ರಕರಣದಿಂದ ಇಡೀ ರಾಜ್ಯವೇ ಬೆಚ್ಚಿಬಿದ್ದಿತ್ತು. ಜನನಿಬಿಡ ರೈಲು ನಿಲ್ದಾಣದಲ್ಲಿ ಸ್ಪೋಟಕಗಳು ಪತ್ತೆಯಾಗಿದ್ದು ಪ್ರಯಾಣಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು. ವಿಜಯವಾಡ- ಹುಬ್ಬಳ್ಳಿ ಅಮರಾವತಿ ಎಕ್ಸಪ್ರೆಸ್‌ ರೈಲಿನಲ್ಲಿದ್ದ ಎಂಟು ಸ್ಪೋಟಕಗಳ ಪೈಕಿ ಒಂದು ಸಿಡಿದಿತ್ತು. ಇನ್ನುಳಿದ ಏಳು ಸ್ಪೋಟಕಗಳನ್ನು ಬಾಂಬ್‌ ನಿಷ್ಕ್ರೀಯ ದಳದಿಂದ ನಿಷ್ಕ್ರೀಯಗೊಳಿಸಲಾಗಿತ್ತು. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದರು. ಆದರೆ ಇದುವರೆಗೆ ತನಿಖೆಯಲ್ಲಿ ಸಣ್ಣ ಪ್ರಮಾಣದ ಪ್ರಗತಿಯೂ ಆಗಿಲ್ಲದಿರುವುದು ಕಂಡುಬರುತ್ತಿದೆ. ತನಿಖಾ ತಂಡ ಆಂಧ್ರದ ವಿಜಯವಾಡ ಮತ್ತು ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ಹೋಗಿ ಬಂದಿದೆ. ವಿಜಯವಾಡದಿಂದ ಹುಬ್ಬಳ್ಳಿವರೆಗಿನ 26 ರೈಲು ನಿಲ್ದಾಣಗಳನ್ನು ಪರಿಶೀಲನೆ ನಡೆಸಲಾಗಿದೆ. ಆದರೆ ಬಹುತೇಕ ರೈಲು ನಿಲ್ದಾಣಗಳಲ್ಲಿನ ಸಿಸಿಟಿವಿಗಳು ಕೆಲಸ ಮಾಡುತ್ತಿಲ್ಲ. ಹೀಗಾಗಿ ಯಾವ ನಿಲ್ದಾಣದಲ್ಲಿ ಸ್ಪೋಟಕಗಳನ್ನು ರೈಲಿನಲ್ಲಿ ಇರಿಸಲಾಯಿತು ಎನ್ನುವುದರ ಸುಳಿವು ಸಿಕ್ಕಿಲ್ಲ. ಈ ಭಾಗದವರೇ ಆದ ರೈಲ್ವೆ ಸಚಿವ ಸುರೇಶ್‌ ಅಂಗಡಿ ಮತ್ತು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದಿದ್ದರು. ಆದರೆ ತನಿಖೆ ಮಾತ್ರ ಮಂದಗತಿಯಲ್ಲಿ ಸಾಗಿರುವಂತೆ ಕಂಡುಬರುತ್ತಿದ್ದು ಸಾರ್ವಜನಿಕರಲ್ಲಿ ನಿರಾಶೆ ಮೂಡಿಸಿದೆ.

ಸ್ಪೋಟಕಗಳಿದ್ದ ಬಾಕ್ಸ್‌ ಮೇಲೆ ಮಹಾರಾಷ್ಟ್ರದ ರಾಧಾನಗರಿ ಕ್ಷೇತ್ರದ ಶಾಸಕ ಪ್ರಸಾದ್‌ ಅಬಿತಕರ ಹೆಸರು ಬರೆಯಲಾಗಿತ್ತು. ನೋ ಬಿಜೆಪಿ, ನೋ ಆರ್‌ಎಸ್‌ಎಸ್‌, ಓನ್ಲಿ ಶಿವಸೇನಾ ಎಂದು ನಮೂದಿಸಲಾಗಿತ್ತು. ಆದರೆ ರೈಲ್ವೇ ಪೊಲೀಸರು ಇದುವರೆಗೂ ಶಾಸಕ ಪ್ರಸಾದ್‌ ಅಬಿತಕರ್‌ ಅವರ ಜೊತೆ ಚರ್ಚಿಸುವ ಪ್ರಯತ್ನ ಮಾಡಿಲ್ಲ. ಸ್ಪೋಟಕದಲ್ಲಿ ಗನ್‌ ಪೌಡರ್‌, ಸಲ್ಫರ್‌, ಅಮೋನಿಯಂ ನೈಟ್ರೇಟ್‌ ಅಂಶ ಇತ್ತೆಂದು ಈಗಾಗಲೆ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಮೌಖಿಕವಾಗಿ ತಿಳಿಸಿದ್ದಾರೆ. ಆದರೆ ರೈಲ್ವೇ ಪೊಲೀಸರು ಇದುವರೆಗೂ ಎಫ್‌ಎಸ್‌ಎಲ್‌ ವರದಿಯನ್ನೂ ಸಂಗ್ರಹಿಸಿಲ್ಲ. ರೈಲ್ವೆ ಪೊಲೀಸರು ತನಿಖೆಯ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಂತೆ ಕಂಡು ಬರುತ್ತಿಲ್ಲ. ತನಿಖಾ ಪ್ರಗತಿಯ ಬಗ್ಗೆ ಕೇಳಿದ್ರೆ ಯಾವುದೇ ಉತ್ತರ ಕೊಡುತ್ತಿಲ್ಲ. ತನಿಖೆಯ ನೇತ್ರತ್ವ ವಹಿಸಿರುವ ರೈಲ್ವೇ ಪೊಲೀಸ್‌ ಠಾಣೆ ಡಿವೈಎಸ್‌ಪಿ ಬಿ.ಬಿ. ಪಾಟೀಲ್‌ ತನಿಖಾ ಪ್ರಗತಿಯ ಕುರಿತು ಪ್ರತಿಕ್ರಿಯಿಸಲು ನಿರಾಕರಿಸುತ್ತಿದ್ದಾರೆ.

ಸ್ಪೋಟದಿಂದ ಓರ್ವ ಅಮಾಯಕ ಕಾರ್ಮಿಕ ಕೈ ಕಳೆದುಕೊಂಡಿದ್ದಾನೆ. ಇತರೆ ಏಳು ಸ್ಪೋಟಕಗಳು ಸಿಡಿದಿದ್ದರೆ ದೊಡ್ಡ ಅನಾಹುತವೇ ನಡೆಯುತ್ತಿತ್ತು. ಸಾಕಷ್ಟು ಸುರಕ್ಷತಾ ಕ್ರಮಗಳ ನಡುವೆಯೂ ರೈಲ್ವೇ ನಿಲ್ದಾಣದಲ್ಲಿ ಸ್ಪೋಟಕ ಸಿಕ್ಕಿದ್ದು ಜನರನ್ನು ಭಯಭೀತರನ್ನಾಗಿ ಮಾಡಿದೆ. ರೈಲ್ವೇ ಭದ್ರತೆಯ ಬಗ್ಗೆ ಸಂಶಯಗಳನ್ನು ಹುಟ್ಟುಹಾಕಿದೆ. ಆರೋಪಿಗಳನ್ನು ಪತ್ತೆಹಚ್ಚಿ ರೈಲ್ವೇ ಪ್ರಯಾಣಿಕರಲ್ಲಿ ಭದ್ರತೆಯ ಭರವಸೆ ಮೂಡಿಸುವ ಕೆಲಸ ಆಗಬೇಕಿದೆ. ಮೇಲ್ನೋಟಕ್ಕೆ ರೈಲ್ವೆೇ ಪೊಲೀಸರು ಮತ್ತು ರೈಲ್ವೆೇ ಇಲಾಖೆ ಪ್ರಕರಣವನ್ನು ನಿರ್ಲಕ್ಷಿಸಿದಂತೆ ಕಂಡುಬರುತ್ತಿದೆ. ಪೊಲೀಸರು ತನಿಖೆ ಚುರುಕುಗೊಳಿಸಿ, ಆರೋಪಿಗಳನ್ನು ಬಂಧಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights