ಸತತ ಬರಗಾಲದಿಂದ ರೋಸಿ ಹೋದ ರೈತರಿಗೆ ಸದ್ಯ ವರುಣನೇ ವೈರಿ….

ಆ ಜಿಲ್ಲೆಗೆ ಬರದ ನಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಲ್ಲಿಯ ರೈತರು ಸತತ ಬರಗಾಲದಿಂದ ರೋಸಿ ಹೋಗಿದ್ರು. ಆದ್ರೇ ಈ ವರ್ಷ ಅಲ್ಪ ಸ್ವಲ್ಪ ಮುಂಗಾರು ಮಳೆಗೆ ಬಿತ್ತನೆ ಮಾಡಿದರು. ಬೆಳೆ ಮಾತ್ರ ಸಮೃದ್ಧಿಯಾಗಿ ಬೆಳೆದು ಕಟಾವಿಗೆ ಬಂದು ನಿಂತಿತ್ತು. ಆದ್ರೆ ಕಳೆದ ೨೦ ದಿನಗಳಿಂದ ಅಬ್ಬರಿಸುತ್ತಿರುವ ವರುಣ ಆರ್ಭಟಕ್ಕೆ ರೈತರ ಬೆಳೆ ಎಲ್ಲವು ಸಂಪೂರ್ಣ ಕೊಳೆತು ಹೋಗಿದೆ. ಸಾಲ ಸೂಲ ಮಾಡಿ ಬೆಳೆ ಎಲ್ಲು ನೀರು ಪಾಲಾಗಿದ್ದು ಕೈ ಬಂದ ತುತ್ತು ಬಾಯಿಗೆ ಬರಲಿಲ್ಲ ಅನುವಂತಾಗಿದೆ ಅನ್ನದಾತನ ಬದುಕು.

ರಾಶಿ ಮಾಡಿ ಚೀಲದಲ್ಲಿ ತುಂಬಬೇಕಾಗಿದ್ದ ಬೆಳೆಗಳೆಲ್ಲ ನೀರುಪಾಲು…! ಕಟಾವಿಗೆ ಮುನ್ನವೇ ಮಳೆ ನೀರಲ್ಲಿ ತೇಲುತ್ತಿರೋ ಅಪಾರ ಪ್ರಮಾಣದ ಈರುಳ್ಳಿ, ಗೋವಿನಜೋಳ, ಮೆಣಸಿನಕಾಯಿ…! ಇತ್ತ ಬಿಸಿಲು ಮಳೆ ಅನ್ನದೇ ಕಷ್ಟಪಟ್ಟು ಬೆಳೆದ ಬೆಳೆ ಹೀಗಾಯಿತಲ್ಲ ಅಂತ ಕಳವಳ ಪಡ್ತಿರೋ ರೈತವರ್ಗ..! ರೈತ ಸಂಕಷ್ಟದಲ್ಲಿದ್ರೂ ಇತ್ತ ಸುಳಿಯದ ಅಧಿಕಾರಿಗಳು…! ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಗದಗ ಜಿಲ್ಲೆಯ ರೋಣ ತಾಲೂಕಿನ ಮಾರನಬಸರಿ ಗ್ರಾಮದಲ್ಲಿ. ಕಳೆದ ಎರಡು ತಿಂಗಳ ಹಿಂದಷ್ಟೇ ಭೀಕರ ಪ್ರವಾಹ ಇಲ್ಲಿನ ಅದೆಷ್ಟೋ ರೈತ ಕುಟುಂಬಗಳ ಬದುಕನ್ನೇ ಬೀದಿಪಾಲು ಮಾಡಿ ಹೋಗಿದೆ. ಇನ್ನಾದ್ರೂ ಕೃಷಿ ಕಾಯಕದಲ್ಲಿ ತೊಡಗಿ ಅಲ್ಪ ಸ್ವಲ್ಪ ಬೆಳೆ ಬೆಳೆದು ತಮ್ಮ ಜೀವನವನ್ನು ಒಂದು ಹದ್ದಿಗೆ ತರೋಣ ಅಂತ ಹೋದ್ರೆ ವಿಧಿಯ ರೀತಿ ಮಳೆರಾಯ ಬೆನ್ನು ಹತ್ತಿದ್ದಾನೆ. ಕಳೆದ ಮೂರ್ನಾಲ್ಕು ದಿನಗಳಿಂದ ಸುರೀತಿರೋ ಧಾರಾಕಾರ‌ ಮಳೆ ರೈತರ ಬದುಕನ್ನೇ ಕಂಗಾಲಾಗಿಸಿದೆ. ಈರುಳ್ಳಿ, ಹತ್ತಿ, ಗೋವಿನಜೋಳ ಹಾಗೂ ಮೆಣಸಿನಕಾಯಿ ಬೆಳೆಗಳೆಲ್ಲ ನೀರು ಪಾಲಾಗಿವೆ. ಇನ್ನೇನು ಕಟಾವು ಮಾಡಿ ಮಾರುಕಟ್ಟೆಗೆ ಸಾಗಿಸಬೇಕೆಂದಿದ್ದ ಈರುಳ್ಳಿ ಬೆಳೆಯಂತೂ ನೀರಿನಲ್ಲಿ ಅನಾಥವಾಗಿದೆ. ಹೆಕ್ಟೇರ್ ಗೆ ಐವತ್ತು ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಬೆಳೆ ಒಂದು ಬಿಡಿಗಾಸಿಗೂ ಬರದಂತಾಗಿದೆ. ಹೊಲಕ್ಕೆ ಹೋಗಿ ಕಣ್ಣೀರು ಹಾಕೋವಂತಾಗಿದೆ ಅಂತ ಅನ್ನದಾತ ಕಂಗಾಲಾಗಿದ್ದಾನೆ.

ಗದಗ ಜಿಲ್ಲೆಯ ರೋಣ ತಾಲೂಕಿನ ಮಾರನಬಸರಿ, ನಿಡಗುಂದಿ, ನಿಡಗುಂದಿಕೊಪ್ಪ, ಹಾಲಕೇರಿ, ಕಳಕಾಪೂರ, ಜಿಗಳೂರು, ಜಕ್ಕಲಿ‌ ಹಾಗೂ ಹೊಸಳ್ಳಿ ಗ್ರಾಮಗಳಲ್ಲಿ ಬಿಟ್ಟು‌ ಬಿಡದೇ ಮಳೆ ಸುರಿದ ಪರಿಣಾಮ ರೈತನ ಕೃಷಿ ಕಾಯಕಕ್ಕೆ ಕೊಳ್ಳಿ ಇಟ್ಟಂತಾಗಿದೆ. ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆಗಳೆಲ್ಲ ಮಳೆಗೆ ಕೊಚ್ಚಿಕೊಂಡು ಹೋಗಿವೆ. ಹೆಕ್ಟೇರ್ ಗೆ ೫೦ ರಿಂದ ೬೦ ಸಾವಿರ ರೂಪಾಯಿವರೆಗೆ ಖರ್ಚು ಮಾಡಿದ್ದ ರೈತ ಇದೀಗ ಎಳ್ಳಷ್ಟು ಪ್ರತಿಫಲ ಕಾಣದೇ ತಲೆಗೆ‌ ಕೈ‌ ಕೊಟ್ಟು‌ ಕೂತಿದ್ದಾನೆ. ಮಳೆರಾಯ ಇಷ್ಟೆಲ್ಲ ಅವಾಂತರ ಸೃಷ್ಟಿ ಮಾಡದೇ ಇದ್ದಿದ್ರೆ ಹೆಕ್ಟೇರ್ ಗೆ ೧೦೦-೧೨೦ ಕ್ವಿಂಟಾಲ್ ಬೆಳೆ ಬರ್ತಿತ್ತು. ನಮ್ಮೆಲ್ಲ ಸಾಲ ಸಹ ತೀರ್ತಿತ್ತು. ಅಲ್ಪವಾದ್ರೂ ನೆಮ್ಮದಿ ಬದುಕು‌ ಕಾಣ್ತಿದ್ದೇವು. ಆದರೆ ಇಷ್ಟೆಲ್ಲ ಆಗಿದ್ದಕ್ಕೆ ನಮಗೆ ದಿಕ್ಕು ತೋಚದಂತಾಗಿದೆ. ಆತ್ಮಹತ್ಯೆ ಒಂದೇ ಪರಿಹಾರ ಅನಿಸುತ್ತಿದೆ ಅಂತಾ ಅನ್ನದಾತ ತನ್ನ ಅಳಲು ತೋಡಿಕೊಂಡಿದು ಹೀಗೆ…

ಗಾಯದ ಮೇಲೆ ಬರೆ‌ ಎಳೆದಂತೆ ರೈತವರ್ಗಕ್ಕೆ ಸಮಸ್ಯೆಗಳ ಸರಮಾಲೆ ಬೆನ್ನುಹತ್ತಿದ್ರೂ ಸಹ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಚೇರಿ ಬಿಟ್ಟು ಕದಲುತ್ತಿಲ್ಲ. ಸ್ಥಳಕ್ಕೆ ಬಂದು ರೈತರ ಸಮಸ್ಯೆ ಆಲಿಸುತ್ತಿಲ್ಲ. ಅಧಿಕಾರಿಗಳು ನ್ಯೂಸ್ ೧೮ ವರದಿಯ ಬಳಿಕನಾದ್ರು ಎಚ್ಚೆತ್ತುಕೊಂಡು ರೈತರಿಗಾದ ಅನ್ಯಾಯಕ್ಕೆ ನ್ಯಾಯ ಒದಗಿಸೋ ಮೂಲಕ, ಪರಿಹಾರದ ರೂಪದಲ್ಲಿ ಅವರಿಗಾದ ನಷ್ಟವನ್ನು ತುಂಬಿಕೊಡಬೇಕಾಗಿದೆ..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights