ಸಚಿವ ಸ್ಥಾನ ಕೈತಪ್ಪಿದ ಶಾಸಕರಿಗೆ ಬಿಎಸ್ ವೈ ಪ್ರಮುಖ ಖಾತೆ ನೀಡುವ ಭರವಸೆ…

ಬಿಜೆಪಿ ಸರ್ಕಾರದ ಮೊದಲ ಸಚಿವ ಸಂಪುಟ ವಿಸ್ತರಣೆಯಾಗುತ್ತಿದ್ದಂತೆಯೇ ಭುಗಿಲೆದ್ದಿದ್ದ ಬಂಡಾಯ ಸಂಜೆ ವೇಳೆಗೆ ತುಸು ಶಮನಗೊಂಡಿದ್ದು, ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಶಾಸಕರ ಪೈಕಿ ಕೆಲವರಿಗೆ ನಿಗಮ ಮಂಡಳಿ, ಸಂಸದೀಯ ಕಾರ್ಯದರ್ಶಿಗಳ ನೇಮಕದ ಭರವಸೆ ನೀಡಲಾಗಿದೆ.

ಸಚಿವ ಸ್ಥಾನದ ಆಕಾಂಕ್ಷೆ ಹೊಂದಿದ್ದ ಉಮೇಶ್‌ ಕತ್ತಿ, ಎಂ.ಪಿ.ರೇಣುಕಾಚಾರ್ಯ, ಬಾಲಚಂದ್ರ ಜಾರಕಿಹೊಳಿ, ರಾಜೂಗೌಡ ಗೂಳಿಹಟ್ಟಿಶೇಖರ್‌, ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್‌, ಜಿ.ಎಚ್‌.ತಿಪ್ಪಾರೆಡ್ಡಿ ಮೊದಲಾದವರು ತಮಗೆ ಅವಕಾಶ ಸಿಗದೇ ಇದ್ದುದರಿಂದ ಬೇಸರಗೊಂಡಿದ್ದರು. ಇವರಲ್ಲಿ ಕೆಲವರು ಬಹಿರಂಗವಾಗಿ, ಇನ್ನುಳಿದವರು ತಮ್ಮ ಆಪ್ತರ ಬಳಿ ಖಾಸಗಿಯಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಆದರೆ, ಸಂಜೆ ಹೊತ್ತಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಾಲಚಂದ್ರ ಜಾರಕಿಹೊಳಿ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಮಾತುಕತೆ ನಡೆಸಿದರು. ಈ ವೇಳೆ ಪಕ್ಷದ ರಾಜ್ಯ ಉಸ್ತುವಾರಿ ಪಿ.ಮುರಳೀಧರರಾವ್‌ ಅವರೂ ಇದ್ದರು. ಬಾಲಚಂದ್ರ ಅವರ ಸಹೋದರ ಹಾಗೂ ಅನರ್ಹ ಶಾಸಕ ರಮೇಶ್‌ ಜಾರಕಿಹೊಳಿ ಅವರಿಗೆ ನ್ಯಾಯಾಲಯದ ನಡೆ ನೋಡಿಕೊಂಡು ಶೀಘ್ರದಲ್ಲೇ ಸಚಿವ ಸ್ಥಾನ ಹಾಗೂ ಪ್ರಮುಖ ಖಾತೆ ನೀಡುವ ಸ್ಪಷ್ಟಭರವಸೆ ನೀಡಿದ ನಂತರ ಸಮಾಧಾನಗೊಂಡರು. ತಮ್ಮ ಕುಟುಂಬದ ಒಬ್ಬರಿಗೆ ಸಚಿವ ಸ್ಥಾನ ಸಿಕ್ಕರಾಯಿತು ಎಂದು ತೃಪ್ತಿ ಹೊರಹಾಕಿದರು ಎನ್ನಲಾಗಿದೆ.

ಇದೇ ವೇಳೆ ಯಡಿಯೂರಪ್ಪ ಮತ್ತು ಮುರಳೀಧರರಾವ್‌ ಅವರು ಇತರ ಅತೃಪ್ತ ಶಾಸಕರೊಂದಿಗೆ ಮಾತುಕತೆ ನಡೆಸಿ ಮುಂದಿನ ಹಂತದಲ್ಲಿ ಕೆಲವರಿಗೆ ಸಚಿವ ಸ್ಥಾನ ನೀಡುವ ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು. ಇಲ್ಲದಿದ್ದರೆ ಪ್ರಮುಖ ನಿಗಮ ಮಂಡಳಿಗಳ ಅಧ್ಯಕ್ಷಗಿರಿ ನೀಡುವ ಭರವಸೆಯನ್ನೂ ನೀಡಿದರು. ಯಡಿಯೂರಪ್ಪ ಅವರ ಮಾತಿನಿಂದ ಹಲವು ಶಾಸಕರ ಕೋಪ ತಣ್ಣಗಾಗಿದೆ ಎಂದು ತಿಳಿದು ಬಂದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights