ಸಚಿವ ಸ್ಥಾನಕ್ಕೆ ಆಗ್ರಹಿಸಿ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಬೆಂಬಲಿಗರಿಂದ ಪ್ರತಿಭಟನೆ..

ಅಜಾತಶತ್ರು, ಕುಂದಾಪುರದ ವಾಜಪೇಯಿ ಎಂದು ಖ್ಯಾತಿ ಪಡೆದಿರುವ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರಿಗೆ ಈ ಬಾರಿಯೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಸ್ಥಾನಮಾನ ಸಿಕ್ಕಿಲ್ಲ. ಐದು ಬಾರಿ ಶಾಸಕರಾಗಿರುವ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರಿಗೆ ಸಚಿವ ಸ್ಥಾನ ನೀಡಬೇಕು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ತನ್ನ ಮಂತ್ರಿ ಮಂಡಲದಲ್ಲಿ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರನ್ನು ಸೇರಿಸಿಕೊಳ್ಳಬೇಕು ಎಂದು ಹಾಲಾಡಿ ಶ್ರೀನಿವಾಸ್ ಅಭಿಮಾನಿಗಳ ಬಳಗದವರು ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಮೌನ ಪ್ರತಿಭಟನೆ ನಡೆಸಿದ್ರು.

ಸೋಲಿಲ್ಲದ ಸರದಾರ, ಕರಾವಳಿಯ ಬಿಜೆಪಿಯ ಹಿರಿಯ ಶಾಸಕರಾಗಿರುವ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರು ಅಧಿಕಾರಕ್ಕಾಗಿ ಎಂದೂ ಲಾಬಿ ನಡೆಸಿದವರಲ್ಲ. ಬಡವರ ಬಂಧು, ಜನ ಸಾಮಾನ್ಯರ ಜನನಾಯಕ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರ ಹಿರಿತನಕ್ಕೂ ಬೆಲೆ ಸಿಗಲಿಲ್ಲ. ಹೀಗಾಗಿ ಬೆಂಗಳೂರಿನಲ್ಲಿರುವ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅಭಿಮಾನಿಗಳ ಬಳಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಲ್ಲಿ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮನವಿ ಮಾಡಿಕೊಂಡಿದೆ.

ಸಿಎಂ ಬಿ.ಎಸ್. ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಕರಾವಳಿ ಭಾಗದ ಬಿಜೆಪಿ ಶಾಸಕರನ್ನು ಕಡೆಗಣನೆ ಮಾಡಲಾಗಿದೆ. ಉಡುಪಿಯ ಐದು ವಿಧಾನ ಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಶಾಸಕರಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನ ಸಭಾ ಕ್ಷೇತ್ರಗಳಲ್ಲಿ ಏಳು ವಿಧಾನ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ.ಆದ್ರೆ ಕರಾವಳಿಯ 13 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಶಾಸಕರಿಗೆ ಮಂತ್ರಿ ಪದವಿ ನೀಡದೇ ಇರುವುದು ಸರಿಯಲ್ಲ. ಕರಾವಳಿ ಭಾಗದ ಶಾಸಕರಿಗೆ ಅನ್ಯಾಯವಾಗಿದೆ. ಅದ್ರಲ್ಲೂ ಹಿರಿಯ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಮತ್ತು ಸುಳ್ಯದಿಂದ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅಂಗಾರ ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸದೇ ಅವರಿಗೆ ಅವಮಾನ ಮಾಡಲಾಗಿದೆ ಎಂದು ಹಾಲಾಡಿ ಶ್ರೀನಿವಾಸ್ ಅಭಿಮಾನಿಗಳ ಬಳಗದವರು ಹೇಳುತ್ತಿದ್ದಾರೆ.

ಸರಳ ಸಜ್ಜನಿಕೆಯ ನಿಶ್ಕಲಂಕಿತ ರಾಜಕಾರಣಿ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರು. ಸುದೀರ್ಘ ಮೂರು ದಶಕಗಳ ರಾeಕಾರಣ ಮಾಡಿರುವ ಹಾಲಾಡಿಯವರು, 21 ವರ್ಷಗಳ ಕಾಲ ಜನಪ್ರತಿನಿಧಿಯಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ತನ್ನ ರಾಜಕೀಯ ಬದುಕಿನಲ್ಲಿ ಒಂಚೂರು ಕಪ್ಪುಚುಕ್ಕೆ ಇಲ್ಲ. ಯಾವುದೇ ಹಗರದಲ್ಲಿ ಸಿಲುಕಿಲ್ಲ. ಅಧಿಕಾರಕ್ಕಾಗಿ ಯಾರನ್ನು ಒಲೈಸಲಿಲ್ಲ. ತಾನು ನಂಬಿರುವ ಸಿದ್ದಾಂತಗಳಿಗೆ ದಕ್ಕೆಯನ್ನುಂಟು ಮಾಡಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸಿದ ಜನನಾಯಕ. ಪಕ್ಷಕ್ಕಾಗಿ ನಿಷ್ಠೆಯನ್ನು ಮರೆಯಲಿಲ್ಲ. ಪಕ್ಷೇತರ ಶಾಸಕನಾಗಿಯೂ ಬಿಜೆಪಿಯ ತತ್ವ ಸಿದ್ದಾಂತಗಳಿಗೆ ಬದ್ಧರಾಗಿರುವ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರಿಗೆ ಸಚಿವ ಸ್ಥಾನ ನೀಡಲೇಬೇಕು ಎಂಬುದು ಅವರ ಅಭಿಮಾನಿಗಳ ಬಳಗದ ಆಶಯವಾಗಿದೆ.

ವಾಮ ವಾರ್ಗದ ಮೂಲಕ ಮಂತ್ರಿ ಪದವಿ ಕೊಡಿ ಎಂದು ಯಾರನ್ನು ಕೇಳಲಿಲ್ಲ. ಪಕ್ಷಕ್ಕೆ ನಿಷ್ಠವಾಗಿರುವ ಶ್ರೀನಿವಾಸ್ ಶೆಟ್ಟಿಯವರು, ಕುಂದಾಪುರದಲ್ಲಿ ನಡೆದ ಎಲ್ಲಾ ಚುನಾವಣೆಯಲ್ಲೂ ಬಿಜೆಪಿ ಪಕ್ಷದ ಪರವಾಗಿಯೇ ಪ್ರಚಾರ ನಡೆಸಿದ್ದರು. ಬಿಜೆಪಿ ಪಕ್ಷ ಬಿಟ್ಟು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಶಾಸಕನಾಗಿ ಆಯ್ಕೆಯಾದಗಲೂ ಬಿಜೆಪಿ ಪಕ್ಷದ ಪರವಾಗಿ ಪ್ರಚಾರ ನಡೆಸಿರುವ ಹಿರಿಮೆ ಶ್ರೀನಿವಾಸ್ ಶೆಟ್ಟಿಯವರದ್ದು.

ಪ್ರತಿ ಚುನಾವಣೆಯಲ್ಲೂ ತನ್ನ ಗೆಲುವಿನ ಅಂತರವನ್ನು ಹೆಚ್ಚಿಕೊಂಡು ಬಂದಿರುವ ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರು, ಜನ ಮೆಚ್ಚಿನ ಜನಪ್ರತಿನಿಧಿಯಾಗಿ ಹೊರಹೊಮ್ಮಿದ್ದಾರೆ. ಅಧಿಕಾರ, ಪದವಿಗಾಗಿ ತಾನು ನಂಬಿರುವ ತತ್ವ ಸಿದ್ಧಾಂತಗಳನ್ನು ಬಲಿಕೊಟ್ಟವರಲ್ಲ. ಜನ ಸೇವೆಯೇ ಜನಾರ್ಧನ ಸೇವೆ ಎಂಬ ಮಾತಿನ ಮೇಲೆ ಅಪಾರ ನಂಬಿಕೆಯನ್ನಿಟ್ಟುಕೊಂಡಿರುವ ಹಾಲಾಡಿಯವರು, ತಾನು ಸಚಿವನಾಗಲಿಲ್ಲ ಎಂಬುದರ ಬಗ್ಗೆ ಯಾವತ್ತೂ ಬಹಿರಂಗ ಹೇಳಿಕೆಗಳನ್ನು ನೀಡಿಲ್ಲ. ಆದ್ರಿಂದ ಸಜ್ಜನ ರಾಜಕಾರಣಿಗೆ ಅನ್ಯಾಯ ಆಗಬಾರದು. ಹಾಲಾಡಿಯವರ ಹಿರಿತನದ ಜೊತೆಗೆ ಸುಳ್ಯ ಶಾಸಕ ಅಂಗಾರ ಅವರಿಗೂ ಮಂತ್ರಿ ಪದವಿ ನೀಡಬೇಕು ಎಂದು ಈ ಮೂಲಕ ಮನವಿ ಮಾಡುತ್ತಿದ್ದೇವೆ.

ಫ್ರೀಡಂ ಪಾರ್ಕ್‍ನಲ್ಲಿ ನಡೆದ ಮೌನ ಪ್ರತಿಭಟನೆಯಲ್ಲಿ ಉಪೇಂದ್ರ ಶೆಟ್ಟಿ, ಮಧುಕರ ಶೆಟ್ಟಿ, ಬಾರ್ಕೂರ್ ದೀಪಕ್ ಶೆಟ್ಟಿ, ಮಂದಾರ್ತಿ ಉಮೇಶ್ ಶೆಟ್ಟಿ, ಕೋರ್ಗಿ ಭೋಜರಾಜ್ ಶೆಟ್ಟಿ, ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅಭಿಮಾನಿ ಬಳಗದ ಸದಸ್ಯರು ಹಾಗೂ ಕರಾವಳಿ ಭಾಗದ ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗಿಯಾಗಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights